ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಟಿಎಂಸಿ ಅಡಿ ನೀರು ಉಳಿಸಲು ಯೋಜನೆ

Last Updated 11 ಸೆಪ್ಟೆಂಬರ್ 2017, 9:48 IST
ಅಕ್ಷರ ಗಾತ್ರ

ದಾವಣಗೆರೆ: ಕುಡಿಯುವ ನೀರು ಪೋಲು ತಡೆಯಲು ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಕಾಡಾ) ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಪ್ರತಿ ವರ್ಷವೂ ಮಧ್ಯ ಕರ್ನಾಟಕದ ಕುಡಿಯುವ ಉದ್ದೇಶಕ್ಕಾಗಿ 7 ಟಿಎಂಸಿ ಅಡಿ ನೀರನ್ನು ಭದ್ರಾ ಜಲಾಶಯದಲ್ಲಿ ಮೀಸಲಿಡಲಾಗುತ್ತದೆ. ಆದರೆ, ಇದನ್ನು ಪೂರೈಕೆ ಮಾಡುವಾಗ ಸುಮಾರು 5 ಟಿಎಂಸಿ ಅಡಿ ನೀರು ಪೋಲಾಗುತ್ತಿದೆ. ಇದನ್ನು ತಡೆಯಲು ತುಂಗಭದ್ರಾ ನದಿಯಿಂದ ಸೂಳೆಕೆರೆ ಹಾಗೂ ಭದ್ರಾ ಜಲಾಶಯದಿಂದ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಸಿಂಗಟಾಲೂರು ಬ್ಯಾರೇಜ್‌ಗೆ ಕೊಳವೆ ಜಾಲ ಅಳವಡಿಸುವ ಎರಡು ಯೋಜನೆಗಳನ್ನು ರೂಪಿಸಲಾಗುತ್ತಿದೆ.

ಭದ್ರಾ ಜಲಾಶಯದಿಂದ ನಾಲೆಗಳು ಹಾಗೂ ತುಂಗಭದ್ರಾ ನದಿ ಮೂಲಕ ಕುಡಿಯಲು ನೀರು ಪೂರೈಕೆ ಮಾಡಲಾಗುತ್ತದೆ. ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ, ಬಳ್ಳಾರಿ ಜಿಲ್ಲೆಗಳ ಭಾಗಶಃ ಭಾಗಗಳು ಕುಡಿಯುವ ನೀರಿಗಾಗಿ ಭದ್ರಾ ಜಲಾಶಯವನ್ನೇ ಅವಲಂಬಿಸಿವೆ. ಆದರೆ, ಹಲವು ವರ್ಷಗಳಿಂದ ಜಲಾಶಯ ತುಂಬುತ್ತಿಲ್ಲ. ಹೀಗಾಗಿ ಈ ಭಾಗದಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ.

‘ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಂಡರೆ ತುಮಕೂರು, ಕೋಲಾರ ಜಿಲ್ಲೆವರೆಗೂ ಭದ್ರಾ ನೀರು ಹರಿಸಬೇಕು. ಇದರಿಂದಾಗಿ ಭದ್ರಾ ‘ಕಾಡಾ’ಗೆ ನೀರು ನಿರ್ವಹಣೆ ಮಾಡುವ ಸವಾಲು ಎದುರಾಗಿದೆ. ಹೀಗಾಗಿ, ನೀರು ಉಳಿಸಲು ನದಿ ಹಾಗೂ ಜಲಾಶಯದಿಂದ ಕೊಳವೆ ಜಾಲ ಅಳವಡಿಸಲು ಯೋಜನೆ ರೂಪಿಸಲಾಗುತ್ತಿದೆ’ ಎನ್ನುತ್ತಾರೆ ಭದ್ರಾ ‘ಕಾಡಾ’ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್‌.

ಸೂಳೆಕೆರೆಗೂ ಕೊಳವೆ ಮಾರ್ಗ: ಏಷ್ಯಾದಲ್ಲೇ ಎರಡನೇ ದೊಡ್ಡ ಕೆರೆಯಾದ ಸೂಳೆಕೆರೆ ನೀರಿಲ್ಲದೇ ಜೀವಕಳೆ ಕಳೆದುಕೊಂಡಿದೆ. ಹೀಗಾಗಿ ಚಿತ್ರದುರ್ಗ, ಜಗಳೂರು, ಭರಮಸಾಗರ, ಭೀಮಸಮುದ್ರ, ಬಸವಾಪಟ್ಟಣ, ಮಲ್ಲಾಡಿಹಳ್ಳಿ, ಚಳ್ಳಕೆರೆ, ಚನ್ನಗಿರಿ, ಸಿರಿಗೆರೆ ಭಾಗದ ಲಕ್ಷಾಂತರ ಜನ, ಜಾನುವಾರು ನೀರಿಗಾಗಿ ಪರದಾಡುವಂತಾಗಿದೆ.

2.7 ಟಿಎಂಸಿ ಅಡಿ ಸಾಮರ್ಥ್ಯದ ಸೂಳೆಕೆರೆಗೆ ನೀರು ತುಂಬಿಸಲು ಭದ್ರಾ ಬಲದಂಡೆ ನಾಲೆಯ ಮೂಲಕವೇ ನೀರು ಹರಿಸಬೇಕಾಗುತ್ತದೆ. ಆದರೆ, ಕೃಷಿ ಹಂಗಾಮಿಗೆ ಅನುಗುಣವಾಗಿ ಭದ್ರಾ ನಾಲೆಗೆ ನೀರು ಹರಿಸಲಾಗುತ್ತದೆ. ಹೀಗಾಗಿ ಅಗತ್ಯವಿದ್ದಾಗ ಸೂಳೆಕೆರೆಗೆ ನೀರು ತುಂಬಿಸಲು ಕಷ್ಟವಾಗುತ್ತಿದೆ. ಇದರಿಂದ ಅಪಾರ ಪ್ರಮಾಣದ ನೀರು ಸೋರಿಕೆಯಾಗುತ್ತದೆ. ಇದನ್ನು ತಪ್ಪಿಸಲು ಮಳೆಗಾಲದಲ್ಲಿ ತುಂಗಭದ್ರಾ ನದಿಯ ನೀರನ್ನು ಎತ್ತಿ ಸೂಳೆಕೆರೆಗೆ ತುಂಬಿಸಬಹುದು.

ಇದರಿಂದ ಭದ್ರಾ ಜಲಾಶಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಭದ್ರಾವತಿ ತಾಲ್ಲೂಕು ಆನವೇರಿ ಬಳಿ ತುಂಗಭದ್ರಾ ನದಿಯಿಂದ ಸೂಳೆಕೆರೆವರೆಗೆ 20 ಕಿ.ಮೀ ಅಂತರದಲ್ಲಿ ಕೊಳವೆ ಮಾರ್ಗ ಅಳವಡಿಸುವಂತೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡುತ್ತಾರೆ ಸುಂದರೇಶ್.

2 ಟಿಎಂಸಿ ಅಡಿ ನೀರು ಸಾಕು: ತುಂಗಭದ್ರಾ ನದಿಯಲ್ಲಿ ಮರಳು ಗಣಿಗಾರಿಕೆ ನಡೆದಿರುವುದರಿಂದ, ಕಾರ್ಖಾನೆಗಳು, ರೈತರು ನೀರನ್ನು ಬಳಸುವುದರಿಂದ ಕುಡಿಯುವುದಕ್ಕಾಗಿ 7 ಟಿಎಂಸಿ ಅಡಿಗಿಂತಲೂ ಹೆಚ್ಚು ನೀರು ಮೀಸಲಿಡಬೇಕಾಗಿದೆ. ನದಿ ಮೂಲಕ ನೀರು ಹರಿಸುವುದರಿಂದ ನಿಗದಿತ ಸಮಯಕ್ಕೆ ಸಿಂಗಟಾಲೂರು ಬ್ಯಾರೇಜ್‌ಗೆ ನೀರು ತಲುಪುತ್ತಿಲ್ಲ. ನೀರು ಪೋಲಾಗುತ್ತದೆ. ಜನರೂ ತೊಂದರೆ ಪಡುವಂತಾಗಿದೆ.

ಜಲಾಶಯದಿಂದ 230 ಕಿ.ಮೀ ದೂರದಲ್ಲಿರುವ ಸಿಂಗಟಾಲೂರು ಬ್ಯಾರೇಜ್‌ಗೆ 2 ಮೀಟರ್‌ ವ್ಯಾಸದ ಕೊಳವೆ ಮಾರ್ಗ ನಿರ್ಮಿಸಿದರೆ ನದಿ ಪಾತ್ರದ ಜನ, ಜಾನುವಾರಿಗೆ ವರ್ಷಕ್ಕೆ 2 ಟಿಎಂಸಿ ಅಡಿ ನೀರು ಸಾಕಾಗುತ್ತದೆ. ಜಲಾಶಯದಿಂದ ನದಿಯ ನಡುವೆಯೇ ಕೊಳವೆ ಅಳವಡಿಸಬಹುದು. ಇದರಿಂದ ಗುರುತ್ವ ಶಕ್ತಿ ಮೂಲಕವೇ ನೀರು ಹರಿಸಲು ಸಾಧ್ಯವಿದೆ. ಯೋಜನೆಯ ನಿರ್ವಹಣಾ ವೆಚ್ಚ ಸಹ ತೀರಾ ಕಡಿಮೆ ಇರಲಿದೆ ಎನ್ನುವುದು ‘ಕಾಡಾ’ ಲೆಕ್ಕಾಚಾರ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT