ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳಿಗೆ ತೆರವಿಗೆ ವಿರೋಧ, ಘೇರಾವ್

Last Updated 10 ಸೆಪ್ಟೆಂಬರ್ 2017, 5:23 IST
ಅಕ್ಷರ ಗಾತ್ರ

ಭಟ್ಕಳ: ಇಲ್ಲಿನ ಪುರಸಭೆಯ ಅಂಗಡಿಯವರನ್ನು ಶನಿವಾರ ಬಲವಂತವಾಗಿ ತೆರವು ಮಾಡಿಸಲು ಬಂದ ಪುರಸಭೆ ಹಾಗೂ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ ಅಧಿಕಾರಿಗಳಿಗೆ ಅಂಗಡಿಕಾರರು ಮತ್ತು ಸಾರ್ವಜನಿಕರು ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು. ಹೀಗಾಗಿ ತೆರವುಗೊಳಿಸಲು ಐದು ದಿನ ಕಾಲಾವಕಾಶ ನೀಡಲಾಯಿತು.

ಆಗಸ್ಟ್‌ನಲ್ಲಿ ಪುರಸಭೆಯ ಒಟ್ಟು 106 ಅಂಗಡಿಗಳ ಹರಾಜು ಪ್ರಕ್ರಿಯೆ ನಡೆಸಲಾಗಿತ್ತು. ಆದರೆ ಅಂಗಡಿ ಹರಾಜಿನಲ್ಲಿ ಪಾಲ್ಗೊಂಡಿದ್ದ ಕೆಲವರು ಬಾಡಿಗೆಯನ್ನು ಮೂರುಪಟ್ಟು ದರಕ್ಕೆ ಕೂಗಿ, ಹಾಲಿ ಅಂಗಡಿಯವರು ಅಂಗಡಿ ಕಳೆದುಕೊಳ್ಳುವಂತಾಗಿತ್ತು. ಈ ಅವೈಜ್ಞಾನಿಕವಾಗಿ ನಡೆದ ಹರಾಜು ಪ್ರಕ್ರಿಯೆ ವಿರುದ್ಧ ಅಗಡಿಕಾರರು ಭಟ್ಕಳದ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಆದರೆ ಹರಾಜಿನಲ್ಲಿ ಭಾಗವಹಿಸದ 34 ಅಂಗಡಿಕಾರರನ್ನು ತೆರವುಗೊಳಿಸಲು ಶನಿವಾರ ಅಧಿಕಾರಿಗಳು ಮುಂದಾದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಎಂಜಿನಿಯರ್ ಆರ್. ಪಿ ನಾಯ್ಕ, ಉಪವಿಭಾಗಾಧಿಕಾರಿ ಎಂ. ಎನ್‌ ಮಂಜುನಾಥ ಹಾಗೂ ಪುರಸಭೆ  ಅಧಿಕಾರಿಗಳು ತೆರವು ಕಾರ್ಯಚರಣೆಗೆ ಮುಂದಾದರು.

‘ಬಾಕಿ ಹಣ ತುಂಬಿದರೆ ಅಂಗಡಿ ನಿಮಗೇ ಮಾಡಿಕೊಡಲಾಗುತ್ತದೆ ಎಂಬ ನಿಮ್ಮ ಸಲಹೆಯಂತೆ ಪುರಸಭೆಗೆ ₹80 ಲಕ್ಷ ಹಣವನ್ನು ಭರಣ ಮಾಡಿಸಿಕೊಂಡು, ನಮ್ಮನ್ನು ಹರಾಜಿನಲ್ಲಿ ಭಾಗವಹಿಸದಂತೆ ಮಾಡಿ ಅನ್ಯಾಯ ಮಾಡಿದ್ದೀರಿ.

ಈಗ ಅವೈಜ್ಞಾನಿಕವಾಗಿ ಕೆಲವರು ಒಂದಕ್ಕೆ ಮೂರುಪಟ್ಟು ಹರಾಜು ಕೂಗಿದ್ದರಿಂದ ಹರಾಜಿನಲ್ಲಿ ನಾವುಗಳು ಅಂಗಡಿ ಕಳೆದುಕೊಳ್ಳುವಂತಾಗಿದೆ. ನ್ಯಾಯಾಲಯದಲ್ಲೂ ನ್ಯಾಯ ಸಿಗದಂತಾಗಿದೆ. ಇದಕ್ಕೆ ಸ್ಪಷ್ಟೀಕರಣ ನೀಡಬೇಕು. ಇಲ್ಲದಿದ್ದಲ್ಲಿ ಅಂಗಡಿ ತೆರವು ಮಾಡಲು ಬಿಡುವುದಿಲ್ಲ’ ಎಂದು ಅಂಗಡಿಯವರು ಪಟ್ಟುಹಿಡಿದರು.

ಪುರಸಭೆ ಸದಸ್ಯ ವೆಂಕಟೇಶ ನಾಯ್ಕ, ಸಂದೀಪ ಶೇಟ್‌, ಬಿಜೆಪಿ ಮುಖಂಡರಾದ ಗೋವಿಂದ ನಾಯ್ಕ, ಕೃಷ್ಣನಾಯ್ಕ, ಸುರೇಶ ನಾಯ್ಕ, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಸುಧಾಕರ ನಾಯ್ಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಅಧಿಕಾರಿಗಳು ಹೈಕೋರ್ಟ್‌ನ ಎಲ್ಲ ಆದೇಶ ಪಾಲಿಸುವುದಾದರೆ, 2014ರಲ್ಲಿ ಪುರಾತತ್ವ ಸರ್ವೇಕ್ಷಣಾ ಪ್ರದೇಶ ವ್ಯಾಪ್ತಿಯಡಿ ಕಟ್ಟಿದ ಕಟ್ಟಡವನ್ನು ತೆರವು ಮಾಡುವಂತೆ ಇರುವ ಹೈಕೊರ್ಟ್‌ ಆದೇಶವನ್ನು ಏಕೆ ಪಾಲನೆ ಮಾಡುತ್ತಿಲ್ಲ. ಮೊದಲು  ಆ ಕಟ್ಟಡಗಳನ್ನು ತೆರವು ಮಾಡಿ. ನಂತರ ಬಡ ಅಂಗಡಿಕಾರರ ಮೇಲೆ ನಿಮ್ಮ ಪ್ರತಾಪ ತೋರಿಸಿ’ ಎಂದು ಪ್ರತಿಭಟನಾಕಾರು ಹೇಳಿದರು.

ಇದಾವುದನ್ನು ಲೆಕ್ಕಿಸದೇ ಅಧಿಕಾರಿಗಳು ಅಂಗಡಿಕಾರರನ್ನು ಖಾಲಿ ಮಾಡಿಸಲು ಪೊಲೀಸ್ ಸಿಬ್ಬಂದಿಯೊಂದಿಗೆ ಮುಂದಾದಾಗ, ‘ನಮ್ಮನ್ನು ತುಳಿದುಕೊಂಡು ಹೋಗಿ ಕಾರ್ಯಾಚರಣೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ನಂತರ ಅಧಿಕಾರಿಗಳು ಐದು ದಿನ ಕಾಲಾವಕಾಶ ನೀಡಿ, ಅಷ್ಟರಲ್ಲಿ ಅಂಗಡಿಗಳನ್ನು ಖಾಲಿ ಮಾಡಬೇಕು ಎಂದು ತಾಕೀತು ಮಾಡಿ, ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿ ತೆರಳಿದರು. ಅಂಗಡಿಕಾರರಾದ ಮೋಹನ ನಾಯ್ಕ, ಗುರುರಾಜ್ ಸಾಣಿಕಟ್ಟಾ, ರಾಜೇಶ ನಾಯ್ಕ, ನಾಗೇಶ ನಾಯ್ಕ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT