ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್ ಭರವಸೆ ನೀಡಿಲ್ಲ: ಮಲ್ಕಾಪುರೆ

Last Updated 12 ಸೆಪ್ಟೆಂಬರ್ 2017, 6:45 IST
ಅಕ್ಷರ ಗಾತ್ರ

ಬೀದರ್: ‘ಬೀದರ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಕುರಿತು ಪಕ್ಷ ಯಾರಿಗೂ ಭರವಸೆ ನೀಡಿಲ್ಲ. ನಾನು ಕೂಡ ಟಿಕೆಟ್ ಆಕಾಂಕ್ಷಿ ಆಗಿದ್ದೇನೆ’ ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿಯ ರಘುನಾಥರಾವ್ ಮಲ್ಕಾಪುರೆ ತಿಳಿಸಿದರು.

‘ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ಬರುವವರಿಗೆ ಸ್ವಾಗತವಿದೆ. ವಿಧಾನಸಭೆ ಚುನಾವಣೆಗೆ ಇನ್ನೂ ಸಮಯ ಇದೆ. ಯಾರು ಅಭ್ಯರ್ಥಿಯಾಗಬೇಕು ಎನ್ನುವುದನ್ನು ಪಕ್ಷದ ವರಿಷ್ಠರು ಹಾಗೂ ಕೇಂದ್ರ ಸಮಿತಿಯವರು ನಿರ್ಧರಿಸುತ್ತಾರೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಭಾನುವಾರ ಹೇಳಿದರು.

‘ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಹಲವು ಸಭೆಗಳನ್ನು ನಡೆಸಿದ್ದಾರೆ. ಪಕ್ಷ ಚುನಾವಣೆ ಸಿದ್ಧತೆ ಶುರು ಮಾಡಿದೆ. ಕ್ಷೇತ್ರವಾರು ಅಭಿಪ್ರಾಯವನ್ನೂ ಸಂಗ್ರಹಿ
ಸಲಾಗಿದೆ’ ಎಂದು ತಿಳಿಸಿದರು.

‘ನಗರದಲ್ಲಿ ಈಚೆಗೆ ಮುಖ್ಯಮಂತ್ರಿ ಅನೇಕ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿರುವುದು ಚುನಾವಣೆ ಗಿಮಿಕ್ ಆಗಿದೆ. ಇನ್ನೂ ಮುಗಿಯದ ಅನೇಕ ಕಾಮಗಾರಿಗಳನ್ನು ಅವರು ಉದ್ಘಾಟಿಸಿದ್ದಾರೆ. ಇದನ್ನು ವಿರೋಧಿಸಿ ಹೋರಾಟ ನಡೆಸಲಾಗುವುದು’ ಎಂದು ಹೇಳಿದರು.

‘ನಗರಸಭೆಗೆ ಸೇರಿದ ಕೋಟ್ಯಂತರ ಬೆಲೆ ಬಾಳುವ ಆಸ್ತಿಯನ್ನು ಸಾವಿರ ಲೆಕ್ಕದಲ್ಲಿ ಮಾರಾಟ ಮಾಡಿರುವ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಅವರ ತವರು ಜಿಲ್ಲೆಯ ನಗರಸಭೆಯಲ್ಲೇ ಹಗರಣ ನಡೆದಿರುವುದರಿಂದ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು’ ಎಂದು ಆಗ್ರಹಿಸಿದರು.

‘ನನ್ನ ಪ್ರಯತ್ನದಿಂದಾಗಿ ಬೀದರ್‌ ನಗರದ 20 ಕಡೆಗಳಲ್ಲಿ ಬಸ್ ತಂಗುದಾಣಗಳ ನಿರ್ಮಾಣಕ್ಕೆ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವದ್ಧಿ ಮಂಡಳಿಯಿಂದ ತಲಾ ₹6.5 ಲಕ್ಷದಂತೆ ₹ 1.30 ಕೋಟಿ ಮಂಜೂರಾಗಿದೆ’ ಎಂದು ತಿಳಿಸಿದರು.

‘ರಾಜ್ಯ ಸರ್ಕಾರವು ಎಲ್ಲ ರಂಗಗಳಲ್ಲಿ ವಿಫಲವಾಗಿದೆ. ಜಿಲ್ಲೆಯ ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ದೂರಿದರು.
ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಯಕುಮಾರ ಕಾಂಗೆ, ತಾಲ್ಲೂಕು ಘಟಕದ ಅಧ್ಯಕ್ಷ ವಿಜಯಕುಮಾರ ಎಸ್.ಪಾಟೀಲ ಗಾದಗಿ, ಉಪೇಂದ್ರ ದೇಶಪಾಂಡೆ, ಮಹೇಶ ಪಾಲಂ, ಬಸವರಾಜ ಜೋಜನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT