ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರ ಬಾರದ ತಮಿಳುನಾಡು ಶಾಸಕರು

Last Updated 10 ಸೆಪ್ಟೆಂಬರ್ 2017, 7:02 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ರೆಸಾರ್ಟ್‌ನಲ್ಲಿ ತಮಿಳುನಾಡು ಬಂಡಾಯ ಶಾಸಕರ ವಾಸ್ತವ್ಯ ಮುಂದುವರಿದಿದ್ದು, ಯಾರ ಕಣ್ಣಿಗೂ ಬೀಳದಂತೆ ಶನಿವಾರ ಇಡೀ ದಿವಸ ರೆಸಾರ್ಟ್‌ನಲ್ಲಿಯೇ ಉಳಿದರು.

ಕಂಬಿಬಾಣೆ ಸಮೀಪದ ತೊಂಡೂರಿನ ರೆಸಾರ್ಟ್‌ನಲ್ಲಿರುವ ಶಾಸಕರು ಮಾಧ್ಯಮಗಳ ಕಣ್ಣಿಗೆ ಬೀಳದಂತೆ ಅಂತರ ಕಾಯ್ದುಕೊಂಡರು. ತಮಿಳುನಾಡಿನ ಕೆಲವು ಸುದ್ದಿ ವಾಹಿನಿಯ ವರದಿಗಾರರು ಜಿಲ್ಲೆಗೆ ಬಂದಿದ್ದು, ಅವರ ಕ್ಯಾಮೆರಾ ಕಣ್ಣಿಗೆ ಬೀಳದಿರುವಂತೆ ಶಾಸಕರು ರೆಸಾರ್ಟ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ ಎನ್ನಲಾಗಿದೆ. ಜಿಲ್ಲೆಯ ಪ್ರಕೃತಿ ಸೌಂದರ್ಯ ಸವಿಯಲೂ ಅವರು ಹೊರ ಬರಲಿಲ್ಲ.

ವಾಹನ ಬದಲಿಸಿದ ತಂಡ: ಮುಖ್ಯಮಂತ್ರಿ ಕೆ.ಪಳನಿಸ್ವಾಮಿ, ಉಪಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಅವರ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿರುವ ಎಐಎಡಿಎಂಕೆ ಬಣದ ಉಪ ಮುಖ್ಯಸ್ಥ ಟಿ.ಟಿ.ವಿ. ದಿನಕರನ್‌ ಅವರಿಗೆ ಬೆಂಬಲ ಸೂಚಿಸಿರುವ ಕೆಲವು ಶಾಸಕರು ಇಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ.

ಸೆ. 7ರಂದು ಕರ್ನಾಟಕ– ತಮಿಳುನಾಡು ಗಡಿದಾಟುವ ವೇಳೆ ಶಾಸಕರು ಪ್ರಯಾಣಿಸುತ್ತಿದ್ದ ಕಾರುಗಳ ಫೋಟೊ, ವಾಹನದ ನೋಂದಣಿ ಸಂಖ್ಯೆ ಜತೆಗೆ ಜಿಲ್ಲೆಯ ಗುಪ್ತಚರ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಅದನ್ನು ಅರಿತ ಶಾಸಕರ ತಂಡ, ಪ್ರಯಾಣದ ಮಧ್ಯದಲ್ಲಿ ತಮ್ಮ ವಾಹನ ಬಿಟ್ಟು ಕರ್ನಾಟಕದ ನೋಂದಣಿಯಿರುವ ವಾಹನದಲ್ಲಿ ಜಿಲ್ಲೆಗೆ ಬಂದಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ರೆಸಾರ್ಟ್‌ ಬದಲಿಸಿದರು: ತೊಂಡೂರು ರೆಸಾರ್ಟ್‌ಗೆ ಬರುವ ಮೊದಲು ಸುಂಟಿಕೊಪ್ಪ ಅಥವಾ ಕಕ್ಕಬ್ಬೆ ಸಮೀಪದ ರೆಸಾರ್ಟ್‌ಗೆ ಬರಲಿದ್ದಾರೆ ಎನ್ನುವ ಮಾಹಿತಿಯಿತ್ತು. ಜಿಲ್ಲೆಯ ಪೊಲೀಸರು ಅಲ್ಲಿಗೂ ತೆರಳಿ ವಿಚಾರಿಸಿದ್ದರು. ಅಷ್ಟರಲ್ಲಿ ಶುಕ್ರವಾರ ರಾತ್ರಿ ಕಾರ್ಯ ಯೋಜನೆ ಬದಲಿಸಿದ ಶಾಸಕರು, ತೊಂಡೂರಿನ ರೆಸಾರ್ಟ್‌ಗೆ ಸ್ಥಳ ಬದಲಾಯಿಸಿದ್ದರು.

ಶನಿವಾರ ರೆಸಾರ್ಟ್‌ ಮುಂಭಾಗದ ಗೇಟ್‌ ಬಂದ್‌ ಮಾಡಲಾಗಿತ್ತು. ಪ್ರವಾಸಿಗರಿಗೂ ಕೊಠಡಿಗಳನ್ನು ನೀಡುತ್ತಿಲ್ಲ. ಮಾಹಿತಿ ನೀಡದಂತೆ ಸಿಬ್ಬಂದಿಗೆ ಸೂಚಿಸಲಾಗಿದ್ದು ಸ್ಥಳಕ್ಕೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳಿಗೂ ಪ್ರವೇಶ ನಿರಾಕರಿಸಲಾಯಿತು.

ರೆಸಾರ್ಟ್‌ ಒಳಗೆ ಎಷ್ಟು ಮಂದಿ ಬಂಡಾಯ ಶಾಸಕರಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಶನಿವಾರ ಮಧ್ಯಾಹ್ನ ಸಿದ್ದಾಪುರ ಸಮೀಪದ ಮತ್ತೊಂದು ಪ್ರತಿಷ್ಠಿತ ರೆಸಾರ್ಟ್‌ಗೆ ವಾಸ್ತವ್ಯ ಬದಲಿಸುವ ಮಾಹಿತಿಯಿತ್ತು. ಆದರೆ, ಯಾರೊಬ್ಬರೂ ಹೊರಬರಲಿಲ್ಲ. ಶಾಸಕರು ತಂಗಿರುವ ರೆಸಾರ್ಟ್ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿದ್ದು ಹಲವು ಸೌಲಭ್ಯಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT