ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಗೂರು ಪ್ರಾಥಮಿಕ ಶಾಲೆಗೆ ‘ಅತ್ಯುತ್ತಮ ಪ್ರಶಸ್ತಿ’

Last Updated 12 ಸೆಪ್ಟೆಂಬರ್ 2017, 5:30 IST
ಅಕ್ಷರ ಗಾತ್ರ

ನಿಡಗುಂದಿ: ಕೃಷ್ಣಾ ನದಿ ಹಿನ್ನೀರಿನಿಂದ ಮುಳುಗಡೆಯಾಗಿ ಪುನರ್‌ನೆಲೆಕಂಡ ಸಂತ್ರಸ್ತ ಮಕ್ಕಳ ಶಿಕ್ಷಣದ ಅಭಿವೃದ್ಧಿಯೇ ಗುರಿಯಾಗಿಟ್ಟುಕೊಂಡಿರುವ ನಿಡಗುಂದಿ ಒಡಲಾಳದಲ್ಲಿರುವ ಮಣಗೂರು ಪುನರ್ವಸತಿ ಕೇಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈ ವರ್ಷದ ‘ಬಸವನಬಾಗೇವಾಡಿ ತಾಲ್ಲೂಕು ಮಟ್ಟದ ಕನ್ನಡ ಮಾಧ್ಯಮದ ಅತ್ಯುತ್ತಮ ಶಾಲೆ’ ಪ್ರಶಸ್ತಿ ಲಭಿಸಿದೆ.

ಈಚೆಗೆ ಬಸವನಬಾಗೇವಾಡಿಯಲ್ಲಿ ನಡೆದ ಶಿಕ್ಷಕರ ದಿನೋತ್ಸವ ಕಾರ್ಯ ಕ್ರಮದಲ್ಲಿ ಶಾಸಕ ಶಿವಾನಂದ ಪಾಟೀಲ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಸಹಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಜನತೆಯ ನಡುವೆಯೇ, ಖಾಸಗಿ ಶಾಲೆಗಳ ಪೈಪೋಟಿಯ ಮಧ್ಯೆಯೂ ಈ ಶಾಲೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತನ್ನದೇ ಆದ ಸಾಧನೆ ಮಾಡಿದ್ದು ವಿಶೇಷ. ಹೆಚ್ಚಾಗಿ ಸಂತ್ರಸ್ತ ಮಕ್ಕಳೇ ಶಿಕ್ಷಣ ಪಡೆಯುತ್ತಿರುವ ಈ ಶಾಲೆಯ ಹೊರ ನೋಟ ಎಷ್ಟು ಚೆಂದವಿದೆಯೋ ಅಷ್ಟೇ ಗುಣಾತ್ಮಕ ಶಿಕ್ಷಣ ಇಲ್ಲಿ ನೀಡಲಾಗುತ್ತಿದೆ..

ಶಾಲಾ ಪಠ್ಯದ ಜೊತೆಗೆ ಗಣಕಯಂತ್ರ ಶಿಕ್ಷಣವೂ ನಿತ್ಯ ಇಲ್ಲಿ ನೀಡುತ್ತಿರುವುದು ಈ ಶಾಲೆಯ ವೈಶಿಷ್ಟ್ಯ, ಸರ್ಕಾರಿ ಪಠ್ಯೇತರ ಕಾರ್ಯ ಕ್ರಮಗಳಾದ ಪ್ರತಿಭಾಕಾರಂಜಿ, ಕ್ರೀಡಾಕೂಟ, ಕಲಿಕೋತ್ಸವ ಸೇರಿದಂತೆ ನಾನಾ ಕಾರ್ಯಕ್ರಮಗಳು ಆಯೋಜಿಸುವಲ್ಲಿಯೂ, ಅದರಲ್ಲಿ ವಿಜೇತರಾಗುವು ದರಲ್ಲಿಯೂ ಈ ಶಾಲೆ ಮುಂದು.

ಶಾಲೆಯ ಮುಖ್ಯಶಿಕ್ಷಕ ಎಂ.ಜಿ. ಪತ್ತಾರ ನೇತೃತ್ವದ 7 ಜನ ಶಿಕ್ಷಕ ತಂಡ ಸದಾ ಹಸನ್ಮುಖಿಯಾಗಿ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಶಾಲಾ ಮಕ್ಕಳ ನೀರು, ಶೌಚಗ್ರಹದ ಶುಚಿತ್ವ, ರುಚಿಯಾದ ಬಿಸಿಯೂಟ ಈ ಶಾಲೆಯಲ್ಲಿ ನೀಡಲಾಗುತ್ತಿದೆ.

ಶಾಲೆಯ ಸುತ್ತಲಿನ ಆವರಣ ಸಂಪೂರ್ಣ ನಿಸರ್ಗಮಯವನ್ನಾಗಿ ರೂಪಿಸುವಲ್ಲಿ ವಿದ್ಯಾರ್ಥಿಗಳನ್ನು ನಿತ್ಯ ಕಾರ್ಯತತ್ಪರನ್ನಾಗಿ ಇಲ್ಲಿನ ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಿದ್ದು ಇತರ ಶಾಲೆಗಳಿಗೆ ಮಾದರಿಯಾಗಿದೆ. ಶಾಲೆಯ ಸುತ್ತ ತೆಂಗಿನ ಸಸಿಗಳು, ಜತೆಗೆ ಅಶೋಕ ವೃಕ್ಷ, ತೆಂಗು, ಪಪ್ಪಾಯಿ, ಬದಾಮಿ, ನುಗ್ಗೆ ಸೇರಿದಂತೆ ವಿವಿಧ ಮರಗಳ ಜೊತೆಗೆ ಸಸಿಗಳಿಂದ ಉದ್ಯಾನ ನಿರ್ಮಿಸಿ, ಹಸರೀಕರಣಕ್ಕೆ ಆದ್ಯತೆ ನೀಡಲಾಗಿದೆ.ನಿಸರ್ಗಮಯ ಶಾಲೆ, ಸ್ನೇಹಮಯ ವಾತಾವರಣ ರೂಪಿಸಿದ್ದು ಶಿಕ್ಷಣಪ್ರೇಮಿ ಗಳನ್ನು ಕೈ ಮಾಡಿ ಕರೆಯುವಂತೆ ರೂಪುಗೊಂಡಿದೆ.

ಜೊತೆಗೆ ಶಾಲಾ ಕೈ ತೋಟದಲ್ಲಿ ನಿತ್ಯ ಬಿಸಿಯೂಟಕ್ಕೆ ಅಗತ್ಯವಿರುವ ಕರಿಬೇವು, ನುಗ್ಗೆ, ಪಾಲಕ ಸೇರಿದಂತೆ ಹಲವು ಬಗೆಯ ತರಕಾರಿ ಗಳನ್ನೂ ಸಹ ಇಲ್ಲಿ ಬೆಳೆಯಲಾಗುತ್ತಿದೆ. ಸರ್ಕಾರಿ ಶಾಲೆ ಬಗ್ಗೆ ಇರುವ ಅಸಡ್ಡೆಯ ಮನೋಭಾವವನ್ನು ಈ ಶಾಲೆ ಹೋಗಲಾಡಿಸಿದೆ.

* * 

‘ಅತ್ಯುತ್ತಮ ಶಾಲೆ’ ಪ್ರಶಸ್ತಿ ಲಭಿಸಲು ಶಾಲೆಯ ಶಿಕ್ಷಕರು, ಪಾಲಕರ ಸಹಕಾರ ಹಾಗೂ ಮಕ್ಕಳ ಪರಿಶ್ರಮವೇ ಕಾರಣ
ಎಂ.ಜಿ. ಪತ್ತಾರ
ಮುಖ್ಯ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT