ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಂಚಿನಲ್ಲೊಂದು ಬತ್ತದ ಬೇಟೆ ಹಳ್ಳ

Last Updated 10 ಸೆಪ್ಟೆಂಬರ್ 2017, 7:22 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ರಾಯಲ್ಪಾಡ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಿನ ಅಂಚಿನಲ್ಲಿರುವ ‘ಬೇಟೆ ಹಳ್ಳ’ ಎಂದೂ ಬತ್ತದ ಕಾರಣ ಸುತ್ತಲಿನ ಜನರಲ್ಲಿ ಅಚ್ಚರಿಯ ಖನಿಯಾಗಿದೆ. ಈ ಹಳ್ಳವನ್ನು ಯಾವಾಗ ನಿರ್ಮಿಸಲಾಯಿತು ಎನ್ನುವ ಬಗ್ಗೆ ಗ್ರಾಮದ ಹಿರಿಯರನ್ನು ಕೇಳಿದರೆ ‘ಶತಮಾನಕ್ಕೂ ಹಿಂದಿನದ್ದು’ ಎಂದು ಹೇಳುವರು.

ಹಳ್ಳದಲ್ಲಿ ವರ್ಷ ಪೂರ್ತಿ ನೀರು ಇರುತ್ತದೆ. ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿಯಲ್ಲಿರುವ ಈ ಹಳ್ಳದಲ್ಲಿ ಎರಡೂ ರಾಜ್ಯಗಳ ಗಡಿ ಗ್ರಾಮಗಳ ಜನರು ಜಾನುವಾರುಗಳಿಗೆ ನೀರು ಕುಡಿಸುತ್ತಾರೆ.

ಬ್ರಿಟಿಷರ ಕಾಲದಲ್ಲಿ ಇಂದಿನ ರಾಯಲ್ಪಾಡ್‌ ಅನ್ನು ‘ರಾಯಲ್‌ ಪಹಾಡ್’ ಎಂದು ಕರೆಯಲಾಗುತ್ತಿತ್ತು. ಹಿಂದಿ ಭಾಷೆಯಲ್ಲಿ ಪಹಾಡ್‌ ಎಂದರೆ ಬೆಟ್ಟ ಎಂದು ಅರ್ಥ. ಈ ಬೆಟ್ಟದಲ್ಲಿ ಕಾಡು ಸಮೃದ್ಧವಾಗಿತ್ತು. ಬ್ರಿಟಿಷ್‌ ಅಧಿಕಾರಿಗಳು ಕಾಡಿಗೆ ಬೇಟೆಗೆ ಬರುತ್ತಿದ್ದರು. ಆ ರೀತಿ ಬಂದವರು ಈ ಹಳ್ಳದ ಸುತ್ತಲಿನ ದಟ್ಟವಾದ ಪೊದೆಗಳ ಹಿಂದೆ ಬಂದೂಕು ಹಿಡಿದು ಕುಳಿತು ನೀರು ಕುಡಿಯಲು ಬರುತ್ತಿದ್ದ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ಆದ್ದರಿಂದಲೇ ಈ ಹಳ್ಳವನ್ನು ಸ್ಥಳೀಯರು ತೆಲುಗಿನಲ್ಲಿ ‘ವೇಟ ಗುಂತ’, ಕನ್ನಡದಲ್ಲಿ ‘ಬೇಟೆ ಹಳ್ಳ’ ಎಂದು ಕರೆಯುತ್ತಾರೆ.

ಬೇಸಿಗೆಯಲ್ಲಿ ಹಳ್ಳದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಆದರೆ ಬತ್ತುವುದಿಲ್ಲ. ಬೆಟ್ಟದ ತಪ್ಪಲಿನಲ್ಲಿ ಇರುವ ಕಾರಣ ಬೆಟ್ಟದಲ್ಲಿ ಸ್ವಲ್ಪ ಮಳೆಯಾದರೆ ಸಾಕು ನೀರು ಹರಿದು ಬರುತ್ತದೆ. ಹಳ್ಳದ ಸಮೀಪ ಯಾವುದೇ ಗ್ರಾಮಗಳು ಇಲ್ಲ. ದೂರದಿಂದ ಕಾಡಿಗೆ ಮೇಯಲು ಬರುವ ಹಸು, ಎಮ್ಮೆ, ಕುರಿ, ಮೇಕೆಗಳು ಇಲ್ಲಿ ದಾಹ ತೀರಿಸಿಕೊಳ್ಳುತ್ತವೆ. ದನಗಾಹಿಗಳು ಊಟಕ್ಕೆ ಇಲ್ಲಿನ ನೀರನ್ನು ಆಶ್ರಯಿಸಿದ್ದಾರೆ.

ಈಗಲೂ ಬೇಟೆಗಾರರು ರಾತ್ರಿ ಹಳ್ಳದ ಬಳಿ ಕುಳಿತು ನೀರು ಕುಡಿಯಲು ಬರುವ ಮೊಲ, ಕಾಡು ಹಂದಿಗಳನ್ನು ಬೇಟೆಯಾಡುವರು. ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಡಿಯಲ್ಲಿರುವ ಕಾರಣ ಎರಡೂ ರಾಜ್ಯಗಳ ಗಡಿಭಾಗದ ಜನರ ಭಾವ ಬೆಸೆವ ತಾಣವಾಗಿಯೂ ಇದನ್ನು ಗುರುತಿಸಬಹುದು. ಎರಡೂ ಕಡೆಯ ದನಗಾಹಿಗಳು ಇಲ್ಲಿ ಸೇರುತ್ತಾರೆ. ರಸ್ತೆ ಅಂಚಿನ ಮರಗಳ ಕೆಳಗೆ ಕುಳಿತು ಕಷ್ಟ, ಸುಖ ಮಾತನಾಡುತ್ತಾರೆ. ಸೂರ್ಯ ಪಶ್ಚಿಮ ದಿಕ್ಕಿಗೆ ಜಾರುತ್ತಿದ್ದಂತೆ ದನಕರುಗಳೊಂದಿಗೆ ತಮ್ಮ ರಾಜ್ಯಗಳತ್ತ ಮುಖ ಮಾಡುತ್ತಾರೆ. ಇವರ ಭೇಟಿ ಫಲವಾಗಿ ಎರಡೂ ರಾಜ್ಯಗಳ ಗ್ರಾಮಗಳಲ್ಲಿ ವೈವಾಹಿಕ ಸಂಬಂಧ ಬೆಳೆಯುವುದುಂಟು.

ಆದರೆ ಕೆಲವು ವರ್ಷಗಳಿಂದ ಈ ಹಳ್ಳ ಕುಡುಕರ ಹಾವಳಿಯಿಂದ ಮಲಿನವಾಗುತ್ತಿದೆ. ನೀರಿನ ಪೊಟ್ಟಣ, ಪ್ಲಾಸ್ಟಿಕ್‌ ಲೋಟ, ಮದ್ಯದ ಬಾಟಲಿಗಳು ಹಾಗೂ ತಿಂಡಿ ಪೊಟ್ಟಣಗಳನ್ನು ತಂದು ಇಲ್ಲಿ ಕುಡಿದು, ತಿಂದು ಅವುಗಳನ್ನು ಇಲ್ಲಿಯೇ ಎಸೆಯುತ್ತಿದ್ದಾರೆ. ಇದರಿಂದ ಹಳ್ಳದ ನೈರ್ಮಲ್ಯ ಕೆಡುತ್ತಿದ್ದೆ ಎಂಬುದು ದನಗಾಹಿಗಳ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT