ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆ ಚುನಾವಣೆ ಮುಂದೂಡಲು ಕೆಟ್ಟ ರಾಜಕಾರಣ ಕಾರಣ

Last Updated 10 ಸೆಪ್ಟೆಂಬರ್ 2017, 7:05 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ಪಟ್ಟಣದ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಪದೇ–ಪದೇ ನ್ಯಾಯಾಲಯದಿಂದ ತಡೆಯಾಜ್ಞೆ ಆಗಲು ಶಾಸಕರ ಕೆಟ್ಟ ರಾಜಕಾರಣವೇ ಕಾರಣ ಆಗಿದೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ನೇರ ಆರೋಪ ಮಾಡಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಟ್ಟಣ ಅಭಿವೃದ್ಧಿಯಾಗುವುದು ಹಾಗೂ ಅಹಿಂದ ವರ್ಗಗಳಿಗೆ ಅವಕಾಶ ದಕ್ಕುವುದು ಜೆಡಿಎಸ್ ನಾಯಕರುಗಳಿಗೆ ಬೇಕಾಗಿಲ್ಲ. ಆದ್ದರಿಂದ ಪುರಸಭೆಯಲ್ಲಿ ಕೇವಲ ಐವರು ಸದಸ್ಯರನ್ನೊಂದಿರುವ ಜೆಡಿಎಸ್‌ ಶಾಸಕ ನಾರಾಯಣಗೌಡ ಸದಸ್ಯರ ಮೂಲಕ ತಡೆಯಾಜ್ಞೆ ತರಿಸುವ ಮೂಲಕ ಕಳೆದ 13 ತಿಂಗಳಿಂದ ಪುರಸಭೆಯಲ್ಲಿ ಜನ ಪ್ರತಿನಿಧಿಗಳ ಆಡಳಿತ ಇಲ್ಲದಂತೆ ಮಾಡಿದ್ದಾರೆ ಎಂದು ದೂರಿದರು.

ಸರ್ಕಾರ ಸಾಮಾಜಿಕ ನ್ಯಾಯದ ಮೇಲೆ ಮೀಸಲಾತಿಯಲ್ಲಿ ಇದೇ ಮೊದಲಬಾರಿಗೆ 2ಎ ವರ್ಗದ ಮಹಿಳೆಗೆ ಅವಕಾಶ ನೀಡಿದೆ. ಕಾಂಗ್ರೆಸ್ ಪಕ್ಷದ ಪುರಸಭಾ ಸದಸ್ಯರಲ್ಲಿ ಯಾವುದೇ ಭಿನ್ನಮತವಿಲ್ಲ. ನಮ್ಮ ಒಗ್ಗಟ್ಟನ್ನು ಸಹಿಸದೆ ತಡೆಯಾಜ್ಞೆ ತರಿಸುವ ಮೂಲಕ ಅಹಿಂದವರ್ಗಗಳ ಏಳಿಗೆಗೆ ಶಾಸಕರು ತಡೆ ಒಡ್ಡಿದ್ದು ದುರಂತ. 23 ಸದಸ್ಯರ ಬಲದ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 13 ಸ್ಥಾನವಿದ್ದು ಸರಳ ಬಹುಮತ ಇದೆ. ನಾಲ್ಕು ಸ್ಥಾನ ಪಡೆದಿರುವ ಬಿಜೆಪಿ ಕೂಡ ಪಕ್ಷವನ್ನು ಬೆಂಬಲಿಸಿದೆ. ಆದರೆ ಜೆಡಿಎಸ್ ಪಕ್ಷದ ನಿಲುವಿನಿಂದ ಸೆ.11 ರಂದು ನಿಗಧಿಯಾಗಿದ್ದ ಚುನಾವಣೆ ಮತ್ತೆ ಮುಂದೂಡಲ್ಪಟ್ಟಿದೆ ಎಂದು ಆರೋಪಿಸಿದರು.

ಶಾಸಕರು ಸುಳ್ಳು ಹೇಳಿಕೊಂಡು ಪಟ್ಟಣದ ಅಭಿವೃದ್ಧಿ ಮಾತ್ರವಲ್ಲ ತಾಲ್ಲೂಕಿನ ಅಭಿವೃದ್ಧಿಯನ್ನು ಅವರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಇನ್ನು ಮುಂದಾದರೂ ಇಂತಹ ರಾಜಕಾರಣ ಮಾಡುವುದನ್ನು ಬಿಟ್ಟು ಉಳಿದ ಅವಧಿಯಲ್ಲಿ ಮಂಜೂರಾಗಿ ನಿಂತು ಹೋಗಿರುವ ಬೂಕನಕೆರೆ, ಸಿಂಧಘಟ್ಟ ಬಹುನೀರು ಕುಡಿಯುವ ಯೋಜನೆ, ಹೊಸಹೊಳಲು ಮೇಲ್ಗಾಲುವೆ ಯೋಜನೆ ಜಾರಿಗೆ ಪ್ರಯತ್ನಿಸಲಿ ಎಂದು ತಿಳಿಸಿದರು.

ಕೆ.ಯು.ಐ.ಡಿ.ಎಫ್.ಸಿ ಅಧ್ಯಕ್ಷ ಮತ್ತಿಘಟ್ಟ ಕೃಷ್ಣಮೂರ್ತಿ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿ.ಡಿ.ಹರೀಶ್, ಮನ್‌ಮುಲ್ ನಿರ್ದೇಶಕರಾದ ಅಂಬರೀಷ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬೇಲದಕೆರೆ ಪಾಪೇಗೌಡ, ಮಾಜಿ ಸದಸ್ಯ ಅಘಲಯ ಮಂಜುನಾಥ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್ , ಪುರಸಭೆಯ ಮಾಜಿ ಅಧ್ಯಕ್ಷರಾದ ಕೆ. ಗೌಸ್ ಖಾನ್, ಎಚ್.ಕೆ. ಆಶೋಕ್, ಆಟೋಕುಮಾರ್, ಸದಸ್ಯ ಪ್ರೇಮ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT