ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರುಪಯುಕ್ತ ವಾಣಿಜ್ಯ ಮಳಿಗೆಗಳು!

Last Updated 11 ಸೆಪ್ಟೆಂಬರ್ 2017, 9:18 IST
ಅಕ್ಷರ ಗಾತ್ರ

ಮೂಡಿಗೆರೆ: ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸಿದರೂ, ಅವು ಸಮರ್ಪಕವಾಗಿ ಜನರ ಬಳಿಗೆ ತಲುಪುವುದಿಲ್ಲ ಎಂಬುದಕ್ಕೆ ಮೂಡಿಗೆರೆ ಪಟ್ಟಣ ಪಂಚಾಯಿತಿಯ ವಾಣಿಜ್ಯ ಮಳಿಗೆ ಉತ್ತಮ ಉದಾಹರಣೆಯಾಗಿದೆ.

ಪಟ್ಟಣ ಪಂಚಾಯಿತಿಯು ತನ್ನದೇ ಆದಾಯ ಮೂಲವನ್ನು ಕಂಡುಕೊಳ್ಳಬೇಕು, ಜತೆಗೆ ಜನರಿಗೂ ದಿನಬಳಕೆಯ ವಸ್ತುಗಳು ಪಟ್ಟಣದ ಹೃದಯ ಭಾಗದಲ್ಲಿ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ನಗರಾಭಿವೃದ್ಧಿ ಇಲಾಖೆಯು ಎಂಟು ವರ್ಷಗಳ ಹಿಂದೆ ಸುಮಾರು ₹ 15 ಲಕ್ಷ ವೆಚ್ಚದಲ್ಲಿ ಎಸ್‌ಬಿಎಂ ಬ್ಯಾಂಕಿನ ಬಳಿ ಒಂಬತ್ತು ಕೊಠಡಿಯ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿತ್ತು.

ನಿರ್ಮಾಣವಾದ ಬೆನ್ನಲ್ಲೇ ಅಂದಿನ ಶಾಸಕರಾಗಿದ್ದ ಎಂ.ಪಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕಟ್ಟಡವನ್ನು ಉದ್ಘಾಟಿಸಲಾಗಿತ್ತು. ಬಳಿಕ ಮಳಿಗೆಗಳ ಹರಾಜನ್ನು ನಡೆಸಲಾಗಿತ್ತು. ಆದರೆ, ಹರಾಜು ನಡೆದು ಎಂಟು ವರ್ಷ ಕಳೆದರೂ ಇದುವರೆಗೂ ಮಳಿಗೆಗಳನ್ನು ಪಟ್ಟಣ ಪಂಚಾಯಿತಿಯು ಹರಾಜು ದಾರರಿಗೆ ಹಸ್ತಾಂತರಿಸದ ಕಾರಣ ಅದರ ಬಾಗಿಲುಗಳು ತುಕ್ಕು ಹಿಡಿಯುತ್ತಿದ್ದರೂ, ಇದುವರೆಗೂ ಬಾಗಿಲು ತೆರೆದಿಲ್ಲ.

ಎಂಟು ತಿಂಗಳ ಹಿಂದೆ ಮರು ಹರಾಜು ನಡೆಸಿ ಬಾಗಿಲು ತೆರೆಯುವ ಪ್ರಯತ್ನ ನಡೆಸಿದರೂ, ರಾಜಕೀಯ ಒತ್ತಡದ ಕಾರಣ ಬೀಗದ ಕೀಯನ್ನು ಹರಾಜುದಾರರಿಗೆ ನೀಡುತ್ತಿಲ್ಲ ಎಂಬುದು ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸಿದ್ದ ಹಿರಿಯ ಅಧಿಕಾರಿ ಯೊಬ್ಬರ ಆರೋಪವಾಗಿದೆ. ಸ್ಥಳಕ್ಕೆ ಆರು ತಿಂಗಳ ಹಿಂದೆ ಜಿಲ್ಲಾಧಿಕಾರಿ ಜಿ. ಸತ್ಯವತಿ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರೂ, ಇದುವರೆಗೂ ಬಾಗಿಲು ತೆರೆದಿಲ್ಲ ಎಂಬುದು ಸ್ಥಳೀಯರ ಆರೋಪ.

ಪಟ್ಟಣದ ಮಾರ್ಕೆಟ್‌ ರಸ್ತೆಯಲ್ಲಿ ಒಂದೂವರೆ ವರ್ಷಗಳ ಹಿಂದೆ ನಿರ್ಮಾಣವಾಗಿರುವ ಮಾಂಸ ಮಾರಾಟ ಮಳಿಗೆಗೂ ಇಂತಹದ್ದೇ ದೌರ್ಭಾಗ್ಯ ಬಂದೊದಗಿದೆ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ತಲೆಎತ್ತಿ ಗಬ್ಬುನಾರುತ್ತಿರುವ ಮೀನು ಹಾಗೂ ಮಾಂಸದ ಅಂಗಡಿಗಳನ್ನೆಲ್ಲಾ, ಮಾರ್ಕೆಟ್‌ ರಸ್ತೆಯಲ್ಲಿನ ಮಳಿಗೆಗಳಿಗೆ ಸ್ಥಳಾಂತರಿಸುವ ಕಾರಣ ಒಂದೂವರೆ ವರ್ಷಗಳ ಹಿಂದೆ ಸುಮಾರು ₹ 25 ಲಕ್ಷ ವೆಚ್ಚದಲ್ಲಿ 12 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿತ್ತು.

ಈ ಮಳಿಗೆಗಳಿಗೆ ಮೀನು ಹಾಗೂ ಮಾಂಸದ ಅಂಗಡಿಗಳನ್ನು ಸ್ಥಳಾಂತರಿಸುವ ಪ್ರಯುಕ್ತ 2016 ಜೂನ್‌ ತಿಂಗಳಿನಲ್ಲಿ ಉದ್ಘಾಟನೆಯೂ ಮಾಡಲಾಗಿತ್ತು. ಆದರೆ, ಇದುವರೆಗೂ ಹರಾಜು ನಡೆಯದ ಕಾರಣ ಮಾಂಸದಂಗಡಿಯ ಗಬ್ಬುವಾಸನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಾತಂಕವಾಗಿ ಬೀಸುತ್ತಿದೆ.

ಈ ಎರಡೂ ವಾಣಿಜ್ಯ ಮಳಿಗೆಗಳಿಗೆ ಸರ್ಕಾರವು ಸುಮಾರು ₹ 35 ಲಕ್ಷ ವೆಚ್ಚಮಾಡಿದ್ದು, ಇದುವರೆಗೂ ವಾಣಿಜ್ಯ ಮಳಿಗೆ ಗಳಿಂದ ಬಿಡಿಗಾಸು ಆದಾಯ ಬಂದಿಲ್ಲ. ಪಟ್ಟಣ ಪಂಚಾ ಯಿತಿಯಲ್ಲಿ ದಿನಗೂಲಿ ನೌಕರರಿಗೆ ವೇತನ ನೀಡಲೂ ಹಣವಿಲ್ಲದ ಸ್ಥಿತಿ ಏರ್ಪಟ್ಟಿದ್ದು, ಕೂಡಲೇ ಜನಪ್ರತಿನಿಧಿಗಳು ವಾಣಿಜ್ಯ ಮಳಿಗೆಗಳನ್ನು ಬಾಗಿಲು ತೆರೆಸುವ ಮೂಲಕ ಪಟ್ಟಣ ಪಂಚಾಯಿತಿಗೆ ಆದಾಯ ದೊರಕಿಸಿಕೊಡುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT