ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಸಮೃದ್ಧಿ; ತೊಗರಿಗೆ ಜೀವಕಳೆ

Last Updated 12 ಸೆಪ್ಟೆಂಬರ್ 2017, 5:43 IST
ಅಕ್ಷರ ಗಾತ್ರ

ವಿಜಯಪುರ: ‘ಮಘೆ–ಹುಬ್ಬಿ’ ಮಳೆ ಜಿಲ್ಲೆಯ ವ್ಯಾಪ್ತಿಯಲ್ಲಿ ಧಾರಾಕಾರವಾಗಿ ಸುರಿದಿದ್ದು, ರೈತ ಸಮೂಹದ ನಿರೀಕ್ಷೆಯನ್ನು ನೂರ್ಮಡಿ ಹೆಚ್ಚಿಸಿವೆ. ನೀರಿಲ್ಲದೆ ಭಣಗುಡುತ್ತಿದ್ದ ಬಹುತೇಕ ಕೆರೆಯಂಗಳ ಮಳೆ ನೀರಿನಿಂದ ಆವೃತಗೊಂಡಿದೆ. ಹಲ ವರ್ಷಗಳಿಂದ ಮೈದುಂಬಿ ಹರಿಯದ ಹಳ್ಳಗಳೂ ತುಂಬಿ ಹರಿದಿವೆ. ಏಕಕಾಲದಲ್ಲಿ ಬಹು ವರ್ಷಗಳ ಬಳಿಕ ಕೃಷ್ಣೆ, ಭೀಮೆ, ಡೋಣಿ ಜಿಲ್ಲೆಯಲ್ಲಿ ಮೈದುಂಬಿ ಹರಿದಿದ್ದು, ಜನರ ಸಂತಸ ಇಮ್ಮಡಿಗೊಳಿಸಿದೆ.

ಜೂನ್‌ನಲ್ಲಿ ಮಿರಗಾ ಅಬ್ಬರದಿಂದ ಸಂತಸಗೊಂಡು ಮುಂಗಾರು ಬಿತ್ತಿದ್ದ ರೈತರು ಜುಲೈನಲ್ಲಿ ಮೇಘರಾಜನ ಮುನಿಸಿನಿಂದ ತತ್ತರಿಸಿದ್ದರು. ಇದೇ ಮೊಲದ ಬಾರಿಗೆ ವ್ಯಾಪಕ ಪ್ರಮಾಣದಲ್ಲಿ ಹೆಸರು– ಉದ್ದು ಬಿತ್ತಿ ಕೈಸುಟ್ಟುಕೊಂಡರು. 23,000 ಹೆಕ್ಟೇರ್‌ ಪ್ರದೇಶದಲ್ಲಿನ ಹೆಸರು–ಉದ್ದು ಬೆಳೆ ಸಂಪೂರ್ಣ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಜಿಲ್ಲೆಯ ವ್ಯಾಪ್ತಿಯಲ್ಲಿ ಮುಂಗಾರು ಆರಂಭದ ದಿನಗಳಲ್ಲಿ ಅಬ್ಬರಿಸಿದ್ದರಿಂದ ಶೇ 103ರಷ್ಟು ಬಿತ್ತನೆ ನಡೆದಿತ್ತು. ಕೃಷಿ ಇಲಾಖೆಯ 4.30 ಲಕ್ಷ ಹೆಕ್ಟೇರ್ ಗುರಿಗೆ 4.42 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ನಡೆದಿತ್ತು. ಜುಲೈನಲ್ಲಿನ ಮಳೆ ಕೊರತೆ ಹೆಸರು, ಉದ್ದಿಗೆ ಸಾಕಷ್ಟು ಹೊಡೆತ ನೀಡಿತು ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಚೇತರಿಕೆ: ‘ಆಗಸ್ಟ್‌ನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆ ಸುರಿದ ಪರಿಣಾಮ ಬಾಡುತ್ತಿದ್ದ ಮುಂಗಾರು ಬೆಳೆಗಳಾದ ತೊಗರಿ, ಸಜ್ಜೆ, ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ ಚೇತರಿಸಿಕೊಂಡಿವೆ.

ಸಮೃದ್ಧಿಯ ಬೆಳೆಗೆ ಪೂರಕವಾದ ವರ್ಷಧಾರೆಯಾಗಿದ್ದರಿಂದ 4, 5000 ಹೆಕ್ಟೇರ್‌ನಲ್ಲಿನ ಮೆಕ್ಕೆಜೋಳ ತೆನೆ ಬಲಿತು ಹಲವೆಡೆ ಕೊಯ್ಲಿಗೆ ಬಂದಿದೆ. ಉಳಿದೆಡೆ ಕಾಳು ಬಲಿಯುತ್ತಿವೆ. 27,000 ಹೆಕ್ಟೇರ್‌ನಲ್ಲಿನ ಸಜ್ಜೆ 15 ದಿನಗಳ ಹಿಂದೆಯೇ ತೆನೆ ಮೂಡಿದ್ದು, ಕಾಳು ಕಟ್ಟುವ ಹಂತದಲ್ಲಿದೆ.

24,000 ಹೆಕ್ಟೇರ್‌ನಲ್ಲಿರುವ ಶೇಂಗಾ ಕಾಯಿ ಕಟ್ಟಿದ್ದು, ಬಲಿಯುವ ಹಂತದಲ್ಲಿದೆ. ಮಳೆಯ ಕೊರತೆಯಿಂದ ಬಾಡಿದ್ದ ಸೂರ್ಯಕಾಂತಿ ಇದೀಗ ಚೇತರಿಕೆಯ ಹಾದಿಯಲ್ಲಿದೆ. ನೀರಾವರಿ ಆಸರೆಯಲ್ಲಿ ತಲಾ 10,000 ಹೆಕ್ಟೇರ್‌ನಲ್ಲಿರುವ ಕಬ್ಬು, ಹತ್ತಿ ಸದೃಢ ಬೆಳವಣಿಗೆಯ ಹಂತದಲ್ಲಿದೆ’ ಎಂದು  ಕೃಷಿ ಇಲಾಖೆಯ ತಾಂತ್ರಿಕ ವಿಭಾಗದ ಅಧಿಕಾರಿ ಎ.ಪಿ.ಬಿರಾದಾರ ಹೇಳಿದರು.

ಸದೃಢ: ‘ಜಿಲ್ಲೆಯ 2.70 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆಯಾಗಿದ್ದ ತೊಗರಿ ಜುಲೈನಲ್ಲಿ ಮಳೆ ಕೊರತೆಯಿಂದ ಬಾಡಿತ್ತು. ಆಗಸ್ಟ್‌ 12 ರಿಂದ ಮೇಘರಾಜನ ಕೃಪೆ ಹೆಚ್ಚಿನ ಪ್ರಮಾಣ ದಲ್ಲಿ ಆದ ಪರಿಣಾಮ ಇದೀಗ ಎಲ್ಲೆಡೆ ಸದೃಢವಾಗಿ ಬೆಳವಣಿಗೆಯ ಹಂತ ದಲ್ಲಿದ್ದು ಹಸಿರಿನಿಂದ ನಳನಳಿಸುತ್ತಿದೆ’ ಎಂದು ಬಿರಾದಾರ ತಿಳಿಸಿದರು.

‘ತೊಗರಿ ದೀರ್ಘಾವಧಿ ಬೆಳೆ. ಜೂನ್‌ ಅಂತ್ಯ, ಜುಲೈ ಮೊದಲಾರ್ಧದಲ್ಲಿ ಹಿಂದಿನ ಹಸಿಗೆ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿತ್ತು. ಸೆಪ್ಟೆಂಬರ್‌ ಅಂತ್ಯದ ಅವಧಿಯಲ್ಲಿ ಗಿಡಗಳಲ್ಲಿ ಹೂವು ಮೂಡಲಿದೆ’ ಎಂದು ಅವರು ಹೇಳಿದರು.

‘ಬೆಳವಣಿಗೆ ಹಂತದಲ್ಲಿ ಮಳೆ ಕೊರತೆಯಾದರೆ ಅಷ್ಟೇನು ದುಷ್ಪರಿ ಣಾಮ ಬೀರುವುದಿಲ್ಲ. ಹೂವಾದ ಬಳಿಕ ಕಾಳು ಬಲಿಯುವ ತನಕ ತೇವಾಂಶ ಕೊರತೆಯಾಗಬಾರದು. ಸಕಾಲಕ್ಕೆ ಮಳೆಯಾಗದಿದ್ದರೂ ವಾತಾವರಣ ದಲ್ಲಿನ ತೇವಾಂದ ಒಣಗದಿದ್ದರೆ, ಮಾತ್ರ ಬಂಪರ್ ಇಳುವರಿ ಸಿಗುತ್ತದೆ’ ಎಂದು ತಿಳಿಸಿದರು.

ಅಂಕಿ–ಅಂಶ
2.70 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆ

45000 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ

27000 ಹೆಕ್ಟೇರ್‌ನಲ್ಲಿ ಸಜ್ಜೆ

24000 ಹೆಕ್ಟೇರ್‌ನಲ್ಲಿ ಶೇಂಗಾ

* * 

ತೊಗರಿ ಬಿತ್ತನೆಯ 90 ದಿನದ ಬಳಿಕ ಹೂವಾಗಲಿದೆ. ಹೂವಿನ ಹಂತದಿಂದ ಕಾಯಿ ಬಲಿಯುವವರೆಗೂ ತೇವಾಂಶ ಕೊರತೆಯಾಗದಿದ್ದರೆ ಉತ್ತಮ ಇಳುವರಿ ದೊರೆಯಲಿದೆ
ಎ.ಪಿ.ಬಿರಾದಾರ
ಕೃಷಿ ಇಲಾಖೆಯ ತಾಂತ್ರಿಕ ವಿಭಾಗದ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT