ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ.12ರಿಂದ ಕಾವೇರಿ ಮಹಾ ಪುಷ್ಕರ

Last Updated 10 ಸೆಪ್ಟೆಂಬರ್ 2017, 7:07 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಕಾವೇರಿ ಮಹಾ ಪುಷ್ಕರ ಸೆ.12ರಿಂದ 23ರವರೆಗೆ ನಡೆಯಲಿದ್ದು, ಪೂರ್ವಸಿದ್ಧತೆಗಳು ಭರದಿಂದ ಸಾಗಿವೆ. ಇಲ್ಲಿನ ಸೋಪಾನಕಟ್ಟೆ ಬಳಿ, ಕಾವೇರಿ ನದಿ ದಡದಲ್ಲಿ ಮೇಳ ನಡೆಯಲಿದೆ. ಪಟ್ಟಣದ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ, ಮೈಸೂರು ಜಿಲ್ಲಾ ನಗರ ಬ್ರಾಹ್ಮಣರ ಸಂಘ, ಡಿಟಿಎಸ್‌ ಪ್ರತಿಷ್ಠಾನ, ಅಭಿನವ ಭಾರತ ಹಾಗೂ ಸಿಂಹಭೂಮಿ ಸಂಘಟನೆಗಳು ಈ ಮೇಳ ಆಯೋಜಿಸಿವೆ.

ಕೂಡಲಿ ಸಂಸ್ಥಾನ ಪೀಠದ ಶಂಕರ ಭಗವತ್ಪಾದರು, ಪೂರಿ ಜಗನ್ನಾಥ ಪೀಠಾಧ್ಯಕ್ಷರು, ದ್ವಾರಕಾ ಶಂಕರ ಮಠದ ಸ್ವಾಮೀಜಿ, ಶಿವಗಂಗೆ ಶ್ರೀಗಳು, ಮೈಸೂರಿನ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಶೈವ, ಶಾಕ್ತೇಯ, ಶೌರ, ಗಾಣಪತ್ಯ, ವೈಷ್ಣವ ಪಂಥದ ಸಾಧು– ಸಂತರು ಕಾವೇರಿ ಪುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಸ್ವತಿ ಧಾರ್ಮಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಡಾ.ಭಾನುಪ್ರಕಾಶ್‌ಶರ್ಮಾ ತಿಳಿಸಿದ್ದಾರೆ.

ಕಾವೇರಿ ಪುಷ್ಕರಕ್ಕಾಗಿ ಶ್ರೀರಂಗನಾಥಸ್ವಾಮಿ ದೇವಾಲಯ ಸಮೀಪದ ನದಿ ದಂಡೆಯಲ್ಲಿ ವೇದಿಕೆ ಸಿದ್ಧದವಾಗುತ್ತಿದೆ. ಭಕ್ತರ ಅನುಕೂಲಕ್ಕಾಗಿ ತಾತ್ಕಾಲಿವಾಗಿ ಬಟ್ಟೆ ಬದಲಿಸುವ ಮನೆ ಮತ್ತು ಶೌಚ ಗೃಹ ನಿರ್ಮಿಸಲಾಗುತ್ತಿದೆ. ದೋಣಿಗಳ ಸಹಿತ ನುರಿತ ಈಜುಗಾರರು ನದಿಯ ದಡದಲ್ಲಿ 12 ದಿನಗಳ ಕಾಲ ಇರುತ್ತಾರೆ ಎಂದು ಹೇಳಿದರು.

ಸಾಧು– ಸಂತರು ಮತ್ತು ಭಕ್ತರ ಅನುಕೂಲಕ್ಕಾಗಿ ಜಯಲಕ್ಷ್ಮಿ ಭವನ, ಸುಬ್ರಹ್ಮಣ್ಯಸ್ವಾಮಿ ಕಲ್ಯಾಣ ಮಂಟಪ, ಅಯ್ಯಪ್ಪಸ್ವಾಮಿ ಮಂದಿರ, ಜೈನ ಭವನ, ನಿಮಿಷಾಂಬ ಸಭಾ ಭವನ ಸೇರಿ 12 ಕಡೆ ಅನ್ನ ಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನ ಪ್ರವಚನ ಮತ್ತು ಕಾವೇರಿ ಮಹಾ ಆರತಿ ಜರುಗಲಿದೆ ಎಂದು ಮಾಹಿತಿ ನೀಡಿದರು.

ಸೆ.21ರಿಂದ 3 ದಿನಗಳ ಕಾಲ ಪಾವಗಡ ಪ್ರಕಾಶ್‌, ಸೆ.16ರಂದು ಚಕ್ರವರ್ತಿ ಸೂಲಿಬೆಲೆ ಹಾಗೂ ಸೆ.23ರಂದು ಹಿರೇಮಗಳೂರು ಕಣ್ಣನ್‌ ಅವರಿಂದ ಪ್ರವಚನ ಏರ್ಪಡಿಸಲಾಗಿದೆ. ಸೆ.12ರಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಗುರು ಗ್ರಹ ತುಲಾ ರಾಶಿ ಪ್ರವೇಶಿಸುವ ಪುಣ್ಯ ಕಾಲದಲ್ಲಿ ಕಾವೇರಿ ಪುಷ್ಕರ ನಡೆಯುತ್ತಿದೆ. ಈ ಮೇಳದಲ್ಲಿ ರಾಜ್ಯ, ಹೊರ ರಾಜ್ಯಗಳ 50 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT