ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಮನೆಯಂತಾದ ಹಂಪಿ ಕನ್ನಡ ವಿ.ವಿ

Last Updated 12 ಸೆಪ್ಟೆಂಬರ್ 2017, 6:33 IST
ಅಕ್ಷರ ಗಾತ್ರ

ಹೊಸಪೇಟೆ: ನಾಡಿನ ಸಾಕ್ಷಿಪ್ರಜ್ಞೆಯಾಗಿ ಕೆಲಸ ಮಾಡುತ್ತಿರುವ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಒಂದು ವಾರದಿಂದ ಬಿಡುವಿಲ್ಲದೇ ವಿಶ್ವವಿದ್ಯಾಲಯದಲ್ಲಿ ಸಿದ್ಧತಾ ಕೆಲಸಗಳು ಭರದಿಂದ ನಡೆದಿವೆ. ಸೋಮವಾರ ಅಂತಿಮ ಹಂತದ ಕೆಲಸ ನಡೆದವು. ಆಡಳಿತಾಂಗ, ಅಕ್ಷರ ಗ್ರಂಥಾಲಯ ಸೇರಿದಂತೆ ಪ್ರಮುಖ ಕಚೇರಿಗಳಿಗೆ ಬಣ್ಣ ಬಳಿಯಲಾಗಿದೆ. ಅವುಗಳ ಗೋಡೆಗಳ ಮೇಲೆ ಸಾಂಪ್ರದಾಯಿಕ ಶೈಲಿಯಲ್ಲಿ ಚಿತ್ರ ಬಿಡಿಸಲಾಗಿದೆ.

ಕುಡಿಕೆಗಳ ಮೇಲೆ ಚಿತ್ರ ಬಿಡಿಸಿ ಅಲ್ಲಲ್ಲಿ ಇಡಲಾಗಿದೆ. ವಿ.ವಿ.ಆವರಣದಲ್ಲಿರುವ ಎಲ್ಲ ರಸ್ತೆಗಳಿಗೂ ಬಣ್ಣ ಬಳಿಯಲಾಗಿದೆ. ಅಷ್ಟೇ ಅಲ್ಲ, ಎಲ್ಲ ಕಟ್ಟಡಗಳು, ರಸ್ತೆಗಳಿಗೆ ವಿದ್ಯುದ್ದೀಪಲಂಕಾರ ಮಾಡಲಾಗಿದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಇಡೀ ವಿ.ವಿ. ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ವಿಶ್ವವಿದ್ಯಾಲಯದ ಪ್ರಸಾರಾಂಗ ಕಚೇರಿ ಎದುರಿನ ಮೈದಾನದಲ್ಲಿ ಬೆಳ್ಳಿಹಬ್ಬದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸುಮಾರು ಐದು ಸಾವಿರ ಜನ ಕುಳಿತುಕೊಂಡು ಕಾರ್ಯಕ್ರಮ ವೀಕ್ಷಿಸಲು ಬೃಹತ್‌ ಪೆಂಡಾಲ್‌ ಹಾಕಲಾಗಿದೆ. ಸಂಜೆ 5ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳ್ಳಿಹಬ್ಬ ಸಮಾರಂಭಕ್ಕೆ ಚಾಲನೆ ಕೊಡುವರು. ಅದೇ ವೇದಿಕೆ ಮೇಲೆ ‘ನುಡಿ’ ತರಗತಿಗಳ ಕಟ್ಟಡ, ಹೆಣ್ಣುಮಕ್ಕಳ ವಸತಿನಿಲಯದ ಕಟ್ಟಡ, ಚರಿತ್ರೆ ಅಧ್ಯಯನ ವಿಭಾಗ, ಬುಡಕಟ್ಟು ಅಧ್ಯಯನ ವಿಭಾಗದ ಕಟ್ಟಡ ಉದ್ಘಾಟಿಸುವರು.

ಬೆಳ್ಳಿಹಬ್ಬದ ನಿಮಿತ್ತ ಅಂಚೆ ಕಚೇರಿಯ ಸಹಭಾಗಿತ್ವದಲ್ಲಿ ಹೊರತಂದಿರುವ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡು ವರು. 25 ವರ್ಷ ಪೂರೈಸಿರುವುದರಿಂದ ಸಾಂಕೇತಿಕವಾಗಿ 25 ಪುಸ್ತಕಗಳನ್ನು ಬಿಡುಗಡೆಗೊಳಿಸುವರು. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌, ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ, ಹಿರಿಯ ಸಾಹಿತಿಗಳಾದ ಪಾಟೀಲ ಪುಟ್ಟಪ್ಪ, ಚಂದ್ರಶೇಖರ ಕಂಬಾರ ಪಾಲ್ಗೊಳ್ಳುವರು. ಇಷ್ಟೇ ಅಲ್ಲ, ವಿ.ವಿ.ಯನ್ನು ಕಟ್ಟಿ ಬೆಳೆಸಿದ ಹಿಂದಿನ ಕುಲಪತಿಗಳು, ಕುಲಸಚಿವರು, ನಾಡಿನ ಸಾಹಿತಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗುವರು.

ಇದಕ್ಕೂ ಮುನ್ನ ಆಡಳಿತಾಂಗ ಕಚೇರಿಯಿಂದ ವೇದಿಕೆಯ ವರೆಗೆ ಜಾನಪದ ಕಲಾ ತಂಡಗಳಿಂದ ಮೆರ ವಣಿಗೆ ನಡೆಯಲಿದೆ. ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ, ಕುಲಸಚಿವ ಡಿ. ಪಾಂಡುರಂಗಬಾಬು ಸೇರಿದಂತೆ ವಿಶ್ವವಿದ್ಯಾಲಯದ ಎಲ್ಲ ಸಿಬ್ಬಂದಿ ಖಾದಿ ವಸ್ತ್ರತೊಟ್ಟು, ಮೆರವಣಿಗೆಯಲ್ಲಿ ಹೆಜ್ಜೆ ಹಾಕುವರು.

ಕಾರ್ಯಕ್ರಮದ ನಿಮಿತ್ತ ಭುವನ ವಿಜಯ ಸಭಾಂಗಣದಲ್ಲಿ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. 1991 ರಿಂದ ಇಲ್ಲಿಯವರೆಗೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಗಣ್ಯರ ಛಾಯಾಚಿತ್ರಗಳು ಪ್ರದರ್ಶನದಲ್ಲಿ ಇರಲಿವೆ. ಅದರ ಮಗ್ಗುಲಲ್ಲೇ ವಿ.ವಿ. ಪ್ರಸಾರಾಂಗದಿಂದ ಪ್ರಕಟಿಸಿರುವ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡ ಲಾಗಿದೆ. ಬೆಳ್ಳಿಹಬ್ಬದ ಅಂಗವಾಗಿ ಎಲ್ಲ ಪುಸ್ತಕಗಳನ್ನು ಶೇ. 50ರ ರಿಯಾಯಿತಿ ಯಲ್ಲಿ ಮಾರಾಟ ಮಾಡಲು ತೀರ್ಮಾನಿಸಲಾಗಿದೆ.

‘ಪುಸ್ತಕ ಓದುವ ಹವ್ಯಾಸ ಬೆಳೆಸ ಬೇಕು ಎಂಬುದು ವಿಶ್ವವಿದ್ಯಾಲಯದ ಕಾಳಜಿ. ಹಾಗಾಗಿ ಪ್ರಸಾರಾಂಗದಿಂದ ಪ್ರಕಟಿಸಿರುವ ಎಲ್ಲ ಉತ್ಕೃಷ್ಟ ಪುಸ್ತಕ ಗಳನ್ನು ಶೇ 50ರ ರಿಯಾಯಿತಿಯಲ್ಲಿ ಮಾರಾಟ ಮಾಡಲು ನಿರ್ಧರಿಸಿದ್ದೇವೆ. ಯುವಕರು ಸೇರಿದಂತೆ ಎಲ್ಲರೂ ಹೆಚ್ಚಿನ ಪುಸ್ತಕಗಳನ್ನು ಕೊಂಡುಕೊಂಡು ಓದ ಬೇಕು’ ಎಂದು ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ತಿಳಿಸಿದರು.

ಇದೇ 12ರಿಂದ 18ರ ವರೆಗೆ ಸಾಹಿತ್ತಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಲಿವೆ. ಬೆಳಿಗ್ಗೆ ಉಪನ್ಯಾಸ ಗೋಷ್ಠಿ ನಡೆದರೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಂತರ ಮುಂದಿನ ಒಂದು ವರ್ಷದ ವರೆಗೆ ನಿರಂತರವಾಗಿ ಒಂದಿಲ್ಲೊಂದು ಕಾರ್ಯ ಕ್ರಮಗಳು ಜರುಗಲಿವೆ. ಸಮಾರೋಪ ಸಮಾರಂಭದಲ್ಲಿ 500 ಪುಸ್ತಕಗಳು ಹಾಗೂ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲು ವಿ.ವಿ. ತೀರ್ಮಾನಿಸಿದೆ.

* * 

ಬೆಳ್ಳಿಹಬ್ಬಕ್ಕೆ ಅಗತ್ಯ ಸಿದ್ಧತೆ ಪೂರ್ಣಗೊಂಡಿದೆ. ಐತಿಹಾಸಿಕ ಕಾರ್ಯಕ್ರಮಕ್ಕೆ ಹಂಪಿ ಕನ್ನಡ ವಿ.ವಿ. ಸಾಕ್ಷಿಯಾಗಲಿದ್ದು, ಎಲ್ಲರೂ ಸೇರಿಕೊಂಡು ಯಶಸ್ವಿಗೊಳಿಸಬೇಕಿದೆ
ಪ್ರೊ. ಮಲ್ಲಿಕಾ ಎಸ್‌. ಘಂಟಿ
ಕುಲಪತಿ, ಹಂಪಿ ಕನ್ನಡ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT