ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ, ಮನುಷ್ಯ ಮತ್ತು ನರಳಿಕೆ

ಮನುಷ್ಯ ಸೃಷ್ಟಿಸಿಕೊಂಡಿರುವ ಸಮಸ್ಯೆಗೆ ಮನುಷ್ಯನೇ ಪರಿಹಾರ ಕಂಡುಕೊಳ್ಳಬೇಕು
Last Updated 10 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ದಣಿವಿರದ ದಾನವನಂತೆ ಮಾನವ ನಿರಂತರವಾಗಿ ಭೂದೇವಿಯ ಉದರವನ್ನು ಬಗಿಯುತ್ತಲೇ ಇದ್ದಾನೆ. ಎಲ್ಲೆಲ್ಲಿಯೂ ಭೂದೇವಿಯ ಮಜ್ಜೆ, ಮಾಂಸ, ಅಸ್ಥಿ, ನೆತ್ತರು ಹರಡಿರುವುದು ಸೂರ್ಯ ದೇವನಿಗೆ ಕಾಣಿಸುತ್ತದೆ. ಆದರೆ ಮಾನವನಿಗೆ ಕಾಣಿಸುತ್ತಿಲ್ಲ. ಅವನಿಗೆ ಕಾಣಿಸುವುದು ಭೂದೇವಿಯ ಗರ್ಭದಿಂದ ಹೊರಗೆಳೆದು ತಂದ ಅನರ್ಘ್ಯ ವಸ್ತುಗಳಿಂದ ಬಂದ ಹಣ ಮಾತ್ರ!

ಭೂಗರ್ಭದಲ್ಲಿ ಕೋಟ್ಯಂತರ ವರ್ಷಗಳಿಂದ ಇದ್ದ ಹತ್ತು ಹಲವು ಬಗೆಯ ಖನಿಜಗಳು, ಲೋಹಗಳು ಮತ್ತು ರಾಸಾಯನಿಕಗಳು ತನಗೆ ಬೇಕಾದುವೆಂದು ತೀರ್ಮಾನಿಸಿದ ಮಾನವ, ಭೂಮಿಯನ್ನು ಛಿದ್ರ ಛಿದ್ರವಾಗಿಸಿ ಭೂಮಿಯ ಕರುಳನ್ನೇ ಹೊರಗೆಳೆದಿದ್ದಾನೆ. ಅದರಿಂದಲೇ ಪ್ರಗತಿ, ಅಭಿವೃದ್ಧಿ ಎಂದು ನಂಬಿ ತನ್ನ ಕರಾಳ ಕೃತ್ಯದಲ್ಲಿ ಮೈಮರೆತಿದ್ದಾನೆ.

ಕೇವಲ ಐವತ್ತು, ಅರವತ್ತು ವರ್ಷಗಳ ಹಿಂದೆ ಇದ್ದ ಭೂಮಿಯ ಸೌಂದರ್ಯಕ್ಕೆ ಈಗಿನ ಸ್ಥಿತಿ ಹೋಲಿಸಿದರೆ ಕಣ್ಣೀರು ಬರುತ್ತದೆ. ಭೂಮಿ ಮತ್ತೆಂದೂ ಅದರ ಮನಮೋಹಕ ಮೂಲ ರೂಪಕ್ಕೆ ಮರಳಲಾರದು ಎಂದು ಅನ್ನಿಸುತ್ತದೆ.

ಅಭಿವೃದ್ಧಿ ಎಂದರೆ ಏನೆಂದು ಅರ್ಥ ಮಾಡಿಕೊಳ್ಳದ ಮನುಷ್ಯನ ದ್ರವ್ಯದಾಹ ಮತ್ತು ಹೊಟ್ಟೆಬಾಕತನದ ವಿಧವಿಧ ಕೃತ್ಯಗಳು, ಹಣಕ್ಕಾಗಿ ಮತ್ತು ಎಂದಿಗೂ ಸಾಕೆನಿಸದ ಕ್ಷಣಿಕ ದೈಹಿಕ ತೃಪ್ತಿಗಾಗಿ ನಡೆಸುವ ವಿಕೃತ ಕ್ರಿಯೆಗಳನ್ನು ನೋಡಿದರೆ ಮನುಷ್ಯ ತನ್ನಂತಿರುವ ಮನುಷ್ಯರನ್ನು ಕೊಲ್ಲುವುದರಲ್ಲಿ ಆನಂದವನ್ನು ಕಾಣುತ್ತಿದ್ದಾನೇನೋ ಎಂಬ ಸಂದೇಹ ಉಂಟಾಗುತ್ತದೆ.

ತನ್ನಿಂದ ಆಗಿರುವುದೆಲ್ಲವೂ ಪ್ರಗತಿ ಎಂಬ ಭ್ರಮೆ ಮನುಷ್ಯನನ್ನು ವಿನಾಶದ ಕಡೆಗೆ ಒಯ್ಯುತ್ತಿದೆ. ಈ ಸತ್ಯ, ಸೂರ್ಯ ಪ್ರಕಾಶದಂತೆ ಸ್ಪಷ್ಟವಾಗಿದ್ದರೂ ಕುರುಡು ಮಾನವ ಅದೃಷ್ಟವಾದಿಯಂತೆ ಪ್ರಪಾತದ ಕಡೆಗೆ ವೇಗವಾಗಿ ಸಾಗುತ್ತಿದ್ದಾನೆ. ಭ್ರಮಾಲೋಕದಲ್ಲಿರುವ ಅವನಿಗೆ ಭೂಮಿ ಕೇವಲ ಮಣ್ಣು, ಲೋಹ, ರಾಸಾಯನಿಕಗಳ ನಿಧಿಯಾಗಿ ಕಾಣಿಸುತ್ತಿದೆ. ಭೂಮಿಗೂ ಜೀವವಿದೆ ಎನ್ನುವುದನ್ನು ಅವನು ಕಾಣುವುದೇ ಇಲ್ಲ. ಭೂಮಿಯ ಅಂತರಾಳದಿಂದ ಗೋರಿದ ಕಲ್ಲು, ಮಣ್ಣು, ಲೋಹ ಮತ್ತು ಹಲವಾರು ಖನಿಜಗಳಿಂದಲೇ ಭೂಮಿಯ ಮೇಲೆ ಅವನು ನೂರಾರು ಬಗೆಯ ನಿರ್ಮಾಣಗಳನ್ನು ಮಾಡಿಕೊಂಡಿದ್ದಾನೆ. ಆದರೂ ಇನ್ನೂ ತೃಪ್ತನಾಗಿಲ್ಲ. ಪ್ರಪಾತದ ಕಡೆಗೆ ನುಗ್ಗುತ್ತಲೇ ಇದ್ದಾನೆ. ತಾನು ಭೂಮಿಯಿಂದ ಹೊರಗೆಳೆದ ಬಗೆಬಗೆಯ ಭೂಸತ್ವಗಳಿಂದಲೇ ಅವನು ರೋಗಕ್ಕೆ ಈಡಾಗುತ್ತಿದ್ದಾನೆ. ಆದರೆ ಅದಕ್ಕೆ ಔಷಧ ಮತ್ತು ಬದುಕಿಗೆ ಬೇಕಾದ ಆಹಾರ ಅದೇ ಭೂಮಿಯಿಂದಲೇ ಲಭಿಸುತ್ತದೆ ಎನ್ನುವುದನ್ನು ಮರೆತುಬಿಟ್ಟಿದ್ದಾನೆ.

ಕೇವಲ ಎರಡು ಸಾವಿರ ವರ್ಷಗಳಲ್ಲಿ ಭೂಗರ್ಭದಿಂದ ಮನುಷ್ಯ ಎಷ್ಟು ಕಲ್ಲು, ಇದ್ದಲು, ಎಣ್ಣೆ, ಲೋಹ ಮತ್ತು ಎಷ್ಟು ಬಗೆಬಗೆಯ ರಾಸಾಯನಿಕಗಳನ್ನು ಗೋರಿಕೊಂಡಿದ್ದಾನೆಂದರೆ, ಇನ್ನು ಗೋರಲು ಹೆಚ್ಚು ಉಳಿದಿಲ್ಲ ಎಂದನಿಸುತ್ತದೆ. ಗೋರಿಕೊಂಡುದರ ಒಟ್ಟು ಭಾರ ಲಕ್ಷಾಂತರ ಕೋಟಿ ಟನ್ನುಗಳಾಗಬಹುದು. ಬಹುಶಃ ಭೂಗರ್ಭದಲ್ಲಿ ಇನ್ನು ಅಬಾಧಿತವಾಗಿ ಉಳಿದಿರುವುದು ಬಡಬಾಗ್ನಿ ಮಾತ್ರ!

ಅನಂತ ಕಾಲದಿಂದ ಭೂಮಿಯಲ್ಲಿ ನೈಸರ್ಗಿಕವಾಗಿ ಇದ್ದಂಥ ಮತ್ತು ಆನಂತರ ಭೂಮಿಯ ಮೇಲೆ ಬೆಳೆದ ನೂರಾರು ಬಗೆಯ ಗಿಡ, ಮರಬಳ್ಳಿ ಮತ್ತಿತರ ಸಸ್ಯಗಳನ್ನು ಅವಲಂಬಿಸಿಯೇ ತಾನು ಜೀವಿಸಿದ್ದೆ ಎಂಬುದು ಮಾನವನಿಗೆ ಮರೆತೇಹೋಗಿದೆ. ಇವತ್ತಿಗೂ ಅವನ ಜೀವ ಇರುವುದು ನಿಸರ್ಗ ನೀಡುತ್ತಿರುವ ಆ ಸಾಧನಗಳಿಂದಲೇ ಎಂಬ ವಿಚಾರ ಅವನ ಪ್ರಜ್ಞೆಯಲ್ಲಿ ಇಲ್ಲ.

ಮಾನವನ ದೇಹದಲ್ಲಿ ಕೆಲಸ ಮಾಡುವುದು ಭೂಗರ್ಭದಿಂದ ಹೊರತೆಗೆದ ಸಾಧನಗಳಲ್ಲ; ಅವನ ಜೀವವನ್ನು ಉಳಿಸಿ ಆರೋಗ್ಯವಾಗಿಡುವುದು ಭೂಮಿಯ ಮೇಲೆ ಬೆಳೆದ ಸಸ್ಯೋತ್ಪನ್ನಗಳಲ್ಲಿರುವ ಅಂಶಗಳು.

ವಾಯು ಎಂಬ ಅಗೋಚರ ಪರದೆ ಭೂದೇವಿಯನ್ನು ನಿರಂತರವಾಗಿ ಹೊದ್ದುಕೊಂಡು ಸಕಲ ಚರಾಚರಗಳನ್ನು ರಕ್ಷಿಸುತ್ತದೆ. ಆದರೆ ಮಾನವನು ವಾಯುಪರದೆಯನ್ನೂ ಕಲುಷಿತವಾಗಿಸಿದ್ದಾನೆ. ಸೂರ್ಯದೇವ ಭೂಮಿಗೆ ಬೇಕಾದ ಜೀವಜಲವನ್ನು ತಯಾರು ಮಾಡುತ್ತಲೇ ಇರುತ್ತಾನೆ. ಅದನ್ನು ಕೂಡ ಮಾನವ ವಿಷಮಯವಾಗಿಸಿದ್ದಾನೆ. ಅಮೃತ ವಿಷವಾಗುವುದು ಎಂದರೆ ಇದೇ ಅಲ್ಲವೆ?

ಭೂದೇವಿಯನ್ನು ಗುರುತು ಸಿಗದಷ್ಟು ಬದಲಾಯಿದ ಬಳಿಕ ತನ್ನ ಅಸ್ತಿತ್ವ ಇನ್ನು ಎಷ್ಟು ದಿನ ಇದ್ದೀತು ಎಂದು ಮಾನವ ಯೋಚನೆ ಮಾಡಬೇಕು. ಭೂದೇವಿಯ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನು ಇನ್ನಾದರೂ ಮಾನವ ನಿಲ್ಲಿಸದಿದ್ದರೆ. ಮುಂದೆ ಇರುವುದು ಕೇವಲ ಅಂತ್ಯವಿರದ ಪ್ರಪಾತವೇ ಅಲ್ಲವೆ?ಮನುಷ್ಯ ಸೃಷ್ಟಿಸಿಕೊಂಡಿರುವ ಸಮಸ್ಯೆಗೆ ಮನುಷ್ಯನೇ ಪರಿಹಾರ ಕಂಡುಕೊಳ್ಳಬೇಕು.ಪ್ರಗತಿಯೆಂಬ ಭ್ರಮೆಯಿಂದ ಹೊರಬರಬೇಕು. ಈಗಾಗಲೇ ಆಗಿರುವ ಮತ್ತು ಆಗುತ್ತಿರುವ ಪ್ರಗತಿ ಎಂಬುದರ ವಿಮರ್ಶೆ, ವಿಶ್ಲೇಷಣೆ ನಡೆಸಬೇಕು. ಎಷ್ಟು ಪ್ರಗತಿ ಬೇಕು ಎಂದು ತೀರ್ಮಾನಿಸಿ, ಪ್ರಗತಿ ದುರ್ಗತಿಯಾಗದಂತೆ ಕಡಿವಾಣ ಹಾಕುವುದು ಹೇಗೆ ಎಂದು ಯೋಚಿಸಬೇಕು.

ಈಗೀಗ ಹುಟ್ಟಿಕೊಂಡಿರುವ ಹೊಸ ಹೊಸ ರೋಗಗಳ ಜನನಿ ರೋಗವಾಹಕ ಸೊಳ್ಳೆ; ಅದರ ಜನನಿ ಕೊಳೆ ಮತ್ತು ಕೊಳೆನೀರು; ಈಗ ಮನುಷ್ಯನನ್ನು ತೀವ್ರವಾಗಿ ನರಳಿಸುವ ಕಾಯಿಲೆ ಮತ್ತು ಆರೋಗ್ಯದ ಸಮಸ್ಯೆಗಳಲ್ಲಿ ಬಹುತೇಕ ಎಲ್ಲವೂ ಅವನ ವಿವೇಕರಹಿತ ಪ್ರಗತಿ ತಂದೊಪ್ಪಿಸಿದ ಕಾಣಿಕೆ ಎನ್ನುವುದರಲ್ಲಿ ಸಂದೇಹವಿಲ್ಲ. ನಮ್ಮ ತೃಪ್ತಿ, ಸಂತೋಷಕ್ಕಾಗಿ ನಾವು ನಿರ್ಮಿಸುವುದೆಲ್ಲವೂ ಹೇಗೆ ಒಂದು ದಿನ ನಮಗೇ ದುಃಖ ದುಮ್ಮಾನ ಉಂಟುಮಾಡುತ್ತದೆಯೋ ಹಾಗೆಯೇ ಹಗುರವಾದುದೆಲ್ಲವೂ ಎತ್ತಲಾಗದ ಹೊರೆಯಾಗಿ ಪರಿಣಮಿಸುತ್ತವೆ ಎಂದು ತಿಳಿಯಲು ದೂರ ಹೋಗಬೇಕಾಗಿಲ್ಲ; ಸಂಶೋಧನೆ ಮಾಡಬೇಕಾಗಿಲ್ಲ. ಸಮಾಜದಲ್ಲಿ ನಮ್ಮ ಕಣ್ಣಮುಂದೆ ಇರುವ ನೂರಾರು ಮಂದಿಯ ಬದುಕೇ ಇದಕ್ಕೆ ಸಾಕ್ಷಿ.ಆದರೆ ನಿಸರ್ಗದ ನೆರವು ಇಲ್ಲದೆ ಯಾವ ಸಮಸ್ಯೆಗೂ ಪರಿಹಾರ ಸಿಗದು. ಆದ್ದರಿಂದ ಮಾನವ ನಿಸರ್ಗವನ್ನು ಗೌರವಿಸಬೇಕು. ಪ್ರಗತಿಯ ಪ್ರಮಾಣ ಎಷ್ಟಿರಬೇಕು ಎಂಬುದನ್ನು ಅವನೇ ತೀರ್ಮಾನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT