ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ಹದ ಮಳೆ, ಬೆಳೆಗಳಿಗೆ ಜೀವಕಳೆ

Last Updated 10 ಸೆಪ್ಟೆಂಬರ್ 2017, 8:54 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ವಿವಿಧೆಡೆ ಕಳೆದೆರಡು ದಿನಗಳಿಂದ ಹದ ಮಳೆ ಬರುತ್ತಿದ್ದು ಬೆಳೆಗಳಿಗೆ ಜೀವಕಳೆ ಬಂದಿದೆ. ಬುಧವಾರ ಹಾಗೂ ಗುರುವಾರ ಸಂಜೆ ಮಧುರೆ, ಗುತ್ತಿಕಟ್ಟೆ, ದೇವಿಗೆರೆ, ಹೊನ್ನೇಕೆರೆ, ನಾಗೇನಹಳ್ಳಿ, ಬಾಗೂರು, ಮಲ್ಲಪ್ಪನಹಳ್ಳಿ, ಆನಿವಾಳ, ಕುಂದೂರು, ನೀರಗುಂದ, ಮಾರಬಗಟ್ಟ, ಮಳಲಿ, ಎಂ.ಜಿ.ದಿಬ್ಬ, ಬೆಲಗೂರು, ತಂಡಗ, ಗರಗ, ಕಬ್ಬಳ, ಕಲ್ಕೆರೆ ಮತ್ತೋಡು, ಹಾಗಲಕೆರೆ, ಕಾರೇಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹದ ಮಳೆಯಾಗಿದೆ. ಒಣಗುವ ಸ್ಥತಿಯಲ್ಲಿದ್ದ ರಾಗಿ, ಸಾವೆಗೆ ಇದರಿಂದ ಜೀವಕಳೆ ಬಂದಿದೆ.

\ಬರದಿಂದ ಸಂಕಷ್ಟಕ್ಕೆ ಸಿಲುಕಿದ್ದ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. ಜಾನುವಾರು ಮೇವಿನ ಬೆಳೆಯಾದ ರಾಗಿ ಸಮೃದ್ಧವಾಗಿ ಬೆಳೆಯಲೆಂದು ಕೆಲವು ಗ್ರಾಮಗಳ ರೈತರು ಯುರಿಯಾ, ಡಿಎಪಿ ಗೊಬ್ಬರ ಹಾಕುತ್ತಿದ್ದಾರೆ. ಕೆಲವರು ಹಿಂಗಾರು ಸಾವೆ, ಹುರುಳಿ ಬಿತ್ತನೆ ಮಾಡುತ್ತಿದ್ದಾರೆ. ಇನ್ನೂ ಎರಡು ಹಸಿ ಸಮೃದ್ಧವಾಗಿ ಮಳೆ ಬಂದಲ್ಲಿ ಉತ್ತಮ ಇಳುವರಿಯ ರಾಗಿ ಹಾಗೂ ಜಾನುವಾರಿಗೆ ಮೇವು ಆಗಲಿದೆ ಎನ್ನುತ್ತಾರೆ ರೈತ ಕರಿಯಪ್ಪ.

ಕಳೆದ ವರ್ಷ ಹಾಗೂ ಈ ಬಾರಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವುದರಿಂದ ಭೂಮಿಯಲ್ಲಿ ಸ್ವಲ್ಪವೂ ತೇವಾಂಶವಿಲ್ಲ. ಎಷ್ಟು ಮಳೆ ಬಂದರೂ ಸಾಕಾಗುತ್ತಿಲ್ಲ. ಗುಂಡಿಯಲ್ಲಿ ನಿಂತಿದ್ದ ನೀರು ಒಂದು ತಾಸಿನಲ್ಲಿ ಇಂಗಿ ಹೋಗಿದೆ. ಈಗಲಾದರೂ ಎಡಬಿಡದೆ ಸಮೃದ್ಧವಾಗಿ ಮಳೆ ಬಂದಲ್ಲಿ ಕೆರೆ, ಕಟ್ಟೆಗಳಲ್ಲಿ ನೀರು ನಿಲ್ಲಲು ಹಾಗೂ ತೆಂಗು, ಅಡಿಕೆ ತೋಟಗಳು ಉಳಿಯಲು ಸಾಧ್ಯ ಎನ್ನುತ್ತಾರೆ ಬಾಗೂರಿನ ರೈತ ವೆಂಕಟೇಶ್‌.

51.2 ಮಿ.ಮೀ ಮಳೆ: ಗುರುವಾರ ಸಂಜೆ ಕಸಬಾ ಹೋಬಳಿ 11 ಮಿ.ಮೀ, ಮತ್ತೋಡು 25.8 ಮಿ.ಮೀ, ಶ್ರೀರಾಂಪುರ 10 ಮಿ.ಮೀ, ಮಾಡದಕೆರೆ 3.2 ಮಿ.ಮೀ ಹಾಗೂ ಹೊಸದುರ್ಗ 1.2 ಮಿ.ಮೀ ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 51.2 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT