ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಅನಾಹುತ ಮನುಷ್ಯ ನಿರ್ಮಿತ ಯೋಜನೆಗಳು ಸಮರ್ಪಕವಾಗಿರಲಿ

Last Updated 11 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಒಂದು ಸಣ್ಣ ಮಳೆ ಬಂದರೂ ಸಾಕು, ಬೆಂಗಳೂರು ಎಂಬ ಮಹಾನಗರ ನಡುಗಿ ಬಿಡುತ್ತದೆ. ಏಕೆಂದರೆ, ಕಂಡಕಂಡಲ್ಲೆಲ್ಲ ಮಳೆ ನೀರು ನುಗ್ಗುತ್ತದೆ. ತಗ್ಗು ಪ್ರದೇಶಗಳನ್ನು ಮುಳುಗಿಸಿ ಬಿಡುತ್ತದೆ. ಗುಡಿಸಲು, ಕೊಳೆಗೇರಿಗಳಷ್ಟೇ ಅಲ್ಲ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳಿರುವ ಪ್ರದೇಶಗಳೂ ಕೆರೆಗಳಾಗುತ್ತವೆ. ಇದಕ್ಕೆಲ್ಲ ಕಾರಣ, ನೆಲಕ್ಕೆ ಬಿದ್ದ ನೀರು ಇಂಗಲು ಅಥವಾ ಸರಾಗವಾಗಿ ಹರಿದು ಹೋಗಲು ಸಮರ್ಪಕ ವ್ಯವಸ್ಥೆಯೇ ಇಲ್ಲ. ರಾಜಕಾಲುವೆಗಳೆಲ್ಲ ಒತ್ತುವರಿಯಾಗಿವೆ. ಮೋರಿಗಳು, ಕಿರು ಕಾಲುವೆಗಳನ್ನು ತೊಟ್ಟಿಗಳೆಂದು ಭಾವಿಸಿ ಕಸ ಎಸೆಯುವ ಜಾಗ ಮಾಡಿಕೊಂಡಿದ್ದೇವೆ. ಕೆರೆಗಳನ್ನು ಮುಚ್ಚಿ ಬೇರೆ ಬೇರೆ ಉದ್ದೇಶಗಳಿಗೆ ಬಳಸುತ್ತಿದ್ದೇವೆ. ಜಲ ಸಂಗ್ರಹವಾಗಲು ಅವಕಾಶವನ್ನೇ ಕೊಟ್ಟಿಲ್ಲ. ಹೀಗಿರುವಾಗ, ಮಳೆ ನೀರು ರಸ್ತೆ ಮೇಲೆ ಹರಿಯದೇ ಇನ್ನೇನಾದೀತು? ಸಣ್ಣ ಮಳೆಯನ್ನೇ ತಡೆದುಕೊಳ್ಳದ ಈ ನಗರವನ್ನು ಇನ್ನು ದೊಡ್ಡ ಮಳೆ ಮುಳುಗಿಸದೇ ಬಿಡುತ್ತದಾ?

ಈಚಿನ ಒಂದೆರಡು ವಾರಗಳಿಂದ ನಗರದಲ್ಲಿ ನಿತ್ಯ ಎಂಬಂತೆ ಮಳೆ ಸುರಿಯುತ್ತಿದೆ. ಪದೇಪದೇ ಪ್ರವಾಹ ಸೃಷ್ಟಿಯಾಗುತ್ತಿದೆ. ಭಾನುವಾರ ಮೈಸೂರು ರಸ್ತೆಯ ಕಾಲೇಜೊಂದರ ಬಳಿ ಮುಕ್ಕಾಲು ಭಾಗ ನೀರಿನಲ್ಲಿ ಮುಳುಗಿದ್ದ ಬಸ್‌ನ ಪ್ರಯಾಣಿಕರನ್ನು ಪಾರು ಮಾಡಲು ದೋಣಿಗಳನ್ನು ಬಳಸಬೇಕಾಯಿತು ಎನ್ನುವುದು ಪರಿಸ್ಥಿತಿ ಎಷ್ಟು ಗಂಭೀರ ಎನ್ನುವುದಕ್ಕೊಂದು ನಿದರ್ಶನ. ಇಡೀ ನಗರವನ್ನೇ ಕಾಂಕ್ರೀಟ್‌ ಕಾಡಾಗಿ ಪರಿವರ್ತಿಸಿದ್ದರ ಪರಿಣಾಮ ಇದು. ಭಾರತೀಯ ವಿಜ್ಞಾನ ಮಂದಿರದ ಸಂಶೋಧಕರ ವರದಿಯ ಪ್ರಕಾರ ಬೆಂಗಳೂರಿನ ಭೂಪ್ರದೇಶದ ಶೇ 78ರಷ್ಟು ಭಾಗ ಕಾಂಕ್ರೀಟೀಕರಣವಾಗಿದೆ. ಅಂದರೆ ಕಟ್ಟಡಗಳು, ಸಿಮೆಂಟ್‌ ಮೇಲ್ಮೈ, ಟಾರ್‌ ರಸ್ತೆ, ಫುಟ್‌ಪಾತ್‌ಗಳು ಮಣ್ಣಿನ ನೆಲವನ್ನು ಮುಚ್ಚಿಬಿಟ್ಟಿವೆ. ನೀರು ಇಂಗಲು ಜಾಗವೇ ಕಡಿಮೆಯಾಗಿದೆ. ಇವೆಲ್ಲ ನಾವೇ ಸೃಷ್ಟಿಸಿಕೊಂಡಂತಹ ಅವಾಂತರ. ರಾಕ್ಷಸನಂತೆ ಬೆಂಗಳೂರು ಅಡ್ಡಾದಿಡ್ಡಿಯಾಗಿ ಬೆಳೆಯುವುದಕ್ಕಿಂತಲೂ ಮೊದಲು ಇಲ್ಲಿನ ನೀರನ್ನೆಲ್ಲ ವೃಷಭಾವತಿ ನದಿ ತನ್ನ ಒಡಲಲ್ಲಿ ಇಟ್ಟುಕೊಂಡು ಸಾಗಿಸುತ್ತಿತ್ತು. ನಗರದಲ್ಲಿ ಹರಿದುಹೋಗುವ ಆ ಏಕೈಕ ನದಿಯ ದಂಡೆಯುದ್ದಕ್ಕೂ ಅತಿಕ್ರಮಣ ಮಾಡಿ ಕಾಲುವೆ ರೂಪಕ್ಕೆ ಕುಗ್ಗಿಸಿ ದೊಡ್ಡ ಪ್ರಮಾಣದಲ್ಲಿ ನೀರು ಹೊರಹೋಗದಂತೆ ಅಡೆತಡೆ ಉಂಟುಮಾಡಿದ್ದೇವೆ. ಅದರ ಕಹಿ ಫಲವನ್ನು ಈಗ ಉಣ್ಣಬೇಕಾಗಿದೆ.

‘ಓಡುವ ನೀರನ್ನು ತೆವಳುವಂತೆ ಮಾಡಿ; ತೆವಳುವ ನೀರನ್ನು ನಿಲ್ಲುವಂತೆ ಮಾಡಿ; ನಿಂತ ನೀರನ್ನು ಇಂಗುವಂತೆ ಮಾಡಿ’. ನಮ್ಮ ಹಿರಿಯರು, ಜಲತಜ್ಞರು ಹೇಳುತ್ತ ಬಂದ ಈ ಹಿತವಚನವನ್ನು ಮರೆತಿದ್ದೇವೆ. ಅದಕ್ಕೆ ಬದಲಾಗಿ, ‘ಇಂಗಬೇಕಾದ ನೀರನ್ನು ನಿಲ್ಲುವಂತೆ, ನಿಲ್ಲಬೇಕಾದ ನೀರನ್ನು ಓಡುವಂತೆ ಮಾಡಿದ್ದೇವೆ’. ಹೀಗೆ ಓಡುವ ನೀರಿಗೆ ದಾರಿಯೇ ಇಲ್ಲ. ಅದರಿಂದಾಗಿ ನಗರದ ತಗ್ಗುಪ್ರದೇಶಗಳಿಗೆ ಸಹಜವಾಗಿಯೇ ಈ ನೀರು ನುಗ್ಗುತ್ತದೆ.

ಗಮನಿಸಬೇಕಾದ ಒಂದು ಸಂಗತಿ ಎಂದರೆ ಬೆಂಗಳೂರಿನಲ್ಲಿ ಮಳೆ ಅನಾಹುತ ಹಳೆಯ ಬಡಾವಣೆಗಳಿಗಿಂತ ಹೊಸ ಬಡಾವಣೆಗಳಲ್ಲಿಯೇ ಹೆಚ್ಚು. ಕೋರಮಂಗಲ, ಎಚ್‌ಎಸ್‌ಆರ್‌ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಪದೇ ಪದೇ ನೀರು ತುಂಬಿಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ. ಮಳೆಗಾಲದಲ್ಲಿ ಮಳೆ ಬರುವುದು ಸಹಜ. ಅದು ಪ್ರಕೃತಿ ನಿಯಮ. ಮಳೆ ಯಾವಾಗ, ಎಷ್ಟು ಸುರಿಯಬಹುದು ಎಂಬುದನ್ನು ಅಂದಾಜು ಮಾಡುವಷ್ಟು ಈಗ ವಿಜ್ಞಾನ ಮುಂದುವರಿದಿದೆ. ಆದರೂ ಮಳೆ ವಿಕೋಪ ಎದುರಿಸಲು ನಮಗೆ ಕಷ್ಟವಾಗುತ್ತಿದೆ. ಇದು ಸ್ವಯಂಕೃತ ಅಪರಾಧ, ನಾವೇ ಸೃಷ್ಟಿಸಿಕೊಂಡ ಸಮಸ್ಯೆ. ನಗರಗಳು ಬೆಳೆಯುವುದು ಜೀವಂತಿಕೆಯ ಲಕ್ಷಣವೇನೋ ನಿಜ. ಆ ಬೆಳವಣಿಗೆ ವ್ಯವಸ್ಥಿತವಾಗಿ, ಯೋಜನಾಬದ್ಧವಾಗಿ ಇರಬೇಕು. ಆದರೆ ಭ್ರಷ್ಟಗೊಂಡಿರುವ ಆಡಳಿತಶಾಹಿ, ದುರಾಸೆ ನಮ್ಮ ನಗರಗಳ ಯೋಜಿತ ಬೆಳವಣಿಗೆಯನ್ನು ಬುಡಮೇಲು ಮಾಡುತ್ತಿವೆ. ಆದ್ದರಿಂದ ಇಷ್ಟು ದಿನ ಹಾಳು ಮಾಡಿದ್ದು ಸಾಕು. ಇನ್ನಾದರೂ ಮಳೆ ನೀರಿನ ಇಂಗುವಿಕೆ, ಸರಾಗ ಹರಿಯುವಿಕೆಗೆ ಕಾಯಂ ವ್ಯವಸ್ಥೆ ಮಾಡಬೇಕು. ಕೆರೆ, ಕಾಲುವೆ ಒತ್ತುವರಿಯನ್ನು ಮುಲಾಜಿಲ್ಲದೆ ತೆರವು ಗೊಳಿಸಬೇಕು. ಕಾಲುವೆಗಳ ಹೂಳೆತ್ತುವ ಕೆಲಸವನ್ನು ಬೇಸಿಗೆಯಲ್ಲಿಯೇ ಮುಗಿಸಬೇಕು. ಬೆಂಗಳೂರಿನಂತಹ ನಗರದಲ್ಲಿ ಸುರಿಯುವ ಮಳೆ ಬದುಕನ್ನೇ ಏರುಪೇರು ಮಾಡದಂತೆ ತಡೆಯುವುದು ನಮ್ಮ ಕೈಯಲ್ಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT