ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನ ಹಳೇ ತೋಟಕ್ಕೆ ಪುನಶ್ಚೇತನ

Last Updated 12 ಸೆಪ್ಟೆಂಬರ್ 2017, 6:19 IST
ಅಕ್ಷರ ಗಾತ್ರ

ಹಾವೇರಿ: ತಾಲ್ಲೂಕಿನ ಬೊಮ್ಮನಕಟ್ಟಿಯ ಪ್ರಗತಿಪರ ರೈತ ಶಾಂತವೀರಪ್ಪ ಹಳ್ಳಿಕೇರಿ ಮಾವಿನ ತೋಟದಲ್ಲಿ ಇದೇ 12ರಂದು ‘ಮಾವು ಸವರುವಿಕೆ, ಪುನಶ್ಚೇತನ ಮತ್ತು ಮಾರುಕಟ್ಟೆ’ ವಿಚಾರ ಸಂಕಿರಣ ನಡೆಯಲಿದೆ.

ನಗರದಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ತೋಟಗಾರಿಕೆ ಉಪನಿರ್ದೇಶಕ ಎಸ್.ಪಿ. ಭೋಗಿ, ‘ಜಿಲ್ಲೆಯಲ್ಲಿ ಮಾವಿನ ಬೆಳೆಗೆ ಉತ್ತೇಜನ ನೀಡಲು ಇಲಾಖೆಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಇಲ್ಲಿನ ಹಲವಾರು ಮಾವಿನ ತೋಟಗಳು ಸುಮಾರು 2ರಿಂದ 3 ದಶಕಗಳನ್ನು ಪೂರೈಸಿದ್ದು,  ಸವರುವಿಕೆ ಹಾಗೂ ಪುನಶ್ಚೇತನ ಅಗತ್ಯ ವಾಗಿದೆ. ಅಲ್ಲದೇ, ಬೆಳೆದ ಉತ್ಪನ್ನಗಳ ಮಾರುಕಟ್ಟೆ ಕುರಿತು ರೈತರಿಗೆ ಸೂಕ್ತ ತಾಂತ್ರಿಕ ತರಬೇತಿ ನೀಡಬೇಕಾಗಿದೆ. ಹೊಸ ಬೆಳೆಗಾರರಿಗೂ ಅಗತ್ಯ ಮಾಹಿತಿ ನೀಡುವ ಸಲುವಾಗಿ ಮಾವಿನ ತೋಟ ದಲ್ಲಿಯೇ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದ್ದೇವೆ’ ಎಂದರು.

‘ಅಂದು ಬೆಳಿಗ್ಗೆ 11ಕ್ಕೆ  ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಉದ್ಘಾಟಿಸುವರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಅಧ್ಯಕ್ಷತೆ ವಹಿಸುವರು. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಾರಕಟ್ಟೆ ನಿಗಮದ ಅಧ್ಯಕ್ಷ ಎಲ್‌. ಗೋಪಾಲಕೃಷ್ಣ ತಾಂತ್ರಿಕ ಮಾಹಿತಿ ಕುರಿತ ಕೈಪಿಡಿ ಬಿಡುಗಡೆ ಮಾಡುವರು. ದೇವಿಹೊಸೂರಿನ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ. ಟಿ.ಬಿ. ಅಲ್ಲೋಳ್ಳಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಪ್ರಭುದೇವ  ಅಜ್ಜಪ್ಪಳವರ ಮತ್ತು ಅಬ್ದುಲ್‌ ಕರೀಂ ಎಂ. ಉಪನ್ಯಾಸ ನೀಡುವರು. ವಿಚಾರಸಂಕಿರಣವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದ ಹೇಳಿದರು.  

ಜಿಲ್ಲೆಯಲ್ಲಿ ಮಾವು: ‘ಜಿಲ್ಲೆಯಲ್ಲಿ ವರದಾ ನದಿ ತೀರದಲ್ಲಿ ಮಾವಿನ ಬೆಳೆ ಹೆಚ್ಚಿದೆ. ಹೀಗಾಗಿ ಜಿಲ್ಲಾಡಳಿತವು ‘ವರದಾ ಗೋಲ್ಡ್‌’ ಬ್ರಾಂಡ್ ಅಡಿಯಲ್ಲಿ ಜಿಲ್ಲೆಯ ಮಾವನ್ನು ಮಾರುಕಟ್ಟೆ ಮಾಡಲು ಉತ್ತೇಜಿಸುತ್ತಿದೆ’ ಎಂದರು.

‘ಜಿಲ್ಲೆಯಲ್ಲಿನ ಒಟ್ಟು ಸುಮಾರು ಒಂದು ಲಕ್ಷ ಹೆಕ್ಟೇರ್ ತೋಟಗಾರಿಕಾ ಬೆಳೆಗಳ ಪೈಕಿ, ಐದು ಸಾವಿರ ಹೆಕ್ಟೇರ್‌ನಲ್ಲಿ ಮಾವಿನ ತೋಟವಿದೆ. ವಾರ್ಷಿಕ ಒಂದು ಲಕ್ಷ ಟನ್ ಇಳುವರಿ ಬರುತ್ತಿದೆ. ಶೇ 90ರಷ್ಟು ಆಪೋಸ್‌ ತಳಿ ಬೆಳೆಯಲಾಗುತ್ತಿದ್ದು, ಅರಬ್‌ ರಾಷ್ಟ್ರಗಳು, ಮುಂಬಯಿ, ಕೋಲ್ಕತ್ತಾ ಮತ್ತಿತರ ಮಾರುಕಟ್ಟೆಗಳಿಗೆ ಜಿಲ್ಲೆಯಿಂದ ಮಾವು ರಫ್ತು ಆಗುತ್ತಿದೆ. ಈ ಮಾವನ್ನು ತಿನ್ನಲು (ಟೇಬಲ್ ಯೂಸ್) ಹೆಚ್ಚಾಗಿ ಬಳಸಲಾಗುತ್ತಿದೆ. ಸಾಂಪ್ರದಾಯಿಕ ಮಾವಿನ ತಳಿಗಳನ್ನು ಅಭಿವೃದ್ಧಿ ಪಡಿಸಲೂ ರೈತರಿಗೆ ಉತ್ತೇಜನ ನೀಡಲಾಗುತ್ತಿದೆ’ ಎಂದರು. 

‘ಮಾವಿಗೆ ಮೌಲ್ಯವರ್ಧಿತ ಬೆಲೆ ದೊರಕಿಸಲು ಇಲಾಖೆ ಮೂಲಕ ‘ಮಾವು ರೈತ ಉತ್ಪಾದಕ ಸಂಸ್ಥೆ’ಯನ್ನು ಕಂಪೆನಿ ಕಾಯಿದೆ ಅಡಿ ನೋಂದಣಿ ಮಾಡಿಸಿದ್ದೇವೆ. ಈ ಸಂಸ್ಥೆಯ ಮೂಲಕ ಮಾವು ಹಾಗೂ ಮಾವಿನ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವ ಉದ್ದೇಶವಿದೆ’ ಎಂದರು. ‘ಕೃಷಿ  ಮತ್ತು ಸಂಸ್ಕರಿತ ಆಹಾರ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ಮೂಲಕ ಜಿಲ್ಲೆಯ ಮಾವಿಗೆ ಬೇಡಿಕೆ ಹಾಗೂ ಬೆಲೆ ಬರುವಂತೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ಹಾವೇರಿ ತಾಲ್ಲೂಕಿನಲ್ಲಿ 2 ಮಾವು ದಾಸ್ತಾನು ಶೈತ್ಯಾಗಾರ ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರಗತಿಪರ ರೈತ ನಾಗಪ್ಪ ಮುದ್ದಿಯವರು ಒಂದು ಶೈತ್ಯಾಗಾರ ಸ್ಥಾಪಿಸಲು ಮುಂದಾಗಿದ್ದಾರೆ. ಇನ್ನೊಂದನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಹಯೋಗದ ಜೊತೆ ನಿರ್ಮಿಸಲು ಇಲಾಖೆ ಪ್ರಯತ್ನ ನಡೆಸುತ್ತಿದೆ’ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಬಿ.ಎನ್. ಬರೇಗಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT