ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಜಲಮರುಪೂರಣದ ಮೊದಲ ಪರ್ವ

Last Updated 11 ಸೆಪ್ಟೆಂಬರ್ 2017, 9:30 IST
ಅಕ್ಷರ ಗಾತ್ರ

ಮಂಗಳೂರು: 2017ರ ಬೇಸಿಗೆಯಲ್ಲಿ ಬೆಂದು ಕಂಗಾಲಾದ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ನೀರನ್ನು ರಕ್ಷಿಸುವ ವಿಧಾನಗಳತ್ತ ಮುಖಮಾಡಿದ್ದಾರೆ. ಕೆಲ ಗ್ರಾಮಪಂಚಾಯಿತಿಗಳಲ್ಲಿ ಜಲಮರುಪೂರಣಕ್ಕೆ ಸಂಬಂಧಿಸಿ ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ. ಲೋಕಶಿಕ್ಷಣ ಇಲಾಖೆ ವತಿಯಿಂದ ಜಾರಿಗೊಳಿಸಲು ಉದ್ದೇಶಿಸಿರುವ ಜಲಸಾಕ್ಷರತಾ ಆಂದೋಲನಕ್ಕೆ ಜಿಲ್ಲೆಯ ಹಲವು ಗ್ರಾಮಪಂಚಾಯಿತಿಗಳು ಉತ್ತಮವಾಗಿ ಸ್ಪಂದಿಸಿವೆ. ಅನುದಾನವನ್ನು ನಿರೀಕ್ಷಿಸದೇ ಮಳೆನೀರನ್ನು ಕೈಲಾದಷ್ಟು ಮಟ್ಟಿಗೆ ಹಿಡಿದು ನಿಲ್ಲಿಸುವ ಪ್ರಯತ್ನಗಳು ನಡೆದಿವೆ.

ನರಿಂಗಾನ ಗ್ರಾಮ ಪಂಚಾಯಿತಿಯ ಪ್ರೇರಕಿ ಹರಿಣಾಕ್ಷಿ ನರಿಂಗಾನ ಹೇಳುವ ಪ್ರಕಾರ, ‘ಜನರು ನೀರನ್ನು ಉಳಿಸಿಕೊಳ್ಳಲು ಯಾವುದೇ ಕೆಲಸ ಮಾಡಲು ಸಿದ್ಧರಿದ್ದಾರೆ. ಸುಮಾರು 30 ಮನೆಗಳಿಗೆ ಮಳೆನೀರು ಹಿಡಿದಿಡುವ ಮಾಹಿತಿ ಕೊಟ್ಟಿದ್ದೇನೆ. ಆದರೆ ಈ ಮಾಹಿತಿ ಕೊಟ್ಟಿದ್ದೇ ತಡವಾಯಿತೇನೋ ಅನಿಸುತ್ತದೆ. ಬೇಸಿಗೆಯಲ್ಲಿಯೇ ಜನರನ್ನು ಸಜ್ಜುಗೊಳಿಸಿದ್ದರೆ ಒಳ್ಳೆಯದಿತ್ತು. ಜನರಿಗೆ ಮಾಹಿತಿ ನೀಡಿದ್ದೇ ಜುಲೈ ಅಂತ್ಯವಾದ್ದರಿಂದ ಬಳಿಕ ಮಳೆಯೂ ಸರಿಯಾಗಿ ಬರಲಿಲ್ಲ’ ಎಂದು ಅವರು ಹೇಳುತ್ತಾರೆ.

ಎರಡು ಮನೆಗಳಲ್ಲಿ, ಚಾವಣಿಯ ನೀರನ್ನು ಹಂಡೆಯೊಂದಕ್ಕೆ ಪೈಪ್‌ ಮೂಲಕ ತುಂಬಿಸುವ ವ್ಯವಸ್ಥೆ ಮಾಡಲಾಗಿದೆ. ಈ ಹಂಡೆಯ ತಳಕ್ಕೆ ಜಲ್ಲಿ, ಹೊಯ್ಗೆ, ಇದ್ದಿಲು ಹಾಕಿ ಶುದ್ಧಮಾಡಿ, ಹಂಡೆಯ ತಳಕ್ಕೆ ತೂತು ಕೊರೆದು ಪೈಪ್‌ಮೂಲಕ ಬಾವಿಗೆ ಬಿಡುವುದರಿಂದ ಬಾವಿ ಒಸರು ಬೇಗ ಇಂಗುವುದಿಲ್ಲ.

ಹೆಚ್ಚು ಖರ್ಚಿಲ್ಲದ ಈ ವಿಧಾನದ ಬಗ್ಗೆ ನರಿಂಗಾನದ ಜನತೆ ಉತ್ಸಾಹ ವ್ಯಕ್ತಪಡಿಸಿದ್ದು , ಮುಂದಿನ ಮಳೆಗಾಲದ ಒಂದು ಹನಿ ನೀರೂ ಹರಿದು ಹೋಗದಂತೆ ಮಾಡಲಾಗುವುದು’ ಎಂಬುದು ಅವರ ಅಭಿಪ್ರಾಯ.

ಕರೋಪಾಡಿ ಗ್ರಾಮದ ಗ್ರಾಮವಿಕಾಸ ಪ್ರೇರಕಿ ಭಾರತಿ ಕರೋಪಾಡಿ ಕೂಡ ಈ ಮಾತನ್ನೇ ಹೇಳುತ್ತಾರೆ. ‘ಊರಿನಲ್ಲಿ ಆರು ಮನೆಗಳ ಕೃಷಿ ಜಮೀನಿನ ತೋಡಿನಲ್ಲಿ ಹರಿದು ಹೋಗುವ ನೀರನ್ನು ನಿಲ್ಲಿಸುವ ನಿಟ್ಟಿನಲ್ಲಿ ಕಟ್ಟ ಹಾಕಲಾಗಿದೆ. ಈ ವರ್ಷ ಹೆಚ್ಚಿನವರಿಗೆ ಮಾಹಿತಿ ನೀಡಿದ್ದು, ಮಳೆ ಕಡಿಮೆಯಾದ್ದರಿಂದ ಹೆಚ್ಚು ಕಟ್ಟ ಕಟ್ಟುವುದು ಸಾಧ್ಯವಾಗಲಿಲ್ಲ.

ಮುಂದಿನ ವರ್ಷ ಜನರು ಮಳೆಗಾಲಕ್ಕೆ ಮುನ್ನವೇ ನೀರನ್ನು ಹಿಡಿದಿಡಲು ಸಜ್ಜಾಗಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಖಾಸಗಿ ಜಮೀನಿನಲ್ಲಿ ಸ್ವ ಇಚ್ಛೆಯಿಂದ ಕಟ್ಟ ಕಟ್ಟಲು ಮುಂದಾದರೆ, ಸರ್ಕಾರಿ ಜಮೀನಲ್ಲಿ ಅಥವಾ ನಾಲ್ಕೈದು ಮನೆಗಳು ಒಟ್ಟಾಗಿ ದೊಡ್ಡ ಕಟ್ಟ ನಿರ್ಮಿಸಲು ಸರ್ಕಾರದ ನೆರವು ದೊರೆತರೆ ಒಳ್ಳೆಯದು’ ಎನ್ನುತ್ತಾರೆ ಅವರು.

ಲೋಕಶಿಕ್ಷಣ ಇಲಾಖೆ ವತಿಯಿಂದ ನಡೆಯುವ ಈ ಯೋಜನೆಯ ಉಸ್ತುವಾರಿಯನ್ನು ವಯಸ್ಕರ ಶಿಕ್ಷಣಾಧಿಕಾರಿ ಕೆ. ಸುಧಾಕರ್‌ ವಹಿಸಿಕೊಂಡಿದ್ದಾರೆ. ಪ್ರತಿ ಗ್ರಾಮದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ವಿಕಾಸ ಪ್ರೇರಕರಿಗೆ ಮಾಹಿತಿ ನೀಡಲಾಗಿದೆ. ಗ್ರಾಮಗಳಲ್ಲಿ ಜಲ ಸಾಕ್ಷರತಾ ಸಮಿತಿಗಳನ್ನು ರಚಿಸಿ ಮಾಹಿತಿ ಪಸರುವ ಕೆಲಸ ನಡೆಯುತ್ತಿದೆ.

ಕೊಳವೆಬಾವಿಗೆ ಜೀವ
ಇರ್ವತ್ತೂರಿನಲ್ಲಿ ಕೊಳವೆ ಬಾವಿ ಸುತ್ತ ಗುಂಡಿ ತೋಡಿ ಜಲ ಮರುಪೂರಣಕ್ಕೆ ಅವಕಾಶ ಮಾಡಲಾಗಿದೆ. ಇರ್ವತ್ತೂರಿನಲ್ಲಿ ಎರಡು, ಮೂರುಪಡುಕೋಡಿ ಪ್ರಾಥಮಿಕ ಶಾಲೆಯಲ್ಲೊಂದು ಹಾಗೂ ಮನೆಯೊಂದರಲ್ಲಿ ಈ ರೀತಿ ಕೊಳವೆಬಾವಿಗೆ ಜೀವ ತುಂಬುವ ಪ್ರಯತ್ನ ನಡೆದಿದೆ. ಮುಂದಿನ ಬೇಸಿಗೆಯಲ್ಲಿ ಹೆಚ್ಚು ನೀರು ದೊರೆತೀತೇನೋ ಕಾದು ನೋಡಬೇಕು ಎನ್ನುತ್ತಾರೆ ಇರ್ವತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರೇರಕರಾಗಿ ಕೆಲಸ ಮಾಡುವ ಅಬ್ದುಲ್‌ ರಹಿಮಾನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT