ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಸ್ಫೋಟ ಅಪರಾಧಿಗಳಿಗೆ ಶಿಕ್ಷೆ: ತಾರ್ಕಿಕ ಅಂತ್ಯ ಮರೀಚಿಕೆ

Last Updated 10 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಸ್ಫೋಟಗಳು ನಾಗರಿಕ ಸಮಾಜವನ್ನು ತಲ್ಲಣಗೊಳಿಸಿದ್ದವು. ರಾಷ್ಟ್ರದ ಆರ್ಥಿಕ ರಾಜಧಾನಿಯಲ್ಲಿ ನಡೆದ ಈ ಸ್ಫೋಟ ಪ್ರಕರಣಗಳಲ್ಲಿ 257 ಜನ ಸತ್ತಿದ್ದರು. 700ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಮುಂಬೈನಂತಹ ಬಹುಸಂಸ್ಕೃತಿಯ ಆಧುನಿಕ ನಗರದ ಆತ್ಮವನ್ನು ಗಾಸಿಗೊಳಿಸಿದ ಪ್ರಕರಣ ಇದು. ಭಾರತದಲ್ಲಿ ನಡೆದ ಭಯೋತ್ಪಾದನಾ ಕೃತ್ಯಗಳಲ್ಲಿ ಅತಿ ಹೆಚ್ಚು ಭೀಕರವಾದದ್ದು. ವಿದೇಶದಲ್ಲಿ ಯೋಜನೆ ರೂಪಿಸಿ ಮುಂಬೈನ 12 ಸ್ಥಳಗಳಲ್ಲಿ ಕರಾರುವಾಕ್ಕಾಗಿ ಸ್ಫೋಟಗಳನ್ನು ನಡೆಸಿದ ಈ ಪ್ರಕರಣ ಜನರ ಮನದಲ್ಲಿ ಮಾಯದ ಗಾಯಗಳನ್ನು ಮಾಡಿದೆ. ಸಮುದಾಯಗಳ ನಡುವಿನ ವಿಶ್ವಾಸಕ್ಕೆ ಹಾನಿ ಮಾಡಿದ ರೀತಿಯೂ ಘೋರವಾದದ್ದು. ಈಗ ಕಳೆದ ವಾರ ಈ ಪ್ರಕರಣದಲ್ಲಿ ಇಬ್ಬರಿಗೆ ಟಾಡಾ ನ್ಯಾಯಾಲಯ ಮರಣದಂಡನೆ ವಿಧಿಸಿದೆ. 2,164 ಪುಟಗಳ ತೀರ್ಪಿನಲ್ಲಿ ತಾಹಿರ್ ಮರ್ಚಂಟ್ ಹಾಗೂ ಫಿರೋಜ್ ಖಾನ್‌ಗೆ ಮರಣ ದಂಡನೆ ವಿಧಿಸುತ್ತಾ ಈ ಇಬ್ಬರಿಗೂ ಇದಕ್ಕಿಂತ ಕಡಿಮೆ ಶಿಕ್ಷೆ ವಿಧಿಸುವುದು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇಷ್ಟೊಂದು ಪ್ರಮಾಣದ ಸ್ಫೋಟಕಗಳನ್ನು ಎರಡನೇ ವಿಶ್ವ ಮಹಾಯುದ್ಧದ ವೇಳೆಯಲ್ಲಷ್ಟೇ ಬಳಸಲಾಗಿದೆ ಎಂದೂ ನ್ಯಾಯಾಲಯ ವಿವರಿಸಿದೆ. ಸಂಚುಕೋರರಲ್ಲಿ ಒಬ್ಬನಾದ ಅಬು ಸಲೇಂಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಈ ಪ್ರಕರಣದಲ್ಲಿ ಮೊದಲ ಹಂತದ ವಿಚಾರಣೆ ಪೂರ್ಣಗೊಳಿಸಿ 2007ರಲ್ಲಿ ಅನೇಕ ಮಂದಿಗೆ ಶಿಕ್ಷೆ ವಿಧಿಸಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಪ್ರಕರಣ ನಡೆದ 14 ವರ್ಷಗಳ ನಂತರ ಬಂದ ತೀರ್ಪು ಅದು. 2015ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸಲಾಗಿತ್ತು. ಹೀಗಿದ್ದೂ ಈ ಪ್ರಕರಣದ ಇತ್ಯರ್ಥ ದೊಡ್ಡ ಸವಾಲೇ ಆಗಿದೆ ಎನ್ನದೆ ವಿಧಿಯಿಲ್ಲ. ಏಕೆಂದರೆ ವಿದೇಶಗಳಲ್ಲಿ ನೆಲೆಸಿರುವ ಆರೋಪಿಗಳನ್ನು ಭಾರತಕ್ಕೆ ಕರೆ ತರುವ ಸಮಸ್ಯೆ ದೊಡ್ಡದಾಗಿದೆ. 2005ರಲ್ಲಿ ಭಾರತ ಮತ್ತು ಪೋರ್ಚುಗಲ್ ಮಧ್ಯೆ ನಡೆದ ಒಪ್ಪಂದದ ಅನ್ವಯ ಅಬು ಸಲೇಂನನ್ನು ಹಸ್ತಾಂತರಿಸಲಾಗಿತ್ತು. ಹಸ್ತಾಂತರದ ಷರತ್ತಿನ ಅನ್ವಯ ಆತನಿಗೆ ಮರಣ ದಂಡನೆ ನೀಡಲು ಅವಕಾಶವಿಲ್ಲ. ಹೀಗಾಗಿ ಸ್ಫೋಟದ ಪ್ರಮುಖ ಸಂಚುಕೋರನಾಗಿದ್ದರೂ ಅಬು ಸಲೇಂಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಆದರೆ ಸಲೇಂ ಜೈಲು ಶಿಕ್ಷೆ 25 ವರ್ಷಕ್ಕಿಂತ ಹೆಚ್ಚಿರಕೂಡದು ಎಂಬಂಥ ಷರತ್ತೂ ಇದೆ ಎಂಬುದು ವಿವಾದವಾಗಿದೆ. ಜೊತೆಗೆ ಈಗ ವಿಧಿಸಿರುವ ಶಿಕ್ಷೆಗಳ ವಿರುದ್ಧ ಅಪರಾಧಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ, ಹೀಗಾಗಿ ಕಾನೂನು ಪ್ರಕ್ರಿಯೆ ಇನ್ನೂ ಬಾಕಿ ಉಳಿದಿದೆ. ನ್ಯಾಯಾಂಗ ವ್ಯವಸ್ಥೆಯ ವಿಳಂಬ ಪ್ರಕ್ರಿಯೆಗೆ ಈ ಪ್ರಕರಣವೂ ದೊಡ್ಡ ಸಾಕ್ಷಿಯಾಗಿದೆ. ವಿಶೇಷ ಟಾಡಾ ನ್ಯಾಯಾಲಯವೂ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಇಷ್ಟೊಂದು ಸಮಯ ತೆಗೆದುಕೊಂಡಿರುವುದು ನಮ್ಮ ನ್ಯಾಯಾಂಗ ವ್ಯವಸ್ಥೆಯ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತದೆ.

ಹೀಗಾಗಿ, ಇಂತಹ ಸನ್ನಿವೇಶಗಳಲ್ಲಿ ಈ ಪ್ರಕರಣದಲ್ಲಿ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಿ ನ್ಯಾಯ ಗೆದ್ದಿದೆ ಎಂದು ಭಾವಿಸುವಂತೆ ಇಲ್ಲ. ಪ್ರಕರಣ ತಾರ್ಕಿಕ ಅಂತ್ಯ ಕಂಡಿದೆ ಎಂದು ಹೇಳುವುದೂ ಕಷ್ಟ. ಏಕೆಂದರೆ ಸ್ಫೋಟದ ಪ್ರಮುಖ ಸಂಚುಕೋರರಾದ ದಾವೂದ್ ಇಬ್ರಾಹಿಂ ಹಾಗೂ ಟೈಗರ್ ಮೆಮನ್ ಈಗಲೂ ತಲೆಮರೆಸಿಕೊಂಡಿದ್ದು ಕಾನೂನಿನ ಕುಣಿಕೆಗೆ ಸಿಕ್ಕಿಲ್ಲ ಎಂಬುದನ್ನು ಮರೆಯಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT