ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಗೆರೆ–ಜಗಳೂರು ಭಾಗದ ಕೆರೆ ತುಂಬಿಸುತ್ತೇವೆ

Last Updated 10 ಸೆಪ್ಟೆಂಬರ್ 2017, 9:06 IST
ಅಕ್ಷರ ಗಾತ್ರ

ಭರಮಸಾಗರ/ ದಾವಣಗೆರೆ: ಜಗಳೂರು ವ್ಯಾಪ್ತಿಯ 46 ಮತ್ತು ಸಿರಿಗೆರೆ–ಭರಮಸಾಗರ ಭಾಗದ 25 ಕೆರೆಗಳಿಗೆ ತುಂಗಭದ್ರಾ ನದಿ ನೀರು ತುಂಬಿಸುವ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಭಾರಿ ಮತ್ತು ಮಧ್ಯಮ ನೀರಾವರಿ ಸಚಿವ ಎಂ.ಬಿ.ಪಾಟೀಲ ಹಾಗೂ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಭರವಸೆ ನೀಡಿದರು.

ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಭರಮಸಾಗರದ ದೊಡ್ಡಕೆರೆ, ಸಣ್ಣಕೆರೆ ಹಾಗೂ ಎಮ್ಮೆಹಟ್ಟಿ ಕೆರೆಗಳಿಗೆ ತುಂಗಭದ್ರಾ ನದಿಯ ನೀರನ್ನು ತುಂಬಿಸುವ ವಿಸ್ತರಿತ ರಾಜನಹಳ್ಳಿ ಏತ ನೀರಾವರಿ ಯೋಜನೆಯ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘15 ವರ್ಷಗಳ ಅವಧಿಯಲ್ಲಿ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳು 12 ವರ್ಷ ಬರ ಎದುರಿಸಿವೆ. ಹೀಗಾಗಿ ಈ ಭಾಗದ ರೈತರ ಸಮಸ್ಯೆ ಹೆಚ್ಚಿದೆ. ರೈತರ ಸಾಲಮನ್ನಾ ಮಾಡಿದರೆ, ಆತ್ಮಹತ್ಯೆ ಮಾಡಿಕೊಂಡವರಿಗೆ ಪರಿಹಾರ ನೀಡಿದರೆ ಸಮಸ್ಯೆಗಳು ಶಾಶ್ವತವಾಗಿ ನಿವಾರಣೆಯಾಗುವುದಿಲ್ಲ. ರೈತರ ದುಡಿಮೆಗೆ ಬೇಕಾದ ನೀರು ಕೊಡುವುದು ಸರ್ಕಾರದ ಕರ್ತವ್ಯ. ಜಗಳೂರು, ಭರಮಸಾಗರ–ಸಿರಿಗೆರೆ ಭಾಗದ ಕೆರೆಗಳನ್ನು ತುಂಬಿಸುವುದಾಗಿ ಸಚಿವರು ಸಮಾರಂಭದಲ್ಲೇ ಘೋಷಿಸಬೇಕು’ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದರು. ಆಗ ಸಚಿವರಿಬ್ಬರೂ ಅದಕ್ಕೆ ಸಮ್ಮತಿಸಿದರು.

‘ಜಗಳೂರು ಭಾಗದಲ್ಲಿ ಶೇ 40ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡದ ಜನ ವಾಸವಿದ್ದಾರೆ. ಹೀಗಾಗಿ, ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನವನ್ನು ಏತ ನೀರಾವರಿ ಯೋಜನೆಗೆ ಬಿಡುಗಡೆ ಮಾಡಲು ಅವಕಾಶವಿದೆ. ಹೀಗಾಗಿ ಆಂಜನೇಯ ಅವರು ಸಮಾಜ ಕಲ್ಯಾಣ ಇಲಾಖೆಯಿಂದ ಯೋಜನೆ ಅನುಷ್ಠಾಣಕ್ಕೆ ₹ 150 ಕೋಟಿ ಅನುದಾನ ಬಿಡುಗಡೆ ಮಾಡಬೇಕು’ ಎಂದು ಸ್ವಾಮೀಜಿ ಆಗ್ರಹಿಸಿದರು.

ಇದಕ್ಕೆ ಸಮ್ಮತಿ ಸೂಚಿಸಿದ ಆಂಜನೇಯ, ‘ಇದೇ 24ರಂದು ತರಳಬಾಳು ಪೀಠದ ಹಿರಿಯ ಗುರುಗಳ ಸ್ಮರಣೆ ಕಾರ್ಯಕ್ರಮವಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಿರಿಗೆರೆಗೆ ಬರುತ್ತಾರೆ. ಅವರಿಂದಲೇ ಯೋಜನೆಯನ್ನು ಅಧಿಕೃತವಾಗಿ ಘೋಷಣೆ ಮಾಡಿಸಲಾಗುವುದು. ಜಗಳೂರಿನಲ್ಲಿ ನಡೆಯಲಿರುವ ತರಳಬಾಳು ಹುಣ್ಣಿಮೆಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು’ ಎಂದು ತಿಳಿಸಿದರು.

ಅಡ್ಡಿಯಾಗಿರುವ ಸಡಿಲ ಮಣ್ಣು: ಇದೇ ಡಿಸೆಂಬರ್‌ ವೇಳೆಗೆ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳಬೇಕಿತ್ತು. ಆದರೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಬಳಿ ನಿರ್ಮಾಣವಾಗುತ್ತಿರುವ ಸುರಂಗ ಮಾರ್ಗಕ್ಕೆ ಸಡಿಲ ಮಣ್ಣು ಅಡ್ಡಿಯಾಗಿದೆ. ಹೀಗಾಗಿ ಸುರಂಗ ಕೊರೆಯುವುದು ತಡವಾಗುತ್ತಿದೆ. ಇಲ್ಲದಿದ್ದರೆ ಇದೇ ವರ್ಷ ವಾಣಿವಿಲಾಸ ಜಲಾಶಯಕ್ಕೆ ನೀರು ಹರಿಸಬಹುದಾಗಿತ್ತು. ಮುಂದಿನ ಮಾರ್ಚ್‌ ವೇಳೆಗೆ ಕಾಮಗಾರಿ ಪೂರ್ಣಗೊಳಿಸಿ ಬರುವ ಮಳೆಗಾಲದಲ್ಲಿ ವಿವಿ ಸಾಗರಕ್ಕೆ ನೀರು ಹರಿಸುತ್ತೇವೆ ಎಂದು ಹೇಳಿದರು.

ಸಚಿವ ಪಾಟೀಲ ಮಾತನಾಡಿ, ‘ಬೃಹತ್‌ ನೀರಾವರಿ ಯೋಜನೆ ಅನುಷ್ಠಾನದ ಕನಸುಗಳನ್ನು ಪೂರೈಸಲು ನೀರಾವರಿ ಸಚಿವರಿಗೆ ಎರಡು ಅವಧಿಯಾದರೂ ಅಧಿಕಾರ ಸಿಗಬೇಕು. ಇತಿಮಿತಿಯಲ್ಲೂ ನಾಲ್ಕು ವರ್ಷದಲ್ಲಿ ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆಗಳಿಗೆ ವೇಗ ನೀಡಲಾಗಿದೆ. ಐದು ವರ್ಷದ ಅವಧಿಯಲ್ಲಿ ನೀರಾವರಿ ಯೋಜನೆಗಳಿಗಾಗಿ ಖರ್ಚು ಮಾಡುವ ಮೊತ್ತ ₹ 55,000 ಕೋಟಿ ಮುಟ್ಟಲಿದೆ. ಇದು ಹಿಂದಿನ ಸರ್ಕಾರ ನೀರಾವರಿಗೆ ಮಾಡಿದ ವೆಚ್ಚಕ್ಕಿಂತ ಮೂರುಪಟ್ಟು ಹೆಚ್ಚು’ ಎಂದರು.

ಬೃಹತ್ ನೀರಾವರಿ ಯೋಜನೆಗಳಿಂದ ಶೇ 30ರಿಂದ 40 ಜನರಿಗೆ ಅನುಕೂಲವಾದರೆ ಶೇ 60 ಜನರು ಮಳೆಯನ್ನೇ ಆಶ್ರಯಿಸಿದ್ದಾರೆ. ಹೀಗಾಗಿ ಸಣ್ಣ ನೀರಾವರಿ ಯೋಜನೆ ಸಹ ಅಷ್ಟೆ ಮುಖ್ಯ. ಕಾವೇರಿ ಕೊಳ್ಳ ಹೊರತುಪಡಿಸಿ, ಇತರೆ ಕಡೆಗಳಲ್ಲಿ 100ಕ್ಕೂ ಹೆಚ್ಚಿನ ಕೆರೆ ತುಂಬಿಸುವ ಯೋಜನೆಗಳು ನಡೆಯುತ್ತಿವೆ. ಸುಮಾರು 2,500 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಣ್ಣ ನೀರಾವರಿ ಸಚಿವ ಟಿ.ಬಿ.ಜಯಚಂದ್ರ, ‘1997ರಲ್ಲಿ ರಾಜ್ಯದಲ್ಲಿ 37,000 ಕೆರೆಗಳಿದ್ದವು. ಆದರೆ, ಈಗ ಕೆರೆಗಳು 28,000ಕ್ಕೆ ಇಳಿದಿವೆ. ಸುಮಾರು 9,000 ಕೆರೆಗಳು ಕಣ್ಮರೆಯಾಗಿವೆ ಎಂದು ಕೇಂದ್ರದ ಸಮೀಕ್ಷೆ ಮಾಹಿತಿ ಬಹಿರಂಗಪಡಿಸಿದೆ. ಹೀಗಾಗಿ ನೀರಿನ ಸೆಲೆಗಳನ್ನು ಪುನರುಜ್ಜೀವನ ಮಾಡುವ ಕೆಲಸವನ್ನು ಮಾಡಬೇಕಾಗಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಸಂಸದ ಬಿ.ಎನ್.ಚಂದ್ರಪ್ಪ, ಹಿರಿಯೂರು ಶಾಸಕ ಡಿ.ಸುಧಾಕರ್, ಜಗಳೂರು ಶಾಸಕ ಎಚ್.ಪಿ.ರಾಜೇಶ್, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ರಾಜ್ಯ ಕುಕ್ಕುಟ ಮಂಡಳಿ ಅಧ್ಯಕ್ಷ ಡಿ.ಎಸ್.ರುದ್ರಮುನಿ, ಬಾಬು ಜಗಜೀವನ್ ರಾಂ ಚರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಒ.ಶಂಕರ್, ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ತಿಪ್ಪೇಸ್ವಾಮಿ, ಶರಣಪ್ಪ, ನರಸಿಂಹರಾಜು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ, ಭದ್ರಾ ನಾಲಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಪಾಟೀಲ್, ಕಾಂಗ್ರೆಸ್‌ ರಾಜ್ಯ ಕಾರ್ಯದರ್ಶಿಗಳಾದ ಷಣ್ಮುಖಪ್ಪ, ಡಿ.ಬಸವರಾಜ್, ಜಿಲ್ಲಾ ಘಟಕದ ಅಧ್ಯಕ್ಷ ಫಾತ್ಯರಾಜನ್, ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿಗಳ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯ್ತಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT