ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17ರಂದು ಹೈದರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ

Last Updated 10 ಸೆಪ್ಟೆಂಬರ್ 2017, 6:15 IST
ಅಕ್ಷರ ಗಾತ್ರ

ಕೊಪ್ಪಳ: ಹೈದರಾಬಾದ್-ಕರ್ನಾಟಕ ವಿಮೋಚನಾ ದಿನವನ್ನು ಸೆ. 17ರಂದು ಸಡಗರ ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ್ ಘಾಳಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಹೈದರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ ಆಚರಿಸುವ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ದೇಶವು 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಪಡೆದರೆ, ಹೈದರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ಈ ಹೈ–ಕ ಪ್ರದೇಶಕ್ಕೆ 1948ರ ಸೆ. 17ರಂದು ಸ್ವಾತಂತ್ರ್ಯ ದೊರೆಯಿತು. ಇದರ ಸವಿ ನೆನಪಿಗಾಗಿ ಹೈದ್ರಾಬಾದ್-ಕರ್ನಾಟಕ ಪ್ರದೇಶ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಿಮೋಚನಾ ದಿನ ಆಚರಿಸಲಾಗುತ್ತಿದೆ. ಇದನ್ನು ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಷ್ಟೆ ಅರ್ಥಪೂರ್ಣವಾಗಿ ಆಚರಿಸಲಾಗುವುದು’ಎಂದು ಆವರು ತಿಳಿಸಿದರು.

‘ಸೆ. 17ರಂದು ಬೆಳಿಗ್ಗೆ 8ಕ್ಕೆ ಜಿಲ್ಲಾಡಳಿತ ಭವನ ಆವರಣದಲ್ಲಿ ಜಿಲ್ಲಾಧಿಕಾರಿ ಅವರಿಂದ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. 9ಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸುವರು. ಶಾಲಾ ಮಕ್ಕಳು, ಎನ್.ಸಿ.ಸಿ., ಪೊಲೀಸ್ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಂದ ಆಕರ್ಷಕ ಪಥಸಂಚಲನ, ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ನಡೆಯಲಿವೆ’ ಎಂದರು.

‘ಅಂದು ಸಂಜೆ 6ಕ್ಕೆ ನಗರದ ಸಾಹಿತ್ಯ ಭವನದಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ನಗರದ ಸಾರ್ವಜನಿಕ ಕಟ್ಟಡಗಳು, ವಾಣಿಜ್ಯ ಮಳಿಗೆ ಹಾಗೂ ಪ್ರಮುಖ ವೃತ್ತಗಳಿಗೆ ವಿಶೇಷ ದೀಪಾಲಂಕಾರ ಮಾಡಲು ಕ್ರಮ ಕೈಗೊಳ್ಳಲಾಗುವುದು. ಎಲ್ಲ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು’ ಎಂದು ವಿವರಸಿದರು.

‘ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಅಗತ್ಯ ಸೂಚನೆಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು’ ಎಂದರು.

ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ವೇದಿಕೆ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಸಮಿತಿ, ಕೈಗಾರಿಕೆ ಇಲಾಖೆ ಜಂಟಿನಿರ್ದೇಶಕರ ಅಧ್ಯಕ್ಷತೆಯಲ್ಲಿ ಸ್ತಬ್ದಚಿತ್ರ ಸಮಿತಿ ರಚಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಆಹಾರ ಇಲಾಖೆ ಉಪನಿರ್ದೇಶಕಿ ಸಿ.ಡಿ. ಗೀತಾ, ನಗರಸಭೆ ಪೌರಾಯುಕ್ತ ಪರಮೇಶಪ್ಪ, ಡಿವೈಎಸ್‍ಪಿ ಶ್ರೀಕಾಂತ ಕಟ್ಟಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT