ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ, ಮಸೀದಿಗೆ ನುಗ್ಗಿದ ನೀರು

Last Updated 11 ಸೆಪ್ಟೆಂಬರ್ 2017, 9:05 IST
ಅಕ್ಷರ ಗಾತ್ರ

ಶಿರಾ: ನಗರದ ವಾರ್ಡ್‌ ನಂ 12 ಮತ್ತು 13 ರಲ್ಲಿ ಶನಿವಾರ ರಾತ್ರಿ ಮಳೆ ನೀರು ಮನೆಗಳಲ್ಲಿ ನುಗ್ಗಿದ ಕಾರಣ ಸಾರ್ವಜನಿಕರು ರಾತ್ರಿ ಪೂರ್ತಿ ಪರಡಾದುವಂತಾಯಿತು.
ರಾತ್ರಿ ಬಂದ ಮಳೆ ಒಂದು ಕಡೆ ಸಂತಸ ಮೂಡಿಸಿದರೆ ಮತ್ತೊಂದು ಕಡೆ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಪರಿತಪಿಸುವಂತಾಯಿತು. ಕಚೇರಿ ಮೊಹಲ್ಲಾದಲ್ಲಿ ಕೆ.ಎಲ್.ಬಾಬು ಅವರ ಮನೆ ಮಳೆಯಿಂದಾಗಿ ಭಾಗಶಃ ಬಿದ್ದು ಹೋಗಿದೆ.

ವಾರ್ಡ್‌ ನಂ 12 ಮತ್ತು 13 ರಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿರುವುದು ಹಾಗೂ ಕಾಲುವೆಯಲ್ಲಿ ಹೂಳು ತುಂಬಿಕೊಂಡು ಕಾಲುವೆ ಮುಚ್ಚಿ ಹೋದ ಕಾರಣ ನೀರು ರಸ್ತೆಯಲ್ಲಿ ಹರಿಯುವಂತಾಗಿ ಮನೆಗಳಿಗೆ ನುಗ್ಗಿತು. ಕಚೇರಿ ಮೊಹಲ್ಲಾದಲ್ಲಿ ಸತೀಷ್, ಬಾಬಣ್ಣ, ಚಿನ್ನಪ್ಪ, ಕೆ.ಎಲ್.ಬಾಬು, ಜೀಯಾ, ಅಹಮದಿ ಸೇರಿದಂತೆ ಸುಮಾರು 20 ಮನೆಗಳಿಗೆ ನೀರು ನುಗ್ಗಿದ್ದು ಮನೆಯಲ್ಲಿದ್ದ ವಸ್ತುಗಳು ಹಾಳಾಗಿವೆ.

ರಾತ್ರಿ ನೀರು ಎತ್ತಿ ಹೊರ ಹಾಕಿದರೂ ಸಹ ನೀರು ಹರಿದು ಹೋಗಲು ಸಾಧ್ಯವಾಗದೆ ಮತ್ತೇ ಮನೆಯೊಳಗೆ ಬರುತ್ತಿತ್ತು. ಭಾನುವಾರ ಬೆಳಿಗ್ಗೆ ಸಹ ಮನೆಯಲ್ಲಿರುವ ನೀರನ್ನು ಹೊರಗೆ ಹಾಕಿ ಮನೆಯನ್ನು ಸ್ವಚ್ಛ ಮಾಡಿಕೊಳ್ಳುತ್ತಿದ್ದ ಮಹಿಳೆಯರು ಇಂದು ಮತ್ತೇ ಮಳೆ ಬಂದರೆ ಮತ್ತೇ ಇದೇ ಪರಿಸ್ಥಿತಿ ಬರಬಹುದು ಎಂದು ಆತಂಕ ಪಡುತ್ತಿದ್ದರು.

‘ ರಾಜಕಾಲುವೆಯನ್ನು ಒತ್ತುವರಿ ಮಾಡಿದ್ದರು ಸಹ ಯಾವುದೇ ಕ್ರಮ ತೆಗೆದುಕೊಳ್ಳದಿರುವುದರಿಂದ ಜನರು ಸಂಕಷ್ಟ ಪಡುತ್ತಿದ್ದಾರೆ. ಪ್ರತಿ ಬಾರಿ ಮಳೆ ಬಂದರೆ ಮನೆಯೊಳಗೆ ನೀರು ನುಗ್ಗುತ್ತಿದ್ದರು ಸಹ ನಗರಸಭೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ಸ್ಥಳೀಯ ನಿವಾಸಿ ಸತೀಶ್‌ ಪ್ರಜಾವಾಣಿಗೆ ತಿಳಿಸಿದರು.

ಶಾದಿಮಹಲ್ ಮತ್ತು ಜಾಮೀಯಾ ಮಸೀದಿಗೆ ಸಹ ನೀರು ನುಗ್ಗಿತು. ಪುರಾತತ್ವ ಇಲಾಖೆ ವ್ಯಾಪ್ತಿಗೆ ಸೇರಿರುವ ಜಾಮೀಯ ಮಸೀದಿಯಲ್ಲಿನ ನೀರನ್ನು ಬೆಳಿಗ್ಗೆ ಸಹ ಪಂಪು ಮೂಡಿ ಹೊರ ಹಾಕಲಾಯಿತು.

ಮನೆಗಳಿಗೆ ನೀರು ನುಗ್ಗಿರುವ ಸುದ್ದಿ ತಿಳಿದು  ನಗರಸಭಾ ಸದಸ್ಯರಾದ ಅಹಮದಿ ಮತ್ತು ಜಾಫರ್ ಸ್ಥಳಕ್ಕೆ ಬಂದು ಜನರಿಗೆ ಸಾಂತ್ವನ ಹೇಳಿದರು. ಆದರೆ ಜನತೆ ಸಂಕಷ್ಟ ಪಡುತ್ತಿದ್ದರು ಸಹ ಯಾವುದೇ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಬರದೆ, ಕರೆ ಮಾಡಿದರು ಸಹ ಬೇಜವಾಬ್ದಾರಿಯಿಂದ ಉತ್ತರ ನೀಡಿದ್ದು ಆಕ್ರೋಶಕ್ಕೆ ಕಾರಣವಾಯಿತು.

ಒತ್ತುವರಿ ತೆರವಿಗೆ ಆಗ್ರಹ: ರಾಜಕಾಲುವೆ ಅಕ್ರಮ ಒತ್ತುವರಿ ತೆರವು ಗೊಳಿಸಿದರೆ ಮಾತ್ರ ಜನತೆ ಅನುಕೂಲವಾಗುವುದು. ಜೊತೆಗೆ ರಾಜಕಾಲುವೆ ಮೇಲೆ ತಮ್ಮ ಮನೆಗಳಿಗೆ ಹೋಗಲು ಸೇತುವೆಗಳನ್ನು ನಿರ್ಮಾಣ ಮಾಡಿಕೊಂಡಿದ್ದು ಕಾಲುವೆ ಹೂಳು ತುಂಬಿರುವುದರಿಂದ ಕಾಲುವೆ ಕಿರುದಾಗಿದ್ದು ಈ ಸೇತುವೆಗಳ ಮೇಲಿರುವ ತಡೆ ಗೋಡೆಗಳಿಂದಾಗಿ ನೀರು ರಸ್ತೆಗೆ ಬರುವಂತಾಗಿದ್ದು ತಕ್ಷಣ ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮಳೆ ನೀರಿಗೆ ತತ್ತರಿಸಿದ ಜನ
ಹುಳಿಯಾರು: ಪಟ್ಟಣದಲ್ಲಿ ಶನಿವಾರ ರಾತ್ರಿ ಆದ ಮಳೆಗೆ ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆಯಿಲ್ಲದೆ ಜನರು ಪರದಾಡಿದರು. ಕೆಲ ಚರಂಡಿಗಳು ಕಸಕಡ್ಡಿಯಿಂದ ಕಟ್ಟಿಕೊಂಡ ಪರಿಣಾಮ ತಗ್ಗಿನ ಪ್ರದೇಶದ ಮನೆಗಳಿಗೆ ನೀರು ನುಗ್ಗಿ ರಾತ್ರಿಯೆಲ್ಲ ಜನರು ಪರದಾಡಿದರು.

ಪಟ್ಟಣದ ಬಸ್ ನಿಲ್ದಾಣಕ್ಕೆ ಹರಿದು ಬಂದ ನೀರು ಹೊರ ಹೋಗಲು ವ್ಯವಸ್ಥೆಯಿಲ್ಲದೆ ಭಾನುವಾರವೂ ಸಹ ನೀರು ನಿಂತು ಕೆರೆಯಾಗಿ ಮಾರ್ಪಟ್ಟಿತ್ತು. ಪ್ರತಿ ಬಾರಿ ಮಳೆ ಬಂದಾಗಲೆಲ್ಲ ನಿರಂತರವಾಗಿ ತೊಂದರೆಯಾಗುತ್ತಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಸರಿ ಪಡಿಸುವ ಗೋಜಿಗೆ ಹೋಗಲ್ಲ ಎಂದು ಪ್ರಯಾಣಿಕರು ಇಡೀ ಶಾಪ ಹಾಕಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪಟ್ಟಣದ ಗಾಂಧಿಪೇಟೆ ಆರಂಭದಲ್ಲಿರುವ ಅಣ್ಣಯ್ಯ ಎಂಬುವವರ ಮನೆಯೊಳಗೆ ನೀರು ನುಗ್ಗಿ ರಾತ್ರಿಯಿಡಿ ನಿದ್ದೆಯಿಲ್ಲದೆ ನೀರು ತುಂಬಿ ಹಾಕಿದ್ದಾರೆ. ‘ಮನೆ ಹಾಗೂ ಅಂಗಡಿಯ ತುಂಬೆಲ್ಲಾ ಸುಮಾರು ಒಂದು ಅಡಿಯಷ್ಟು ನೀರು ನಿಂತು ಅಂಗಡಿ ಮಾರಾಟಕ್ಕೆ ತಂದಿದ್ದ ಸಾಮಾನೆಲ್ಲಾ ನೀರಿನಲ್ಲಿ ನೆನೆದು ಸಾಕಷ್ಟು ಹಾನಿಯಾಗಿದೆ’ ಎಂದು ಅಣ್ಣಯ್ಯ ತಿಳಿಸಿದರು.

ಉಳಿದಂತೆ ಆಂಜನೇಯಸ್ವಾಮಿ ದೇಗುಲದ ಹತ್ತಿರ ಗ್ರಾಮ ಪಂಚಾಯಿತಿ ಸದಸ್ಯೆ ಗೀತಾ ಅಶೋಕ್ ಬಾಬು ಮನೆ ಎದುರು ಚರಂಡಿ ಮುಚ್ಚಿ ರಸ್ತೆಯಲ್ಲಿ ಕೊಚ್ಚೆ ನೀರು ಹರಿಯಿತು. ಉಳಿದಂತೆ ಕೆಎಂಎಲ್ ಸಾಮಿಲ್ ಬಳಿ, ಎಪಿಎಂಸಿ ಸೇರಿದಂತೆ ಕೆಲ ಬಡಾವಣೆಗಳಲ್ಲಿ ಚರಂಡಿ ಕಟ್ಟಿಕೊಂಡಿರುವ ಕಾರಣ ರಸ್ತೆಯಲ್ಲಿ ನೀರು ಹರಿಯಿತು.
ಶನಿವಾರ ರಾತ್ರಿ ಬಿದ್ದ ಮಳೆಗೆ ತುಂಬಿಹರಿದ ಕೆರೆ ಕಟ್ಟೆಗಳು

ಕುಣಿಗಲ್: ಶನಿವಾರ ರಾತ್ರಿ ಬಿದ್ದ ಮಳೆಗೆ ತಾಲ್ಲೂಕಿನ ಕೆರೆಕಟ್ಟೆಗಳಿಗೆ ನೀರು ಹರಿದುಬಂದಿದೆ. ಗಿರಿಗೌಡನ ಪಾಳ್ಯದಲ್ಲಿ ಮನೆ ಬಿದ್ದು ಎಮ್ಮೆ ಮೃತ ಪಟ್ಟಿರುವ ಘಟನೆ ನಡೆದಿದೆ.
ತಾಲ್ಲೂಕಿನ ಮಳೆಮಾಪನ ಕೇಂದ್ರದ ವರದಿಯಂತೆ ಕುಣಿಗಲ್ ಕಸಬದಲ್ಲಿ 75.2 ಮೀ.ಮೀ., ಸಂತೇಪೇಟೆ 143, ಹುಲಿಯೂರುದುರ್ಗ 67.6, ಕೆ.ಹೆಚ್.ಹಳ್ಳಿ 50,ಮಾರ್ಕೋನಹಳ್ಳಿ 100.5, ನಿಡಸಾಲೆ 108 ಮೀ.ಮೀ,ಮಳೆಯಾಗಿದೆ.

ಹುಲಿಯೂರುದುರ್ಗ ಹೋಬಳಿಯ ಕಾಡುಬೋರನಹಳ್ಳಿ ಕೆರೆ ಕೋಡಿಗಾಗಿದ್ದರೆ, ಹೊಸಕೆರೆ, ಮುತ್ತುರಾಯನಕೆರೆ, ಬೆಳ್ಳಿಬೆಟ್ಟದಕೆರೆ, ದೀಪಾಂಬುದಿಕೆರೆ, ಕಾಚೀಹಳ್ಳಿ ಕೆರೆ, ಶಿವನಹಳ್ಳಿಕೆರೆ, ಬಂಡೀಹಳ್ಳಿ ಕೆರೆಗಳಿಗೆ ನೀರು ಬಂದಿದೆ.

ಹುತ್ರಿದುರ್ಗ ಹೋಬಳಿಯ ಬೆಟ್ಟಹಳಿಕೆರೆ, ಹಾಲುವಾಗಿಲು,ನಾಯಕನಕೆರೆಗಳಿಗೆ ನೀರು ಬಂದಿದೆ. 17 ವರ್ಷದ ನಂತರ ಯಲಿಯೂರು ಕೆರೆಗೆ ಅರ್ಧಕೆರೆ ನೀರುಬಂದಿದೆ. ಶ್ರೀರಂಗ ಏತ ನೀರಾವರಿ ಯೋಜನೆಗಾಗಿ ಶೇಖರಿಸಿದ್ದ ಪೈಪ್ ಗಳು, ಸಿಮೆಂಟ್ ಕೋಟಿಂಗ್ ಘಟಕ, ಕ್ರೇನ್, ಜೆಸಿಬಿ ಮತ್ತು ಸಾವಿರಾರು ಮೂಟೆ ಸಿಮೆಂಟ್ ನೀರಿನಲ್ಲಿ ಮುಳುಗಿದೆ.

ರೈತಸಂಘದ ಸಂಘದ ಅಧ್ಯಕ್ಷ ಆನಂದ್ ಪಟೇಲ್ ಮಾತನಾಡಿ, ‘ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಕೆಲವು ಕೆರೆಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಬೆಳೆ ಬೆಳೆದಿದ್ದಾರೆ. ಬೆಳೆ ಉಳ್ಳಿಸಿಕೊಳ್ಳಲು ನೀರನ್ನು ಹೋರಹಾಕ್ಕುವ ಕಾರ್ಯಕ್ಕೆ ಕೈಹಾಕಿ ಕೆರೆ ಕಾಲುವೆ, ತೂಬುಗಳನ್ನು ಸಹ ನಾಶ ಮಾಡುವ ಮಟ್ಟಕ್ಕೆ ಹೋಗುತ್ತಿದ್ದಾರೆ’ ಎಂದು ಆರೋಪಿಸಿದರು.

’ತಾಲ್ಲೂಕು ಆಡಳಿತ ಎಚ್ಚರಿಕೆಯಿಂದ ಗಮನಿಸಬೇಕಾಗಿದೆ. ಯಾವುದೇ ಕೆರೆ ಕಾಲುವೆ ಮತ್ತು ತೂಬು ಹಾನಿಯಾದರೇ ರೈತಸಂಘದಿಂದ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಧಾರಾಕಾರ ಮಳೆ ಜನರಲ್ಲಿ ಸಂತಸ
ಕೊಡಿಗೇನಹಳ್ಳಿ : ಹೋಬಳಿಯ ಬಹುತೇಕ ಎಲ್ಲಾ ಹಳ್ಳಿಗಳಲ್ಲಿಯೂ ಶನಿವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದ ಹಳ್ಳ-ಕೊಳ್ಳ ಮತ್ತು ಬೆಕ್ ಡ್ಯಾಮ್‌ಗಳು ತುಂಬಿ ಹರಿದವು. ಮಳೆ-ಬೆಳೆಯಿಲ್ಲದೆ ಬೇಸತ್ತಿದ್ದ ಜನರಿಗೆ ಇದರಿಂದ ಸಂತಸಗೊಂಡಿದ್ದಾರೆ.

ಶನಿವಾರ ಹೋಬಳಿಯಲ್ಲಿ 74.04 ಮಿ.ಮೀಟರ್ ಮಳೆ ಸುರಿಯಿತು. ಸುರಿದ ಕಾರಣ ಕೆಲವು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಹಲವರು ತೊಂದರೆ ಅನುಭವಿಸಿದರೆ, ಮತ್ತೊಂದು ಕಡೆ ಹಳ್ಳ ಕೊಳ್ಳ ಮತ್ತು ಚೆಕ್ ಡ್ಯಾಮ್‌ಗಳು ತುಂಬಿ ಹರಿಯುವುದನ್ನು ನೋಡಲು ಖುಷಿಯಿಂದ ಜನರು ತಂಡೋಪ ತಂಡವಾಗಿ ಹೋಗುತ್ತಿದ್ದುದು ಅಲ್ಲಲ್ಲಿ ಕಾಣಿಸಿತು.

ಕೋಡಿಗೇನಹಳ್ಳಿ, ಚಿಕ್ಕಮಾಲೂರು, ದೊಡ್ಡಮಾಲೂರು, ಶ್ರಾವಂಡನಹಳ್ಳಿ, ಕಡಗತ್ತೂರು, ತೆರಿಯೂರು, ಪರ್ತಿಹಳ್ಳಿ, ಕಸಿನಾಯಕನಹಳ್ಳಿ, ಮಸರಪಡೆ, ಸುದ್ದೇಕುಂಟೆ, ಕಾಳೇನಹಳ್ಳಿ ಇತರೆ ಗ್ರಾಮಗಳ ಕೆರೆ ಕುಂಟೆಗಳಿಗೆ ನೀರು ಬಂದಿದೆ.

‘ಇದೇ ರೀತಿ ಮಳೆ ಮುಂದವರೆದರೆ ಕೆರೆಕುಂಟೆಗಳು ತುಂಬಿ ಜಯಮಂಗಲಿ ಮತ್ತು ಕುಮದ್ವತಿ ನದಿಗಳು ಹರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಹೋಬಳಿಯ ಪರ್ತಿಹಳ್ಳಿ ಗ್ರಾಮದ ಗೋಪಾಲರೆಡ್ಡಿ ಆಶಾ ಭಾವನೆ ವ್ಯಕ್ತ ಪಡಿಸಿದರು.

ಹುಳಿಯಾರು: ಉತ್ತಮ ಮಳೆ
ಹುಳಿಯಾರು: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ಮಧ್ಯರಾತ್ರಿಯಿಂದ ಬೆಳಿಗ್ಗೆವರೆಗೂ ಉತ್ತಮ ಮಳೆಯಾಗಿಯಿತು. ಹೋಬಳಿಯ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ಉತ್ತಮ ಮಳೆಯಾಗಿದ್ದು ರೈತರ ಜಮೀನಿನಲ್ಲಿ ತೆಗೆದಿರುವ ಕೃಷಿ ಹೊಂಡ, ಗುಂಡಿಗಳಲ್ಲಿ ನೀರು ಶೇಖರಣೆಯಾಗಿದೆ. ಯಾವುದೇ ಕೆರೆ ಕಟ್ಟೆಗಳಿಗೆ ನೀರು ಬಾರದೆ ಹೋದರೂ ಉತ್ತಮ ಹದ ಮಳೆಯಾಗಿದೆ.

‘ಗಾಣಧಾಳು, ಯಗಚಿಹಳ್ಳಿ ಹಾಗೂ ಸುತ್ತ ಮುತ್ತ ಉತ್ತಮ ಮಳೆಯಾಗಿ ಹಳ್ಳಗಳು ಹರಿದಿವೆ.ಪಟ್ಟಣದ ಮಳೆ ಮಾಪನ ಕೇಂದ್ರದಲ್ಲಿ 67.4 ಮೀ.ಮೀ ಮಳೆ ದಾಖಲಾದರೇ, ಬೋರನಕಣಿವೆ ಕೇಂದ್ರದಲ್ಲಿ 74.4 ಮೀ.ಮೀ ಮಳೆ ಪ್ರಮಾಣ ದಾಖಲಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ ಮಳೆಯಿಂದ ಯಾವುದೇ ಅವಘಡ ಸಂಭವಿಸಿಲ್ಲ’ ಎಂದು ಉಪತಹಶೀಲ್ದಾರ್ ಸತ್ಯನಾರಾಯಣ್ ತಿಳಿಸಿದ್ದಾರೆ.

ಉಬ್ಬುಬ್ಬಿ ಬಂದ ಹುಬ್ಬೆ(ಪುಬ್ಬೆ)ಮಳೆ:  ವರುಣ ಅವಕೃಪೆಗೆ ಪಾತ್ರವಾಗಿದ್ದ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿ ರೈತರಿಗೆ ಮರು ಜೀವ ನೀಡಿದೆ.  ಸೋನೆ ಮಳೆಗೆ ಬಿತ್ತಿದ ಬೀಜಗಳು ಬೆಳೆಯದೆ ಭೂಮಿಗೆ ಹಾಕಿದ ಬೀಜವೂ ರೈತರ ಕೈ ಸೇರಿರಲಿಲ್ಲ. ಈ ಬಾರಿಯ ಮುಂಗಾರು ಕೈಕೊಟ್ಟಿತ್ತು. ಕಳೆದ 15 ದಿನಗಳಿಂದ ಅಲ್ಲಲ್ಲಿ ಆಗುತ್ತಿದ್ದ ಸೋನೆ ಮಳೆಗೆ ರಾಗಿ, ನವಣೆ, ಸಾಮೆ ಬಿತ್ತಿದ್ದರು.ಹುಬ್ಬೆ ಮಳೆ ಬಂದರೆ ಹುಬ್ಬುಬ್ಬಿ ಬರುತ್ತದೆ ಎಂಬ ಮಾತನ್ನು ಸತ್ಯವಾಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT