ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ತಕಾಭಿಷೇಕಕ್ಕೆ ಸರ್ಕಾರದ ನೆರವು

Last Updated 11 ಸೆಪ್ಟೆಂಬರ್ 2017, 5:54 IST
ಅಕ್ಷರ ಗಾತ್ರ

ಬೆಳಗಾವಿ: ಇಡೀ ವಿಶ್ವಕ್ಕೆ ಶಾಂತಿ ಮತ್ತು ಅಹಿಂಸೆಯ ಸಂದೇಶ ಸಾರಿದ ಭಗವಾನ್‌ ಬಾಹುಬಲಿ ಸ್ವಾಮಿಯ ಸಂದೇಶ ಇಂದು ಎಲ್ಲರಿಗೂ ಅಗತ್ಯವಾಗಿದೆ ಎಂದು ಶಾಸಕ, ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಹೇಳಿದರು.

ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ಮುಂದಿನ ವರ್ಷ ನಡೆಯಲಿರುವ ಗೊಮ್ಮಟೇಶ್ವರ ಭಗವಾನ್‌ ಬಾಹುಬಲಿ ಸ್ವಾಮಿಯ 87ನೇ ಮಹಾಮಸ್ತಕಾಭಿಷೇಕ ಅಂಗವಾಗಿ ಜನಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಪ್ರಭಾವನಾ ರಥಯಾತ್ರೆಗೆ ಇಲ್ಲಿನ ಬೋಗಾರ್‌ವೇಸ್‌ ವೃತ್ತದಲ್ಲಿ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘12 ವರ್ಷಕ್ಕೊಮ್ಮೆ ಬಾಹುಬಲಿಯ ಮಹಾಮಸ್ತಕಾಭಿಷೇಕ ನಡೆಯುತ್ತಾ ಬಂದಿದೆ. ಮುಂದಿನ ವರ್ಷ ಸಂಭ್ರಮದಿಂದ ಆಯೋಜಿಸಲು ಅಗತ್ಯವಿರುವ ಎಲ್ಲ ಸೌಕರ್ಯ, ಸೌಲಭ್ಯಗಳನ್ನು ಸರ್ಕಾರದಿಂದ ನೀಡಲಾಗುತ್ತಿದೆ. ಇಂತಹ ಐತಿಹಾಸಿಕ ಕಾರ್ಯಕ್ರಮ ರಾಜ್ಯದಲ್ಲಿ ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಪ್ರಭಾವನಾ ರಥಯಾತ್ರೆಯಿಂದ ಧಾರ್ಮಿಕ ವಾತವಾರಣ ಉಂಟಾಗಲಿದೆ’ ಎಂದರು.

₹ 175 ಕೋಟಿ ಬಿಡುಗಡೆ: ಕರ್ನಾಟಕ ಜೈನ ಸಂಘದ ಉಪಾಧ್ಯಕ್ಷ ಹಾಗೂ ಮಹಾಮಸ್ತಕಾಭಿಷೇಕ ಪ್ರಚಾರ ಸಮಿತಿ ಅಧ್ಯಕ್ಷರಾದ ಪಿ.ವೈ. ರಾಜೇಂದ್ರಕುಮಾರ, ‘ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದಿಂದ ₹ 175 ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ಹಣವನ್ನು ಶ್ರೀಕ್ಷೇತ್ರದ ಅಭಿವೃದ್ಧಿ, ಮಹಾಮಸ್ತಕಾಭಿಷೇಕಕ್ಕೆ ಆಗಮಿಸುವ ಭಕ್ತರಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸಲು ವಿನಿಯೋಗಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಚಾರುಕೀರ್ತಿ ಭಟ್ಟಾರಕರ ಮಾರ್ಗದರ್ಶನದಲ್ಲಿ ರಾಜ್ಯದಲ್ಲೆಡೆ ಪ್ರಭಾವನಾ ರಥಯಾತ್ರೆ ಮೂಲಕ ಜನ ಜಾಗೃತಿ ಮೂಡಿಸಲಾಗುತ್ತಿದೆ. ಈ ರಥವು ಎಲ್ಲ ಜಿಲ್ಲೆಗಳಲ್ಲೂ ಸಂಚರಿಸಲಿದೆ’ ಎಂದು ತಿಳಿಸಿದರು.

ಶಾಸಕ ಫಿರೋಜ್‌ಸೇಠ್‌, ಬಿಜೆಪಿ ಮುಖಂಡ ಅಭಯ ಪಾಟೀಲ, ಗೊಮ್ಮಟೇಶ್ವರ ಭಗವಾನ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ಕೆಪಿಸಿಸಿ ಕಾರ್ಯದರ್ಶಿ ಸುನಿಲ ಹನಮಣ್ಣವರ, ಮುಖಂಡರಾದ ರಾಜೀವ ದೊಡ್ಡಣ್ಣವರ, ಕೀರ್ತಿಕುಮಾರ ಕಾಗವಾಡ, ಪಂಕಜ ಪಾಟೀಲ, ಸನತಕುಮಾರ ವಿ.ವಿ., ರಾಜೇಂದ್ರ ಜೈನ್‌ ಉಪಸ್ಥಿತರಿದ್ದರು.

ಮಿಥುನ್‌ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು. ರಥಯಾತ್ರೆಯು ಕಿರ್ಲೋಸ್ಕರ್‌ ರಸ್ತೆ, ಮಾರುತಿ ಗಲ್ಲಿ, ಬಸವಣ ಗಲ್ಲಿ, ತಿಲಕಚೌಕ, ಅನಂತಶಯನ ಗಲ್ಲಿ, ಕುಲಕರ್ನಿ ಗಲ್ಲಿ, ಶೇರಿ ಗಲ್ಲಿ, ಮಠ ಗಲ್ಲಿ, ಕಲ್ಮಠ ರಸ್ತೆ, ಪೋರ್ಟ್‌ ರಸ್ತೆ ಮೂಲಕ ಸಂಚರಿಸಿ ಭರತೇಶ ಶಿಕ್ಷಣ ಸಂಸ್ಥೆಯಲ್ಲಿ ಮುಕ್ತಾಯಗೊಂಡಿತು.

‘11ರಂದು ಗಾಂಧಿನಗರ, ಧರ್ಮನಾಥ ಭವನ, ಶ್ರೀನಗರ, ರಾಮತೀರ್ಥ ನಗರ, 12ರಂದು ಬಾಳೇಕುಂದ್ರಿ, ಮುತಗಾ, ಬಸವನ ಕುಡಚಿ, 13ರಂದು ಅಲಾರವಾಡ, ಹಲಗಾ, ಬಸ್ತವಾಡ, 14ರಂದು ಹಳೇಬೆಳಗಾವಿ, ಹೊಸೂರ, ಶಹಾಪುರ, 15ರಂದು ಹಿಂದವಾಡಿ, ತಿಲಕವಾಡಿ, ಚನ್ನಮ್ಮನಗರ, 16ರಂದು ಪೀರನವಾಡಿ, ಕುಟ್ಟಲವಾಡಿ, ಮಚ್ಚೆ ಹಾಗೂ 17ರಂದು ಅನಗೋಳ ಹಾಗೂ ಮಜಗಾವಿಯಲ್ಲಿ ಸಂಚರಿಸಲಿದೆ’ ಎಂದು ಸಂಘಟಕರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT