ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಸ್ತಿ ಆಗದ ರಸ್ತೆಗಳು; ನಿತ್ಯ ಗೋಳು

Last Updated 11 ಸೆಪ್ಟೆಂಬರ್ 2017, 7:18 IST
ಅಕ್ಷರ ಗಾತ್ರ

ರಾಯಚೂರು: ನಿರಂತರ ನೀರು, ಒಳಚರಂಡಿ ಹಾಗೂ ಇನ್ನಿತರೆ ಕಾಮಗಾರಿಗಾಗಿ ನಗರದೆಲ್ಲೆಡೆ ರಸ್ತೆಗಳನ್ನು ಅಗೆದು, ಅರೆಬರೆ ಮುಚ್ಚಲಾಗಿದೆ. ಈ ಸಡಿಲ ಮಣ್ಣು ಕಳೆದ ವಾರ ಸುರಿದ ಮಳೆ ನೀರಿನೊಂದಿಗೆ ಕೊಚ್ಚಿ ಹೋಗಿದ್ದು ರಸ್ತೆಯಲ್ಲಿ ತಗ್ಗುಗಳೆಲ್ಲವೂ ಬಾಯಿ ತೆರೆದುಕೊಂಡಿವೆ!

ನಗರ ವ್ಯಾಪ್ತಿಯ ವಿಸ್ತರಿತ ಬಡಾವಣೆಗಳಲ್ಲಿ ಬಹುತೇಕ ರಸ್ತೆಗಳು ಕೆಸರು ಗದ್ದೆಯಂತಾಗಿವೆ. ಮಳೆ ನಿಂತರೂ ಅದರ ಕುರುಹುಗಳು ಇನ್ನೂ ಉಳಿದುಕೊಂಡಿವೆ. ಹೊಸ ಬಡಾವಣೆಗಳಲ್ಲಿ ಮನೆ ಬಾಗಿಲಿನಿಂದಲೇ ಸಮಸ್ಯೆಗಳು ಆರಂಭವಾಗುತ್ತವೆ. ಆಶಾಪುರ ರಸ್ತೆ ಮತ್ತು ಲಿಂಗಸುಗೂರು ಮಾರ್ಗದ ಬಡಾವಣೆಗಳಲ್ಲಿ ಸಂಚಾರ ರಸ್ತೆಗಳು ಹಳ್ಳದಂತೆ ಗೋಚರಿಸುತ್ತಿವೆ. ಮಣ್ಣಿನ ರಸ್ತೆಗಳ ಅಂಚಿನಲ್ಲಿ ಬೆಳೆದಿರುವ ಮುಳ್ಳಿನ ಗಿಡಗಳು ರಸ್ತೆಯನ್ನು ಮತ್ತಷ್ಟು ಇಕ್ಕಟ್ಟುಗೊಳಿಸಿವೆ. ಬೇಸತ್ತ ಜನರು ಪರ್ಯಾಯ ಮಾರ್ಗಗಳನ್ನು ಬಳಸುತ್ತಿದ್ದಾರೆ.

ಮಳೆನೀರು ಹರಿದು ಹೋಗುವುದಕ್ಕೆ ನಗರದಲ್ಲಿ ಸುಗಮ ವ್ಯವಸ್ಥೆಯಾಗಿಲ್ಲ. ಹೀಗಾಗಿ ಮಳೆಗಾಲದಲ್ಲಿ ರಸ್ತೆಗಳು ಹಾಳಾಗುವುದು ದಿನ ಕಳೆದಂತೆ ಹೆಚ್ಚುತ್ತಿವೆ. ಮೊದಲ ಮಳೆಗೆ ರಸ್ತೆ ಮೇಲ್ಬಾಗ ಕೊಚ್ಚಿ ಹೋಗಿದ್ದು, ಆನಂತರ ಮಳೆಯಲ್ಲಿ ಪಕ್ಕಾ ರಸ್ತೆಗಳು ಕಚ್ಚಾರಸ್ತೆಗಳಾಗಿವೆ. ಇನ್ನೂ ಕೆಲವು ಕಡೆಗಳಲ್ಲಿ ಗುಡ್ಡುಗಾಡು ರಸ್ತೆಯಂತಾಗಿವೆ. ತಿನ್‌ ಕಂದಿಲ್‌ನಿಂದ ಮೀನು ಮಾರ್ಕೆಟ್‌ ಮಾರ್ಗದ ರಸ್ತೆಯಲ್ಲಿ ವಾಹನದಲ್ಲಿ ಸಂಚರಿಸಿದರೆ ಕುದುರೆ ಸವಾರಿ ಮಾಡಿದಂತಹ ಅನುಭವವಾಗುತ್ತದೆ.

ಕೆಲ ಬಡಾವಣೆಗಳಲ್ಲಿ ಮಳೆಯಿಂದ ನಿಂತಿರುವ ನೀರು ಪ್ರತಿದಿನ ಹೊಸ ಸಮಸ್ಯೆಗಳನ್ನು ಆಹ್ವಾನಿಸುತ್ತಿವೆ. ಮಳೆ ನೀರು ಹಂದಿ, ನಾಯಿಗಳ ಗುಂಪುಗೂಡಿ ಕಚ್ಚಾಡುವುದಕ್ಕೆ ಪ್ರಶಸ್ತ ಜಾಗವಾಗಿದೆ. ಹಂದಿ, ನಾಯಿಗಳ ಅರಚಾಟದಿಂದ ಜನವಸತಿ ಪ್ರದೇಶಗಳಲ್ಲಿ ಸಮಸ್ಯೆಗಳಾಗುತ್ತಿದೆ. ಯಾರಿಗೆ ಹೇಳಿದರೆ, ಏನು ಪ್ರಯೋಜನ ಎನ್ನುವ ಮಾತುಗಳೆ ಎಲ್ಲ ಕಡೆಗೂ ಕೇಳಿ ಬರುತ್ತಿದೆ.

ಸಮಸ್ಯೆಗಳನ್ನು ಕೇಳುವುದಕ್ಕೆ ಹಾಗೂ ಪರಿಹರಿಸುವುದಕ್ಕೆ ಆಡಳಿತ ಯಂತ್ರಕ್ಕೆ ಕಣ್ಣು ಇಲ್ಲ; ಕಿವಿಯೂ ಇಲ್ಲ ಎಂದು ನಗರದ ಜನರು ಬೇಸರ ವ್ಯಕ್ತಪಡಿಸುತ್ತಾರೆ. ದೂರು ದುಮ್ಮಾನ ಸಲ್ಲಿಸಿ ಸೋತಿರುವ ಸಂಘ–ಸಂಸ್ಥೆಗಳು ಮೌನ ವಹಿಸಿವೆ. ಕಾಮಗಾರಿ ಪ್ರಗತಿಯಲ್ಲಿವೆ ಎನ್ನುವ ಕಾರಣವೊಂದನ್ನೆ ಎಲ್ಲಾ ಸಮಯದಲ್ಲೂ ಸಮಜಾಯಿಷಿ ಅಧಿಕಾರಿಗಳು ನೀಡುತ್ತಾರೆ. ಹೀಗಾಗಿ ಹೇಳಿದ್ದೆ ಹೇಳುವ ಸಮಸ್ಯೆ ಮತ್ತು ಕೇಳಿದ್ದೆ ಕೇಳುವ ಸಮಜಾಯಿಸಿ ಬಗ್ಗೆ ಸದ್ಯಕ್ಕೆ ಯಾರಿಗೂ ಆಸಕ್ತಿ ಉಳಿದಿಲ್ಲ.

‘ರಾಯಚೂರಿನಲ್ಲಿ ಸಮಸ್ಯೆಗಳು ಹೊಸದಲ್ಲ. ಜನರಿಗೆ ಸಮಸ್ಯೆಗಳೊಂದಿಗೆ ಬದುಕುವುದು ರೂಢಿಯಾಗಿದೆ. ಅಧಿಕಾರಿಗಳು ಕೂಡಾ ಅರೆಮನಸ್ಸಿನಿಂದ ರಾಯಚೂರಿಗೆ ಕೆಲಸ ಮಾಡುವುದಕ್ಕೆ ಬರುತ್ತಾರೆ. ಹೀಗಾಗಿ ಯಾವ ಸಮಸ್ಯೆಗೂ ಶಾಶ್ವತ ಪರಿಹಾರ ಎಂಬುದು ಆಗುತ್ತಿಲ್ಲ’ ಎನ್ನುತ್ತಾರೆ ಜಹೀರಾಬಾದ್‌ ನಿವಾಸಿ ಉರುಕುಂದಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT