ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ಮಕ್ಕಳಿಗೆ ಇಬ್ಬರೇ ಶಿಕ್ಷಕರು!

Last Updated 10 ಸೆಪ್ಟೆಂಬರ್ 2017, 5:50 IST
ಅಕ್ಷರ ಗಾತ್ರ

ಕಂಪ್ಲಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಈಗಲೂ ಕೆಲ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟಿದೆ.  ಇದಕ್ಕೊಂದು ತಾಜಾ ನಿದರ್ಶನ ಎಂದರೆ ಪಟ್ಟಣದ 8ನೇ ವಾರ್ಡ್‌ ಉರ್ದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ.

ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕೇಳಿದರೆ ನಿಜಕ್ಕೂ ಅಚ್ಚರಿ ಆಗುತ್ತದೆ. ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ 3ನೇ ತರಗತಿಯಲ್ಲಿ ಒಬ್ಬ ಮತ್ತು 5ನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಅಭ್ಯಾಸ ಮಾಡುತ್ತಿದ್ದಾರೆ. ಇವರಿಗೆ ಪಾಠ ಬೋಧಿಸಲು ಮುಖ್ಯ ಶಿಕ್ಷಕ ಹಾಗೂ ಅತಿಥಿ ಶಿಕ್ಷಕಿಯೊಬ್ಬರು ಇದ್ದಾರೆ.

ಪ್ರಸ್ತುತ ಉರ್ದು ಶಾಲೆ ಸತ್ಯನಾರಾ ಯಣಪೇಟೆ ಸಮೂಹ ಸಂಪನ್ಮೂಲ ಕೇಂದ್ರದ ಕಟ್ಟಡದಲ್ಲಿ 2011–12ರಿಂದ ಕಾರ್ಯನಿರ್ವಹಿಸುತ್ತಿದೆ.  1999ರಲ್ಲಿ ಆರಂಭಗೊಂಡ ಈ ಶಾಲೆ ಇಲ್ಲಿಯ 8ನೇ ವಾರ್ಡ್‌ ಮದೀನಾ ಮಸೀದಿ ಕೊಠಡಿ ಯಲ್ಲಿ ನಡೆಯುತ್ತಿತ್ತು. 2010–11ರ ವರೆಗೆ ಶಾಲೆ ಉತ್ತಮವಾಗಿ ನಡೆಯಿತು. ಆದರೆ ಮಸೀದಿ ಆಡಳಿತ ಮಂಡಳಿ ಯವರು ಕೊಠಡಿ ತೆರವುಗೊಳಿಸುವಂತೆ ಕೇಳಿಕೊಂಡಿ ದ್ದರಿಂದ ಎಸ್.ಎನ್ ಪೇಟೆಯ ಸಮೂಹ ಸಂಪನ್ಮೂಲ ಕೇಂದ್ರಕ್ಕೆ ವರ್ಗಾವಣೆ ಗೊಂಡಿತು.

‘ತೆರವುಗೊಂಡ ನಂತರ ಏಕಾಏಕಿ ಎರಡಂಕಿಯಲ್ಲಿದ್ದ ಮಕ್ಕಳ ಸಂಖ್ಯೆ ಬೆರಳೆಣಿಕೆಗೆ ಕುಸಿಯಿತು. 2014ರ ಶೈಕ್ಷಣಿಕ ಸಾಲಿನಲ್ಲಿ ಉರ್ದು ಶಿಕ್ಷಕರು ವರ್ಗಾವಣೆ ಗೊಂಡಿದ್ದು, ಸೂಕ್ತ ಕೊಠಡಿ ವ್ಯವಸ್ಥೆ ಇಲ್ಲದ ಕಾರಣ ಮತ್ತು ಮುಸ್ಲಿಂ ಜನಾಂಗ ವಾಸಿಸುವ ಸ್ಥಳದಿಂದ ಶಾಲೆ ದೂರ ಎನ್ನುವ ಕಾರಣಕ್ಕೆ ದಾಖಲಾತಿ ಕುಸಿಯಿತು’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಬಾಬುಸಾಬ್‌ ತಿಳಿಸುತ್ತಾರೆ.

2016ರ ಶೈಕ್ಷಣಿಕ ಸಾಲಿನಲ್ಲಿ ಮುಖ್ಯ ಶಿಕ್ಷಕರಾಗಿ ಆಗಮಿಸಿದ ಮಹ್ಮದ್‌ ಶರೀಫ್‌ ಉರ್ದು ಬೋಧನೆ ಮಾಡುತ್ತಿದ್ದಾರೆ. ಮತ್ತೊಬ್ಬರು ಅತಿಥಿ ಶಿಕ್ಷಕಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಮಕ್ಕಳ ಸಂಖ್ಯೆಯಲ್ಲಿ ಮಾತ್ರ ಏರಿಕೆ ಕಂಡುಬಂದಿಲ್ಲ.

‘ಇಲ್ಲಿಯ ಎಂ.ಡಿ ಕ್ಯಾಂಪ್‌ ವಾಸಿಗಳಾದ 5ನೇ ತರಗತಿ ರಾಜಭಕ್ಷಿ ಮತ್ತು 3ನೇ ತರಗತಿ ಮೆಹಬೂಬ್ ಮಾತ್ರ ಶಾಲೆಗೆ ದಾಖಲಾಗಿದ್ದಾರೆ. ಇದರಲ್ಲಿ ಮೆಹಬೂಬ್‌ ಕೌಟುಂಬಿಕ ಕಾರಣಕ್ಕೆ ಶಾಲೆಗೆ ಆಗಾಗ ಗೈರು ಆಗು ತ್ತಾನೆ’ ಎಂದು ಮುಖ್ಯ ಶಿಕ್ಷಕರು ತಿಳಿಸಿದರು.

‘ಪಟ್ಟಣದ ಗುರ್ಲರ್ಗಾ ಓಣಿಯಲ್ಲಿ ಅತಿ ಹೆಚ್ಚು ಮುಸ್ಲಿಂ ಜನಾಂಗದವರಿದ್ದು, ಇದೇ ಪ್ರದೇಶದಲ್ಲಿ ಉರ್ದು ಶಾಲೆ ಆರಂಭಕ್ಕೆ ತಾತ್ಕಾಲಿಕ ಕೊಠಡಿ ವ್ಯವಸ್ಥೆ ಮಾಡಿಕೊಡುವಂತೆ ಈಗಾಗಲೇ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ನಾನು ಆ ಓಣಿಯ ಜನಾಂಗದವರಲ್ಲಿ ಮನವಿ ಮಾಡಿದ್ದೇವೆ. ಶಾಲೆ ಸ್ಥಳಾಂತರಗೊಂಡಲ್ಲಿ ಮಕ್ಕಳ ಸಂಖ್ಯೆ ಏರಿಕೆಯಾಗಲಿದೆ’ ಎಂದು ಮುಖ್ಯ ಶಿಕ್ಷಕ ಮಹ್ಮದ್‌ ಶರೀಫ್‌ ತಿಳಿಸಿದರು.

‘ಈಗಲೂ ನಾನು ಮುಸ್ಲಿಂ ಜನಾಂಗದ ಮನೆ ಮನೆಗೂ ತೆರಳಿ ಮಕ್ಕಳನ್ನು ಶಾಲೆಗೆ ದಾಖಲಿಸುವಂತೆ ಜಾಗೃತಿ ಮೂಡಿಸುತ್ತಿದ್ದೇನೆ. ಕೆಲ ಪಾಲ ಕರು ಸಮ್ಮತಿಸಿದರೂ ಇನ್ನು ಕೆಲವರು ಸ್ಪಂದಿಸುತ್ತಿಲ್ಲ’ ಎಂದು ನೋವಿನಿಂದ ಹೇಳಿದರು.

ಇದ್ದ ಇಬ್ಬರು ಮಕ್ಕಳು ಶುಕ್ರವಾರ ಗೈರಾಗಿದ್ದಾರಲ್ಲ ಎನ್ನುವ ಪ್ರಶ್ನೆಗೆ ‘ಶುಕ್ರವಾರ ವಿಶೇಷ ಪ್ರಾರ್ಥನೆ ನಡೆ ಯುವ ಕಾರಣಕ್ಕೆ ಇಬ್ಬರು ಮಕ್ಕಳು ಶಾಲೆಗೆ ವಿಳಂಬವಾಗಿ ಬರುತ್ತಾರೆ’ ಎಂದು ಸ್ಪಷ್ಟಪಡಿಸಿದರು.

* * 

ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರ ಮನವೊಲಿಸಲಾಗಿದೆ. ಶೀಘ್ರವೇ ಪೋಷಕರ ಸಭೆ ಕರೆಯಲಾಗುವುದು
ಮೆಹಬೂಬ್‌ ಬಾಷಾ,
ಉರ್ದು ಸಿಆರ್‌ಪಿ, ಹೊಸಪೇಟೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT