ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಅರಳಿಸಿಕೊಂಡ ಮಲ್ಲಿಗೆ ಕೃಷಿಕರು

Last Updated 10 ಸೆಪ್ಟೆಂಬರ್ 2017, 5:26 IST
ಅಕ್ಷರ ಗಾತ್ರ

ಸಣ್ಣ ಪ್ರಮಾಣದ ತುಂಡು ಭೂಮಿಯಲ್ಲೂ ಹೇರಳವಾಗಿ ಬೆಳೆಯುವ, ಮಾರುಕಟ್ಟೆಯಲ್ಲಿ ಅಧಿಕ ಆದಾಯ ತರುವ, ತನ್ನ ಘಮಘಮಿಸುವ ಕಂಪಿನಿಂದಲೇ ಶತ್ರುಗಳನ್ನೂ ಸೆಳೆಯುವ ತೋಟಗಾರಿಕೆ ಬೆಳೆ ‘ಭಟ್ಕಳ ಮಲ್ಲಿಗೆ’ಯಿಂದ ಇಂದು ನೂರಾರು ಬಡ ಕೃಷಿಕರು ಮಲ್ಲಿಗೆಯಂತೆ ತಮ್ಮ ಬದುಕನ್ನು ಅರಳಿಸಿಕೊಂಡಿದ್ದಾರೆ.

ಇರುವ ತುಂಡು ಭೂಮಿಯಲ್ಲಿ ದೊಡ್ಡ ಬೆಳೆಯನ್ನೂ ಬೆಳೆಯುವುದಕ್ಕಾಗದೇ, ಯಾವ ಬೆಳೆಯನ್ನು ಬೆಳೆಯಬೆಕೇಂಬ ಆಲೋಚನೆಯಲ್ಲಿದ್ದ ಸಣ್ಣ ರೈತರಿಗೆ ಗೋಚರಿಸಿದ್ದೇ ಮಲ್ಲಿಗೆ ಬೆಳೆ. ವಿದೇಶದಲ್ಲೂ ತನ್ನ ಕಂಪಿನ ಜತೆಗೆ ಭಟ್ಕಳದ ಕೀರ್ತಿಯನ್ನು ಹೆಚ್ಚಿಸಿರುವ, ಸಣ್ಣ ರೈತರ ಪಾಲಿಗೆ ಮಲ್ಲಿಗೆ ವರದಾನವಾಗಿದೆ.

ತಾಲ್ಲೂಕಿನಲ್ಲಿ ಸುಮಾರು 55ರಿಂದ 60 ಹೆಕ್ಟೇರ್ ಮಾಲ್ಕಿ ಹಾಗೂ ಸುಮಾರು 20 ಹೆಕ್ಟೇರ್ ಅರಣ್ಯಭೂಮಿಯಲ್ಲಿ ಮಲ್ಲಿಗೆ ಬೆಳೆಯಲಾಗುತ್ತಿದೆ. ಒಂದು ಹೆಕ್ಟೇರ್ ಭೂಮಿಯಲ್ಲಿ ಸುಮಾರು 1500 ಬುಡದಲ್ಲಿ ಮಲ್ಲಿಗೆ ಬೆಳೆಸಬಹುದು. ಒಂದು ಮಲ್ಲಿಗೆ ಗಿಡ ವಾರ್ಷಿಕವಾಗಿ ಸುಮಾರು 150 ಮೊಳ ಹೂ ಬಿಡುತ್ತದೆ ಎಂದು ಮಲ್ಲಿಗೆ ಬೆಳೆಗಾರರಾದ ಮೂಡುಭಟ್ಕಳದ ಮಂಜುನಾಥ ನಾಗಪ್ಪಯ್ಯ ಭಟ್ ಹೇಳುತ್ತಾರೆ.

ಭಟ್ಕಳಕ್ಕೆ ಮಲ್ಲಿಗೆ ಬಂದಿದ್ದು ಹೀಗೆ: ಹಲವಾರು ವರ್ಷಗಳ ಹಿಂದೆ ಉಡುಪಿಯ ಶಂಕರಪುರ ಭಾಗದಿಂದ ಭಟ್ಕಳಕ್ಕೆ ಬಂದ ಪಾದ್ರಿಯೊಬ್ಬರು ಅಲ್ಲಿ ಪ್ರಖ್ಯಾತವಾಗಿದ್ದ ಮಲ್ಲಿಗೆಯನ್ನು ತಂದು ಇಲ್ಲಿನ ತಮ್ಮ ಚರ್ಚ್‌ ಆವರಣದಲ್ಲಿ ನೆಟ್ಟರು. ಅದು ಅಲ್ಲಿಗಿಂತ ಹೆಚ್ಚು ಪರಿಮಳ ಸೂಸುವ ಹೂ ಬಿಡಲಾರಂಬಿಸಿತು.

ಇದನ್ನು ಕಂಡ ಅವರು ಉಡುಪಿ ಭಾಗದಲ್ಲಿ ಜೀವನಾಧಾರವಾಗಿದ್ದ ಈ ಬೆಳೆಯನ್ನು ಇಲ್ಲಿನ ಕೃಷಿಕರಿಗೆ ಬೆಳೆಯಲು ಪ್ರೋತ್ಸಾಹಿಸಿದ್ದರಿಂದ ಅದು ಭಟ್ಕಳ ಮಲ್ಲಿಗೆ ಎಂದು ಹೆಸರಾಗಿ ಇಂದು ಹಲವು ಬಡ ಕುಟುಂಬಗಳ ಜೀವನಾಧಾರವಾಗಿದೆ.

24 ತಾಸು ಕೆಲಸ, ಆದಾಯಕ್ಕೆ ಮೂಲ: ಮಲ್ಲಿಗೆ ಎಷ್ಟು ಆದಾಯ ಕೊಡುತ್ತದೋ ಅದು ಅಷ್ಟೇ ಶ್ರಮವನ್ನು ಕೇಳುತ್ತದೆ. ದಿನನಿತ್ಯ ಬೆಳಿಗ್ಗೆ–ಸಂಜೆ ಹೂವನ್ನು ಕೀಳುವುದು, ಮಾಲೆ ಕಟ್ಟುವುದನ್ನು ಸಮಯಕ್ಕೆ ಸರಿಯಾಗಿ ಮಾಡಬೇಕಾಗುತ್ತದೆ. ಬೆಳಿಗ್ಗೆ 8ರಿಂದ 10, ಸಂಜೆ 4ರಿಂದ 6ಗಂಟೆಯೊಳಗೆ ಮಲ್ಲಿಗೆ ದಂಡೆಯನ್ನು ಮಾರುಕಟ್ಟೆಗೆ ಕೊಡಬೇಕು.

ಇದರಲ್ಲಿ ವ್ಯತ್ಯಯವಾದರೆ ಗಿರಾಕಿಗಳಿಲ್ಲದೇ ಹೂವು ಹಾಳಾಗುತ್ತದೆ ಎಂದು ಮತ್ತೊಬ್ಬ ಮಲ್ಲಿಗೆ ಬೆಳೆಗಾರರಾದ ಹೊನ್ನಿಗದ್ದೆಯ ಕೃಷ್ಣ ಜಟ್ಟಪ್ಪ ನಾಯ್ಕ ಹೇಳುತ್ತಾರೆ.
ಇಂದು ಭಟ್ಕಳ ತಾಲ್ಲೂಕಿನಲ್ಲೇ ಮಹಿಳೆಯರೂ ಸೇರಿದಂತೆ 1500ಕ್ಕೂ ಹೆಚ್ಚು ಕುಟುಂಬಗಳು ಮಲ್ಲಿಗೆ ಬೆಳೆಯಿಂದ ಸ್ವಾವಲಂಬಿ ಜೀವನ ನಡೆಸುವಂತಾಗಿದೆ.

ಗಲ್ಫ್‌ ರಾಷ್ಟ್ರಗಳಿಗೆ ರಪ್ತು: ಭಟ್ಕಳದ ಮುಸ್ಲಿಮರು ಸೇರಿದಂತೆ ಬಹಳಷ್ಟು ಮಂದಿ ಉದ್ಯೋಗ, ವ್ಯವಹಾರ ನಿಮಿತ್ತ ಗಲ್ಫ್ ರಾಷ್ಟ್ರಗಳಲ್ಲಿ ಇದ್ದಾರೆ. ಪರಿಮಳ ದ್ರವ್ಯ ತಯಾರಿಕೆಗೆ ಹೆಚ್ಚಾಗಿ ಇದನ್ನು ಬಳಸುವುದರಿಂದ ದುಬೈ, ಕುವೈತ್, ಸೌದಿ ಅರೆಬಿಯಾ, ಕತಾರ್‌ ಮುಂತಾದೆಡೆ ಮಲ್ಲಿಗೆಗೆ ಮಾರುಕಟ್ಟೆ ಇದೆ. ಮುಸ್ಲಿಂ ಸಮುದಾಯದಲ್ಲಿ ತಮ್ಮ ಪುಟ್ಟ ಮಕ್ಕಳಿಗೆ ಮಲ್ಲಿಗೆ ಮಾಲೆಯ ಜಡೆಯನ್ನು ಹೆಣೆದು ಫೋಟೊ ತೆಗೆಸಿಕೊಳ್ಳುವುದೇ ಅವರಿಗೆ ಒಂದು ಖುಷಿ.

ಕೊಲ್ಲೂರು ಮೂಕಾಂಬಿಕೆಗೂ ಭಟ್ಕಳ ಮಲ್ಲಿಗೆ: ವಿಶೇಷ ಸಂದರ್ಭಗಳಾದ ಜಾತ್ರೆ ಮತ್ತು ನವರಾತ್ರಿಗಳಲ್ಲಿ ಇಲ್ಲಿಂದ ಹೂವು ಕೊಲ್ಲೂರಿಗೆ ಹೋಗಬೇಕು. ಭಟ್ಕಳ ಮಲ್ಲಿಗೆ ಹೂವಿನಿಂದಲೇ ಮೂಕಾಂಬಿಕಾ ದೇವಿ ಶೃಂಗಾರಗೊಳ್ಳುವುದು, ಬಹಳ ಹಿಂದಿನ ಕಾಲದಿಂದ ಈ ಪದ್ದತಿ ಇದೆ. ಇಲ್ಲಿನ ಖಾಯಂ ವ್ಯಾಪಾರಸ್ಥರಿಂದ ಮೊದಲೇ ಹೇಳಿ ದೇವಸ್ಥಾನದವರು ಬಂದು ಹೂವು ಖರೀದಿಸಿಕೊಂಡು ಹೋಗುತ್ತಾರೆ. ಸಾಮಾನ್ಯ ದಿನಗಳಲ್ಲಿ ಒಂದು ಮೊಳ ಹೂವಿಗೆ ₹10ರಿಂದ ₹20 ದರ ಇದ್ದರೆ, ನವರಾತ್ರಿ, ಹಬ್ಬ, ಹರಿದಿನ ಸಂದರ್ಭದಲ್ಲಿ ₹150ರವರೆಗೆ ದರ ಇರುತ್ತದೆ.

ತೋಟಗಾರಿಕೆ ಬೆಳೆಗೆ ಪರಿಗಣನೆ
ಭಟ್ಕಳ ತಾಲ್ಲೂಕಿನಲ್ಲಿ ನೂರಾರು ಕುಟುಂಬಗಳ ಜೀವನಾಧಾರ ಆಗಿರುವ ಮಲ್ಲಿಗೆ ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯಿಂದ ಯಾವುದೇ ಅನುದಾನ ಕೊಡಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಮಲ್ಲಿಗೆಯನ್ನು ತೋಟಗಾರಿಕೆ ಬೆಳೆ ಎಂದು ಪರಿಗಣಿಸುವಂತೆ ಮಾಡಲೂ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಚೇತನ ನಾಯ್ಕ ತಿಳಿಸಿದರು.

ಪ್ರತಿದಿನ ದರ ಪ್ರಕಟಿಸಲು ಕ್ರಮ
ದರದಲ್ಲಿ ಇರುವ ಸಮಸ್ಯೆ ಸೇರಿದಂತೆ ಮಲ್ಲಿಗೆ ಬೆಳೆಗಾರರ ಸಮಸ್ಯೆ ಬಗ್ಗೆ ಈಗಾಗಲೇ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗಿದೆ. ಬೆಳೆಗಾರರಿಗೆ ವಂಚನೆ ಆಗದಂತೆ ಮಲ್ಲಿಗೆಯ ಮಾರುಕಟ್ಟೆ ದರವನ್ನು ಪತ್ರಿಕೆಗಳಲ್ಲಿ ಪ್ರಕಟಿಸಲು ಮಲ್ಲಿಗೆ ಮಾರಾಟಗಾರರಿಗೆ ಸೂಚಿಸಲಾಗಿದೆ’ ಎಂದು ಉಪವಿಭಾಗಾಧಿಕಾರಿ ಎಂ. ಎನ್ ಮಂಜುನಾಥ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT