ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು– ಕಲ್ಲು ಗಣಿಗಾರಿಕೆ ಪರಿಶೀಲನೆ: ಎಸ್ಪಿ

Last Updated 10 ಸೆಪ್ಟೆಂಬರ್ 2017, 8:52 IST
ಅಕ್ಷರ ಗಾತ್ರ

ಉಡುಪಿ: ‘ಕುಂದಾಪುರ ತಾಲ್ಲೂಕಿನಲ್ಲಿ ಅಕ್ರಮ ಕಲ್ಲು ಗಣಿಗಾರಕೆ ಮತ್ತು ಮರಳುಗಾರಿಕೆ ನಡೆಯುತ್ತಿದೆ’ ಎಂದು ಸಾರ್ವಜನಿಕರು ಎಸ್ಪಿ ಡಾ. ಸಂಜೀವ್ ಎಂ ಪಾಟೀಲ್ ಅವರಿಗೆ ಫೋನ್ ಇನ್ ಕಾರ್ಯಕ್ರಮದಲ್ಲಿ ಶನಿವಾರ ದೂರು ನೀಡಿದರು.

ಲಾರಿಯಲ್ಲಿ ಮಿತಿ ಮೀರಿ (ಬಾಡಿ ಮಟ್ಟದಿಂದ ಮೇಲೆ) ಮರಳು ತುಂಬುವುದರಿಂದ ಅದು ಗಾಳಿಗೆ ಹಾರಿ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು, ಇದರ ವಿರುದ್ಧವೂ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ದಾಖಲೆ ಪರಿಶೀಲನೆ ಮಾಡಲಾಗುವುದು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಮರಳು ಮತ್ತು ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿರುವ ಪ್ರದೇಶ– ವ್ಯಕ್ತಿಗಳ ಮಾಹಿತಿ ಪಡೆದು ಒಂದೊಂದೆ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು ಎಂದು ಹೇಳಿದರು.

ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಸ್ಫೋಟ ನಡೆಸುವ ಪರಿಣಾಮ ಮನೆಗಳಿಗೆ ಹಾನಿಯಾಗುತ್ತಿದೆ ಎಂದು ಸಹ ನಾಗರಿಕರೊಬ್ಬರು ದೂರಿದರು.

ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಆರೋಪಿಗಳು ಬಿಡುಗಡೆಯಾದ ನಂತರ ಮತ್ತೆ ಮಟ್ಕಾ ಬರೆಯುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.

ಮಟ್ಕಾ ಆರೋಪಿಗಳ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಅವರು ಮತ್ತೆ ಮಟ್ಕಾ ದಂಧೆ ನಡೆಸಿದರೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದರು
ಕೊರಾಡಿ, ಕೊಕ್ಕರ್ಣೆ ಮಾರ್ಗದಲ್ಲಿ ಬಸ್‌ಗಳಲ್ಲಿ ಮಿತಿ ಮೀರಿದ ಸಂಖ್ಯೆಯಲ್ಲಿ ಪ್ರಯಾಣಿಕರು ಇರುತ್ತಾರೆ.

ಹೆಚ್ಚಿನ ಬಸ್‌ಗಳು ಓಡಾಡುವಂತೆ ಮಾಡಿ. ಪಾಜಕ ಮತ್ತು ಅಕ್ಕಪಕ್ಕದ ಗ್ರಾಮಗಳಿಗೆ ತುಂಬ ಕಡಿಮೆ ಸಂಖ್ಯೆಯಲ್ಲಿ ಬಸ್‌ಗಳಿವೆ. ಹೊಸ ಬಸ್‌ಗಳು ಬೇಕು. ಕಲ್ಲು ಕ್ವಾರಿಗಳಲ್ಲಿ ನೀರು ತುಂಬಿದ್ದು ಅಪಾಯಕಾರಿಯಾಗಿವೆ, ಅವುಗಳಿಗೆ ಬೇಲಿ ಹಾಕಿಸಿ ಎಂದು ಸಹ ಜನರು ಮನವಿ ಮಾಡಿದರು.

ಕ್ವಾರಿಗಳ ವಿಷಯವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವ ಗಮನಕ್ಕೆ ತರಲಾಗುವುದು ಎಂದರು. ಬಸ್‌ಗಳ ವಿಷಯ ಕುರಿತು ಜಿಲ್ಲಾಧಿಕಾರಿ ಮತ್ತು ಆರ್‌ಟಿಒ ಅವರಿಗೆ ಪತ್ರ ಬರೆಯುವಂತೆ ಅವರು ಸಲಹೆ ನೀಡಿದರು. ಕುಂದಾಪುರದ ವಿವಿಧ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಸಹ ದೂರುಗಳು ಕೇಳಿ ಬಂದವು.
ಕಳೆದ ವಾರ 14 ಮಟ್ಕಾ ಪ್ರಕರಣ ದಾಖಲಿಸಿ 17 ಮಂದಿಯನ್ನು ಹಾಗೂ ಜೂಜಾಟದ 3 ಪ್ರಕರಣದಲ್ಲಿ 18 ಮಂದಿಯನ್ನು ಬಂಧಿಸಲಾಗಿದೆ. ಅಕ್ರಮ ಮದ್ಯ ಮಾರಾಟದ ವಿರುದ್ಧ 1 ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಬ್ಲೂವೆಲ್ ಗೇಮ್‌ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡುವ ಕರಪತ್ರಗಳನ್ನು ಎಲ್ಲ ಶಾಲೆಗಳಿಗೆ ವಿತರಿಸಲಾಗುವುದು ಎಂದರು.

ಎಸ್ಪಿ ಕೆಲಸದ ಬಗ್ಗೆ ಮೆಚ್ಚುಗೆ: ನೇರ ಫೋನ್ ಇನ್ ಕಾರ್ಯಕ್ರಮದ ಬಗ್ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರು. ದೂರುಗಳನ್ನು ನೇರವಾಗಿ ಹೇಳಲು ಇದರಿಂದ ಅನುಕೂಲವಾಗಿದ್ದು ನೆಮ್ಮದಿಯಿಂದ ಬದುಕುವಂತಾಗಿದೆ. ನಿಮ್ಮಿಂದ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಬಂದಿದೆ. ಅಣ್ಣಾಮಲೈ ಅವರಂತೆಯೇ ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರ ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರು.

‘ಎಸ್‌ಐ ಹಾಗೂ ಸಿಬ್ಬಂದಿ ಕೆಲಸ ಮಾಡುತ್ತಾರೆಯೇ ವಿನಃ ನಾವಲ್ಲ. ಅವರು ಕೆಲಸ ಮಾಡುವುದರಿಂದ ಅದರ ಶ್ರೇಯಸ್ಸು ನಮಗೆ ಬರುತ್ತದೆ. ಸ್ಥಳೀಯ ಪೊಲೀಸರು ಸಿಕ್ಕಾಗ ಅವರಿಗೂ ಕೃತಜ್ಞತೆ ಸಲ್ಲಿಸಿ’ ಎಂದು ಎಸ್ಪಿ ಡಾ. ಸಂಜೀವ್ ಪಾಟೀಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT