ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟ ಚೆಂಡಿಗೆ ಬೇಕು ಗಟ್ಟಿ ನೆಲೆ....

Last Updated 10 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಹೀಗಾಗಿ ಧಾರವಾಡ ಸೇರಿದಂತೆ ದೇಶದ ಐದು ನಗರಗಳಲ್ಲಿ ಆಯೋಜನೆಯಾಗಿರುವ ಅಖಿಲ ಭಾರತ ರ್‍ಯಾಂಕಿಂಗ್ ಟೂರ್ನಿಗಳು ಮಹತ್ವ ಪಡೆದುಕೊಂಡಿವೆ. ಈ ಟೂರ್ನಿಗಳಿಂದ ಏನು ಲಾಭ, ಸಣ್ಣ ಊರುಗಳಲ್ಲಿ ಪಂದ್ಯಗಳನ್ನು ಏಕೆ ಆಯೋಜಿಸಬೇಕು ಎನ್ನುವುದರ ಬಗ್ಗೆ ಪ್ರಮೋದ ಜಿ.ಕೆ. ವಿಶ್ಲೇಷಿಸಿದ್ದಾರೆ.

‘ನಮ್ಮೂರಿನಿಂದ ಇಲ್ಲಿಗೆ ಬರುವುದು ದೂರ ಎನ್ನುವುದು ಬಿಟ್ಟರೆ ಬೇರೆ ಏನೂ ಸಮಸ್ಯೆ ಇಲ್ಲ. ಉತ್ತಮ ಕ್ರೀಡಾಂಗಣವಿದೆ. ಟೂರ್ನಿಯನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದಾರೆ. ನಿತ್ಯ ನೂರಾರು ಮಕ್ಕಳು ಬಂದು ಪಂದ್ಯಗಳನ್ನು ನೋಡುತ್ತಿದ್ದಾರೆ. ಹೊಸ ಹೊಸ ಊರುಗಳಲ್ಲಿ ಪಂದ್ಯಗಳನ್ನು ಆಯೋಜಿಸಿದರೆ ನಾವೂ ಬೆಳೆಯುತ್ತೇವೆ. ಜೊತೆಗೆ ಕ್ರೀಡೆಯೂ ಅಭಿವೃದ್ಧಿಯಾಗುತ್ತದೆ’ ಹೀಗೆ ಹೇಳಿದ್ದು ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ದೇಶವನ್ನು ಪ್ರತಿನಿಧಿಸಿದ್ದ ಟೇಬಲ್‌ ಟೆನಿಸ್‌ ಆಟಗಾರ್ತಿ ಕೋಲ್ಕತ್ತದ ಮೌಮಾ ದಾಸ್‌.

ಇದಕ್ಕೆ ಧ್ವನಿಗೂಡಿಸಿದ್ದು ಮತ್ತೊಬ್ಬ ಒಲಿಂಪಿಯನ್‌ ಅಚಂತ ಶರತ್‌ ಕಮಲ್‌. ಸಣ್ಣ ಊರುಗಳಲ್ಲಿ ಟೂರ್ನಿಗಳನ್ನು ಆಯೋಜಿಸಿದರೆ ಏನೆಲ್ಲಾ ಲಾಭ ಎನ್ನುವುದರ ಬಗ್ಗೆ ಅವರಿಬ್ಬರ ನಡುವೆ ಆಸಕ್ತಿಕರ ಚರ್ಚೆ ನಡೆದಿತ್ತು. ಅವರ ಜೊತೆ ನಿಂತಿದ್ದ ಮಾಧ್ಯಮದವರು ಮೌನವಾಗಿ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು.

ಹಲವಾರು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ, ಹತ್ತಾರು ದೇಶಗಳನ್ನು ಸುತ್ತಾಡಿರುವ ಮೌಮಾ ದಾಸ್‌ ಮತ್ತು ಶರತ್‌ ಅವರ ನಡುವಣ ಮಾತು ದೇಶದಲ್ಲಿ ಟೇಬಲ್‌ ಟೆನಿಸ್‌ಗೆ ಸಿಗುತ್ತಿರುವ ಮನ್ನಣೆ, ಹೊಸದಾಗಿ ಬರುವ ಕ್ರೀಡಾಪಟುಗಳು ಯಾವುದಕ್ಕೆ ಆದ್ಯತೆ ನೀಡುತ್ತಿದ್ದಾರೆ. ಮುಂದೆ ಈ ಕ್ರೀಡೆಯಲ್ಲಿ ಏನೆಲ್ಲಾ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದರತ್ತ ಹೊರಳಿತು.

ಆಗ ಪತ್ರಕರ್ತರೊಬ್ಬರು ‘ಕ್ರಿಕೆಟ್‌, ಕಬಡ್ಡಿ, ಬ್ಯಾಡ್ಮಿಂಟನ್‌ ಆಡುವವರು ವೃತ್ತಿಪರ ಕ್ರೀಡಾಪಟುಗಳಾಗಿ ಬೆಳೆಯಲು ಯೋಚಿಸುತ್ತಾರೆ. ತಮ್ಮ ನೆಚ್ಚಿನ ಕ್ರೀಡೆಯಲ್ಲಿ ದೊಡ್ಡ ಸಾಧನೆ ಮಾಡುವ, ದೇಶಕ್ಕೆ ಹೆಸರು ತಂದುಕೊಡುವ ಬಗ್ಗೆ ಯೋಜನೆ ರೂಪಿಸುತ್ತಾರೆ. ಆದರೆ ಟೇಬಲ್‌ ಟೆನಿಸ್‌ನಲ್ಲಿ ಒಂದು ಹಂತದವರೆಗೆ ಮಾತ್ರ ಆಸಕ್ತಿ ತೋರಿಸುತ್ತಾರೆ. ನಂತರ ಆಟ ಕೈಬಿಟ್ಟು ಓದಿನತ್ತ ಪೂರ್ಣ ಗಮನ ಹರಿಸುತ್ತಾರೆ. ಅರೆಕಾಲಿಕ ಕೆಲಸದ ಹಾಗೆ ಈ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳುವುದು ಸರಿಯೇ’ ಎಂದು ಪ್ರಶ್ನಿಸಿದರು.

ಆಗ ಪ್ರತಿಕ್ರಿಯಿಸಿದ ಮೌಮಾ ‘ನೀವು ಹೇಳಿದ್ದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಎಲ್ಲಾ ಕಡೆ ಹಾಗೆ ಆಗುವುದಿಲ್ಲ. ಕ್ರೀಡಾಪಟುಗಳಿಗೆ ಸಿಗುವ ಪ್ರೋತ್ಸಾಹದ ಮೇಲೆ ಅದು ಅವಲಂಬಿತವಾಗಿರುತ್ತದೆ. ಜೊತೆಗೆ ಅವರು ಯಾವುದಕ್ಕೆ ಆದ್ಯತೆ ನೀಡುತ್ತಾರೆ ಎಂಬುದೂ ಮುಖ್ಯವಾಗುತ್ತದೆ’ ಎಂದರು. ಹೀಗೆ ಹತ್ತಾರು ವಿಷಯಗಳ ಬಗ್ಗೆ ಸುಮಾರು ಒಂದು ಗಂಟೆ ಚರ್ಚೆಯಾಯಿತು.

ಇದಕ್ಕೆ ವೇದಿಕೆ ಒದಗಿಸಿದ್ದು ಧಾರವಾಡದಲ್ಲಿ ನಡೆಯುತ್ತಿರುವ ಅಖಿಲ ಭಾರತ (ದಕ್ಷಿಣ ವಲಯ) ಟೇಬಲ್‌ ಟೆನಿಸ್‌ ರ್‍ಯಾಂಕಿಂಗ್ ಚಾಂಪಿಯನ್‌ಷಿಪ್‌.

ಹುಬ್ಬಳ್ಳಿ, ಧಾರವಾಡದಲ್ಲಿ ರಾಜ್ಯ, ರಾಷ್ಟ್ರೀಯ ಮಟ್ಟದ ಟೇಬಲ್‌ ಟೆನಿಸ್ ಚಾಂಪಿಯನ್‌ಷಿಪ್‌ಗಳು ನಡೆಯುವುದು ಇದು ಹೊಸದೇನಲ್ಲ. ಹುಬ್ಬಳ್ಳಿಯಲ್ಲಿರುವ ಮಹಾರಾಷ್ಟ್ರ ಮಂಡಳ ಕ್ಲಬ್‌ನವರು ಮೊದಲೆಲ್ಲಾ ಪ್ರತಿ ವರ್ಷ ರಾಜ್ಯ‌ಮಟ್ಟದ ಟೂರ್ನಿಗಳನ್ನು ನಡೆಸುತ್ತಿದ್ದರು. ಬೆಳಗಾವಿ, ಗದಗ, ಹಾವೇರಿ, ಉತ್ತರ ಕನ್ನಡ ಹೀಗೆ ಸುತ್ತಮುತ್ತಲಿನ ಜಿಲ್ಲೆಗಳ ಕ್ರೀಡಾಪಟುಗಳಿಗಾಗಿ ಆಹ್ವಾನಿತ ಟೂರ್ನಿ ನಡೆಸಿ ಟೇಬಲ್‌ ಟೆನಿಸ್‌ಗೆ ಸಂಬಂಧಿಸಿದ ಚಟುವಟಿಕೆಗಳು ಸಕ್ರಿಯವಾಗಿರುವಂತೆ ನೋಡಿಕೊಳ್ಳುತ್ತಿದ್ದರು.

ಧಾರವಾಡದ ಕಾಸ್ಮಸ್ ಕ್ಲಬ್‌ ಕೂಡ ಈ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಜಿಲ್ಲೆಯಲ್ಲಿ ಹಲವು ಕ್ಲಬ್‌ಗಳು ಇದ್ದರೂ ಕ್ರಿಯಾಶೀಲವಾಗಿರುವುದು ಬೆರಳೆಣಿಕೆಯಷ್ಟು ಮಾತ್ರ. ಈ ಭಾಗದ ಮಕ್ಕಳಿಗೆ ಟೇಬಲ್‌ ಟೆನಿಸ್‌ ಕಲಿಯಲು ಅಪಾರ ಆಸಕ್ತಿಯಿದೆ. ಈ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡುವ ಮಹಾದಾಸೆ ಇದೆ. ಆದ್ದರಿಂದ ಟೂರ್ನಿಯಲ್ಲಿ ಪಾಲ್ಗೊಳ್ಳದೇ ಇದ್ದರೂ ನಿತ್ಯ ನೂರಾರು ಯುವ ಪ್ರತಿಭೆಗಳು ಕ್ರೀಡಾಂಗಣಕ್ಕೆ ಬಂದು ಪಂದ್ಯಗಳನ್ನು ನೋಡುತ್ತಾರೆ. ಈಗ ದೊಡ್ಡ ಮಟ್ಟದ ಟೂರ್ನಿ ಆಯೋಜಿಸಿರುವುದರ ಹಿಂದೆ ಅಂತರರಾಷ್ಟ್ರೀಯ ರೆಫರಿ ಧಾರವಾಡದ ಉಪಾಧ್ಯ ಅವರ ಶ್ರಮವಿದೆ.

ನಿತ್ಯ ಇಲ್ಲಿಗೆ ಬಂದು ಪಂದ್ಯಗಳನ್ನು ನೋಡುವುದರಿಂದ ನಿಮಗೆ ಏನು ಲಾಭ ಎಂದು ಟಿ.ಟಿ. ಆಟಗಾರ್ತಿ ಸಹನಾ ಕುಲಕರ್ಣಿ ಅವರನ್ನು ಪ್ರಶ್ನಿಸಿದಾಗ ‘ನಮ್ಮೂರಿನಲ್ಲಿ ದೊಡ್ಡ ಮಟ್ಟದ ಟೂರ್ನಿ ನಡೆದಾಗ ಖ್ಯಾತನಾಮರ ಆಟ ನೋಡುವ ಅವಕಾಶ ಸಿಗುತ್ತದೆ. ದೊಡ್ಡ ಸಾಧನೆ ಮಾಡುವ ಆಸೆ ಹೊತ್ತವರಿಗೆ ಅವರ ಆಟ ಸ್ಫೂರ್ತಿಯಾಗುತ್ತದೆ’ ಎಂದರು.

ಹಲವಾರು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿರುವ ಅಚಂತ ಶರತ್‌ ಕಮಲ್‌, ಸತ್ಯನ್‌ ಜ್ಞಾನಸೇಖರನ್‌, ಹರ್ಮಿತ್‌ ದೇಸಾಯಿ, ಅರ್ಜುನ್‌ ಘೋಷ್‌, ಮಂಡಲ್‌ ರಾಜ್‌, ಅಭಿಷೇಕ್‌ ಯಾದವ್‌, ಸನಿಲ್‌ ಶಂಕರ ಶೆಟ್ಟಿ, ಮೌಮಾ ದಾಸ್‌, ಮಣಿಕಾ ಬಾತ್ರಾ, ಅಂಕಿತಾ ದಾಸ್‌, ಮಾಧುರಿಕಾ ಪಾಟ್ಕರ್‌, ಪೂಜಾ ಸಹಸ್ರಬುದ್ಧೆ, ಅರ್ಚನಾ ಕಾಮತ್‌ ಹೀಗೆ ಹಲವಾರು ಪ್ರಮುಖ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಇವರ ಆಟ ಕಣ್ತುಂಬಿಕೊಳ್ಳಲು ಯುವ ಪ್ರತಿಭೆಗಳು ಹಂಬಲಿಸುತ್ತಿರುತ್ತಾರೆ. ಇದು ಧಾರವಾಡದಲ್ಲಿ ಆಯೋಜನೆಯಾಗಿರುವ ಟೂರ್ನಿಯ ಮಹತ್ವವನ್ನು ಸಾರಿ ಹೇಳುತ್ತದೆ.

ಕ್ರೀಡಾಪಟುಗಳಿಗೂ ಅಗ್ನಿಪರೀಕ್ಷೆ
ಮುಂದಿನ ವರ್ಷ ನಡೆಯಲಿರುವ ಕಾಮನ್‌ವೆಲ್ತ್‌ ಮತ್ತು ಏಷ್ಯನ್‌ ಕ್ರೀಡಾಕೂಟಕ್ಕೂ ಮೊದಲು ಭಾರತದ ಸ್ಪರ್ಧಿಗಳು ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳನ್ನು ಆಡಬೇಕಿದೆ.

ಇದೇ ತಿಂಗಳು ಅಹಮದಾಬಾದ್‌ನಲ್ಲಿ ಏಷ್ಯಾ ಕಪ್‌ ನಡೆಯಲಿದೆ. ಮುಂದಿನ ತಿಂಗಳು ಸಿಲಿಗುರಿಯಲ್ಲಿ ಅಖಿಲ ಭಾರತ ರ್‍ಯಾಂಕಿಂಗ್ (ಪೂರ್ವ, ಪಶ್ಚಿಮ ಹಾಗೂ ಉತ್ತರ ವಲಯ) ಟೂರ್ನಿಗಳು, ಗ್ರೇಟರ್‌ ನೋಯ್ಡಾದಲ್ಲಿ ಇಂಡಿಯಾ ಓಪನ್‌ ಜೂನಿಯರ್ ಮತ್ತು ಕೆಡೆಟ್‌ ವಿಭಾಗದ ಟೂರ್ನಿ ಜರುಗಲಿದೆ. ನವೆಂಬರ್‌ನಲ್ಲಿ ಗ್ರೇಟರ್‌ ನೋಯ್ಡಾದಲ್ಲಿ ಯೂತ್‌ ಒಲಿಂಪಿಕ್ಸ್‌ (ಏಷ್ಯಾ ವಲಯ) ಅರ್ಹತಾ ಸುತ್ತಿನ ಟೂರ್ನಿ, ಇಟಲಿಯಲ್ಲಿ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ ಮತ್ತು ಜನವರಿಯಲ್ಲಿ ಜಾರ್ಖಂಡ್‌ನಲ್ಲಿ ಸೀನಿಯರ್‌ ನ್ಯಾಷನಲ್‌ ಕ್ರೀಡಾಕೂಟ ಹೀಗೆ ಒಂದಾದ ಮೇಲೊಂದು ಟೂರ್ನಿಗಳು ಇವೆ.

ಈ ಎಲ್ಲಾ ಟೂರ್ನಿಗಳು ಮುಗಿದು ಎರಡೇ ತಿಂಗಳ ಬಳಿಕ ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ನಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟವಿದೆ. ಆಗಸ್ಟ್‌ನಲ್ಲಿ ಜಕಾರ್ತದಲ್ಲಿ ಏಷ್ಯನ್‌ ಕ್ರೀಡಾಕೂಟ ಆಯೋಜನೆಯಾಗಿದೆ.ಈ ಪ್ರತಿಷ್ಠಿತ ಟೂರ್ನಿಗಳಿಗೆ ಸಜ್ಜಾಗಲು ಭಾರತದ ಸ್ಪರ್ಧಿಗಳು ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ.

‘ಭಾರತದ ಪ್ರಮುಖ ಟೇಬಲ್‌ ಟೆನಿಸ್‌ ಸ್ಪರ್ಧಿಗಳ ಮುಂದೆ ಇರುವುದು ಕಾಮನ್‌ವೆಲ್ತ್‌ ಮತ್ತು ಏಷ್ಯನ್‌ ಗೇಮ್ಸ್‌ ಗುರಿ. ಅದಕ್ಕೆ ಈಗಿನಿಂದಲೇ ತಯಾರಿ ಆರಂಭವಾಗಿದೆ. ಆದ್ದರಿಂದ ಎಲ್ಲಾ ಟೂರ್ನಿಗಳಲ್ಲಿ ತಪ್ಪದೇ ಪಾಲ್ಗೊಳ್ಳುತ್ತೇನೆ’ ಎಂದು ಶರತ್‌ ಕಮಲ್‌ ಹೇಳಿದರು.

‘ಬೇರೆ ಕ್ರೀಡೆಗಳ ಹಾಗೆ ಟೇಬಲ್‌ ಟೆನಿಸ್‌ ಕೂಡ ಬೆಳೆಯಬೇಕು ಎನ್ನುವ ಆಸೆ ನನ್ನದು. ಆದ್ದರಿಂದ ಎಷ್ಟೇ ದೂರ ಟೂರ್ನಿ ಇದ್ದರೂ ಹೋಗಿ ಆಡುತ್ತೇನೆ. ನಮ್ಮ ಆಟ ಸ್ಥಳೀಯ ಮಕ್ಕಳ ಪೈಕಿ ಒಬ್ಬರಿಗೆ ಸ್ಫೂರ್ತಿಯಾದರೂ ಸಾಕು. ಅವರಲ್ಲಿ ಈ ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎನ್ನುವ ಛಲ ಮೂಡಿದರೆ ನಮ್ಮ ಶ್ರಮ ಸಾರ್ಥಕ. ಆದ್ದರಿಂದ ರಾಷ್ಟ್ರೀಯ ಮಟ್ಟದ ಇನ್ನಷ್ಟು ಟೂರ್ನಿಗಳು ಸಣ್ಣ ಊರುಗಳಲ್ಲಿಯೇ ನಡೆಯಬೇಕು’ ಎಂದು ಅಭಿಪ್ರಾಯಪಟ್ಟರು.

*
‘ಆಟಗಾರ್ತಿಯರಿಗೆ ಸವಾಲು ಹೆಚ್ಚು’
ಎಲ್ಲಾ ಮಹಿಳೆಯರು ಒಂದೇ ರೀತಿಯ ದೈಹಿಕ ಸಾಮರ್ಥ್ಯ ಹೊಂದಿರುವುದಿಲ್ಲ. ಹೀಗಾಗಿ ಅವರ ಶಕ್ತಿಗೆ ಅನುಗುಣವಾಗಿ ತರಬೇತಿ ನೀಡಬೇಕಾಗುತ್ತದೆ. ಈ ಕಾರಣದಿಂದಾಗಿಯೇ ಈಗಿನ ಕೋಚ್‌ ನಿತ್ಯ ಕನಿಷ್ಠ 40 ನಿಮಿಷದಿಂದ ಒಂದು ಗಂಟೆ ಓಡಬೇಕು ಎಂದು ಹೇಳುತ್ತಾರೆ. ಬಾಲಕಿಯರ ಮತ್ತು ಮಹಿಳೆಯರ ಮನಸ್ಥಿತಿಗೆ ತಕ್ಕಂತೆ ಅವರು ನಡೆದುಕೊಳ್ಳುತ್ತಾರೆ.

ನಾವು ವೃತ್ತಿಪರತೆ ಮೈಗೂಡಿಸಿಕೊಳ್ಳದ ಕಾರಣ ಕ್ರೀಡೆಯತ್ತ ಪೂರ್ಣವಾಗಿ ಸಮರ್ಪಿಸಿಕೊಳ್ಳಲು ಆಗುತ್ತಿಲ್ಲ. ಮಹಿಳೆ ಎಲ್ಲಿಯೇ ಟೂರ್ನಿ ಆಡಲು ಹೋದರೂ ಜೊತೆಗೆ ಒಬ್ಬರನ್ನು ಕರೆದುಕೊಂಡು ಹೋಗಬೇಕು. ವಿದೇಶದಲ್ಲಿ ತರಬೇತಿಗೆ ಹೋದಾಗ ತಿಂಗಳಾನುಗಟ್ಟಲೆ ಮನೆಯನ್ನು, ಕುಟುಂಬದವರನ್ನು ಬಿಟ್ಟು ಇರಬೇಕು. ಚಿಕ್ಕವಳಿದ್ದಾಗ ಸ್ಪೇನ್‌ನ ಕ್ಲಬ್‌ನಿಂದ ಉಚಿತ ತರಬೇತಿ ನೀಡುವ ಆಹ್ವಾನ ಬಂದಿತ್ತು. ಆದರೆ ಮನೆಯಲ್ಲಿ ಒಪ್ಪದ ಕಾರಣ ಅಲ್ಲಿಗೆ ಹೋಗಲು ಆಗಲಿಲ್ಲ. ಹೀಗೆ ಅನೇಕ ಸಮಸ್ಯೆಗಳು ಇರುವುದರಿಂದ ಬಲಿಷ್ಠ ರಾಷ್ಟ್ರಗಳ ಎದುರು ಕಠಿಣ ಪೈಪೋಟಿ ಒಡ್ಡಲು ಸಾಧ್ಯವಾಗುತ್ತಿಲ್ಲ. ನಮ್ಮ ಮನಸ್ಥಿತಿ ಮತ್ತು ಕ್ರೀಡೆಯನ್ನು ನೋಡುವ ದೃಷ್ಟಿಕೋನ ಬದಲಾಗಬೇಕು.
–ಮೌಮಾ ದಾಸ್‌,
(ಈ ಆಟಗಾರ್ತಿ 2010ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಎರಡು ಪದಕ ಜಯಿಸಿದ್ದರು. 2004 ಮತ್ತು 2016ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT