ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಪ್ರತಿಭಾನ್ವೇಷಣೆ ಪರೀಕ್ಷೆಗಳ ಬಗ್ಗೆ ತಿಳಿದಿದೆಯಾ?

Last Updated 10 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ನಿರಾತಂಕವಾಗಿ ತಮ್ಮ ಓದನ್ನು ಮುಂದುವರೆಸಲು ಅನುವು ಮಾಡಿಕೊಡುವಂತಹ ಎರಡು ಸ್ಕಾಲರ್‌ಶಿಪ್‌ ಯೋಜನೆಗಳು ಜಾರಿಯಲ್ಲಿವೆ. ಶಿಕ್ಷಣ ಇಲಾಖೆ ನಡೆಸುವ ಒಂದು ಪರೀಕ್ಷೆಯನ್ನು ತೆಗೆದುಕೊಂಡು, ಅದರಲ್ಲಿ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಈ ಸ್ಕಾಲರ್‌ಶಿಪ್‌ಗಳಿಗೆ ಅರ್ಹತೆ ಗಳಿಸಿಕೊಳ್ಳಬಹುದು. ಅರ್ಹತೆ ಗಳಿಸಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭಾಸಕ್ಕೆ ನೆರವಾಗಲು ಸರ್ಕಾರದಿಂದ ಮಾಸಿಕ ಸಹಾಯಧನ ದೊರಕುತ್ತದೆ. ಒಂದನ್ನು ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್‌ಶಿಪ್‌ (ಎನ್ಎ‌ಮ್ಎಮ್ಎಸ್) ಎಂದು, ಇನ್ನೊಂದನ್ನು ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ (ನ್ಯಾಷನಲ್ ಟ್ಯಾಲೆಂಟ್ ಸರ್ಚ್ ಎಕ್ಷಾಮಿನೇಷನ್- ಎನ್‌ಟಿಎಸ್‌ಇ) ಎಂದು ಕರೆಯಲಾಗುತ್ತದೆ. ಇದರಲ್ಲಿ ಎನ್‌ಎಂಎಂಎಸ್‌ ಪ್ರಸ್ತುತ ಎಂಟನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾದರೆ, ಎನ್‌ಟಿಎಸ್‌ಇ ಪ್ರಸ್ತುತ ಹತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ. ಈ ಎರಡೂ ಪರೀಕ್ಷೆಗಳನ್ನು ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ನಡೆಸಲಾಗುತ್ತದೆ. ಈ ಪರೀಕ್ಷೆಗಳಿಗೆ ಈಗ ಶಿಕ್ಷಣ ಇಲಾಖೆ ಅರ್ಜಿಯನ್ನು ಕರೆದಿದೆ. ಈ ಪರೀಕ್ಷೆಗಳ ಬಗ್ಗೆ ನೀವು ಕೇಳಿಲ್ಲವಾದಲ್ಲಿ ಇದೋ ಇಲ್ಲಿದೆ ನಿಮಗೆ ಬೇಕಾದ ಮಾಹಿತಿ.

ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್‌ಶಿಪ್‌ (ಎನ್‌ಎಂಎಂಎಸ್‌) ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹಾಗೂ ಅನುದಾನಿತ ಶಾಲೆಗಳಲ್ಲಿ ಈ ವರ್ಷ ಎಂಟನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮಾತ್ರ ಈ ಪರೀಕ್ಷೆ ಬರೆಯಬಹುದು. ಖಾಸಗಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಅರ್ಹರಲ್ಲ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಹೀಗಾಗಿ, ವಿದ್ಯಾರ್ಥಿಯ
ಪೋಷಕರ ವಾರ್ಷಿಕ ವರಮಾನ 1,50,000 ರೂಪಾಯಿಗಳಿಗಿಂತ ಕಡಿಮೆ ಇದ್ದಲ್ಲಿ ಮಾತ್ರ ಈ ಪರೀಕ್ಷೆ ಬರೆಯಬಹುದು. ರಾಜ್ಯಮಟ್ಟದ ಈ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಅರ್ಹತೆ ಗಳಿಸಿದ ವಿದ್ಯಾರ್ಥಿಗಳಿಗೆ ಮುಂದಿನ ನಾಲ್ಕು ವರ್ಷಗಳ ಅವಧಿಗೆ, ಅಂದರೆ ಈ ವಿದ್ಯಾರ್ಥಿಗಳು ತಮ್ಮ ಎರಡನೇ ಪಿ.ಯು. (ಹನ್ನೆರಡನೇ ತರಗತಿ) ಅಂತ್ಯದವರೆಗೆ, ಪ್ರತಿ ತಿಂಗಳು 500ರೂಪಾಯಿ ಸಹಾಯಧನ ಪಡೆಯುತ್ತಾರೆ.

ರಾಜ್ಯ ಸರ್ಕಾರದ ಶಿಕ್ಷಣ ಹಾಗೂ ಸಂಶೋಧನಾ ಇಲಾಖೆ (ಡಿ.ಎಸ್‌.ಇ.ಆರ್.ಟಿ.) ಪ್ರತಿ ವರ್ಷ ನವೆಂಬರ್ ತಿಂಗಳಿನ ಒಂದು ಭಾನುವಾರದಂದು ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುತ್ತದೆ. ಈ ವರ್ಷದ ಪರೀಕ್ಷೆ 2017ರ ನವೆಂಬರ್ ತಿಂಗಳ 5ನೇ ತಾರೀಖಿನ ಭಾನುವಾರದಂದು ನಡೆಯಲಿದೆ. ಪರೀಕ್ಷೆಯಲ್ಲಿ ತಲಾ 90 ಅಂಕಗಳ ಬಹು ಆಯ್ಕೆ ಪ್ರಶ್ನೆಗಳಿರುವ ಎರಡು ಪತ್ರಿಕೆಗಳಿರುತ್ತವೆ. ಮೊದಲನೇ ಪತ್ರಿಕೆಯನ್ನು (ಪೇಪರ್-1) ಜನರಲ್ ಮೆಂಟಲ್ ಎಬಿಲಿಟಿ ಟೆಸ್ಟ್ ಎಂದೂ, ಎರಡನೇ ಪತ್ರಿಕೆಯನ್ನು (ಪೇಪರ್-2) ಸ್ಕೋಲಾಸ್ಟಿಕ್ ಎಬಿಲಿಟಿ ಟೆಸ್ಟ್  ಎಂದೂ ಕರೆಯಲಾಗುತ್ತದೆ. ಮೊದಲನೆ ಪತ್ರಿಕೆಯಲ್ಲಿ ನಿಮ್ಮ ಮಿದುಳಿನ ಸಾಮರ್ಥ್ಯವನ್ನು ಒರೆಗೆ ಹಚ್ಚುವಂಥ ತಲಾ ಒಂದು ಅಂಕದ 90 ಬಹು ಆಯ್ಕೆ ಪ್ರಶ್ನೆಗಳಿರುತ್ತವೆ. ಎರಡನೆ ಪತ್ರಿಕೆಯಲ್ಲಿ ವಿಜ್ಞಾನದಿಂದ 35, ಸಮಾಜ ವಿಜ್ಞಾನದಿಂದ 35 ಹಾಗೂ ಗಣಿತದಿಂದ 20, ತಲಾ ಒಂದು ಅಂಕದ ಒಟ್ಟು 90 ಪ್ರಶ್ನೆಗಳಿರುತ್ತವೆ. ಈ ಎಲ್ಲ ಪ್ರಶ್ನೆಗಳನ್ನು ಸಾಮಾನ್ಯವಾಗಿ ನಿಮ್ಮ ಏಳನೇ ಹಾಗೂ ಎಂಟನೇ ತರಗತಿಯ ಪಠ್ಯದಿಂದಲೇ ಆಯ್ಕೆ ಮಾಡಲಾಗಿರುತ್ತದೆ. ಹೀಗಾಗಿ, ಈ ಪರೀಕ್ಷೆ ಬರೆಯಲು ವಿಶೇಷವಾದ ತಯಾರಿಯ ಅವಶ್ಯಕತೆ ಇಲ್ಲ.

ಈ ಪರೀಕ್ಷೆ ಬರೆಯಲು ನಿಮ್ಮ ಶಾಲೆಯ ಮೂಲಕವೇ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಕೊನೆಯ ದಿನಾಂಕ ಇದೇ ಸೆಪ್ಟೆಂಬರ್ ತಿಂಗಳ 20ನೇ ತಾರೀಖು. ನಿಮ್ಮ ಶಿಕ್ಷಕರ ಜೊತೆ ಸಮಾಲೋಚನೆ ನಡೆಸಿ. ಅವರ ಮಾರ್ಗದರ್ಶನ ಪಡೆದುಕೊಳ್ಳಿ. ಈ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳು ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿವೆ. ಅವುಗಳನ್ನು ಪಡೆದುಕೊಂಡು ಅಧ್ಯಯನ ನಡೆಸಿ. ಖಂಡಿತಾ ಜಯಗಳಿಸುತ್ತೀರಿ. ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ (ನ್ಯಾಷನಲ್ ಟ್ಯಾಲೆಂಟ್ ಸರ್ಚ್ ಎಕ್ಷಾಮಿನೇಷನ್-ಎಮ್‌ಟಿಎಸ್‌ಇ)

ಎಮ್‌ಟಿಎಸ್‌ಇ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತೆಗೆದುಕೊಳ್ಳಬಹುದಾದ ಒಂದು ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ. ಸರ್ಕಾರಿ, ಅನುದಾನಿತ ಹಾಗೂ ಖಾಸಗಿ, ಈ ಎಲ್ಲ ಶಾಲೆಗಳ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಬಹುದು. ಇದನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದನೇ ಹಂತ ರಾಜ್ಯ ಮಟ್ಟದಲ್ಲಿ ನವೆಂಬರ್ ತಿಂಗಳಿನಲ್ಲಿ ನಡೆದರೆ, ಎರಡನೇ ಹಂತ ಮುಂದಿನ ಮೇ ತಿಂಗಳಲ್ಲಿ ನಡೆಯುತ್ತದೆ. ಮೊದಲ ಹಂತದ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಗಳಿಸಿದ ವಿದ್ಯಾರ್ಥಿಗಳು ಎರಡನೇ ಹಂತಕ್ಕೆ ಅರ್ಹತೆ ಪಡೆಯುತ್ತಾರೆ.

ರಾಜ್ಯ ಮಟ್ಟದ ಮೊದಲನೇ ಹಂತದ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ವರ್ಷಕ್ಕೆ ತಲಾ 2000ರೂ ಪ್ರೋತ್ಸಾಹ ಧನವನ್ನು ಎರಡು ವರ್ಷ ನಿಡುತ್ತದೆ. ಎರಡನೇ ಹಂತದ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳೂ ಸ್ಕಾಲರ್‌ಶಿಪ್ ದೊರೆಯುತ್ತದೆ. 11 ಹಾಗೂ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುವಾಗ ತಿಂಗಳಿಗೆ 1250 ರೂಪಾಯಿಯಂತೆ ವಿದ್ಯಾರ್ಥಿ ವೇತನ ಕೊಡಲಾಗುತ್ತದೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ಅಧ್ಯಯನದ ಸಂದರ್ಭದಲ್ಲಿ ಪ್ರತಿ ತಿಂಗಳು 2000 ರೂಪಾಯಿಯಂತೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ಮೊದಲ ಹಂತದ ಪರೀಕ್ಷೆ ಇದೇ ಬರುವ ನವೆಂಬರ್ 5ರ ಭಾನುವಾರದಂದು ನಡೆಯಲಿದೆ. ನಿಮ್ಮ ಶಾಲೆಯ ಮೂಲಕವೇ ಇದಕ್ಕೆ ಅರ್ಜಿ ಸಲ್ಲಿಸಬೇಕು. ಸಂಬಂಧಿಸಿದ ಬಿಇಒ ಕಚೇರಿಯಿಂದ ಶಾಲೆಗೆ ಅರ್ಜಿ ತರಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಿ. ಕೊನೆಯ ದಿನಾಂಕ ಇದೇ ಬರುವ ಸೆಪ್ಟೆಂಬರ್ 20ನೇ ತಾರೀಖು.

ಮೊದಲ ಹಂತದ ಎನ್ಎ‌ಟಿಎಸ್‌ಇ ಪರೀಕ್ಷೆಯಲ್ಲಿ ತಲಾ 100 ಅಂಕಗಳ ಎರಡು ಪತ್ರಿಕೆಗಳಿರುತ್ತವೆ. ಮೊದಲನೇ ಪತ್ರಿಕೆಯನ್ನು (ಪೇಪರ್-1) ಜನರಲ್ ಮೆಂಟಲ್ ಎಬಿಲಿಟಿ ಟೆಸ್ಟ್  ಎಂದು, ಎರಡನೇ ಪತ್ರಿಕೆಯನ್ನು (ಪೇಪರ್-2) ಸ್ಕೋಲಾಸ್ಟಿಕ್ ಎಬಿಲಿಟಿ ಟೆಸ್ಟ್  ಎಂದು ಕರೆಯಲಾಗುತ್ತದೆ. ಮೊದಲನೆ ಪತ್ರಿಕೆಯಲ್ಲಿ ಇಂಗ್ಲೀಷ್ ಭಾಷೆಯೂ ಸೇರಿದಂತೆ, ನಿಮ್ಮ ಮಿದುಳಿನ ಸಾಮರ್ಥ್ಯವನ್ನು ಒರೆಗೆ ಹಚ್ಚುವಂಥ ತಲಾ ಒಂದು ಅಂಕದ 100 ಬಹು ಆಯ್ಕೆ ಪ್ರಶ್ನೆಗಳಿರುತ್ತವೆ. ಎರಡನೆ ಪತ್ರಿಕೆಯಲ್ಲಿ ವಿಜ್ಞಾನದಿಂದ 40, ಸಮಾಜ ವಿಜ್ಞಾನದಿಂದ 40 ಹಾಗೂ ಗಣಿತದಿಂದ 20, ತಲಾ ಒಂದು ಅಂಕದ ಒಟ್ಟು 100 ಪ್ರಶ್ನೆಗಳಿರುತ್ತವೆ. ಈ ಎಲ್ಲ ಪ್ರಶ್ನೆಗಳನ್ನು ಸಾಮಾನ್ಯವಾಗಿ ನಿಮ್ಮ ಎಂಟು, ಒಂಭತ್ತು ಹಾಗೂ ಹತ್ತನೇ ತರಗತಿಯ ಪಠ್ಯದಿಂದಲೇ ಆಯ್ಕೆ ಮಾಡಲಾಗಿರುತ್ತದೆ. ಪಠ್ಯದ ಹೊರತಾಗಿಯೂ ಪ್ರಶ್ನೆಗಳು ಬರಬಹುದು. ಹೀಗಾಗೀ, ಸ್ವಲ್ಪ ಹೆಚ್ಚಿನ ಪರಿಶ್ರಮ, ತಯಾರಿ ಅವಶ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT