ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟಿದ್ದು ₹100 ಕೋಟಿ, ಬಳಸಿದ್ದು ₹2.5 ಕೋಟಿ

Last Updated 10 ಸೆಪ್ಟೆಂಬರ್ 2017, 5:54 IST
ಅಕ್ಷರ ಗಾತ್ರ

ಬೀದರ್‌: ‘ಕನ್ನಡ ಹಾಗೂ ತೆಲುಗು ಶಾಸ್ತ್ರೀಯ ಅಧ್ಯಯನಕ್ಕೆ ಕೇಂದ್ರ ಸರ್ಕಾರವು ಮೊದಲ ಹಂತದಲ್ಲಿಯೇ ₹ 100 ಕೋಟಿ ಮಂಜೂರು ಮಾಡಿದೆ. ಆದರೆ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಈವರೆಗೆ ₹ 2.5 ಕೋಟಿ ಮಾತ್ರ ಬಳಸಿಕೊಂಡಿದೆ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್‌.ಎಂ. ಮಹೇಶ್ವರಯ್ಯ ಹೇಳಿದರು.

ಇಲ್ಲಿನ ಶನಿವಾರ ನಡೆದ ಅಭಿಜಾತ ಕನ್ನಡ ಪಠ್ಯವಾಚನ ಹಾಗೂ ಅಧ್ಯಯನ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ತೆಲುಗು ಅಧ್ಯಯನ ಕೇಂದ್ರದವರು ಒಂದು ಪೈಸೆಯನ್ನೂ ಬಳಸಿಕೊಂಡಿಲ್ಲ. ಆಂಧ್ರಪ್ರದೇಶ ವಿಭಜನೆಯಾದ ನಂತರ ಕೇಂದ್ರವನ್ನು ಎಲ್ಲಿ ಸ್ಥಾಪನೆ ಮಾಡಬೇಕು ಎನ್ನುವ ಗೊಂದಲದಲ್ಲಿ ಸಮಯ ಕಳೆದು ಹೋಗಿದೆ’ ಎಂದು ತಿಳಿಸಿದರು.

‘ಅಳಿವಿನ ಅಂಚಿನಲ್ಲಿರುವ ಭಾಷೆಗಳ ಸಂಶೋಧನೆಗೆ ₹ 3.6 ಕೋಟಿ ಕಾಯ್ದಿರಿಸಲಾಗಿದೆ. ಕನ್ನಡದ ಮೇಧಾವಿಗಳ ಕುರಿತು ಕಿರುಚಿತ್ರಗಳನ್ನು ನಿರ್ಮಿಸಬೇಕು. ಕನ್ನಡದ ಅಸ್ತಿತ್ವವನ್ನು ಚಲನಚಿತ್ರ ರೂಪದಲ್ಲಿ ಹೊರ ತರಬೇಕು’ ಎಂದು ಹೇಳಿದರು.

‘ದ್ರಾವಿಡ ಸಂಬಂಧಿ ಸೋದರ ಭಾಷೆಗಳನ್ನು ಜೋಡಿಸಲು ಪ್ರಯತ್ನಿಸಬೇಕು. ತರಬೇತಿ ಕೊಟ್ಟು ಕಿರುಚಿತ್ರಗಳನ್ನು ನಿರ್ಮಿಸಬೇಕು. ಆಕರಗಳನ್ನು ಶೋಧಿಸಿ ಲಿಂಕ್‌ ಮಾಡಬೇಕು. ದ್ರಾವಿಡ ಭಾಷೆಗಳನ್ನು ಸಮೃದ್ಧಗೊಳಿಸಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

‘ತಮಿಳಿನಲ್ಲಿ ಅಂತರರಾಷ್ಟ್ರೀಯ ವಿಚಾರಗೋಷ್ಠಿಗಳಿದ್ದರೆ ಒಂದು ಸಾವಿರ ಜನ ತಂತ್ರಜ್ಞರು ಸೇರುತ್ತಾರೆ. ಕನ್ನಡದಲ್ಲಿ ವಿಚಾರಗೋಷ್ಠಿ ಇದ್ದರೆ ಕನ್ನಡದ ನಾಲ್ವರು ತಂತ್ರಜ್ಞರೂ ಇರುವುದಿಲ್ಲ. ಕನ್ನಡ ವಿದ್ವಾಂಸರಲ್ಲಿ ಸಮರ್ಪಣಾ ಭಾವ ಕಡಿಮೆ ಇದೆ. ಕನ್ನಡದಲ್ಲಿ ಕೆಲಸ ಮಾಡುವ ಮನಸ್ಸುಗಳ ಕೊರತೆ ಇದೆ. ಕನ್ನಡದ ರುಚಿ ಬೆಳೆಸುವ ನೆಲೆಯನ್ನು ಸೃಷ್ಟಿಸಬೇಕಿದೆ. ಈ ಮೂಲಕ ಹೊಸ ಪರಂಪರೆಯನ್ನು ಬೆಳೆಸುವ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.

ಮದ್ರಾಸ್‌ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಅಧ್ಯಕ್ಷ ಪ್ರೊ.ಕೆ.ರಾಮಸ್ವಾಮಿ ಮಾತನಾಡಿ, ‘ತಮಿಳು ವಿಶ್ವದ ನಾಲ್ಕು ದೇಶಗಳಲ್ಲಿ ಶಾಸ್ತ್ರೀಯ ಭಾಷೆಯಾಗಿದೆ. ಕನ್ನಡ ಬಹಳ ಹಳೆಯ ಭಾಷೆಯಾದರೂ ಅದನ್ನು ಸರಿಯಾಗಿ ಪರಿಚಯಿಸುವ ಕಾರ್ಯ ನಡೆದಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಮೌಲ್ಯವನ್ನು ಬಿತ್ತರಿಸಬೇಕಿದೆ’ ಎಂದು ಹೇಳಿದರು.

‘ಯುನೆಸ್ಕೊ ಕನ್ನಡವನ್ನು ಅಳಿವಿನ ಅಂಚಿನಲ್ಲಿರುವ ಭಾಷೆಯ ಪಟ್ಟಿಯಲ್ಲಿ ಸೇರಿಸಿದೆ. ಕನ್ನಡ ಸಾಹಿತ್ಯವನ್ನು ಸರಿಯಾಗಿ ಅರಿತುಕೊಳ್ಳಬೇಕಿದೆ. ತಮಿಳಿಗೆ ಮೊದಲು ನಂತರ ಸಂಸ್ಕೃತಕ್ಕೆ ಶಾಸ್ತ್ರೀಯ ಸ್ಥಾನ ಕೊಡಲಾಗಿದೆ. 2008ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಗೌರವ ದೊರೆತಿದೆ’ ಎಂದು ತಿಳಿಸಿದರು.

‘ ಮದ್ರಾಸ್‌ ವಿಶ್ವವಿದ್ಯಾಲಯದಲ್ಲಿ ಮೊದಲು ಅಧ್ಯಯನ ಕನ್ನಡ ಅಧ್ಯಯನ ಸಂಸ್ಥೆ ಆರಂಭವಾಯಿತು. ಶತಮಾನದ ಹಿರಿಯ ಸಂಶೋಧಕ ಆರ್‌.ನರಸಿಂಹಮೂರ್ತಿ 1899 ರಲ್ಲಿ ಮೊದಲು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕನ್ನಡಿಗರಲ್ಲಿ ಕನ್ನಡದ ಬಗೆಗೆ ಆಸಕ್ತಿ ಬೆಳೆಯಬೇಕಿದೆ’ ಎಂದು ತಿಳಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ವೀರಣ್ಣ ದಂಡೆ ಮಾತನಾಡಿ, ‘2004ರಲ್ಲಿಯೇ ತಮಿಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನ ದೊರಕಿತು. ತಮಿಳರಿಗೆ ಇರುವ ಭಾಷಾ ಹಾಗೂ ಸಂಸ್ಕೃತಿಯ ಅಭಿಮಾನ ದೇಶದ ಯಾವ ರಾಜ್ಯಗಳಲ್ಲೂ ಕಾಣ ಸಿಗದು. ಅವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಾಸ್ತ್ರೀಯ ಸ್ಥಾನಮಾನಕ್ಕೆ ಬ್ರಿಟಿಷರಿಗೆ ಮನವಿ ಮಾಡಿಕೊಂಡಿದ್ದರು. ತಮಿಳರಿಂದ ಭಾಷಾ ಅಭಿಮಾನ ಕಳಿತುಕೊಳ್ಳಬೇಕು’ ಎಂದರು.

‘ಬೇರೆ ಜಿಲ್ಲೆಗೆ ಹೋಲಿಸಿದರೆ ಬೀದರ್‌ ಜಿಲ್ಲೆ ಅಭಿವೃದ್ಧಿ ವಿಷಯದಲ್ಲಿ 50 ವರ್ಷ ಹಿಂದೆ ಇದೆ. ಹೈದರಾಬಾದ್‌ ನಿಜಾಮರು ಆಡಳಿತ ನಡೆಸಿದ ಕಾರಣಕನ್ನಡ ಭಾಷಾ ಬೆಳವಣಿಗೆ ಆಗಿಲ್ಲ. ಬೀದರ್ ಜನರಿಗೆ ಎಲ್ಲವನ್ನೂ ಒಪ್ಪಿಕೊಳ್ಳುವ ಪ್ರವೃತ್ತಿ ಇರುವ ಕಾರಣ ತಮ್ಮ ಭಾಷೆಗೆ ಪ್ರಾಮುಖ್ಯ ನೀಡಲಿಲ್ಲ’ ಎಂದು ಹೇಳಿದರು.

‘ಪಂಪ ಸಾಹಿತ್ಯ, ರನ್ನ ಸಾಹಿತ್ಯ, ವಚನ ಹಾಗೂ ದಾಸ ಸಾಹಿತ್ಯ ರಚನೆ ಯಾದದ್ದು ಹೈದರಾಬಾದ್‌ ಕರ್ನಾಟಕದಲ್ಲಾದರೂ ಇಂದು ಎಲ್ಲ ದೃಷ್ಟಿಯಿಂದಲೂ ಹಿಂದೆ ಉಳಿದಿದ್ದೇವೆ. ಶರಣರ ಗುಡಿ ಗುಂಡಾರಗಳಲ್ಲಿ ಇಂದಿಗೂ ಶರಣರ ಹಾಡುಗಳು ಕೇಳಿ ಬರುತ್ತವೆ. ಶಹಾಪುರದ ಬೀರಪ್ಪ, ಹೈದರಾಬಾದ್ ಕರ್ನಾಟಕದ ಸಾಂಸ್ಕೃತಿಕ ನಾಯಕನಾಗಿದ್ದಾನೆ. ಈ ಕುರಿತು ಹೆಚ್ಚಿನ ಸಂಶೋಧನೆ ನಡೆಯಬೇಕಿದೆ’ ಎಂದು ತಿಳಿಸಿದರು.

‘ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ 11 ವಿಶ್ವವಿದ್ಯಾಲಯಗಳಿಗೆ ಒಟ್ಟು ₹ 2 ಕೋಟಿ ಬಿಡುಗಡೆ ಮಾಡಿದ್ದರು. ಹೀಗಾಗಿ ಒಂದು ರೂಪಾಯಿ ಅನುದಾನ ಇಲ್ಲದ ಕನ್ನಡ ಅಧ್ಯಯನ ಪೀಠಗಳಲ್ಲಿ ಸಂಶೋಧನೆ ಕಾರ್ಯ ಕೈಗೊಳ್ಳಲು ಸಾಧ್ಯವಾಯಿತು’ ಎಂದು ಹೇಳಿದರು.

ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಪಾಟೀಲ ಅಷ್ಟೂರ್, ‘ಕನ್ನಡಿಗರಿಗೆ ಭಾಷೆಯ ಬಗೆಗಿನ ಒಲವು ಕಡಿಮೆಯಾಗಿದೆ. ಕನ್ನಡ ಕಲಿತವರಿಗೆ ಉದ್ಯೋಗ ಲಭಿಸುತ್ತಿಲ್ಲ. ಹೀಗಾಗಿ ಕನ್ನಡದಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿಗಳು ಮುಂದೆ ಬರುತ್ತಿಲ್ಲ’ ಎಂದು ಹೇಳಿದರು. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಕೊಟ್ರಸ್ವಾಮಿ, ಮರಿಸ್ವಾಮಿ ಆರ್. ಮಾತನಾಡಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಡಾ.ಬಿ.ಎಸ್.ಬಿರಾದಾರ ಉಪಸ್ಥಿತರಿದ್ದರು. ಸಾಹಿತಿ ಡಾ. ಬಸವರಾಜ ಬಲ್ಲೂರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT