ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುಗಾರಿಕೆಯಲ್ಲೇ ನೆಮ್ಮದಿ ಕಂಡ ಪದವೀಧರ

Last Updated 11 ಸೆಪ್ಟೆಂಬರ್ 2017, 7:22 IST
ಅಕ್ಷರ ಗಾತ್ರ

ಯಾದಗಿರಿ: ಆತ ಎಂಎಸ್‌ಸಿ ನರ್ಸಿಂಗ್‌ ಮತ್ತು ಎಂಬಿಎ (ಹಾಸ್ಪಿಟಲ್ ಮ್ಯಾನೇಜ್‌ಮೆಂಟ್‌) ಪದವೀಧರ. ಎರಡು ಪದವಿ ಪಡೆದ ಆತನಿಗೆ ಸರ್ಕಾರಿ ನೌಕರಿ ಹಲವು ಬಾರಿ ಹುಡುಕಿಕೊಂಡು ಬಂದಿದೆ. ಆದರೆ, ಆತನ ಮನಸ್ಸು ಹೈನುಗಾರಿಕೆ ಕಡೆಗೆ. ಆದರೆ, ಬಂಡವಾಳ ದಿಢೀರ್ ಅಂತ ಎಲ್ಲಿಂದ ತರುವುದು.

ಅದಕ್ಕಾಗಿ ಆತ ಬ್ಯಾಂಕ್‌ ಸಾಲ ಸೌಲಭ್ಯದ ಮೊರೆಹೋದ. ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಆತನಿಗೆ ಸ್ವಲ್ಪಮಟ್ಟಿಗೆ ಬಂಡವಾಳ ನೀಡಿತು. ಅಷ್ಟೇ ಬಂಡವಾಳದಲ್ಲಿ ನಾಲ್ಕು ಹಸು ಖರೀದಿಸಿ ನಗರದಲ್ಲಿ ಹೈನುಗಾರಿಕೆ ಆರಂಭಿಸಿದ. ಈಗ ಆತನ ದಿನದ ಆದಾಯ ₹9 ಸಾವಿರ! ತಿಂಗಳಿಗೆ ₹2.70 ಲಕ್ಷ.

ಈ ಯಶಸ್ವಿ ಹೈನೋದ್ಯಮಿಯ ಹೆಸರು ಗೋವಿಂದ ರಾಥೋಡ. ನಿತ್ಯ ಗಿರಿನಗರಿ ನಿವಾಸಿಗಳಿಗೆ 150ಕ್ಕೂ ಹೆಚ್ಚು ಲೀಟರ್‌ ಹಾಲು ವಿತರಿಸುತ್ತಾರೆ. ನೀರು ಬೆರೆಕೆ ಇಲ್ಲದ ಪರಿಶುದ್ಧ ಹಾಲಿನ ದರ ಲೀಟರ್‌ಗೆ ₹50ನಂತೆ ಮಾರಾಟ ಮಾಡುತ್ತಾರೆ.

ಸಾಧನೆಯ ಹಾದಿ: ಗೋವಿಂದ ರಾಠೋಡ ನಗರಕ್ಕೆ ಹೊಂದಿಕೊಂಡಂತೆ ಗೋಕುಲ ಎಂಬ ಹಾಲಿನ ಫಾರ್ಮಹೌಸ್‌ ನಿರ್ಮಿಸಿದ್ದಾರೆ. ಹರಿಯಾಣದಿಂದ ಮುರ್ರಾ ತಳಿಯ ಒಟ್ಟ 22 ಎಮ್ಮೆಗಳನ್ನು, ಎಚ್‌ಎಫ್‌ ತಳಿಯ ಎರಡು ಹಸು, ಒಂದು ಮುರ್ರಾ ಕೋಣ ಸಾಕಿದ್ದಾರೆ.

ಅವುಗಳಲ್ಲಿ ಎರಡು ಹಸು ಹಾಗೂ 24 ಎಮ್ಮೆಗಳು ನಿತ್ಯ ಹಾಲು ನೀಡುತ್ತಿವೆ. ಆದರೆ, ಇಷ್ಟು ಎಮ್ಮೆ, ಹಸುಗಳನ್ನು ಮಕ್ಕಳಿಗಿಂತಲೂ ಹೆಚ್ಚಿನ ಜವಾಬ್ದಾರಿ ನೋಡಿಕೊಳ್ಳಬೇಕು ಎಂಬುದು ಅವರ ಅಂಬೋಣ. ‘ಹೈನುಗಾರಿಕೆ ಅತ್ಯಂತ ಸೂಕ್ಷ್ಮ ಉದ್ಯಮ. ಅಷ್ಟೇ ಲಾಭ ತಂದು ಕೊಡುತ್ತದೆ. ನಿಗಾ ಮರೆತರೆ ಅಷ್ಟೇ ನಷ್ಟ ಕೂಡ ಉಂಟಾಗುತ್ತದೆ ಎಂದು ಹೇಳುವ ಗೋವಿಂದ, ಹೈನುಗಾರಿಕೆಯನ್ನು ನಂಬಿ ಶ್ರಮಿಸಿದರೆ ಎಂದೂ ಮೋಸವಿಲ್ಲ’ ಎಂಬುದಾಗಿ ಹೇಳುತ್ತಾರೆ.

‘ಹಲವು ಲಕ್ಷ ವೆಚ್ಚದಲ್ಲಿ ಹರಿಯಾಣದಿಂದ ಮುರ್ರಾ ಎಮ್ಮೆಗಳನ್ನು ಖರೀದಿಸಿದೆ. ಆದರೆ, ಇಲ್ಲಿನ ತಾಪಮಾನ ಹವಾಮಾನಕ್ಕೆ ಅವು ಹೊಂದಿಕೊಳ್ಳಲು ಪಡಿಪಾಟಲು ಪಡಬೇಕಾಯಿತು. ವಾತಾವರಣಕ್ಕೆ ಹೊಂದಿಕೊಳ್ಳಲು ಪೂರಕ ಕಾರ್ಯಗಳನ್ನು ಕೈಗೊಂಡಾಗ ಹೈನುಗಾರಿಕೆ ಸುಗಮ ಹಾದಿಯತ್ತ ಸಾಗಿತು’ ಎಂದು ವಿವರಿಸಿದರು.

ನೈಪುಣ್ಯತೆಯೂ ಅಗತ್ಯ: ಹೈನುಗಾರಿಕೆಗೆ ಮುಖ್ಯವಾಗಿ ನೈಪುಣ್ಯತೆ ಅಗತ್ಯ. ಹೈನುಗಾರಿಕೆಗೆ ಧುಮುಕಿದ ಮೇಲೆ ನಿರಾಸಕ್ತಿ ತಳೆಯುವಂತಿಲ್ಲ. ಹೈನುಗಾರಿಕೆ ಹೆಚ್ಚು ಕ್ರಿಯಾಶೀಲತೆ ಬೇಡುತ್ತದೆ. ಮೊದಲು ಕ್ರಿಯಾಶೀಲರಾಗಿ ಹೋದಂತೆ ನೈಪುಣ್ಯತೆ ಸಿಗುತ್ತಾ ಹೋಗುತ್ತದೆ. ನೈಪುಣ್ಯತೆ ಪಡೆಯುವುದರಿಂದ ಎಮ್ಮೆ, ಹಸುಗಳಿಗೆ ತಗುಲುವ ರೋಗಗಳಿಗೆ ಕೆಲವೊಂದು ಚಿಕಿತ್ಸಾ ಕ್ರಮಗಳನ್ನು ನಾವೇ ಮಾಡುಬಹುದು ಎಂಬುದು ಗೋವಿಂದ ರಾಠೋಡ ಅವರ ಅನುಭವದ ಮಾತು.

ಉತ್ತೇಜನದ ಕೊರತೆ: ಜಿಲ್ಲೆಯಲ್ಲಿ ಹೈನುಗಾರಿಕೆಗೆ ಉತ್ತೇಜನ ಸಿಗುತ್ತಿಲ್ಲ. ನಿರುದ್ಯೋಗಿ ಯುವಕರು ಹೈನುಗಾರಿಕೆಯತ್ತ ಆಕರ್ಷಿತರಾಗಲು ಕೆಎಂಫ್‌ ಯಾವುದೇ ಯೋಜನೆಗಳನ್ನು ಅನುಷ್ಠಾನಗೊಳಿಸಿಲ್ಲ. ಶಹಾಪುರ ತಾಲ್ಲೂಕಿನ ದೋರನಹಳ್ಳಿ ಬಳಿ ತೆರೆದಿದ್ದ ಹಾಲು ಶಿಥಲೀಕರಣ ಕೇಂದ್ರ ಕೂಡ ಬಾಗಿಲು ಮುಚ್ಚಿದೆ ಎನ್ನುತ್ತಾರೆ ಅವರು.

ನಗರ ಸೇರಿದಂತೆ ಜಿಲ್ಲೆಯಲ್ಲಿ ಹಾಲಿಗೆ ತುಂಬಾ ಬೇಡಿಕೆ ಇದೆ. ಆದರೆ, ಬೇಡಿಕೆಗೆ ತಕ್ಕಂತೆ ಉತ್ಪನ್ನ ಇಲ್ಲ. ಸರ್ಕಾರ ಪ್ರೋತ್ಸಾಹ, ಸಬ್ಸಿಡಿ, ಉತ್ತೇಜಿತ ಕಾರ್ಯಾಗಾರ, ಸಾಲ ಸೌಲಭ್ಯ ನೀಡಿದರೆ ನಿರುದ್ಯೋಗಿಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುವ ಗೋವಿಂದ ರಾಠೋಡ ತಮ್ಮ ಗೋಕುಲ ಡೈರಿಯಲ್ಲಿ ಆರು ಮಂದಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT