ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಸೀಮೆಯಲ್ಲಿ ಕಾನನ

Last Updated 11 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕೊಪ್ಪಳ ಜಿಲ್ಲೆ ಕುಷ್ಟಗಿಯ ದೇವೇಂದ್ರಪ್ಪ ಬಳೂಟಗಿ ಅವರದು ಅನುಭವದ ಕೃಷಿ. ರಾಸಾಯನಿಕ, ಸಹಜ ಹಾಗೂ ಸಾವಯವ ಕೃಷಿಯಲ್ಲಿ ಮಾಗಿದವರು. ಹಣ್ಣಿನ ಕೃಷಿಯೊಂದಿಗೆ ಸದ್ಯ ಸಹಜ ಅರಣ್ಯ ಕೃಷಿಗೆ ಇಳಿದಿದ್ದಾರೆ.

ಕುಷ್ಟಗಿ ತಾಲ್ಲೂಕಿನ ಮದಲಗಟ್ಟಿ ಗ್ರಾಮದಲ್ಲಿನ ತೋಟ ಹಾಗೂ ಯಲಬುರ್ಗಾ ತಾಲ್ಲೂಕಿನ ಮಂಡಲಮರಿ ತೋಟ ಸೇರಿದರೆ ಬರೋಬ್ಬರಿ 30 ಎಕರೆ ಪ್ರದೇಶಕ್ಕೆ ಹಸಿರು ಹೊನ್ನು ತುಂಬಿಸಿರುವ ಕೃಷಿಕ. ನಿತ್ಯ ಹತ್ತಾರು ಗುಂಪುಗಳು ಇಲ್ಲಿಗೆ ಅರಣ್ಯ ಕೃಷಿ ಪಾಠಕ್ಕಾಗಿ ಬರುತ್ತವೆ.

ಈಗಾಗಲೇ ಸಾಕಷ್ಟು ಅನುಭವ ಹೊಂದಿರುವ ದೇವೇಂದ್ರಪ್ಪ ಅವರ ಮಗ ರಮೇಶ ಬಳೂಟಗಿ ಅರಣ್ಯ ಕೃಷಿಯ ಎಳೆ ಎಳೆಯನ್ನೂ ಬಿಡಿಸಿ ಬಂದವರಿಗೆ ಅನುಭವದ ರಸಪಾಕ ಬಡಿಸುತ್ತಾರೆ. ಕೃಷಿ ಇಲಾಖೆ, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಂಶೋಧಕರು, ರೈತರು, ರೈತ ಮಹಿಳೆಯರು... ಹೀಗೆ ಈ ಪಟ್ಟಿ ಬೆಳೆಯುತ್ತದೆ. ಅಂದಹಾಗೆ ಪರಿಸರದ ರಕ್ಷಣೆ ಜತೆ ಜತೆಗೆ ವಾಣಿಜ್ಯ ಗುರಿಯೂ ಈ ಅರಣ್ಯ ಕೃಷಿ ಹಿಂದಿದೆ.

ದಟ್ಟ ಕಾನನ: ಎತ್ತರದಲ್ಲಿ ನಿಂತು ನೋಟ ಹರಿಸಿದರೆ ಶ್ರೀಗಂಧ, ತೇಗ, ಪಪ್ಪಾಯ, ಮಾವು, ದಾಳಿಂಬೆ, ಶ್ರೀಗಂಧ, ಹುಣಸೆ, ತೆಂಗು, ಬಿದಿರು, ಪೇರಲ, ಮೋಸಂಬಿ, ಬೇವು, ರಕ್ತಚಂದನ, ಕಿನೊ ಗಿಡಗಳು ಕಣ್ಣಿಗೆ ಹಬ್ಬ ತರುತ್ತವೆ.

ಹಚ್ಚಹಸಿರಿನ ಮಧ್ಯೆ ಪಕ್ಷಿಗಳ ಕಲರವ, ಇಲಿ, ಹಾವು, ಮುಂಗುಸಿಗಳ ಜೀವವೈವಿಧ್ಯ ಇಲ್ಲಿ ಎದ್ದು ಕಂಡು ಸಮೃದ್ಧ ಕಾಡಿನಂತೆ ಭಾಸವಾಗುತ್ತದೆ. ಕೃಷಿ ಹೊಂಡದ ಏರಿಯ ಮೇಲೆ ಕುಳಿತು ದೃಷ್ಟಿ ಹರಿಸಿದರೆ ದಾಳಿಂಬೆ, ಮಾವು, ನೆಲ್ಲಿ ಹಣ್ಣಿನ ಗಿಡಗಳಿರುವ ತೋಟದ ಹಾಯ್‌ ಎನಿಸುವ ಆಹ್ಲಾದಕರ ವಾತಾವರಣ. ಯಾರಾದರೂ ‘ಥೇಟ್ ಅರುಣಾಚಲ ಪ್ರದೇಶದ ಕಾಡಿನ್ಹಂಗ ಐತಿ ನೋಡ್ರಿ’ ಎಂದು ಉದ್ಗಾರ ತೆಗೆಯಬಹುದು. ಆದರೆ ಇದು ಸಹಜ ಕಾಡು ಅಲ್ಲ, ಅರಣ್ಯ ಕೃಷಿಯಾಗಿ ಬೆಳೆಸಿದ ರೈತರ ಲಾಭದಾಯಕ ಕಾಡು.

ಕಡು ಬೇಸಿಗೆಯಲ್ಲೂ ಇಲ್ಲಿ ಹಚ್ಚಹಸಿರಿನ ವಾತಾವರಣ ಇರುತ್ತದೆ. ಮಳೆಗಾಲದಲ್ಲಿ ಎಷ್ಟೇ ಮಳೆ ಬಂದರೂ ನೀರು ಮಾತ್ರ ಜಪ್ಪಯ್ಯ ಎಂದರೂ ಜಮೀನು ಬಿಟ್ಟು ಹೊರ ಹೋಗುವುದಿಲ್ಲ. ಹಳ್ಳದಗುಂಟ ಬರುವ ನೀರನ್ನು ಹಿಡಿದಿಟ್ಟುಕೊಳ್ಳುವ ಬೃಹತ್ ಕೃಷಿ ಹೊಂಡಗಳು ಈ ಅರಣ್ಯದಲ್ಲಿವೆ.

ಒಂದೇ ಬೆಳೆಯನ್ನು ನೆಚ್ಚಿಕೊಳ್ಳದೆ ಬೆಳೆಯಲ್ಲಿ ವೈವಿಧ್ಯ ಕಾಪಾಡಿಕೊಳ್ಳಲಾಗಿದೆ. ಪರಿಸರಕ್ಕೆ ಪೂರಕವಾಗಿ ಒಂದಕ್ಕೊಂದು ಹೊಂದಾಣಿಕೆಯಿಂದ ಬೆಳೆಯಬಹುದಾದ ಗಿಡಗಳು, ಕಡಿಮೆ ಖರ್ಚಿನ ಬೇಸಾಯ, ಕಡಿಮೆ ನೀರಿದ್ದರೂ ಸಹಜ ಕೃಷಿಗೆ ಹೊಂದುವ ಹಣ್ಣಿನ ಬೆಳೆಗಳು, ಕಾಡುಜಾತಿ ಗಿಡಗಳ ಸಂಗಮವಿದೆ.

ದೇವೇಂದ್ರಪ್ಪ ಅವರು ತಮ್ಮ 30 ಎಕರೆ ತೋಟದಲ್ಲಿ ಗಣೇಶ ತಳಿ ದಾಳಿಂಬೆ ಬೆಳೆಸಿದ್ದರು. ದಾಳಿಂಬೆ ಕೈಕೊಡುವ ಸೂಚನೆ ದೊರೆತಾಗ ಕಿತ್ತೆಸೆಯಲಿಲ್ಲ. ಅವುಗಳ ಮಧ್ಯೆ ಸ್ಥಳಾವಕಾಶ ಮಾಡಿಕೊಂಡು ದಾಳಿಂಬೆ ಮಧ್ಯೆ ಶ್ರೀಗಂಧ, ಸಾಲುಗಳ ಮಧ್ಯೆ ತೇಗ, ಅಕ್ಕಪಕ್ಕದಲ್ಲಿ ಹುಣಸೆ, ವಿವಿಧ ತಳಿ ಮಾವು, ಸೀತಾಫಲ, ನೆಲ್ಲಿ, ಅಲ್ಲಲ್ಲಿ ಬೇವು ಇತರೆ ಸಸಿಗಳನ್ನು ನಾಟಿ ಮಾಡಿದ್ದಾರೆ.

ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಿದ್ದರೂ ಹೆಚ್ಚು ಕಡಿಮೆ ಸಹಜ ಕೃಷಿಯೇ ಇದಾಗಿದೆ. ಈಗಾಗಲೇ ಮಾವು ಹುಣಸೆ ಗಿಡಗಳು ಫಲ ನೀಡತೊಡಗಿವೆ. ಎಂಟು ವರ್ಷಗಳ ಹಿಂದೆ ನಾಟಿ ಮಾಡಿದ ಶ್ರೀಗಂಧದ ಗಿಡಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ. ಪ್ರತಿವರ್ಷ ಅವುಗಳಿಂದ ಉದುರುವ ಎಲೆಯಿಂದ ಭೂಮಿಯಲ್ಲಿನ ಫಲವತ್ತತೆ ಹೆಚ್ಚುತ್ತಿದೆ.

ಬಿಸಿಲು ನಾಡು ಎಂದೇ ಕರೆಸಿಕೊಳ್ಳುತ್ತಿರುವ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಅರಣ್ಯದ ಪ್ರಮಾಣ ತೀರಾ ಕಡಿಮೆ ಇದೆ. ಪರಿಸರಕ್ಕೆ ಪೂರಕವಾಗುವ ರೀತಿಯಲ್ಲಿ ಅರಣ್ಯ ಬೆಳೆಸುವುದರ ಜತೆಗೆ ಅದರಿಂದ ಸಾಕಷ್ಟು ಆದಾಯ ಪಡೆಯುವ ದಾರಿಯನ್ನು ಕಂಡುಕೊಂಡಿದ್ದಾರೆ.

‘ಹದಿನೈದು ಇಪ್ಪತ್ತು ವರ್ಷ ಬೆಳೆಸಿದರೆ ಈ ಮರಗಳಿಂದ ಸಾಕಷ್ಟು ಆದಾಯ ಬರುತ್ತದೆ. ಒಂದೇ ಜಾತಿಯ ಗಿಡಮರಗಳಿಗಿಂತ ವೈವಿಧ್ಯವಿದ್ದರೆ ನಷ್ಟ ಅನುಭವಿಸುವ ಮಾತೇ ಇಲ್ಲ. ಇಂತಹ ಕೃಷಿ ವಿಚಾರವಾಗಿ ಮೊದಲು ರೈತರಲ್ಲಿ ನಕಾರಾತ್ಮಕ ಧೋರಣೆ ಹೋಗಬೇಕು’ ಎಂದು ದೇವೇಂದ್ರಪ್ಪ ಹೇಳುತ್ತಾರೆ. ಬಿಸಿಲ ನಾಡಿಗೆ ಸೂಕ್ತ ಮರಗಳಾಗಿರುವ ಹುಣಸೆ, ಹೊಂಗೆ, ನೇರಲ, ಮಾವು, ಬೇವು, ಬಾರಿ ಗಿಡಗಳನ್ನು ಬೆಳೆಯಬೇಕು ಎಂದು ಇವರು ನೀಡಿದ ಸಲಹೆಯಿಂದ ಜಿಲ್ಲೆಯಲ್ಲಿ ಸದ್ಯ 800 ಎಕರೆ ಪ್ರದೇಶದಲ್ಲಿ ಹುಣಸೆ ಬೆಳೆಯುತ್ತಿದೆ.

ಹೆಬ್ಬೇವಿಗೆ ಅಧಿಕ ಬೇಡಿಕೆ: ಏಳರಿಂದ ಹತ್ತು ವರ್ಷಗಳ ಒಳಗೆ ಕಟಾವು ಮಾಡಲು ಸಾಧ್ಯವಿರುವ ಹೆಬ್ಬೇವಿಗೆ ಸದ್ಯ ಅಧಿಕ ಬೇಡಿಕೆ ಇದೆ. ನೇರವಾಗಿ ಬೆಳೆಯುವಂಥ ಹಾಗೂ ಮೃದು ಗುಣವನ್ನು ಹೊಂದಿರುವ ಈ ಮರವನ್ನು ಪ್ಲೈವುಡ್ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ ಹಾಗೂ ಇದಕ್ಕಾಗಿ ಅಗಾಧ ಬೇಡಿಕೆ ಇದೆ. ಎಂಟು ವರ್ಷ ಪ್ರಾಯದ ಹೆಬ್ಬೇವು ಸುಮಾರು ₹10 ಸಾವಿರ ಬೆಲೆ ಬಾಳುತ್ತದೆ.

ಒಂದು ಎಕರೆಗೆ 400 ಮರಗಳನ್ನು ಬೆಳೆಸಬಹುದು. ಸದ್ಯ ಇವರ ಕಾಡಿನಲ್ಲಿ ಅಂತಹ ನಾಲ್ಕು ಸಾವಿರ ಮರಗಳು ಬೆಳೆಯುತ್ತವೆ. ಇದರಿಂದ ಹತ್ತು ವರ್ಷಗಳಲ್ಲಿ 20 ಲಕ್ಷದಷ್ಟು ಹಣ ಸಂಪಾದನೆ ಮಾಡಬಹುದಾಗಿದೆ. ಜೊತೆಗೆ ಹೆಬ್ಬೇವಿನ ಎಲೆ ಉತ್ಕೃಷ್ಟ ಮೇವಾಗಿದ್ದು, ಹಸು, ಕುರಿ, ಆಡುಗಳ ಸಾಗಾಣಿಕೆಯನ್ನು ಸಹ ಉಪ ಕಸುಬಾಗಿ ಕೈಗೊಳ್ಳಬಹುದು. ಅಲ್ಲದೆ ಹೆಬ್ಬೇವು ಕಟಾವಿಗೆ ಬರುವವರೆಗೂ ವಿವಿಧ ಅಂತರ ಬೆಳೆಗಳನ್ನು ಸಹ ಬೆಳೆದುಕೊಳ್ಳಬಹುದು ಎಂದು ರಮೇಶ ಬಳೂಟಗಿ ಹೇಳುತ್ತಾರೆ.

ಅರಣ್ಯದಲ್ಲಿ ಶ್ರೀಗಂಧದ ಕಂಪು: ತೇಗ, ಬೇವು, ರಕ್ತ ಚಂದನ ಸಾಲುಗಳ ಮಧ್ಯದಲ್ಲಿ ಸುಮಾರು ಒಂಬತ್ತು ಸಾವಿರ ಶ್ರೀಗಂಧ ಮರಗಳನ್ನು ಬೆಳೆಸಲಾಗಿದೆ. ಇದು ಪರಾವಲಂಬಿ ಸಸ್ಯವಾಗಿದ್ದು ಸ್ವತಂತ್ರವಾಗಿ ಬೆಳೆಯುವುದಿಲ್ಲ. ಹಾಗಾಗಿ ಶ್ರೀಗಂಧವನ್ನು ಹೆಬ್ಬೇವಿನೊಂದಿಗೆ ಅಂತರ ಬೆಳೆಯಾಗಿ ಬೆಳೆಯಲಾಗುತ್ತಿದೆ. ಶ್ರೀಗಂಧದ ಬೆಳೆ ಹಾಗೂ ಮಾರುಕಟ್ಟೆಯ ಮೇಲೆ ಇದ್ದಂಥ ನಿಯಂತ್ರಣವನ್ನು ಸರ್ಕಾರ 2002ರಲ್ಲಿ ಸಡಿಲಿಸಿ ಸಾಗುವಳಿ ಮಾಡಲು ಹಾಗೂ ಮಾರಾಟ ಮಾಡಲು ಅನುಕೂಲ ಕಲ್ಪಿಸಿದೆ. ಶ್ರೀಗಂಧದಲ್ಲಿ ಏಳು ವರ್ಷಗಳ ನಂತರ ಚೇಗು ರೂಪುಗೊಳ್ಳಲು ಆರಂಭವಾಗುತ್ತದೆ. ಸಾಮಾನ್ಯವಾಗಿ ಇದು 15 ವರ್ಷಕ್ಕೆ ಕಟಾವಿಗೆ ಬರುತ್ತದೆ’ ಎಂದೆನ್ನುವ ರಮೇಶ, ‘ನಮ್ಮ ತೋಟದಲ್ಲಿ ನಾಲ್ಕು ಸಾವಿರ ರಕ್ತ ಚಂದನ ಗಿಡಗಳು ಪೊಗದಸ್ತಾಗಿ ಬೆಳೆಯುತ್ತಿವೆ’ ಎಂದು ಸಂತಸದಿಂದ ಹೇಳುತ್ತಾರೆ.

ಕಾಡಿನ ಮಧ್ಯದಲ್ಲಿ ಕಿನೊ ಮರಗಳು ಬೆಳೆದು ಎಲೆಗಿಂತ ಹೆಚ್ಚು ಹಣ್ಣುಗಳನ್ನೇ ತುಂಬಿಕೊಂಡು ನಿಂತಿವೆ. ಹೆಚ್ಚು ಕಡಿಮೆ ಕಿತ್ತಳೆ ಹಣ್ಣಿನ ಆಕಾರವನ್ನೇ ಹೋಲುವ ಈ ಕಿನೊ ರುಚಿಯಲ್ಲಿ ಮಾತ್ರ ಕೊಂಚ ಮೋಸಂಬಿ ಹಣ್ಣಿನ ಮಾಧುರ್ಯ ಹೊಂದಿದೆ. ಆದರೆ ಉಳಿದೆಲ್ಲ ಹಣ್ಣುಗಳಿಗಿಂತ ಇದರಲ್ಲಿ ಹೆಚ್ಚು ಪ್ರಮಾಣದ (ಶೇಕಡಾ 60) ಸಿಟ್ರಸ್ ಅಂಶ ಇರುತ್ತದೆ. ಹೆಚ್ಚು ಖರ್ಚು ಬೇಡದ, ಚಳ್ಳೆಹಣ್ಣಿನಂತೆ ಹುಚ್ಚಾಪಟ್ಟಿ ಹಣ್ಣು ಕೊಡುವ ಈ ಗಿಡ ವರ್ಷಕ್ಕೆ ಒಂದು ಬಾರಿ ಫಲ ನೀಡುತ್ತದೆ.

ಕೊಯ್ಲು ಯಾವಾಗ: ತೇಗದ ಮರವನ್ನು ಸಾಮಾನ್ಯವಾಗಿ 20ರಿಂದ25 ವರ್ಷಕ್ಕೆ ಕಟಾವು ಮಾಡಬಹುದು, ಅರ್ಹ ಅಳತೆಯಲ್ಲಿ ಬೆಳೆದ ಈ ಮರದ 20 ಘನ ಅಡಿಗೆ ₹2,500 ಬೆಲೆಯಿದೆ. ತೇಗ, ಶ್ರೀಗಂಧ, ಬೇವು ಎಲ್ಲ ಮರಗಳು ಒಂದೇ ನೆಲದಲ್ಲಿ ಮಿಶ್ರವಾಗಿ ಬೆಳೆಯುತ್ತಿದ್ದು, ಬಹುತೇಕ 20 ವರ್ಷಗಳ ನಂತರ ಎಷ್ಟು ಲಾಭವಾಗಬಹುದು, ಅಲ್ಲಿಯವರೆಗೆ ಪರಿಸರಕ್ಕೆ ಎಷ್ಟು ಅನುಕೂಲವಾಗಬಹುದು ಎಂಬುದನ್ನು ನೀವೇ ಲೆಕ್ಕ ಹಾಕಿ ಹೇಳಿ ಎನ್ನುತ್ತಾರೆ ಬಳೂಟಗಿ.

ದೇವೇಂದ್ರಪ್ಪ ಅವರು ಸದಾ ಶುಭ್ರ ಧೋತಿ, ನಿಲುವಂಗಿ ತೊಟ್ಟು, ನೋಡಲು, ಮಾತನಾಡಲು ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿ. ಮಣ್ಣಿನ ವಾಸನೆ, ಮಣ್ಣಿನ ಗುಣಧರ್ಮ ಬಲ್ಲವರು. ಅಲ್ಲದೆ ಮಣ್ಣು, ನೀರಿನೊಂದಿಗೆ ಮಾತನಾಡುವಷ್ಟು ಅನುಭವ ಹೊಂದಿದ್ದಾರೆ. ವಿವಿಧ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇಲ್ಲಿಗೆ ನಿತ್ಯ ಬಂದು ಪರಿಸರ ಹಾಗೂ ಅರಣ್ಯದ ಪಾಠ ಕಲಿಯುತ್ತಾರೆ. ಬಂದ ವಿವಿಧ ತಂಡಗಳಿಗೆ ರಮೇಶ ಬೇಸರವಿಲ್ಲದೆ ಅರಣ್ಯ ಸುತ್ತಾಡಿಸಿ ಪರಿಸರ ಪಾಠ ಮಾಡುತ್ತಾರೆ. ಇವರ ಕೃಷಿ ಜಾಡನ್ನೇ ಹಿಡಿದಿರುವ ಅನೇಕ ಯುವ ರೈತರು ಅಲ್ಲಲ್ಲಿ ಅರಣ್ಯ ಕೃಷಿ ಮಾಡುತ್ತಿದ್ದಾರೆ. 

ಹೆಚ್ಚಿನ ಮಾಹಿತಿಗಾಗಿ 9448427678, 9448032743

*


ಪರಿಸರ ಪಾಠಕ್ಕಾಗಿ ಬಂದ ಕಾಲೇಜು ವಿದ್ಯಾರ್ಥಿಗಳ ತಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT