ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣದ ಚರಂಡಿ, ರಸ್ತೆಗೆ ಮಳೆ ನೀರು, ಸ್ವಚ್ಛತೆಗೆ ಮುಂದಾಗದ ಪಾಲಿಕೆ

Last Updated 10 ಸೆಪ್ಟೆಂಬರ್ 2017, 5:45 IST
ಅಕ್ಷರ ಗಾತ್ರ

ಬಳ್ಳಾರಿ: ಸೋಮವಾರ ರಾತ್ರಿ ಸುರಿದಿದ್ದ ಮಳೆಯ ಪರಿಣಾಮವನ್ನು ನಗರದ ಕಪ್ಪಗಲ್ಲು ರಸ್ತೆಯ ನಿವಾಸಿಗಳು ಮತ್ತು ಆ ರಸ್ತೆಯಲ್ಲಿ ಸಂಚರಿಸುವ ಸಾವಿರಾರು ವಾಹನಗಳ ಸವಾ ರರು ಮಂಗಳವಾರ ಬೆಳಿಗ್ಗೆ ಕಣ್ಣಾರೆ ಕಂಡರು. ರಸ್ತೆಯನ್ನು ಕುಂಟೆಯಂತೆ ಆವರಿಸಿದ ಮಳೆ ನೀರಿನಲ್ಲಿ ಕಾಲಿಡಲು ಆಗದೆ ಪರದಾಡಿದರು.

ನಗರದ ಕನಕದುರ್ಗಮ್ಮ ಗುಡಿ ವೃತ್ತದಿಂದ ಕಿತ್ತೂರುರಾಣಿ ಚೆನ್ನಮ್ಮ ಶಾಲೆಯವರೆಗೂ ಎರಡೂ ಬದಿ ಚರಂಡಿಗಳು ಬಹುತೇಕ ಮುಚ್ಚಿಹೋಗಿರುವುದರಿಂದ ಮಳೆ ನೀರು  ಅಂದು ಮಧ್ಯಾಹ್ನದವರೆಗೂ ರಸ್ತೆಯಲ್ಲೇ ಉಳಿದಿತ್ತು.

ಆ ಘಟನೆಯಾಗಿ ಐದು ದಿನಗಳಾದವು. ಆದರೆ ಚರಂಡಿ ಸ್ವಚ್ಛತೆ ಕಾರ್ಯ ಇನ್ನೂ ನಡೆದಿಲ್ಲ. ಮತ್ತೊಂದು ಮಳೆ ಬಂದರೆ ನೀರು ರಸ್ತೆಯಲ್ಲೇ ನಿಲ್ಲುವಂಥ ಪರಿಸ್ಥಿತಿ. ಈ ಬಗ್ಗೆ ಪಾಲಿಕೆಯ ಅಧಿಕಾರಿಗಳಾಗಲೀ, ಸದಸ್ಯ ರಾಗಲಿ ಗಮನ ಹರಿಸಿಲ್ಲ ಎಂಬುದು ಸ್ಥಳೀಯರ ದೂರು.

ಸಂಚಾರಿ ಹೋಟೆಲ್‌: ಈ ರಸ್ತೆಯ ಒಂದು ಬದಿಯಲ್ಲಿ ಸಂಚಾರಿ ಹೋಟೆಲ್‌ಗಳು, ಹಣ್ಣಿನ ಅಂಗಡಿಗಳು ಹಗಲು–ರಾತ್ರಿ ಕಾರ್ಯನಿರ್ವ ಹಿಸುತ್ತವೆ. ಅಲ್ಲಿನ ತ್ಯಾಜ್ಯ ವಿಲೇವಾರಿಗೆ ಮಾತ್ರ ಹೋಟೆಲ್‌ ಮಾಲೀಕರು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳದೆ, ಚರಂಡಿಗಳನ್ನೇ ಆಶ್ರಯಿಸಿದ್ದಾರೆ.

ಚರಂಡಿಗಳ ಮೇಲೆ ಈ ಹೋಟೆಲ್‌ಗಳ ವಹಿವಾಟು ನಡೆಯುತ್ತಿವೆ. ಮಳೆ ನೀರು ಚರಂಡಿಯಲ್ಲಿ ಹರಿದು ಹೋಗದೇ ಇರಲು ಇವುಗಳ ಕೊಡುಗೆ ಹೆಚ್ಚಿಗೇ ಇದೆ. ರಸ್ತೆಯ ಮತ್ತೊಂದು ಬದಿಯಲ್ಲಿ ಚರಂಡಿ ವ್ಯವಸ್ಥೆ ಇದ್ದರೂ, ಶೀಕೃಷ್ಣನ ಗುಡಿ ಪಕ್ಕದಲ್ಲಿ ನಿರ್ಮಾಣ ವಾಗುತ್ತಿರುವ ವಾಣಿಜ್ಯ ಸಂಕೀರ್ಣದ ಕಲ್ಲು, ಸಿಮೆಂಟ್‌, ಮರಳೆಲ್ಲವೂ ಚರಂಡಿಯನ್ನು ನುಂಗಿವೆ.

ಪರಿಣಾಮವಾಗಿ ಗುಡಿಯ ಅಂಚಿನಲ್ಲೇ ಚರಂಡಿಯಲ್ಲಿ ಭರ್ತಿ ನೀರು ನಿಂತಿರುವುದನ್ನು ಈಗಲೂ ಕಾಣಬಹುದು. ಇಂಥ ಸನ್ನಿವೇಶದಲ್ಲೇ ಭಕ್ತರು ಗುಡಿಗೆ ಹೋಗಿ ಕೈ ಮುಗಿಯುತ್ತಿದ್ದಾರೆ,

ಕ್ರಮ ಏಕಿಲ್ಲ: ‘ರಸ್ತೆ ಬದಿ ಹೋಟೆಲ್‌ಗಳ ಮಾಲೀಕರು ಮತ್ತು  ಕಟ್ಟಡ ನಿರ್ಮಾಣ ವೇಳೆ ಎಚ್ಚರಿಕೆ ವಹಿಸದವರ ವಿರುದ್ಧ ಪಾಲಿಕೆ ಏಕೆ ಕ್ರಮ ಕೈಗೊಳ್ಳುವುದಿಲ್ಲ ಎಂಬುದು ಇಲ್ಲಿನ ನಿವಾಸಿಗಳಾದ ಮಂಜುನಾಥ ಮತ್ತು ಗೌರಮ್ಮ ಅವರ ಪ್ರಶ್ನೆ.

‘ಇದೇ ರಸ್ತೆಯಲ್ಲಿ ಪಾಲಿಕೆಯ ಕೆಲವು ಅಧಿಕಾರಿಗಳೂ ಕೂಡ ಸಂಚರಿಸುತ್ತಾರೆ. ಅವರಿಗೆ ಚರಂಡಿಗಳ ಅವ್ಯವಸ್ಥೆ ಹಾಗೂ ಮೊನ್ನೆ ಮಳೆ ಬಂದಾಗ ಜನರು ಎದುರಿಸಿದ ಸಮಸ್ಯೆಗಳು ಅರಿವಿಗೆ ಬಂದಿಲ್ಲವೇ?’ ಎಂದು ಅವರು ಕೇಳುತ್ತಾರೆ.

* * 

12ರಂದು ನಗರಕ್ಕೆ ಮುಖ್ಯಮಂತ್ರಿ ಭೇಟಿ ಕಾರ್ಯಕ್ರಮ ಮುಗಿದ ಬಳಿಕ ಚರಂಡಿಗಳ ಸ್ವಚ್ಛತಾ ಕಾರ್ಯ ನಡೆಸಲಾಗುವುದು
ಎಂ.ಕೆ.ನಲ್ವಡಿ
ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT