ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸೀಕೆರೆ: ದಶಕದ ಬಳಿಕ ದಾಖಲೆ ಮಳೆ

Last Updated 10 ಸೆಪ್ಟೆಂಬರ್ 2017, 6:56 IST
ಅಕ್ಷರ ಗಾತ್ರ

ಅರಸೀಕೆರೆ: ನಗರದಲ್ಲಿ ಗುರುವಾರ ಸಂಜೆ ಭಾರಿ ಮಳೆ ಸುರಿದಿದ್ದು, ಹಲವು ಮನೆಗಳ ಗೋಡೆಗಳು ಕುಸಿದಿವೆ. 10 ವರ್ಷಗಳ ನಂತರ ಬಿದ್ದಿರುವ ದಾಖಲೆ ಮಳೆ ಇದಾಗಿದೆ.
ನಗರದಲ್ಲಿ 97 ಮಿ.ಮೀ, ಬಾಣಾವರ 41 ಮಿ.ಮೀ, ಗಂಡಸಿ 65 ಮಿ.ಮೀ, ಯಳವಾರೆಯಲ್ಲಿ 98 ಮಿ.ಮೀ ಹಾಗೂ ಕಣಕಟ್ಟೆಯಲ್ಲಿ 8.8 ಮಿ.ಮೀ ಮಳೆ ಸುರಿದಿದೆ.
ಗುರುವಾರ ಸಂಜೆ 4ಕ್ಕೆ ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು.

ತಾಲ್ಲೂಕಿನ ಹಲವೆಡೆ ಬುಧವಾರ ದಿಂದಲೂ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು ಜನರು ಭಯಭೀತರಾಗಿ ರಾತ್ರಿಯಿಡೀ ಜಾಗರಣೆ ಮಾಡುವಂತಾಯಿತು. ಮತ್ತೊಂದೆಡೆ ದಾಖಲೆ ಮಳೆಯಿಂದಾಗಿ ರೈತರಲ್ಲಿ ಹರ್ಷ ಮೂಡಿದೆ.

ರಾಜ್ಯ ರಸ್ತೆ ಸಾರಿಗೆ ಬಸ್‌ ನಿಲ್ದಾಣ, ಜೇನುಕಲ್‌ ಕ್ರೀಡಾಂಗಣ ಸಂಪೂರ್ಣ ಜಲಾವೃತಗೊಂಡಿತ್ತು. ರಾಷ್ಟ್ರೀಯ ಹೆದ್ದಾರಿ, ಬಿ.ಎಚ್‌.ರಸ್ತೆ, ಅರಸೀಕೆರೆ–ಮೈಸೂರು ರಸ್ತೆಯ ಎರಡೂ ಬದಿಗಳ ಚರಂಡಿಗಳಲ್ಲಿ ತ್ಯಾಜ್ಯ ಹಾಗೂ ಕಸ–ಕಡ್ಡಿ ಸಂಗ್ರಹವಾಗಿದ್ದರಿಂದ ರಸ್ತೆಯ ಮೇಲೆ ಮೊಳಕಾಲುದ್ದ ನೀರು ಹರಿಯಿತು. ವಾಹನ ಹಾಗೂ ಪಾದಚಾರಿಗಳ ಓಡಾಟಕ್ಕೆ ತೀವ್ರ ತೊಂದರೆಯಾಯಿತು.

ನಗರದ ಸರಸ್ವತಿಪುರಂ ಬಡಾವಣೆ, ಹಾಸನ ರಸ್ತೆಯ ಎಡ ಹಾಗೂ ಬಲ ಬದಿಯ ಬಡಾವಣೆಗಳು, ಮೊಜಾವುರ್‌ ಮೊಹಲ್ಲಾ, ಇಂದಿರಾನಗರ ಹಾಗೂ ಪ್ರತಿಭಾ ಕಾಲೇಜಿನ ಸುತ್ತಮುತ್ತಲಿನ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿತು. ಕೆಲ ಮನೆಗಳ ಗೋಡೆಗಳು ಕುಸಿದಿವೆ.

ಶುಕ್ರವಾರ ಬೆಳಿಗ್ಗೆ ಪೌರ ಕಾರ್ಮಿಕರು ಚರಂಡಿಗಳಲ್ಲಿದ್ದ ತ್ಯಾಜ್ಯ ಹಾಗೂ ರಾಜಕಾಲುವೆಯಲ್ಲಿ ಬೆಳೆದು ನಿಂತದ್ದ ಗಿಡ–ಗೆಂಟಿಗಳನ್ನು ತೆರವುಗೊಳಿಸಿದರು. ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ನಗರಸಭಾ ಅಧ್ಯಕ್ಷ ಎಂ.ಸಮೀವುಲ್ಲಾ ಹಾಗೂ ಪೌರಾಯುಕ್ತ ಸಿ.ಆರ್‌ ಪರಮೇಶ್ವರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಸಮೀವುಲ್ಲಾ, ‘ಮಳೆಯಿಂದ ಹಾನಿಗೊಳಗಾದ ಮನೆಗಳ ಮಾಲೀಕರಿಗೆ ನಗರಸಭೆಯಿಂದ ₹ 1, 000 ಪರಿಹಾರ ನೀಡುವ ಅಧಿಕಾರವಿದೆ, ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ವೈಯಕ್ತಿಕವಾಗಿ ಸಹಾಯ ಮಾಡುವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT