ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಲುವೆ ಆಧುನೀಕರಣಕ್ಕೆ ₹ 1,120 ಕೋಟಿ’

Last Updated 11 ಸೆಪ್ಟೆಂಬರ್ 2017, 4:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಲವು ದಿನಗಳ ರೈತರ ಹೋರಾಟದ ಬಳಿಕ  ಮಲಪ್ರಭಾ ಬಲದಂಡೆ ಕಾಲುವೆಯ ಆಧುನೀಕರಣಕ್ಕೆ ಜಲಸಂಪನ್ಮೂಲ ಇಲಾಖೆ ಮುಂದಾಗಿದ್ದು, ಇದಕ್ಕಾಗಿ ₹ 1120 ಕೋಟಿ ಹಣ ಮಂಜೂರು ಮಾಡಿದೆ.

‘ 2015–16ರ ಬಜೆಟ್‌ನಲ್ಲಿ ₹ 962 ಕೋಟಿ ರೂಪಾಯಿ ಮೀಸಲಿಟ್ಟಿತ್ತು. ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಹೀಗಾಗಿ ಸದನದ ಒಳಗೆ ಹಾಗೂ ಹೊರಗೆ ಸತತ ಹೋರಾಟ ನಡೆಸಲಾಗಿತ್ತು. ಕಳೆದ ವರ್ಷ ನವಲಗುಂದ ತಾಲ್ಲೂಕಿನ ಶಿರೂರದಿಂದ ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿಯವರೆಗೆ ಮಲಪ್ರಭಾ ಬಲದಂಡೆ ಕಾಲುವೆಗುಂಟ 36 ಕಿಲೋ ಮೀಟರ್ ಪಾದಯಾತ್ರೆ ಹಾಗೂ ವಾಸ್ತವ್ಯ ಮಾಡಿ, ಸರ್ಕಾರದ  ಮೇಲೆ ಒತ್ತಡ ಹೇರಲಾಗಿತ್ತು’ ಎಂದು ಶಾಸಕ ಎನ್‌.ಎಚ್‌.ಕೋನರಡ್ಡಿ ಹೇಳಿದರು.

‘ವಿಧಾನಸಭೆ ಅಧಿವೇಶನದಲ್ಲಿ ಈ ಯೋಜನೆ ಜಾರಿಗಾಗಿ ಧರಣಿ ನಡೆಸಲಾಗಿತ್ತು. ಆಗ ಸಚಿವರು ಸದನಕ್ಕೆ ಲಿಖಿತ ಭರವಸೆ ನೀಡಿದ್ದರು. ಅದರಂತೆ ಈಗ ಟೆಂಡರ್‌ ಪ್ರಕ್ರಿಯೆ ಶುರುವಾಗಿದೆ’ ಎಂದರು.

‘ಆಧುನೀಕರಣ ಕಾಮಗಾರಿಯಿಂದಾಗಿ ಮಲಪ್ರಭಾ ಬಲದಂಡೆ ಕಾಲುವೆಗುಂಟ ಬರುವ ಸವದತ್ತಿ, ನವಲಗುಂದ, ಹುಬ್ಬಳ್ಳಿ, ನರಗುಂದ, ಗದಗ ಹಾಗೂ  ರೋಣ ಸೇರಿದಂತೆ ವಿವಿಧ ತಾಲ್ಲೂಕಿನ 500ಕ್ಕೂ ಹೆಚ್ಚು ಹಳ್ಳಿಗಳ ಲಕ್ಷಾಂತರ ರೈತರ ಬದುಕು ಹಸನು ಆಗಲಿದೆ.

ಕಳೆದ 30 ವರ್ಷಗಳಿಂದ ಕಾಲುವೆ ದುರಸ್ತಿ ಕಾಣದ್ದರಿಂದ ಕೊನೆ ಅಂಚಿನ ರೈತರ ಜಮೀನುಗಳಿಗೆ ಈವರೆಗೆ ಸಮರ್ಪಕವಾಗಿ ನೀರು ತಲುಪುತ್ತಿರಲ್ಲಿಲ್ಲ. ಕಾಲುವೆ ಆಧುನೀಕರಣಗೊಂಡರೆ ಶೇ 38ರಷ್ಟು ನೀರು ಪೋಲಾಗುವುದನ್ನು ತಡೆಗಟ್ಟಬಹುದಾಗಿದೆ. ಕಾಲುವೆ ಕೊನೆ ಅಂಚಿನ ಹಳ್ಳಿಗಳ ಜಮೀನಿಗೂ ನೀರು  ಹರಿಯಲಿದೆ’ ಎಂದು ಹೇಳಿದರು.

ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಿ.ಬಿ. ಗಂಗಾಧರಮಠ, ಹುಬ್ಬಳ್ಳಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಶಿವಣ್ಣ ಹುಬ್ಬಳ್ಳಿ, ರಾಜು ಸಂಕರಡ್ಡಿ, ಶಂಕ್ರು ಗಾಣಿಗೇರ, ಪ್ರಕಾಶ ಕೊಣ್ಣೂರು, ವೀರನಗೌಡ ಮರಿಗೌಡರ, ಅಶೋಕ ಮೇಟಿ, ಪರಮೇಶ ಯಡ್ರಾವಿ, ಪ್ರಭು ರಾಯನಗೌಡ್ರ ಇದ್ದರು.

‘120  ಕಿ.ಮೀ. ಕಾಲುವೆ ಕಾಮಗಾರಿ’
ಮಲಪ್ರಭಾ ಬಲದಂಡೆಯ 120 ಕಿ.ಮೀ. ಉದ್ದದ ಕಾಲುವೆ ಆಧುನೀಕರಣ ಗೊಳಿಸಲಾಗುತ್ತಿದೆ. ಶುಕ್ರವಾರ ಟೆಂಡರ್‌ ಅಧಿಸೂಚನೆ ಹೊರಡಿಸಲಾಗಿದ್ದು, ಒಂದು ತಿಂಗಳ ಬಳಿಕ ಟೆಂಡರ್‌ ತೆರೆಯಲಾಗುತ್ತದೆ. ಎಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ 2018ರ ಫೆಬ್ರುವರಿಯಲ್ಲಿ ಕಾಮಗಾರಿ ಆರಂಭ ವಾಗಲಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಕೋನರಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT