ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಮಳೆ; ಮಸ್ಕಿ ಜಲಾಶಯಕ್ಕೆ ಹೆಚ್ಚಿದ ಒಳ ಹರಿವು

Last Updated 10 ಸೆಪ್ಟೆಂಬರ್ 2017, 6:29 IST
ಅಕ್ಷರ ಗಾತ್ರ

ಮಸ್ಕಿ: 7500 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಸಮೀಪದ ಮಾರಲದಿನ್ನಿ ಬಳಿಯ ಮಸ್ಕಿ ನಾಲಾ ಜಲಾಶಯಕ್ಕೆ ಶನಿವಾರ 8 ಅಡಿ ನೀರು ಹರಿದು ಬಂದಿದೆ.
28 ಅಡಿ ನೀರು ಸಂಗ್ರಹ ಸಾಮರ್ಥ್ಯವನ್ನು ಜಲಾಶಯ ಹೊಂದಿದೆ. ಒಂದು ವಾರದಲ್ಲಿ ಕುಷ್ಟಗಿ, ಗಜೇಂದ್ರಗಡ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದರಿಂದ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಿದೆ.

ಜಲಾಶಯದಲ್ಲಿ 14 ಅಡಿ ನೀರು ಸಂಗ್ರಹ ಇದೆ. ಜಲಾಶಯ ತುಂಬಲು ಇನ್ನೂ 14 ಅಡಿ ಬಾಕಿ ಇದೆ ಎಂದು ಯೋಜನೆಯ ಪ್ರಭಾರಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ದಾವುದ್ಸಾಬ್ ತಿಳಿಸಿದ್ದಾರೆ.

ಮಸ್ಕಿ ಜಲಾಶಯಕ್ಕೆ ಒಳ ಹರಿವು ಹೆಚ್ಚುತ್ತಿರುವುದರಿಂದ ಈ ಭಾಗದ ರೈತರ ಸಂತಸಗೊಂಡಿದ್ದಾರೆ. ಯೋಜನೆ ಅಚ್ಚುಕಟ್ಟು ಪ್ರದೇಶದಲ್ಲಿ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದರಿಂದ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.

ತುಂಬಿದ ಕೃಷಿಹೊಂಡಗಳು: ಮೂರು ನಾಲ್ಕುದಿನಗಳಿಂದ ಮಳೆ ಸುರಿಯುತ್ತಿದ್ದರಿಂದ ಈ ಭಾಗದ ಹೊಲಗಳಲ್ಲಿ ತೊಡಿಸಿರುವ ಕೃಷಿ ಹೊಂಡಗಳು ತುಂಬಿ ಹರಿಯ ತೊಡಗಿವೆ. ಪರಾಪುರ ರಸ್ತೆ ಸೇರಿದಂತೆ ವಿವಿಧೆಡೆ ಇರುವ ಅನೇಕ ಕೃಷಿ ಹೊಂಡಗಳು ತುಂಬಿಕೊಂಡು ಹೊಲಗಳಲ್ಲಿ ನೀರು ಹರಿಯುತ್ತಿದ್ದ ದೃಶ್ಯ ಶನಿವಾರ ಕಂಡು ಬಂತು. ಮಳೆಯಿಂದಾಗಿ ಈಗಾಗಲೇ ಬಿತ್ತಿದ ಸಜ್ಜೆ ಸೇರಿದಂತೆ ಇತರೆ ಬೆಳೆಗಳು ಮೈತುಂಬಿಕೊಂಡು ನಿಂತಿವೆ.

ಹಟ್ಟಿ ಚಿನ್ನದ ಗಣಿ ವರದಿ: ಹಟ್ಟಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹಳ್ಳ ಹಾಗೂ ಪಟ್ಟಣದ ಚರಂಡಿಗಳು ತುಂಬಿ ಹರಿದವು. ಸ್ಥಳೀಯ ಚಿನ್ನದ ಗಣಿ ಮಳೆ ಮಾಪನ ಕೇಂದ್ರದ ಮಾಹಿತಿ ಪ್ರಕಾರ ಗುರುವಾರ 66 ಮಿ. ಮೀ. ಹಾಗೂ ಶುಕ್ರವಾರ 15 ಮಿ. ಮೀ. ಮಳೆಯಾಗಿದೆ.

ಈ ಮಳೆಯಿಂದಾಗಿ ಹಟ್ಟಿ ಗ್ರಾಮ ಮತ್ತು ಹಟ್ಟಿ ಕ್ಯಾಂಪ್‌ನ ವಿವಿಧ ಬಡಾವಣೆಗಳಲ್ಲಿ ಚರಂಡಿಗಳು ತುಂಬಿ ಮನೆಗಳಿಗೆ ನೀರು ನುಗ್ಗಿದೆ. ಹಟ್ಟಿ ಗ್ರಾಮ ಪಂಚಾಯಿತಿ 11ನೇ ವಾರ್ಡ್‌ನ ಅಬ್ದುಲ್ಲಾ ಕಾಲೊನಿ ಹಾಗೂ ರಾಮ್‌ ರಹೀಮ್‌ ಕಾಲೊನಿಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ.

ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಮತ್ತು ಶೆಡ್‌ಗಳಿಗೆ ನೀರು ನುಗ್ಗಿದೆ. ನಿದ್ದೆ ಇಲ್ಲದೇ ಇಡೀ ರಾತ್ರಿ ನೀರು ಹೊರಚಲ್ಲುವಲ್ಲಿ ಕಳೆದಿದ್ದೇವೆ ಎಂದು ವಾರ್ಡ್‌ ನಿವಾಸಿಗಳಾದ ತಿರುಪತಿ, ಹನುಮಂತ, ಅಮರೇಶ, ವಿಜಯಲಕ್ಷ್ಮಿ, ಸಂಗೀತ, ಗೌಸ್‌, ದುರಗಮ್ನ, ಕವಿತಾ, ಸರಸ್ವತಿ ಹಾಗೂ ಬೇಗಂ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT