ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಅಧ್ಯಯನ ಮತ್ತು ಅವಕಾಶ

Last Updated 10 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕಾನೂನು ವಿದ್ಯಾಭ್ಯಾಸವು ಇಂದು ಕೇವಲ ವಕೀಲರು ಹಾಗೂ ನ್ಯಾಯಾಧೀಶರನ್ನು ಸೃಷ್ಟಿ ಮಾಡುವ ಏಕೈಕ ಉದ್ದೇಶ ಹೊಂದಿಲ್ಲ. ಯಾವುದೇ ಕ್ಷೇತ್ರ, ಸೇವೆ, ವೃತ್ತಿಯಾಗಿರಲಿ ಕಾನೂನು ಅರಿವು ಅಳವಡಿಕೆ ಅತ್ಯಂತ ಅಗತ್ಯ. ಕಾನೂನು ಅಧ್ಯಯನ ಸಾಕಷ್ಟು ಉದ್ಯೋಗವಕಾಶಗಳನ್ನು ಕಲ್ಪಿಸುತ್ತಿದೆ. ಅಂತರ್ಜಾಲ ನಮ್ಮ ಮನೆ, ಮನವನ್ನು ಹೊಕ್ಕಿರುವ ಈ ದಿನಗಳಲ್ಲಿ ಸೈಬರ್ ಅಪರಾಧ ಕೂಡ ದಿನೇ ದಿನೇ ಹೆಚ್ಚುತ್ತಿದೆ. ಹಾಗಾಗಿ ತಾಂತ್ರಿಕ ಪರಿಣತಿ ಹೊಂದಿರುವ ಕಾನೂನು ವಿದ್ಯಾರ್ಥಿಗಳು ಸೈಬರ್ ಕಾನೂನು ಅಧ್ಯಯನ ಮಾಡಿದಲ್ಲಿ ವಿಫುಲ ಅವಕಾಶಗಳಿವೆ.

ಹೀಗಾಗಿ ವಕೀಲ ವೃತ್ತಿ ಎಂದಿಗೂ ಎವರ್ ಗ್ರೀನ್. ಬರುವ ಐದು ವರ್ಷಗಳಲ್ಲಿ ಭಾರತೀಯ ಕಾನೂನು ವಿದ್ಯಾರ್ಥಿಗಳಿಗೆ ಬೇಡಿಕೆ ಹೆಚ್ಚಲಿದೆ. ಔದ್ಧಿಕ ಹಕ್ಕು ಕಾಯ್ದೆ ಬಂದ ನಂತರವಂತೂ ವಕೀಲರ ಮಹತ್ವ ಇನಷ್ಟು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಕಳೆದ ಕೆಲವು ದಶಕಗಳಿಂದ ಭಾರತೀಯ ಬಾರ್‌ಕೌನ್ಸಿಲ್ ಆಲೋಚಿಸಿ ವೃತ್ತಿಗೂ ಪ್ರವೃತ್ತಿಗೂ ಸರಿತೂಗುವಂತಹ ವಿಶಿಷ್ಟವಾದ ಕೆಲವು ಕೋರ್ಸುಗಳನ್ನು ಅನುಷ್ಠಾನಕ್ಕೆ ತಂದಿದೆ. ಈ ಬಗ್ಗೆ ಸ್ಥೂಲವಾದ ಮಾಹಿತಿ ಇಲ್ಲಿದೆ.

ಅ) ವೃತ್ತಿಪರ ವಕೀಲರಾಗುವವರಿಗೆ ಐದು ವರ್ಷದ ಹಾಗೂ ಮೂರು ವರ್ಷದ ಎಲ್.ಎಲ್.ಬಿ.ಕೋರ್ಸುಗಳು.

ಆ) ಕಂಪನಿ, ವಾಣಿಜ್ಯ ಕೋರ್ಸುಗಳು, ಕಂಪನಿ ಸೆಕ್ರೆಟರಿ, ಚಾರ್ಟೆಡ್ ಅಕೌಂಟೆಂಟ್ ಮುಂತಾದ ವೃತ್ತಿಗಳಿಗೆ ತೆರಳುವವರಿಗೆ ಬಿ.ಬಿ.ಎ. ಎಲ್.ಎಲ್.ಬಿ., ಬಿಕಾಂ ಎಲ್.ಎಲ್.ಬಿ. (ಐದು ವರ್ಷ ಅಂತರ್ಗತ ಕೋರ್ಸು). ಈ ಪದವೀಧರರಿಗೆ ಮಾನವ ಸಂಪನ್ಮೂಲ ನಿರ್ವಹಣೆ ವಾಣಿಜ್ಯಕ್ಕೆ ಸಂಬಂಧಿಸಿದಂತೆ ಕಾನೂನುಗಳನ್ನು ನಿರ್ವಹಿಸಲು ಕಂಪನಿಯ ಪ್ರಕರಣಗಳಲ್ಲಿ ಮಧ್ಯಸ್ಥ ಮಾಡಲು ಅತ್ಯಂತ ಸುಲಭವಾಗಿರುತ್ತದೆ.

ಇ) ಪೋರೆನ್ಸಿಕ್ ತಜ್ಞರಾಗುವವರಿಗೆ ತನಿಖಾ ಕ್ಷೇತ್ರಕ್ಕೆ ಪ್ರವೇಶಿಸುವವರಿಗಾಗಿ ಬಿ.ಎಸ್ಸಿ ಎಲ್.ಎಲ್.ಬಿ. (ಐದು ವರ್ಷದ ಅಂತರ್ಗತ ಕೋರ್ಸು)

ಈ) ವೈದ್ಯಕೀಯ ಕ್ಷೇತ್ರದಲ್ಲಿ ಕಾನೂನು ತಜ್ಞರಾಗುವವರಿಗೆ ಎಂ.ಬಿ.ಬಿ.ಎಸ್., ಎಲ್.ಎಲ್.ಬಿ (ಆರು ವರ್ಷ)

ಉ) ತಾಂತ್ರಿಕ ಕ್ಷೇತ್ರದಲ್ಲಿ ಕಾನೂನು ತಜ್ಞರಾಗುವವರಿಗೆ ಬಿ.ಟೆಕ್, ಎಲ್.ಎಲ್.ಬಿ(6ವರ್ಷದ ಕೋರ್ಸ್‌). ಬಯೋಟೆಕ್ನಾಲಜಿ ಅತ್ಯಂತ ಪ್ರಮುಖವಾದ ಆರ್ಥಿಕ ಕ್ಷೇತ್ರ. ಈ ಕ್ಷೇತ್ರದಲ್ಲಿ ಬೌದ್ದಿಕ ಹಕ್ಕುಗಳ ತಿಳಿವಳಿಕೆ ವಿಜ್ಞಾನಕ್ಕೆ ಸಂಬಂಧಿಸಿದ ಕಾನೂನುಗಳ ಜ್ಞಾನ ಅತ್ಯಗತ್ಯ. ಈಗ ತಾಂತ್ರಿಕ ಕ್ಷೇತ್ರದಲ್ಲಿ ಅದು ಅಂತರ್ಜಾಲ ವ್ಯವಸ್ಥೆಯಿರಬಹುದು, ಅಂತರ್ಜಾಲಕ್ಕೆ ಸಂಬಂಧಿಸಿದ ಅಪರಾಧಗಳಿರಬಹುದು, ಬೌದ್ಧಿಕ ಹಕ್ಕುಗಳಾದ ಪೇಟೆಂಟ್ ಕಾನೂನು, ಟ್ರೇಡ್‌ಮಾರ್ಕ್‌ಗಳಿಗೆ ಸಂಬಂಧಿಸಿ, ವಸ್ತುವಿನ್ಯಾಸ, ತಾಂತ್ರಿಕತೆ ಬಗ್ಗೆ ಸಂಪೂರ್ಣ ತಿಳಿವಳಿಕೆ ಇರುವ ವಕೀಲರು ಅಲಭ್ಯ. ಈ ಕೊರತೆಯನ್ನು ಈ ಕೋರ್ಸು ನೀಗಿಸಬಲ್ಲದು.

ಹಾಗೆಯೇ ದೇಶದಲ್ಲಿ ಇಂದು ಹಲವಾರು ಭಯೋತ್ಪಾದಕ ಕೃತ್ಯಗಳು, ಕಾನೂನು ಬಾಹಿರ ಕೆಲಸಗಳು, ಕ್ರಿಮಿನಲ್ ಕೃತ್ಯಗಳ ತನಿಖೆ ಸಂಕೀರ್ಣವಾಗಿದ್ದು ತನಿಖಾ ಇಲಾಖೆಗೆ ವಿಜ್ಞಾನ ಹಾಗೂ ಕಾನೂನು ತಿಳಿವಳಿಕೆ ಇರುವ ತಜ್ಞರ ಅಗತ್ಯವಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕಾನೂನು ವಿವಾದಗಳು ಪ್ರಕರಣಗಳು ಇಂದಿಗಿಂತಲೂ ಈಗ ಹೆಚ್ಚುತ್ತಿವೆ. ಗ್ರಾಹಕ ಸಂರಕ್ಷಣಾ ಕಾಯ್ದೆ ಹಾಗೂ ಸಿವಿಲ್ ಕಾನೂನುಗಳು ವೈದ್ಯರ ಪರಿಸ್ಥಿತಿಯನ್ನು ಇನ್ನು ಸಂಕೀರ್ಣವಾಗಿಸಿದೆ. ಪ್ರಸ್ತುತ ವ್ಯವಸ್ಥೆಯಲ್ಲಿ ವೈದ್ಯಕೀಯ ಕಾನೂನು ವ್ಯಾಜ್ಯಗಳನ್ನು ನಿರ್ವಹಿಸುತ್ತಿರುವವರು ಹಾಗೂ ತೀರ್ಪು ನೀಡುವವರು ವೈದ್ಯಕೀಯೇತರ ಕ್ಷೇತ್ರದಿಂದ ಬಂದ ವಕೀಲರು ಹಾಗೂ ನ್ಯಾಯಾಧೀಶರು ಈ ನಿಟ್ಟಿನಲ್ಲಿ ಎಂ.ಬಿ.ಬಿ.ಎಸ್., ಎಲ್.ಎಲ್.ಬಿ ಮಾಡಿದ ವಕೀಲರಿದ್ದಲ್ಲಿ ಈ ಕೆಲಸಗಳನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಬಹುದಾಗಿದೆ.

ಇನ್ನಿತರ ಸಾಧ್ಯತೆಗಳೇನು?

1. ವಕೀಲ ವೃತ್ತಿ:- ಕಾನೂನು ಓದಿದವರು ಆಡಳಿತಾತ್ಮಕ ನ್ಯಾಯ ಮಂಡಳಿಗಳು, ತೆರಿಗೆ ನ್ಯಾಯ ಮಂಡಳಿಗಳು, ಗ್ರಾಹಕರ ಸಂರಕ್ಷಣಾ ವೇದಿಕೆ, ಕಾರ್ಮಿಕ ನ್ಯಾಯ ಮಂಡಳಿಗಳಲ್ಲಿ ವಾದ ಮಾಡಬಹುದು. ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯಗಳು ಕೆಳಹಂತದ ನ್ಯಾಯಾಲಯಗಳು, ಹೈಕೋರ್ಟ್, ಸುಪ್ರೀಂ ಕೋರ್ಟ್‌ವರೆಗೆ ಪ್ರಾಕ್ಟೀಸ್ ಮಾಡಲು ಸಹ ಸಾಕಷ್ಟು ಅವಕಾಶ ಇರುತ್ತದೆ. ಯಶಸ್ವಿ ವಕೀಲರಾಗಲು ಶೈಕ್ಷಣಿಕ ಸಾಧನೆ ಅತ್ಯುತ್ತಮ ಆಗಿರಲೇಬೇಕೆಂದಿಲ್ಲ ಸಾಮಾನ್ಯ ಇಂಗ್ಲಿಷ್‌, ಕೊಂಚ ಜಾಣ್ಮೆ ಸಮಯಪ್ರಜ್ಞೆ, ದಿಟ್ಟತನ, ಮಾತುಗಾರಿಕೆ ವಿಶ್ಲೇಷಣಾ ಸಾಮರ್ಥದಿಂದ ಕಕ್ಷಿದಾರರ ಮನಗೆಲ್ಲಬಹುದು.

2. ನ್ಯಾಯಾಧೀಶ ಹುದ್ದೆ:- ಈಗ ಕಾನೂನು ಪದವಿ ಮುಗಿಸಿದ ತಕ್ಷಣ ನ್ಯಾಯಾಧೀಶರಾಗಬಹುದು. ಮೊದಲನೆಯದಾಗಿ ಜೂನಿಯರ್ ಡಿವಿಜನ್‌ನಲ್ಲಿ ಸಿವಿಲ್ ಜಡ್ಜ್ ಅಥವಾ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ಆಗಿ ನೇಮಕಗೊಳ್ಳಲು ಪ್ರಾಥಮಿಕ, ಮುಖ್ಯಪರೀಕ್ಷೆ ಮತ್ತು ಸಂದರ್ಶನ ಎದುರಿಸಬೇಕಾಗುತ್ತದೆ. ಎರಡನೆಯದಾಗಿ ನೇರವಾಗಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರಾಗಿ ನೇಮಕಾತಿ ಹೊಂದಲು ಕನಿಷ್ಟ ಏಳು ವರ್ಷಗಳ ವಕೀಲ ವೃತ್ತಿಯ ಅನುಭವದೊಂದಿಗೆ ಪ್ರಾಥಮಿಕ ಮುಖ್ಯ ಮತ್ತು ಸಂದರ್ಶನ ಇರುತ್ತದೆ. ವಕೀಲ ವೃತ್ತಿಯ 10 ವರ್ಷಗಳ ಅನುಭವದ ನಂತರ ವಕೀಲರು ತಮ್ಮ ಅರ್ಹತೆ ಆಧರಿಸಿ ಹೈಕೋರ್ಟ್ ನ್ಯಾಯಾಧೀಶರಾಗಬಹುದು.

3. ಪ್ರಾಸಿಕ್ಯೂಟರ್:- ರಾಷ್ಟ್ರದ ಎಲ್ಲಾ ರಾಜ್ಯಗಳಲ್ಲಿ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ನಿರ್ದೇಶಕರ ಇಲಾಖೆಯು ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ (ಎ.ಪಿ.ಪಿ) ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್‌ಗಳನ್ನು (ಪಿ.ಪಿ) ರಾಜ್ಯದ ಪರವಾಗಿ ಪ್ರಕರಣಗಳನ್ನು ನಡೆಸಲು ಕ್ರಿಮಿನಲ್ ನ್ಯಾಯಾಲಯಗಳಲ್ಲಿ ಪ್ರಾಥಮಿಕ ಮುಖ್ಯಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳುತ್ತದೆ. ರಾಜ್ಯ ಸರ್ಕಾರ ವಕೀಲರ ಸಂಘದಿಂದ ಕೆಲವು ಸದಸ್ಯರನ್ನು ಆದ್ಯತೆಯ ಮೇರೆಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸಬಹುದು.

4. ಕಾನೂನು ಅಧಿಕಾರಿ:- ಸರ್ಕಾರ ಆಡಳಿತ ಹಾಗೂ ವ್ಯವಹಾರ ನಡೆಸಲು ಕಾನೂನು ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುತ್ತದೆ. ಉದಾ: ಸೆಂಟ್ರಲ್ ಬ್ಯೂರೋ ಆಪ್ ಇನ್ವೆಸ್ಟಿಗೇಶನ್‌್ (ಸಿ.ಬಿ.ಐ) ತನ್ನ ಪ್ರಕರಣಗಳನ್ನು ನಡೆಸಲು ಸಲಹೆ ನೀಡಲು ಪಬ್ಲಿಕ್ ಪ್ರಾಸಿಕ್ಯೂಟರ್‌ಗಳನ್ನು ಯು.ಪಿ.ಎಸ್.ಸಿ.ಯು ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಬಹುದು. ಪೊಲೀಸ್ ಸಿ.ಓ.ಡಿ. ಇಲಾಖೆಗಳಲ್ಲಿ ಕಾನೂನು ಪದವೀಧರರನ್ನು ಅಪರಾಧ ತನಿಖಾಧಿಕಾರಿಯಾಗಿ ನೇಮಿಸಿಕೊಳ್ಳುತ್ತದೆ.

ರಾಷ್ಟ್ರೀಕೃತ ಬ್ಯಾಂಕ್, ಖಾಸಗಿ ಬ್ಯಾಂಕ್‌ಗಳಲ್ಲಿ ಕಾನೂನು ಅಧಿಕಾರಿಗಳಾಗಿ ನೇಮಕಾತಿ ಹೊಂದಬಹುದು. ಕೆ.ಎಸ್.ಆರ್.ಟಿ.ಸಿ. ಕರ್ನಾಟಕ ನಗರ ಮೂಲಸೌಲಭ್ಯ ಅಭಿವೃದ್ದಿ ನಿಗಮ, ಆರ್.ಬಿ.ಐ., ಮಾಲಿನ್ಯ ನಿಯಂತ್ರಣ ಮಂಡಳಿ, ಭಾರತೀಯ ಸ್ಪರ್ಧಾತ್ಮಕ ಆಯೋಗ, ಭಾರತೀಯ ಬಂದರು ಟ್ರಸ್ಟ್‌ಗಳು, ಕರ್ನಾಟಕ ವಿದ್ಯುತ್ ನಿಗಮ ಕಾನೂನು ಮತ್ತು ನ್ಯಾಯ ಸಚಿವಾಲಯ ವಿಧಾನ ಪರಿಷತ್/ಸಭೆ ಕರಡು ಸಹಾಯಕ ಉಪಕಾನೂನು ಸಲಹೆಗಾರ, ಬಿ.ಹೆಚ್.ಇ.ಎಲ್, ಎಪ್.ಸಿ.ಐ, ವಿಮಾ ಕಂಪನಿ ಇತ್ಯಾಧಿಗಳಲ್ಲಿ ಅವುಗಳ ಪರವಾಗಿ ಪ್ರಕರಣ ನಡೆಸಲು ಅವಕಾಶ ಇರುತ್ತದೆ. ಬೆಂಗಳೂರು ಮಹಾನಗರ ಪಾಲಿಕೆಯು ಕೂಡ ಕಾನೂನು ಕೋಶವನ್ನು ಹೊಂದಿದ್ದು ಇದರಲ್ಲಿ ಕಾನೂನು ಅಧಿಕಾರಿ, ಸಹಾಯಕ ಕಾನೂನು ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದಾರೆ ಯು.ಪಿ.ಎಸ್.ಸಿ.ಯು ಕಾನೂನು ಅಧಿಕಾರಿ, ಸಹಾಯಕ ಕಾನೂನು ಅಧಿಕಾರಿಗಳನ್ನು ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕ ಮಾಡುತ್ತದೆ.

5. ಸೇನೆಯಲ್ಲಿ:- ಸೇವಾ ನ್ಯಾಯ ಮಂಡಳಿ ಮುಂದೆ ನಡೆಯುವ ಪ್ರಕರಣಗಳಲ್ಲಿ ವಕೀಲರಾಗಿ ಸೇವೆ ಸಲ್ಲಿಸಬಹುದು ಹಾಗೂ ಜಡ್ಜ್ ಅಡ್ವಕೇಟ್ ಜನರಲ್ (ಜೆಎಜಿ) ಆಗಿ ಕಾರ್ಯನಿರ್ವಹಿಸಲು ಭಾರತದ ಪ್ರಜೆಯಾಗಿದ್ದು ಅವರ ವಯಸ್ಸು 21ರಿಂದ 27ರವೆರೆಗೆ ಇರುವವರು ಮತ್ತು ಕಾನೂನು ಪದವಿಯಲ್ಲಿ ಶೇ.55 ಫಲಿತಾಂಶ ಇದ್ದು ರಾಜ್ಯ ಮತ್ತು ಭಾರತೀಯ ವಕೀಲ ‍ಪರಿಷತ್ತಿನಲ್ಲಿ ನೋಂದಣಿ ಇರುವವರು ಮಾತ್ರ ಕಾರ್ಯನಿರ್ವಹಿಸಲು ಸಾಧ್ಯ

6. ಸರ್ಕಾರೇತರ ಸಂಸ್ಥೆಗಳು ಮಾನವ ಹಕ್ಕು, ಪರಿಸರ ರಕ್ಷಣೆ ಮಹಿಳೆ ವಿರುದ್ದ ದೌರ್ಜನ್ಯ ಮುಂತಾದ ವಿಷಯಗಳಲ್ಲಿ ಸಲಹೆಗಾರರಾಗಿ ಸಂಶೋಧಕರಾಗಿ ಸೇವೆ ಸಲ್ಲಿಸಬಹುದು.

7. ಅಂತರರಾಷ್ಟ್ರೀಯ ಸಂಸ್ಥೆಗಳು:- ಪ್ರತಿಭಾನ್ವಿತ ಕಾನೂನು ಪದವೀಧರರು ವಿಶ್ವಬ್ಯಾಂಕ್, ಏಷ್ಯಾ ಅಭಿವೃದ್ದಿ ಮಂಡಳಿ (ಎಡಿಬಿ) ಅಂತರ ರಾಷ್ಟ್ರೀಯ ಕಾರ್ಮಿಕ ಸಂಘಟನೆ, ಅಂತರ ರಾಷ್ಟ್ರೀಯ ಹಣಕಾಸು ನಿಧಿ (ಐ.ಎಂ.ಎಫ್) ಅಂತರಾಷ್ಟ್ರೀಯ ರೆಡ್ ಕ್ರಾಸ್ ಸೊಸೈಟಿ, ಯುನೈಟೆಡ್ ನ್ಯಾಷನಲ್ ಡೆವಲಪ್‌ಮೆಂಟ್ ಪ್ರೋಗ್ರಾಂ ಮುಂತಾದೆಡೆ ಸೇವೆ ಸಲ್ಲಿಸಬಹುದು.

8. ಮದ್ಯಸ್ಥಗಾರ:- ವೃತ್ತಿನಿರತ ವಕೀಲರು ನ್ಯಾಯಾಲಯದಲ್ಲಿ ಇರುವ ಪ್ರಕರಣಗಳಿಗೆ ಹಾಗೂ ನ್ಯಾಯಾಲಯಕ್ಕೆ ಪ್ರಕರಣಗಳನ್ನು ಸಲ್ಲಿಸುವ ಮೊದಲು ಬೇಕಾದ ಸಲಹೆಗಳನ್ನು ನೀಡಲು ಮದ್ಯಸ್ಥಗಾರರಾಗಿ ಲೋಕ ಅದಾಲತ್‌ನಲ್ಲೂ ಕೆಲಸ ಮಾಡಬಹುದು.

9. ಕಾನೂನು ಸಲಹೆಗಾರರು:- ಅನೇಕರು ತಮ್ಮ ವೈಯಕ್ತಿಕ ಕುಟುಂಬದ ಆಸ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಸಲಹೆಗಳಿಗೆ ಕಾನೂನಿನ ಪರಿಹಾರ ಕಂಡುಕೊಳ್ಳಲು ಸಲಹೆಗಾರರಾಗಿ ವಕೀಲರನ್ನು ಸಂಪರ್ಕಿಸುತ್ತಾರೆ. ಆಗ ವಕೀಲರು ಒಳ್ಳೆಯ ಸಮಾಜವನ್ನು ನಿರ್ಮಿಸುವ ಕಾನೂನಿನ ಶಿಲ್ಪಿಗಳಾಗಿ ಸೇವೆ ಸಲ್ಲಿಸಬಹುದು.

10. ಸಂಧಾನಕಾರ:- ಇತ್ತೀಚೆಗೆ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಹಾಗೂ ಕಂಪನಿಗಳನ್ನು ಪ್ರತ್ಯೇಕಿಸುವುದು, ಪಾಲುಮಾಡಿಕೊಳ್ಳುವುದು ಇನ್ನೊಂದು ಕಂಪೆನಿಯನ್ನು ಕೊಂಡುಕೊಳ್ಳುವಂತಹ ವಿಷಯಗಳಲ್ಲಿ ವಕೀಲರು ಸಂಧಾನಕಾರರಗಿ ಸೇವೆ ಸಲ್ಲಿಸಬಹುದು. ಅಂತರಾಷ್ಟ್ರೀಯ ಕಂಪನಿಗಳಲ್ಲಿ ಈ ಅವಕಾಶ ಹೆಚ್ಚಾಗಿ ಲಭ್ಯವಿದೆ.

11. ಕಾನೂನಿನ ಸಂಶೋಧನೆ ಸುಧಾರಣೆ:- ಬಹಳಷ್ಟು ವರ್ಷ ಕಾನೂನಿನ ಸಂಶೋಧನೆಯನ್ನು ಗ್ರಂಥಾಲಯದಲ್ಲಿ ಪುಸ್ತಕಗಳ ಸಹಾಯದಿಂದ ಮಾತ್ರ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗಿನ ಸಾಮಾಜಿಕ ಬದಲಾವಣೆ ಹಿನ್ನೆಲೆಯಲ್ಲಿ ಗ್ರಂಥಾಲಯ ಸಹಾಯಕ ಸಂಶೋಧನೆ ಜೊತೆಗೆ ವಾಸ್ತವಿಕ ಸಂಶೋಧನೆಗೂ (ಎಂಪಿರಿಕಲ್ ರಿಸರ್ಚ್) ಬಹಳಷ್ಟು ಅವಕಾಶವಿದೆ. ಸಮಾಜದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕುವುದಕ್ಕೆ ವಾಸ್ತವಿಕ ಸಂಶೋಧನೆ ಸಹಕಾರಿ.

12. ಲೀಗಲ್ ಪ್ರೋಸೆಸ್ ಔಟ್ ಸೋರ್ಸಿಂಗ್(ಕಾನೂನು ಹೊರಗುತ್ತಿಗೆ):- ಇತ್ತೀಚೆಗೆ ಪ್ರಚಲಿತವಿರುವ ಬಹಳಷ್ಟು ಅವಕಾಶಗಳನ್ನು ಒಳಗೊಂಡ ಕ್ಷೇತ್ರವೆಂದರೆ ಲೀಗ್ ಪ್ರೋಸೆಸ್ ಔಟ್‌ಕೋರ್ಸಿಂಗ್ (ಎಲ್.ಪಿ.ಒ) ಅಂತರರಾಷ್ಟ್ರೀಯ ಮಟ್ಟದ ವ್ಯವಹಾರಕ್ಕೆ ಸಂಬಂಧಪಟ್ಟಂತೆ ವಿವಿಧ ದೇಶಗಳ ಜೊತೆ ಕಾನೂನಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಸೇವೆ ಸಲ್ಲಿಸಬಹುದಾಗಿದೆ. ಅಮೆರಿಕಾ ಮತ್ತು ಇಂಗ್ಲೆಂಡ್‌ ದೇಶಗಳು ಹೆಚ್ಚಾಗಿ ತಮ್ಮ ವ್ಯವಹಾರಗಳಿಗೆ ವಕೀಲರ ಸೇವೆ ಪಡೆಯುತ್ತಿವೆ. ಲೀಗಲ್ ಪ್ರೋಸೆಸ್ ಔಟ್ ಸೋರ್ಸಿಂಗ್ ಕಂಪನಿಗಳು ಬೆಂಗಳೂರು, ದೆಹಲಿ, ಚೆನ್ನೈ, ಮುಂಬೈ, ಕೋಲ್ಕತ್ತ ಮುಂತಾದ ದೊಡ್ಡ ಪಟ್ಟಣಗಳಲ್ಲಿ ಇದ್ದು ಕಾನೂನು ಪದವೀಧರನನ್ನು ನೇಮಕ ಮಾಡಿಕೊಳ್ಳುತ್ತಿವೆ.

13. ಕಾನೂನು ಪತ್ರಕರ್ತರು:- ಎಲ್ಲಾ ಪತ್ರಿಕೆಗಳಲ್ಲೂ ಕಾನೂನಿನ ವಿಚಾರಗಳನ್ನು ವರದಿ ಮಾಡುತ್ತಿವೆ. ತೆರಿಗೆ, ಷೇರು ವಿನಿಮಯ, ಗ್ರಾಹಕರ ರಕ್ಷಣೆ ವೈವಾಹಿಕ ವಿವಾದಗಳು, ವ್ಯವಹಾರಕ್ಕೆ ಸಂಬಂಧಪಟ್ಟ ವಿವಾದ, ನ್ಯಾಯಾಲಯಗಳ ತೀರ್ಪು, ಸರ್ಕಾರಿ ಮಸೂದೆ ಕುರಿತ ವರದಿಗಳಿಗಾಗಿ ಕಾನೂನು ಪದವೀಧರರು ಪತ್ರಕರ್ತರಾಗಿ ದೊಡ್ಡ ದೊಡ್ಡ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಲು ಅಕಾಶವಿದೆ.

14. ಕಾನೂನು ಸೇವಾ ಪ್ರಾಧಿಕಾರ:- ಇವು ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ 1997ರಿಂದ ಸ್ಥಾಪನೆಯಾಗಿವೆ. ಇದರ ಉದ್ದೇಶ ಬಡವರಿಗೆ ಉಚಿತ ಕಾನೂನು ನೆರವು ನೀಡುವುದು, ಬಡವರ ಪ್ರಕರಣಗಳನ್ನು ನಡೆಸಲು ಸರ್ಕಾರವೇ ವಕೀಲರನ್ನು ನೇಮಿಸಿ ಸಂಭಾವನೆಯನ್ನು ನೀಡುತ್ತದೆ. ದೇಶದಲ್ಲಿ ಸುಮಾರು ಶೇ.60ಕ್ಕಿಂತ ಹೆಚ್ಚಿನ ಕಕ್ಷಿದಾರರು ಈ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವುದರಿಂದ ವಕೀಲರಿಗೆ ಬಹಳಷ್ಟು ಅವಕಾಶ ಇರುತ್ತದೆ.

15. ಕಾನೂನಿನ ದಸ್ತಾವೇಜು ಹಾಗೂ ದಾಖಲೆ ರಚನೆ:- ಪ್ರತಿನಿತ್ಯದ ವ್ಯವಹಾರಗಳಲ್ಲಿ ಆಸ್ತಿಗೆ ಸಂಬಂಧಪಟ್ಟ ವಿಚಾರಗಳಿಗೆ ದಾಖಲೆಗಳನ್ನು ರಚಿಸುವ ಹಾಗೂ ನೋಂದಣಿ ಮಾಡಿಸುವ ಕಾರ್ಯ ಪ್ರಮುಖವಾದದ್ದು. ಹಿಂದೆ ಕಾನೂನಿನ ಅರಿವು ಹೊಂದದೆ ದಾಖಲೆ ಪತ್ರಗಳನ್ನು ಬರೆಸುತ್ತಿದ್ದರು. ಅದರಿಂದ ಹಲವಾರು ಕಾನೂನಿನ ಸಮಸ್ಯೆಗಳು ಉಂಟಾಗುತ್ತಿದ್ದವು ಆದ್ದರಿಂದ ಇತ್ತೀಚೆಗೆ ಯಾವುದೇ ದಾಖಲೆಯನ್ನು ರಚಿಸುವಾಗ ವಕೀಲರ ಅವಶ್ಯಕತೆ ಇರುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರಗಳು, ಪಾರ್ಟ್‌ನರ್‌ಶಿಪ್ ಡೀಡ್‌ಗಳು, ವಿಲ್ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಪತ್ರ ರಚಿಸಲು ಹಾಗೂ ನೊಂದಣಿ ಮಾಡಿಸಲು ವಕೀಲರಿಗೆ ಅವಕಾಶಗಳಿವೆ.

16. ಕಾನೂನಿನ ಸಹಾಯಕ ಪ್ರಾಧ್ಯಾಪಕರು:- ಕಾನೂನಿನ ಸ್ನಾತಕೋತ್ತರ ಪದವಿಯಲ್ಲಿ ಶೇ.55 (ಎಸ್.ಸಿ/ಎಸ್.ಟಿ. ಶೇ.50) ಅಂಕ ಪಡೆದಿರುವ ಕೇಂದ್ರ ಮಟ್ಟದ ನೆಟ್ (ಎನ್.ಇ.ಟಿ) ರಾಜ್ಯಮಟ್ಟದ ಸ್ಲೇಟ್ (ಎಸ್.ಎಲ್.ಇ.ಟಿ) ಅಥವಾ ಪಿ.ಹೆಚ್.ಡಿ. ಪದವೀಧರರು ಕಾನೂನು ವಿವಿಗಳು, ಸರ್ಕಾರಿ ಕಾನೂನು ಕಾಲೇಜುಗಳು, ಅನುದಾನಿತ ಖಾಸಗಿ ಕಾನೂನು ಕಾಲೇಜುಗಳು ಹಾಗೂ ಇತರ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಬಹುದು.

17. ಸನದು ಮತ್ತು ವ್ಯಾಪಾರಿ ಚಿಹ್ನೆಗಳ ಕಾರ್ಯಭಾರಿಗಳು:- ಬೌದ್ಧಿಕ ಸ್ವತ್ತುಗಳ ಬಗ್ಗೆ ಜ್ಞಾನವನ್ನು ಹೊಂದಿರುವ ಕಾನೂನು ಪದವೀದಾರರು ಸನದು ಕಚೇರಿ ಮತ್ತು ವ್ಯಾಪಾರಿ ಚಿಹ್ನೆಗಳ ಕಚೇರಿಯಿಂದ ಲೈಸೆನ್ಸ್‌ನ್ನು ಪಡೆದು ಬೌದ್ದಿಕ ಸ್ವತ್ತುಗಳ ನೊಂದಣಿಗೆ ಸಹಕರಿಸಬಹುದು. ಈಗ ತಾಂತ್ರಿಕ ಕ್ಷೇತ್ರದಲ್ಲಿ ಅದು ಅಂತರ್ಜಾಲ ವ್ಯವಸ್ಥೆಯಿರಬಹುದು ಅಂತರ್ಜಾಲಕ್ಕೆ ಸಂಬಂಧಿಸಿದ ಅಪರಾಧಗಳಿರಬಹುದು. ಬೌದ್ದಿಕ ಹಕ್ಕುಗಳಾದ ಪೇಟೆಂಟ್ ಕಾನೂನು, ಟ್ರೇಡ್ ಮಾರ್ಕ್‌ಗಳಿಗೆ ಸಂಬಂಧಿಸಿದ ವಸ್ತು ವಿನ್ಯಾಸ ತಾಂತ್ರಿಕತೆ ಬಗ್ಗೆ ಸಂಪೂರ್ಣ ತಿಳಿವಳಿಕೆ ಇರುವ ವಕೀಲರಿಗೆ ಬೇಡಿಕೆ ಹೆಚ್ಚಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT