ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಖ್‌ ರೋಜಾ ನವೀಕರಣಕ್ಕೆ ₹55 ಲಕ್ಷ

Last Updated 12 ಸೆಪ್ಟೆಂಬರ್ 2017, 6:54 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಶಹಾ ಬಜಾರ್‌ ಪ್ರದೇಶದ ಬಹಮನಿ ಅರಸರ ಕಾಲದ ಶೇಖಾ ರೋಜಾ (ಹಜರತ್‌ ಶೇಖ್‌ ಸಿರಾಜುದ್ದೀನ್ ಜುನೈದಿ ದರ್ಗಾ) ಸ್ಮಾರಕದ ಅಭಿವೃದ್ಧಿ ಕಾಮಗಾರಿಗೆ ರಾಜ್ಯ ಸರ್ಕಾರ ₹55 ಲಕ್ಷ ಬಿಡುಗಡೆ ಮಾಡಿದೆ.

ಸಂರಕ್ಷಿತ ಸ್ಮಾರಕ ಇದಾಗಿದ್ದು, ಇತ್ತೀಚೆಗೆ ಶಿಥಿಲಾವಸ್ಥೆಗೆ ತಲುಪಿತ್ತು. ಈ ಬಗ್ಗೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಮಾರಕದ ರಕ್ಷಣೆ ಹಾಗೂ ದುರಸ್ತಿಗಾಗಿ ಧಾರವಾಡದಲ್ಲಿನ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಎಂಜಿನಿಯರ್‌ಗೆ ಪತ್ರ ಬರೆದಿದ್ದರು. ಜುಲೈ ತಿಂಗಳಿಂದ ಸುರಿದ ನಿರಂತರ ಮಳೆಗೆ ಸ್ಮಾರಕದ ಗೋಡೆ ಮತ್ತಷ್ಟು ಕುಸಿದಿತ್ತು. ಇದರಿಂದ ತುರ್ತು ದುರಸ್ತಿಗಾಗಿ ಮತ್ತೊಂದು ಪತ್ರವನ್ನೂ ಬರೆಯಲಾಗಿತ್ತು.

ಈ ಎರಡು ಪತ್ರ ಆಧರಿಸಿ ಇಲಾಖೆ ಎಂಜಿನಿಯರಿಂಗ್‌ ವಿಭಾಗವು ಕ್ರಿಯಾಯೋಜನೆ ಸಿದ್ಧಪಡಿಸಿ ಮೈಸೂರಿನಲ್ಲಿರುವ ಆಯುಕ್ತರಿಗೆ ಸಲ್ಲಿಸಿತ್ತು. ಆಯುಕ್ತರು ಕ್ರಿಯಾಯೋಜನೆಗೆ ಒಪ್ಪಿಗೆ ನೀಡಿದ್ದು, ರಾಜ್ಯ ಸರ್ಕಾರ ದುರಸ್ತಿ ಕಾರ್ಯಕ್ಕಾಗಿ ಹಣ ಒದಗಿಸಿದೆ. ನವೀಕರಣ ಕಾಮಗಾರಿ ಶೀಘ್ರದಲ್ಲಿಯೇ ಆರಂಭವಾಗುವ ನಿರೀಕ್ಷೆ ಇದೆ.

ಏನೇನು ಕೆಲಸ: ಸ್ಮಾರಕದ ಮೀನಾರ್‌ಗಳು ಹಾಗೂ ಬೃಹತ್‌ ಗೋಡೆಗಳ ದುರಸ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹಳೆಯ ಗಾರೆ ತೆರವುಗೊಳಿಸಿ ಸುಣ್ಣದ ಗಾರೆ ಹಚ್ಚುವುದು, ಕುಸಿದಿರುವ ಗೋಡೆಯ ಮರು ನಿರ್ಮಾಣ ಆರಂಭವಾಗಲಿದೆ. ಸ್ಮಾರಕದ ಹೊರಭಾಗದಲ್ಲಿ ಸುಣ್ಣ ಹಾಗೂ ಸಿಮೆಂಟ್‌ ಬಳಸಿ ಭದ್ರಪಡಿಸಲು ಉದ್ದೇಶಿಸಲಾಗಿದೆ.

ಮೀನಾರ್‌ಗಳ ಮೇಲೆ ಬೆಳೆದಿರುವ ಗಿಡಗಂಟೆಗಳನ್ನು ತೆರವುಗೊಳಿಸುವುದು, ಕಲ್ಲು ಕುಸಿದಿರುವ ಜಾಗದಲ್ಲಿ ಇಟ್ಟಿಗೆ ಬಳಕೆ ಮಾಡುವುದು, ಅತಿಕ್ರಮ ತಡೆಗೆ ಸುಸಜ್ಜಿತ ಆವರಣ ಗೋಡೆ ನಿರ್ಮಾಣ, ಅಗತ್ಯ ಇರುವ ಕಡೆ ಕಬ್ಬಿಣದ ಗ್ರಿಲ್‌ ಅಳವಡಿಕೆ ಹಾಗೂ ಸುಣ್ಣ ಬಣ್ಣದ ಕಾಮಗಾರಿಗೆ ಇಲಾಖೆ ಸಿದ್ಧತೆ ನಡೆಸಿದೆ. ಸ್ಮಾರಕದ ಒಳ ಆವರಣದಲ್ಲಿನ ಖಾಲಿ ಜಾಗದಲ್ಲಿ ನೆಲಹಾಸು ಅಳವಡಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲಾಗುವುದು.

‘ಕಲಬುರ್ಗಿಯಲ್ಲಿನ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸುಪರ್ದಿಯಲ್ಲಿರುವ ಸ್ಮಾರಕಗಳ ನವೀಕರಣವನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು. ಮೊದಲ ಹಂತದಲ್ಲಿ ಶೇಖ್‌ ರೋಜಾ ಸ್ಮಾರಕದ ನವೀಕರಣ ಆರಂಭವಾಗಲಿದೆ. ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯು ನಿರ್ವಹಿಸಲಿದೆ’ ಎಂದು ಸಂರಕ್ಷಣಾ ವಿಭಾಗದ ಎಂಜಿನಿಯರ್‌ ಪ್ರೇಮಲತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶೇಖ್ ರೋಜಾದ ಗೋಡೆಗಳು ಈ ವರ್ಷ ಸುರಿದ ಮಳೆಗೆ ಕುಸಿದಿವೆ. ಗೇಟ್‌ ಹಾಳಾಗಿದೆ. ಅತಿಕ್ರಮಣವೂ ಆಗಿದೆ. ಈ ಬಗ್ಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಈ
ಕುರಿತ ವರದಿ ಧಾರವಾಡದ ಎಂಜಿನಿಯರ್‌ಗೆ ಪತ್ರ ಸಲ್ಲಿಸಿದ್ದೆವು’ ಎಂದು ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಡಿ.ಶಿವಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT