ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾಗಲೇ ಇಲ್ಲ ತೋಟದ ನೋಟ

Last Updated 11 ಸೆಪ್ಟೆಂಬರ್ 2017, 9:14 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಎರಡು ದಶಕಗಳಿಂದ ಟಾರು ಕಾಣದ ಆ ರಸ್ತೆಯಲ್ಲಿ ಇವತ್ತು ಸಂಚರಿಸುವವರೆಲ್ಲ ಗುಂಡಿಗಳ ಮಧ್ಯ ದಾರಿ ಹುಡುಕುವ ಸ್ಥಿತಿಗೆ ತಲುಪಿದ್ದಾರೆ. ಧೋ ಎಂದು ಮಳೆ ಸುರಿದರೆ ಅಧ್ವಾನಗೊಳ್ಳುವ ರಸ್ತೆಯಿಂದಾಗಿ ರೋಸಿ ಹೋಗಿರುವ ಸ್ಥಳೀಯರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಹಾಳಾದ ರಸ್ತೆಯಿಂದಾಗಿ ಪೋಷಕರು ಶಾಲೆಗೆ ಹೋದ ಮಗು ಸುರಕ್ಷಿತವಾಗಿ ಮನೆಗೆ ಮರಳಿತೇ ಎನ್ನುವ ಆತಂಕದಲ್ಲಿ ದಿನದೂಡುತ್ತಿದ್ದಾರೆ.

ಮೂರು ಬಾರಿ ಮೆಟ್ಲಿಂಗ್‌ ಮಾಡಿದರೂ ಡಾಂಬರು ಕಾಣದೆ ಸದ್ಯ ಗುಂಡಿಗಳಿಂದ ತುಂಬಿರುವ ನಗರದ ಕೆಳಗಿನ ತೋಟ ಪ್ರದೇಶದಲ್ಲಿರುವ ವಿಶ್ವೇಶ್ವರಯ್ಯ ಕ್ರೀಡಾಂಗಣ ಹಿಂಭಾಗದ ರಸ್ತೆಯ ಚಿತ್ರಣವಿದು.

ನಗರ ಜಿಲ್ಲಾಡಳಿತ ಕೇಂದ್ರವಾಗಿ ಹತ್ತು ವರ್ಷಗಳನ್ನು ಪೂರೈಸಿದರೂ ಇಂದಿಗೂ ಈ ಪ್ರದೇಶದಲ್ಲಿ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿಯೇ ಉಳಿದಿದೆ. ಕೆಳಗಿನ ತೋಟ ಪಟ್ರೇನಹಳ್ಳಿ ಗ್ರಾಮ ಪಂಚಾಯಿತಿಯಿಂದ ಕಳಚಿಕೊಂಡು ನಗರಸಭೆಗೆ ಸೇರ್ಪಡೆಗೊಂಡು ಸುಮಾರು 25 ವರ್ಷಗಳು ಕಳೆದಿವೆ. ಆದರೆ ಇಲ್ಲಿನ ಜನರ ಸ್ಥಿತಿ ಮಾತ್ರ ಇಂದಿಗೂ ಸುಧಾರಿಸಿಲ್ಲ. ಅವರು ಹೆಸರಿಗೆ ತಕ್ಕಂತೆ ತೋಟದಲ್ಲಿಯೇ ವಾಸಿಸುತ್ತಿರುವಂತಿದೆ. ಮೂಲಸೌಕರ್ಯಗಳ ಕೊರತೆಯಿಂದ ನಲುಗಿರುವ ಈ ಭಾಗದ ಜನ ನಾವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದರೆ ಚೆನ್ನಾಗಿತ್ತು ಎಂದು ಹಳಹಳಿಸುತ್ತಾರೆ.

ಕುಗ್ರಾಮದ ಬಂಡಿದಾರಿಯನ್ನು ನೆನಪಿಸುವಂತೆ ಇರುವ ಈ ರಸ್ತೆ ಜಿಲ್ಲಾ ಕೇಂದ್ರದ ಅಭಿವೃದ್ಧಿಯ ಅಣಕದಂತಿದೆ. ಸುಮಾರು 20 ವರ್ಷಗಳ ಹಿಂದೆಯೇ ಮಾಡಿದ್ದ ಈ ರಸ್ತೆ ಈವರೆಗೆ ಡಾಂಬರು ಕಂಡಿಲ್ಲ ಎನ್ನುವುದೇ ಸೋಜಿಗದ ಸಂಗತಿ. ಜಿಲ್ಲಾ ಕೇಂದ್ರವಾದ ನಗರದಲ್ಲಿಯೇ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎನ್ನುವ ನಾಗರಿಕರ ಆರೋಪಕ್ಕೆ ಈ ರಸ್ತೆ ಪುಷ್ಠಿ ಒದಗಿಸುವಂತಿದೆ.

22ನೇ ವಾರ್ಡ್‌ ಸೇರುವ ಈ ರಸ್ತೆ ಸೇರಿದಂತೆ ಇಂತಹ ಸುಮಾರು 15 ರಸ್ತೆಗಳು ಈ ಭಾಗದಲ್ಲಿವೆ. ಮುಖ್ಯರಸ್ತೆ ಹೊರತುಪಡಿಸಿದಂತೆ ಅಧ್ವಾನಗೊಂಡಿರುವ ಒಳರಸ್ತೆಗಳ ಸ್ಥಿತಿ ವರ್ಣಿಸಲಾಗದಷ್ಟು ಕೆಟ್ಟು ಹೋಗಿದೆ. ಸಣ್ಣ ಮಳೆ ಸುರಿದರೆ ಸಾಕು ಜನರು ಮನೆಯಿಂದಾಚೆಗೆ ಹೆಜ್ಜೆ ಇಡಲು ಅಂಜಬೇಕಾದ ವಾತಾವರಣ ನಿರ್ಮಾಣವಾಗುತ್ತದೆ.

ಜಿಟಿಜಿಟಿ ಮಳೆ ಹಿಡಿಯಿತೋ ಇಲ್ಲಿನವರ ಪಾಡು ದೇವರಿಗೆ ಪ್ರೀತಿ. ರಸ್ತೆಗಳು ಹದಗೆಟ್ಟ ಕಾರಣಕ್ಕೆ ಶಾಲಾ ವಾಹನಗಳು ಒಳರಸ್ತೆಗಳತ್ತ ಮುಖ ಮಾಡುವುದೇ ಇಲ್ಲ. ಹೀಗಾಗಿ ಗುಂಡಿಬಿಂದ ರಸ್ತೆಯಲ್ಲಿ ಸರ್ಕಸ್‌ ಮಾಡಿಕೊಂಡು ಬರುವ ಪೋಷಕರು ಮುಖ್ಯರಸ್ತೆಯಲ್ಲಿ ಕಾಯ್ದು ನಿಂತು ಮಕ್ಕಳನ್ನು ಶಾಲಾ ವಾಹನಗಳಿಗೆ ಹತ್ತಿಸುತ್ತಾರೆ. ಈವರೆಗೆ ನಾಲ್ಕು ಜನ ನಗರಸಭೆ ಸದಸ್ಯರನ್ನು ಕಂಡಿರುವ ಈ ವಾರ್ಡ್‌ನಲ್ಲಿ ಮೂಲಸೌಕರ್ಯಗಳಿಗೆ ‘ಶಾಶ್ವತ ಬರಗಾಲ’ ಬಂದಂತಿದೆ.

‘ಗುಂಡಿಗಳಿಂದಾಗಿ ರಸ್ತೆಯಲ್ಲಿ ಸರ್ಕಸ್‌ ಮಾಡಿಕೊಂಡು ಗಾಡಿಗಳನ್ನು ಓಡಿಸುವ ಸ್ಥಿತಿ ಇದೆ. ಈ ರಸ್ತೆಗಿಂತ ಹಳ್ಳಿ ರಸ್ತೆಗಳೇ ನೂರು ಪಾಲು ಮೇಲು. ಕೆಟ್ಟ ರಸ್ತೆಯಲ್ಲಿ ನಿತ್ಯ ಓಡಾಡುವುದು ನರಕಯಾತನೆ ಉಂಟು ಮಾಡುತ್ತಿದೆ. ಮಳೆ ಸುರಿದರೆ ರಸ್ತೆಯಲ್ಲಿ ನೀರು ತುಂಬಿರುವ ಗುಂಡಿಗಳನ್ನು ತಪ್ಪಿಸಿ ಗಾಡಿ ಓಡಿಸಲು ಜನ ಹೈರಾಣಾಗುತ್ತಾರೆ. ರಸ್ತೆಯಿಂದಾಗಿ ವಿದ್ಯಾರ್ಥಿಗಳು ಪಡುವ ಪಾಡಂತೂ ನೋಡಲಾಗುತ್ತಿಲ್ಲ’ ಎಂದು ವಿನಾಯಕ ಬಡಾವಣೆಯ ನಿವಾಸಿ ಶಿವಾನಂದ ತೀವ್ರ ಬೇಸರ ವ್ಯಕ್ತಪಡಿಸಿದರು.

‘ಈ ಭಾಗದಲ್ಲಿ ಹಿಂದೆ ಬಚ್ಚೇಗೌಡರ ಕಾಲದಲ್ಲಿಯೇ ಸ್ವಲ್ಪ ಅಭಿವೃದ್ಧಿ ಕಂಡಿದ್ದೂ ಬಿಟ್ಟರೆ ಈವರೆಗೆ ಏನೊಂದು ಬದಲಾವಣೆಯಾಗಿಲ್ಲ. ಜನಪ್ರತಿನಿಧಿಗಳು ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮಾಡುತ್ತಿರುವುದೇ ಇದಕ್ಕೆ ಕಾರಣ. ಇದನ್ನೆಲ್ಲ ಅರಿತು ಜನರು ಚುನಾವಣೆ ಸಂದರ್ಭದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳದ ಹೊರತು ಇನ್ನೂ ನೂರು ವರ್ಷಗಳಾದರೂ ಈ ಪ್ರದೇಶದ ಸ್ಥಿತಿ ಬದಲಾಗದು’ ಎಂದು ತಿಳಿಸಿದರು.

‘ನಮ್ಮ ಜನಗಳು ಮತ ನೀಡಲು ದುಡ್ಡು ಪಡೆದು ತಮ್ಮನ್ನು ಮಾರಿಕೊಂಡಿದ್ದಾರೆ. ಹೀಗಾಗಿ ಜನಪ್ರತಿನಿಧಿಗಳ ಕೊರಳಪಟ್ಟಿ ಹಿಡಿದು ಕೇಳಬೇಕಾದ ನೈತಿಕತೆ ಕಳೆದುಕೊಂಡು, ಹೊಡೆದು ಹಾಕಿದ ಹಾವಿನಂತಾಗಿ ನರಳುತ್ತಿದ್ದಾರೆ. ಎಷ್ಟೇ ತೊಂದರೆಗಳನ್ನು ಅನುಭವಿಸಿದರೂ ಜನ ಪ್ರತಿರೋಧಿಸುವುದಿಲ್ಲ. ಪ್ರತಿಭಟಿಸು ವುದೂ ಇಲ್ಲ. ಮತದಾರರೆಲ್ಲ ಪ್ರಜ್ಞಾವಂತ ರಾಗುವವರೆಗೂ ಇಂತಹ ಅಧ್ವಾನಗಳನ್ನು ನಾವು ಸಹಿಸಿಕೊಳ್ಳಬೇಕಿದೆ’ ಎನ್ನುತ್ತಾರೆ ಆಟೊ ಚಾಲಕ ಸುಭಾನ್‌.

‘ಸರಿಯಾದ ರಸ್ತೆಗಳಿಲ್ಲ. ಚರಂಡಿಗಳಂತೂ ಮೊದಲೇ ಸರಿಯಿಲ್ಲ. ಬೀದಿದೀಪಗಳು ಸರಿಯಾಗಿ ಉರಿದದ್ದೇ ಕಡಿಮೆ. ಜಕ್ಕಲ ಮಡುಗು ನೀರಿನ ಸಂಪರ್ಕವೇನೋ ಇದೆ. ಆದರೆ ಆ ಪೈಪ್‌ಗಳಲ್ಲಿ ನೀರು ಬಂದಿಲ್ಲ. ಸ್ಥಳೀಯರು ದುಡ್ಡು ಕೊಟ್ಟು ಬಿಂದಿಗೆ ಲೆಕ್ಕದಲ್ಲಿ ಕುಡಿಯುವ ನೀರು ಖರೀದಿಸುವುದು ಇಲ್ಲಿನ ಸಾಮಾನ್ಯವಾಗಿದೆ. ಇಂತಹ ತಾರತಮ್ಯವನ್ನು ನಾವು ಇನ್ನು ಎಷ್ಟು ದಿನ ಸಹಿಸುವುದು ನೀವೇ ಹೇಳಿ’ ಎಂದು ಮಾರುತಿ ಬಡಾವಣೆ ನಿವಾಸಿ ರವಿ ಪ್ರಶ್ನಿಸಿದರು.

ಈ ಕುರಿತು 22ನೇ ವಾರ್ಡ್‌ ಸದಸ್ಯೆ ಎನ್‌.ಶ್ವೇತಾ ಅವರನ್ನು ಪ್ರಶ್ನಿಸಿದರೆ, ‘ನಮ್ಮ ವಾರ್ಡ್‌ ಅಭಿವೃದ್ಧಿಗೆ ₹ 3 ಕೋಟಿ ಅನುದಾನ ದೊರೆತಿದೆ. ಆ ಪೈಕಿ ₹ 1 ಕೋಟಿ ವೆಚ್ಚದಲ್ಲಿ ಶೀಘ್ರದಲ್ಲಿಯೇ ರಸ್ತೆ ಅಭಿವೃದ್ಧಿಪಡಿಸುತ್ತೇವೆ. ಈಗಾಗಲೇ ಆ ಕಾಮಗಾರಿಗಳ ಟೆಂಡರ್‌ ಕೂಡ ಕರೆಯಲಾಗಿದೆ. ಹೊಸ ವರ್ಷದ ಹೊತ್ತಿಗೆ ಇಡೀ ವಾರ್ಡ್‌ಗೆ ಹೊಸ ರೂಪು ನೀಡುತ್ತೇವೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT