ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಾಣ ಕೊಡುತ್ತೇವೆ, ಉಪವಾಸ ಕೈಬಿಡೆವು’

Last Updated 12 ಸೆಪ್ಟೆಂಬರ್ 2017, 5:07 IST
ಅಕ್ಷರ ಗಾತ್ರ

ನವಲಗುಂದ: ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿಗಾಗಿ ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಆಮರಣ ಹೋರಾಟ ಸೋಮವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಧರಣಿ ನಿರತ ಏಳು ಜನ ರೈತರಲ್ಲಿ ನಾಲ್ವರ   ಆರೋಗ್ಯದಲ್ಲಿ ಏರುಪೇರಾಗಿದೆ. 

ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಶಶಿಧರ್ ಉಪವಾಸ ನಿರತ ಏಳು ರೈತರ ಆರೋಗ್ಯ ತಪಾಸಣೆ ಮಾಡಿದರು. ಅದರಲ್ಲಿ ಬೆನ್ನಪ್ಪ ಕುರಹಟ್ಟಿ, ಶಿವಪ್ಪ ಸಂಗಟಿ, ರವಿ ಪಾಟೀಲ, ಸಂಗಪ್ಪ ನಿಡವಣಿ ಅವರ ದೇಹದಲ್ಲಿ ನೀರಿನಾಂಶ ಕಡಿಮೆಯಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸಲಹೆ ನೀಡಿದರು.  

ಆದರೆ, ಉಪವಾಸ ನಿರತ ರೈತರು ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿ, ‘ನೀರಿಗಾಗಿ ನಮ್ಮ ಪ್ರಾಣ ಕೊಡುತ್ತೇವೆ, ಆದರೆ, ಉಪವಾಸ ಕೈಬಿಡುವುದಿಲ್ಲ’ ಎಂದು ಪಟ್ಟು ಹಿಡಿದರು.  ಸರ್ಕಲ್‌ ಇನ್‌ಸ್ಪೆಕ್ಟರ್‌ ಪಿ.ಎಂ.ದಿವಾಕರ ಅವರು, ರೈತರನ್ನು ಆಸ್ಪತ್ರೆಗೆ ದಾಖಲಿಸಲು ಸಂಜೆವರೆಗೂ ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ.

ಜಗ್ಗದ ಹೋರಾಟಗಾರ: ಆಮರಣ ಉಪವಾಸ ಕೈಬಿಡುವಂತೆ ರೈತ ರವಿಗೌಡ ಪಾಟೀಲಗೆ ಅವರ ಪತ್ನಿ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಲಿಲ್ಲ. ಉಪವಾಸ ಮುಂದುವರಿಸುವುದಾಗಿ ರವಿಗೌಡ ಹಟ ತೊಟ್ಟರು.

ಉಪವಾಸ ಕೈಬಿಟ್ಟ ಬಸಯ್ಯ: ಉಪವಾಸ ಕೈಬಿಡುವಂತೆ ಬಸಯ್ಯ ಮಠಪತಿಗೆ ಅವರ ತಾಯಿ ಬೇಡಿಕೊಂಡರು. ಬಳಿಕ ಮಠಪತಿ ಅವರ ತಾಯಿಯ ಆರೋಗ್ಯದಲ್ಲಿ ತೀವ್ರ ಏರುಪೇರಾದ ಕಾರಣ ಅವರನ್ನು ಹುಬ್ಬಳ್ಳಿ ಎಸ್.ಡಿ.ಎಂ.ಆಸ್ಪತ್ರೆಗೆ ದಾಖಲಿಸಲಾಯಿತು. ಪೊಲೀಸರು ಮತ್ತು ಪಕ್ಷಾತೀತ ಹೋರಾಟ ಸಮಿತಿಯವರು ಮನವೊಲಿಸಿದ ಬಳಿಕ ಬಸಯ್ಯ ಮಠಪತಿ ಉಪವಾಸ ಕೈಬಿಟ್ಟು, ತಾಯಿಯ ಭೇಟಿಗೆ ಹುಬ್ಬಳ್ಳಿಗೆ ತೆರಳಿದರು. 

ವಾಟಾಳ್‌ ಭೇಟಿ ಇಂದು:  ಇದೇ 12ರಂದು ಕನ್ನಡಪರ ಚಳವಳಿ ಹೋರಾಟಗಾರ ವಾಟಾಳ್ ನಾಗರಜ್, ಗಿರೀಶಗೌಡ ಹಾಗೂ ಸಾ.ರಾ.ಗೋವಿಂದ ನವಲಗುಂದಕ್ಕೆ ಭೇಟಿ ನೀಡಿ, ಹೋರಾಟಗಾರರನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ. ಉಪವಾಸ ನಿರತ ರೈತರ ಆರೋಗ್ಯ ತಪಾಸಣೆಗಾಗಿ ವೈದ್ಯರು ಸ್ಥಳದಲ್ಲಿಯೇ ಆಂಬುಲೆನ್ಸ್‌ ಸಮೇತ ಸ್ಥಳದಲ್ಲಿ ಇದ್ದಾರೆ.

ಪ್ರಾಣ ಕೊಡಲು ಸಿದ್ಧ: ‘ಆಮರಣ ಉಪವಾಸ ನಿರತರ ಜೊತೆ ನಾವು ಕೂಡ ಪ್ರಾಣ ಕೊಡಲು ಸಿದ್ಧರಾಗಿದ್ದೇವೆ’ ಎಂದು ಪಕ್ಷಾತೀತ ಹೋರಾಟ ಸಮಿತಿಯ ಅಧ್ಯಕ್ಷ ಲೋಕನಾಥ ಹೆಬಸೂರ ಹೇಳಿದರು.

ಮನೆ ಎದುರು ಧರಣಿ: ಬಿ.ಜೆ.ಪಿ ನಗರ ಘಟಕದ ಅಧ್ಯಕ್ಷ ಎನ್.ಪಿ.ಕುಲಕರ್ಣಿ ಅವರ ಮನೆ ಮುಂದೆ ಸೋಮವಾರ ಧರಣಿ ನಡೆಸಿದ ಪ್ರತಿಭಟನಾಕಾರರು, ಮಹದಾಯಿ ಪ್ರಕರಣ ಬಗೆಹರಿಸಲು ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT