ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯವಾದ ಕಾಲೇಜು ಕಾಂಪೌಂಡ್‌: ಮುಜುಗರ

Last Updated 11 ಸೆಪ್ಟೆಂಬರ್ 2017, 8:39 IST
ಅಕ್ಷರ ಗಾತ್ರ

ಮಂಡ್ಯ: ನಗರದ ಚೀರನಹಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಕಾಲೇಜು ಕಾಂಪೌಂಡ್‌ ಶೌಚಾಲಯವಾಗಿ ಮಾರ್ಪಟ್ಟಿದ್ದು, ವಿದ್ಯಾರ್ಥಿನಿಯರು ನಿತ್ಯ ಮುಜುಗರ ಅನುಭವಿಸುತ್ತಿದ್ದಾರೆ. ಮೈಸೂರು– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮಹಿಳಾ ಕಾಲೇಜಿದ್ದು, ಬಲಭಾಗದಲ್ಲಿ 200 ಮೀಟರ್‌ನಷ್ಟು ಜಾಗದಲ್ಲಿ ಕಾಲೇಜು ಕಾಂಪೌಂಡ್‌ ಚಾಚಿಕೊಂಡಿದೆ. ಕಾಂಪೌಂಡ್‌ ಪಕ್ಕದಲ್ಲೇ ಚೀರನಹಳ್ಳಿ ಸರ್ಕಲ್‌ ಇದೆ.

ವಿವಿಧ ಗ್ರಾಮಗಳಿಂದ ಬರುವ ಹೆಣ್ಣು ಮಕ್ಕಳು ಇದೇ ಸರ್ಕಲ್‌ ನಲ್ಲಿ ಬಸ್‌ ಇಳಿದು ಕಾಲೇಜಿಗೆ ತೆರಳುತ್ತಾರೆ. ವಿದ್ಯಾರ್ಥಿನಿಯರು ಇಲ್ಲಿ ತಿರುಗಾಡುತ್ತಿದ್ದರೂ, ಇದಾವುದರ ಪರಿವೆ ಇಲ್ಲದ ಪುರುಷರು ಕಾಂಪೌಂಡ್‌ಗೆ ಶೌಚ ಮಾಡುತ್ತಾ ನಿಂತಿರುತ್ತಾರೆ. ದುರ್ವಾಸನೆ ಸಹಿಸಲಾಗದೆ ಹೆಣ್ಣು ಮಕ್ಕಳು ಮುಖವನ್ನು ದುಪಟ್ಟದಿಂದ ಮುಚ್ಚಿಕೊಂಡು ಕಾಲೇಜಿಗೆ ತೆರಳುತ್ತಾರೆ.

ಕಾಲೇಜು ಸಮೀಪದ ಚೀರನಹಳ್ಳಿ ರಸ್ತೆಯಲ್ಲಿ ಜೆರಾಕ್ಸ್‌ ಅಂಗಡಿಗಳು, ಕಂಪ್ಯೂಟರ್‌ ಸೆಂಟರ್‌ಗಳು, ಸ್ಟೇಷನರಿ ಅಂಗಡಿಗಳಿವೆ. ವಿವಿಧ ಹುದ್ದೆ, ಪರೀಕ್ಷೆ ಗಳಿಗೆ ಅರ್ಜಿ ಹಾಕಲು ವಿದ್ಯಾರ್ಥಿನಿಯರು ಇದೇ ರಸ್ತೆಯ ಕಂಪ್ಯೂಟರ್‌ ಸೆಂಟರ್‌ ಗಳಿಗೆ ಬರುತ್ತಾರೆ. ಕಾಂಪೌಂಡ್‌ ಸಮೀಪ ನಿಲ್ಲುವ ಪುರುಷರಿಂದಾಗಿ ವಿದ್ಯಾರ್ಥಿನಿಯರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಬೆಳಿಗ್ಗೆ 8.30 ಹಾಗೂ ಮಧ್ಯಾಹ್ನ 3.30ರ ವೇಳೆಯಲ್ಲಿ ಊರುಗಳಿಗೆ ತೆರಳಲು ಬಸ್‌ ಹತ್ತಲು ವಿದ್ಯಾರ್ಥಿನಿಯರು ಸರ್ಕಲ್‌ ಗೆ ಬರುತ್ತಾರೆ. ಕಾಂಪೌಂಡ್‌ ಬಳಿಯ ಅವ್ಯವಸ್ಥೆಯಿಂದಾಗಿ ರೋಸಿ ಹೋಗಿದ್ದಾರೆ.

ಚೀರನಹಳ್ಳಿ ಸರ್ಕಲ್‌ ಸಮೀಪದಲ್ಲೇ ರೋಟರಿ ಶಾಲೆ, ಸೇಂಟ್‌ ಜಾನ್‌, ಸೇಂಟ್‌ ಜೋಸೆಫ್‌ ಶಾಲೆಗಳಿವೆ. ಪ್ರತಿದಿನ ಬೆಳಿಗ್ಗೆ, ಸಂಜೆ ಬಸ್‌ ಹತ್ತಲು, ಇಳಿಯಲು ನೂರಾರು ಮಕ್ಕಳು ಬರುತ್ತಾರೆ. ಕಾಂಪೌಂಡ್‌ ಸಮೀಪದ ದೃಶ್ಯಗಳನ್ನು ಕಂಡು ಮಕ್ಕಳು ಕೂಡ ಕಿರಿಕಿರಿ ಅನುಭಿವಿಸುತ್ತಾರೆ.

‘ಇಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲ. ಆಟೊ ಡ್ರೈವರ್‌ ಗಳು, ಗ್ಯಾರೇಜ್‌ಗಳಲ್ಲಿ ಕೆಲಸ ಮಾಡುವವರು, ಟೈರ್‌ ರಿಪೇರಿ ಅಂಗಡಿಗಳಲ್ಲಿ ಕೆಲಸ ಮಾಡುವ ಯುವಕರು ಏಕಾಏಕಿ ಕಾಂಪೌಂಡ್‌ ಬಳಿ ಬಂದು ಶೌಚ ಮಾಡುತ್ತಾರೆ.

ಕಾಂಪೌಂಡ್‌ ಗೆ ಚಲನಚಿತ್ರಗಳ ಪೋಸ್ಟರ್‌ ಅಂಟಿಸಿರುತ್ತಾರೆ. ಶೌಚ ಮಾಡುವವರು ಆ ಪೋಸ್ಟರ್‌ಗಳನ್ನು ನೋಡುತ್ತಾ ನಿಂತಿರುತ್ತಾರೆ. ಪಕ್ಕದಲ್ಲೇ ಕಾಲೇಜು ವಿದ್ಯಾರ್ಥಿನಿಯರು ಹೋಗುತ್ತಿದ್ದರೂ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಚೀರ ನಹಳ್ಳಿ ರಸ್ತೆಯಲ್ಲಿ ಆಟೊ ಮೊಬೈಲ್‌ ಅಂಗಡಿ ಇಟ್ಟುಕೊಂಡಿರುವ ರಮೇಶ್‌ ಹೇಳುತ್ತಾರೆ.

ಕ್ಯಾಂಟೀನ್‌ ಬಳಿ ದುರ್ವಾಸನೆ: ಕಾಂಪೌಂಡ್‌ಗೆ ಹೊಂದಿಕೊಂಡಂತೆ ಬಸ್‌ ತಂಗುದಾಣವಿದೆ. ಆ ನಿಲ್ದಾಣ ಮರೆಯಾಗಿರುವ ಸ್ಥಳದಲ್ಲಿ ಶೌಚ ಮಾಡುವವರ ಸಂಖ್ಯೆ ಹೆಚ್ಚು. ಅದೇ ಸ್ಥಳದ ಕಾಂಪೌಂಡ್‌ ಆಚೆ ಮಹಿಳಾ ಕಾಲೇಜು ಕ್ಯಾಂಟೀನ್‌ ಇದೆ. ಇಲ್ಲಿಯ ದುರ್ವಾಸನೆ ಕ್ಯಾಂಟೀನ್‌ ವರೆಗೂ ಚಾಚಿದ್ದು ವಿದ್ಯಾರ್ಥಿನಿಯರು ಕ್ಯಾಂಟೀನ್‌ ಗೆ ಬರಲು ಹಿಂದೇಟು ಹಾಕುತ್ತಾರೆ.

‘ನಮಗೂ ಸಾಕಾಗಿ ಹೋಗಿದೆ. ಹಲವು ಬಾರಿ ಪೊಲೀಸರಿಗೆ ತಿಳಿಸಿದ್ದೇವೆ. ಆದರೂ ಕಾಂಪೌಂಡ್‌ ಬಳಿ ಶೌಚ ಮಾಡುವುದನ್ನು ನಿಲ್ಲಿಸಿಲ್ಲ. ಕಾಂಪೌಂಡ್‌ ಸ್ಥಿತಿ ಗೊತ್ತಿರುವ ವಿದ್ಯಾರ್ಥಿನಿಯರು ಕ್ಯಾಂಟೀನ್‌ ಗೆ ಬರುವುದೇ ಇಲ್ಲ. ನಮಗೆ ನಷ್ಟವಾಗುತ್ತಿದೆ’ ಎಂದು ಕಾಲೇಜು ಕ್ಯಾಂಟೀನ್‌ ಟೆಂಡರ್‌ ದಾರ ಚಂದ್ರು ಬೇಸರ ವ್ಯಕ್ತಪಡಿಸಿದರು.

ಖಾಲಿಯಾಗದ ಕಸದ ತೊಟ್ಟಿ: ಚೀರನ ಹಳ್ಳಿ ರಸ್ತೆ ಬದಿಯು ಕಸದಿಂದ ತುಂಬಿದೆ. ಇಲ್ಲಿರುವ ಕಸದ ತೊಟ್ಟಿಯನ್ನು ನಗರಸಭೆ 15 ದಿನವಾದರೂ ಖಾಲಿ ಮಾಡುವುದಿಲ್ಲ. ಶೌಚದ ಜೊತೆ ಕಸದ ದುರ್ವಾಸನೆಯನ್ನು ಇಲ್ಲಿಯ ಜನರು, ವಿದ್ಯಾರ್ಥಿನಿಯರು ಅನುಭವಿಸಬೇಕಾಗಿದೆ. ಅದೇ ರಸ್ತೆಯಲ್ಲಿ ಎಸ್‌.ಬಿ.ಸಮುದಾಯ ಭವನ ಇದೆ. ಅಲ್ಲೇ ಎಸ್‌.ಬಿ.ಶೈಕ್ಷಣಿಕ ಸಂಸ್ಥೆಗಳ ಟ್ರಸ್ಟ್‌ ಕಾರ್ಯದರ್ಶಿ ಮೀರಾಶಿವಲಿಂಗಯ್ಯ ಅವರ ಮನೆಯೂ ಇದೆ.

‘ಕಾಲೇಜು ಕಾಂಪೌಂಡ್‌ ಜಾಗವನ್ನು ನಗರಸಭೆಯಿಂದ ಹಲವು ಬಾರಿ ಸ್ವಚ್ಛಗೊಳಿಸಿದ್ದೇವೆ. ಸಮೀಪದಲ್ಲೇ ಇರುವ ಸಾರ್ವಜನಿಕ ಶೌಚಾಲಯ ಬಳಸುವಂತೆ ಸೂಚನೆ ನೀಡಿದ್ದೆವು. ಆದರೂ ಕೆಲವರು ಕಾಂಪೌಂಡ್‌ ಸ್ಥಳದಲ್ಲೇ ಶೌಚ ಮಾಡುತ್ತಿದ್ದಾರೆ. ಅಲ್ಲಿ ಕಾವಲುಗಾರರನ್ನು ನೇಮಿಸಿ ಶೌಚ ಮಾಡದಂತೆ ಕ್ರಮ ಕೈಗೊಳ್ಳಲಾ ಗುವುದು’ ಎಂದು ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT