ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

900 ವರ್ಷಗಳು: ಶೀಘ್ರದಲ್ಲಿ ಅದ್ಧೂರಿ ಕಾರ್ಯಕ್ರಮ

Last Updated 10 ಸೆಪ್ಟೆಂಬರ್ 2017, 6:51 IST
ಅಕ್ಷರ ಗಾತ್ರ

ಬೇಲೂರು: ‘ಇಲ್ಲಿಯ ವಿಶ್ವ ಪ್ರಸಿದ್ಧ ಚನ್ನಕೇಶವ ದೇವಾಲಯದ 900 ವರ್ಷದ ಸಂಭ್ರಮಾಚರಣೆ ಸಂಬಂಧ ಶೀಘ್ರದಲ್ಲಿಯೇ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಶನಿವಾರ ಇಲ್ಲಿ ತಿಳಿಸಿದರು.

ಇಲ್ಲಿಯ ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅತ್ಯುನ್ನತವಾದ ಹೊಯ್ಸಳ ವಾಸ್ತುಶಿಲ್ಪ ಕಲೆಯನ್ನು ವಿಶ್ವಕ್ಕೆ ತಿಳಿಸುವ ಕೆಲಸ ಮಾಡಬೇಕಿದೆ. ಕೆರೆತೊಣ್ಣೂರು ಮತ್ತು ಮೇಲುಕೋಟೆಯಲ್ಲಿ ರಾಮಾನುಜರ ಸಹಸ್ರಮಾನೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಿದ ರೀತಿಯಲ್ಲಿ ಬೇಲೂರು ಚನ್ನಕೇಶವ ದೇಗುಲದ 900 ವರ್ಷದ ಸಂಭ್ರಮಾಚರಣೆಯನ್ನು ಆಚರಿಸಲಾಗುವುದು. ಈ ಸಂಬಂಧ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಎ.ಮಂಜು ಅವರ ಬಳಿ ಚರ್ಚಿಸಲಾಗುವುದು’ ಎಂದರು.

ಬೇಲೂರು ಚನ್ನಕೇಶವ ದೇಗುಲದ ಧ್ವಜಸ್ತಂಭ ಮತ್ತು ಸೌಮ್ಯನಾಯಕಿ ಅಮ್ಮನವರ ವಿಮಾನ ಗೋಪುರಕ್ಕೆ ಚಿನ್ನದ ಲೇಪನ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಈಗಾಗಲೇ ದೇವಾಲಯಕ್ಕೆ ಅನುಮತಿ ನೀಡಲಾಗಿದೆ. ಯಾತ್ರಿ ನಿವಾಸ್‌ ಕಟ್ಟಡವನ್ನು ಶೀಘ್ರದಲ್ಲಿಯೇ ಉದ್ಘಾಟಿಸಲಾಗುವುದು.

ಸೆ. 15ರಂದು ಧಾರ್ಮಿಕ ಪರಿಷತ್ತಿನ ಸಭೆ ಕರೆಯಲಾಗಿದ್ದು ಅಲ್ಲಿಯೂ ಈ ಕಾಮಗಾರಿಗಳ ಬಗ್ಗೆ ಚರ್ಚಿಸಲಾಗುವುದು. ಚನ್ನಕೇಶವ ದೇಗುಲಕ್ಕೆ ಸೇರಿದ ತಹಶೀಲ್ದಾರ್‌ ವಸತಿ ಗೃಹವನ್ನು ದೇವಾಲಯಕ್ಕೆ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗುವುದು ಎಂದು ರುದ್ರಪ್ಪ ಲಮಾಣಿ ತಿಳಿಸಿದರು.

‘ಮುಜರಾಯಿ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ತೀವ್ರವಾಗಿದೆ. 4–5 ದೇವಾಲಯಗಳಿಗೆ ಒಬ್ಬರು ಕಾರ್ಯನಿರ್ವಾಹಕ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಾರಣ ನಿವೃತ್ತ ಅಧಿಕಾರಿಗಳನ್ನು ದೇವಾಲಯಕ್ಕೆ ನೇಮಿಸುವುದಕ್ಕಾಗಿ ಚಿಂತಿಸಲಾಗುತ್ತಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 35 ಸಾವಿರ ದೇವಾಲಯಗಳಿದ್ದು ಇವುಗಳನ್ನು ನಿರ್ವಹಣೆ ಮಾಡುವುದು ತೀವ್ರ ಕಷ್ಟಕರ. ‘ಎ’ ಮತ್ತು ‘ಬಿ’ ವರ್ಗದ ದೇವಾಲಯಗಳಲ್ಲಿರುವ ಹಣವನ್ನು ಪಡೆದು ಆ ಮೂಲಕ ‘ಸಿ’ ವರ್ಗದ ದೇವಾಲಯಗಳನ್ನು ದತ್ತುಪಡೆದು ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.

ಚನ್ನಕೇಶವ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೈ.ಟಿ.ದಾಮೋದರ್‌ ‘ಚನ್ನಕೇಶವ ದೇವಾಲಯದ ಆಸ್ತಿ ಒತ್ತುವರಿ ತೆರವು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಹನುಮಂತನಗರದಲ್ಲಿರುವ ದೇವಾಲಯದ ಆಸ್ತಿ ಸರ್ವೆ ಕಾರ್ಯ ಸೋಮವಾರ ನಡೆಯಲಿದ್ದು ನಂತರ ಗಡಿ ಗುರುತಿಸಿ ಬೇಲಿ ನಿರ್ಮಾಣ ಮಾಡಲಾಗುವುದು. ದೇಗುಲದ ಆಸ್ತಿಯನ್ನು ಬೇರೆಯವರಿಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಬೇಲೂರು–ಹಳೇಬೀಡು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಎ.ಜಮಾಲುದ್ದೀನ್‌, ವ್ಯವಸ್ಥಾಪನಾ ಸಮಿತಿ ಸದಸ್ಯ ಯು.ಟಿ.ಕೇಶವಮೂರ್ತಿ, ಬಿ.ಎಂ.ರಂಗನಾಥ್‌, ಅರ್ಚಕರಾದ ಕೃಷ್ಣಸ್ವಾಮಿ ಭಟ್ಟರ್‌, ಶ್ರೀನಿವಾಸ್‌ ಭಟ್ಟರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT