ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಬೀದಿನಾಯಿಗಳ ಹಿಂಡು

Last Updated 11 ಸೆಪ್ಟೆಂಬರ್ 2017, 6:37 IST
ಅಕ್ಷರ ಗಾತ್ರ

ಬೀದರ್: ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಓಲ್ಡ್‌ ಸಿಟಿಯ ಪ್ರತಿ ಬೀದಿಯಲ್ಲೂ ನಾಯಿಗಳ ದಂಡು ಕಾಣಸಿಗುತ್ತಿದ್ದು, ಬೆಳಗಿನ ಜಾವ ಹಾಗೂ ರಾತ್ರಿ ವೇಳೆ ಸಂಚರಿಸುವುದೇ ಕಷ್ಟವಾಗಿದೆ.

ನಾಯಿ ಕಚ್ಚಿ ಚಿಕಿತ್ಸೆ ಪಡೆಯಲು ಬರುತ್ತಿರುವವರ ಸಂಖ್ಯೆ ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚುತ್ತಿದೆ. ಬೆಳಗಿನ ಜಾವ ಹಾಗೂ ರಾತ್ರಿ ವೇಳೆಯಲ್ಲಿಯೇ ಅಧಿಕ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿದ್ದಾರೆ. ಇದು ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗೂ ತಲೆನೋವಾಗಿ ಪರಿಣಮಿಸಿದೆ.

ಬೀದಿ ನಾಯಿಗಳನ್ನು ನಿಯಂತ್ರಿಸುವಂತೆ ನಗರದ ನಿವಾಸಿಗಳು ಮೂರು ವರ್ಷಗಳಿಂದ ನಗರಸಭೆಗೆ ಮನವಿ ಸಲ್ಲಿಸುತ್ತಿದ್ದಾರೆ. ನಗರಸಭೆ ಸದಸ್ಯರು ಸಾಮಾನ್ಯ ಸಭೆಯಲ್ಲಿ ಅನೇಕ ಬಾರಿ ಪ್ರಸ್ತಾಪ ಮಾಡಿದ್ದಾರೆ. ಅಧಿಕಾರಿಗಳ ಮೇಲೂ ಒತ್ತಡ ಹಾಕಿದ್ದಾರೆ. ಆದರೆ, ಅಧಿಕಾರಿಗಳು ಬೀದಿ ನಾಯಿಗಳನ್ನು ನಿಯಂತ್ರಿಸಲು ಹಿಂದೇಟು ಹಾಕುತ್ತಿದ್ದಾರೆ.

ಕೇರಳ ಮೂಲದ ಆಲ್ ಇಂಡಿಯಾ ಸ್ಟ್ರೀಟ್ ಡಾಗ್, ಪಿಗ್ ಅಂಡ್ ಮಂಕಿ ಕ್ಯಾಚರ್ಸ್ (ಎ.ಐ.ಎಸ್.ಡಿ.ಪಿ.ಎಂ.ಸಿ) ಸಂಘಟನೆಯ ಪ್ರಮುಖರು 2015ರ ಜುಲೈನಲ್ಲಿ ಬೀದರ್‌ಗೆ ಬಂದು ನಗರಸಭೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದರು. ನಗರಸಭೆಯ ಆಯುಕ್ತರು ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಮತಿಗಾಗಿ ಹಿರಿಯ ಅಧಿಕಾರಿಗಳಿಗೆ ಕಳಿಸಿದ್ದರು.

ಪ್ರಾಣಿ ಹಿಂಸೆ ತಡೆ ಕಾಯ್ದೆ ಜಾರಿಯಲ್ಲಿರುವುದರಿಂದ ನಗರಸಭೆಯು ಅವುಗಳನ್ನು ಕೊಲ್ಲುವ ಬದಲು ದೂರದ ಕಾಡಿನಲ್ಲಿ ಬಿಟ್ಟು ಬರುವುದು ಸೂಕ್ತ ಎನ್ನುವ ತೀರ್ಮಾನಕ್ಕೆ ಬಂದಿತ್ತು. ಖಾಸಗಿ ಏಜೆನ್ಸಿ, ಪ್ರತಿ ನಾಯಿ ಹಿಡಿಯಲು ₹ 200 ದರ ನಿಗದಿಪಡಿಸಿತ್ತು. ಅನುದಾನದ ಕೊರತೆಯ ಕಾರಣ ನೀಡಿ ನಗರಸಭೆ ಒಪ್ಪಿಗೆ ಸೂಚಿಸಲಿಲ್ಲ. ಹೀಗಾಗಿ ಬೀದಿ ನಾಯಿಗಳನ್ನು ಕಾಡಿಗೆ ಅಟ್ಟುವ ಕಾರ್ಯ ನನೆಗುದಿಗೆ ಬಿದ್ದಿತು.

‘2007ರ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿ 27,194 ನಾಯಿಗಳಿವೆ. ಪ್ರಸ್ತುತ ಅವುಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಬೀದರ್‌ ನಗರವೊಂದರಲ್ಲೇ ಮೂರು ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳಿವೆ’ ಎಂದು ಬೀದರ್‌ ಯೂಥ್‌ ಎಂಪಾವರ್‌ಮೆಂಟ್‌ ಅಸೋಸಿಯೇಷನ್ ಅಧ್ಯಕ್ಷ ಮಹಮ್ಮದ್‌ ಶಾಹೇದ್‌ ಅಲಿ ಹೇಳುತ್ತಾರೆ.

‘ನೂರಖಾನ್‌ ತಾಲಿಂ, ಮನಿಯಾರ್‌ ತಾಲಿಂ, ಕ್ರಾಂತಿಗಣೇಶ, ಚೌಬಾರಾ, ಮಂಗಲಪೇಟ್‌ ಓವರ್‌ಹೆಡ್‌ ಟ್ಯಾಂಕ್‌ ಸಮೀಪ ನಾಯಿಗಳ ಹಿಂಡು ಅಲೆಯುತ್ತಿವೆ. ಬೀದಿ ನಾಯಿಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಜನವರಿ ಹಾಗೂ ಜುಲೈನಲ್ಲಿ ನಗರಸಭೆ ಆಯುಕ್ತರಿಗೆ ಲಿಖಿತ ಮನವಿ ಸಲ್ಲಿಸಿದ್ದೇನೆ. ಆದರೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT