ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಕಾಮಗಾರಿ ಅವೈಜ್ಞಾನಿಕ

Last Updated 12 ಸೆಪ್ಟೆಂಬರ್ 2017, 7:00 IST
ಅಕ್ಷರ ಗಾತ್ರ

ಸಿಂಧನೂರು: ’ತಾಲ್ಲೂಕಿನ ತುರ್ವಿಹಾಳ ಗ್ರಾಮದ ಸಮೀಪದ 100 ಎಕರೆ ಜಮೀನಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕೆರೆ ಕಾಮಗಾರಿಯು ಸಂಪೂರ್ಣ ಅವೈಜ್ಞಾನಿಕವಾಗಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ಶಾಸಕ ಹಂಪನಗೌಡ ಬಾದರ್ಲಿ ಶಾಮೀಲಾಗಿ ಸರ್ಕಾರದ ನೂರಾರು ಕೋಟಿ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಆರೋಪಿಸಿದರು.

ತಾಲ್ಲೂಕಿನ ತುರ್ವಿಹಾಳ ಸಮೀಪದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೆರೆ ಕಾಮಗಾರಿಯನ್ನು ಸೋಮವಾರ ಜೆಡಿಎಸ್ ಕಾರ್ಯಕರ್ತರೊಂದಿಗೆ ತೆರಳಿ ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

’ತಾವು ಶಾಸಕರಾಗಿದ್ದ ಅವಧಿಯಲ್ಲಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಕೆರೆ ನಿರ್ಮಾಣಕ್ಕೆ ಸುಮಾರು 259 ಎಕರೆ ಜಮೀನು ಖರೀದಿಸಲಾಗಿತ್ತು. ಆದರೆ ಈಗಿರುವ ಶಾಸಕ ಹಂಪನಗೌಡ ಬಾದರ್ಲಿ ಕೇವಲ 100 ಎಕರೆ ಜಮೀನಿನಲ್ಲಿ ಕೆರೆ ನಿರ್ಮಾಣ ಕೆಲಸ ಪ್ರಾರಂಭಿಸಿ, ಅರ್ಧ ಜಮೀನನ್ನು ಖಾಲಿಯಿರಿಸಿದ್ದಾರೆ. ಅಂದಾಜು ಪಟ್ಟಿಯ ಆಧಾರದಲ್ಲಿ ಕಾಮಗಾರಿ ನಡೆಯುತ್ತಿಲ್ಲ. ಕೆರೆಯ ಮಧ್ಯದಲ್ಲಿ ಗುಂಡಿ ಅಗೆದಿಲ್ಲ.

ಬಂಡ್‌ಗೆ 1.5 ಅಡಿ ಚೌಕಾಕಾರದ ಕಲ್ಲು ಅಳವಡಿಸಿಲ್ಲ. ಬದಲಾಗಿ ಕೆರೆಯಲ್ಲಿದ್ದ ಕಲ್ಲುಗಳನ್ನೆ ಹೊಡೆದು ಪಿಚ್ಚಿಂಗ್ ಮಾಡಲಾಗಿದೆ. ಮಳೆ ಬಂದ ಹಿನ್ನೆಲೆಯಲ್ಲಿ ಅವು ಜಾರಿ ಬಿದ್ದಿವೆ. ಕೆರೆಯ ಒಳಭಾಗದಲ್ಲಿ ಜಾಲಿಗಿಡಗಳು ಬೆಳೆದು ನಿಂತಿವೆ. ಈ ಮಧ್ಯೆ ಕೆರೆ ಪಕ್ಕದಲ್ಲಿ ಜಾಕ್‌ವೆಲ್ ಕೆಲಸ ಆರಂಭಿಸಿ ಕೆರೆಗೆ ನೀರೆತ್ತುವ ಹುನ್ನಾರ ನಡೆದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಹಂಪನಗೌಡ ಬಾದರ್ಲಿ ಇನ್ನೊಂದು ತಿಂಗಳಲ್ಲಿ ಕೆರೆಗೆ ನೀರು ಹರಿಸಲಾಗುವುದೆಂದು ಹಸಿ ಸುಳ್ಳು ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.
‘ತುರ್ವಿಹಾಳ ಕೆರೆ ನಿರ್ಮಾಣ ಕಾಮಗಾರಿಯು ತೀವ್ರ ಕಳಪೆಯಾಗಿದ್ದು, ಈ ಬಗ್ಗೆ ಲೋಕಾಯುಕ್ತ ಹಾಗೂ ಸರ್ಕಾರಕ್ಕೆ ಪತ್ರ ಬರೆದು ಶೀಘ್ರವೇ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಲಾಗುವುದು’ ಎಂದರು.

‘ಹನುಮಾನ್‌ನಗರ ಕ್ಯಾಂಪಿನಲ್ಲಿ ಸ್ಮಶಾನ ಭೂಮಿ ಇಲ್ಲವೆಂದು ಮೃತ ಕುಟುಂಬಸ್ಥರು ಮಿನಿವಿಧಾನಸೌಧ ಕಚೇರಿಗೆ ಶವ ತಂದು ಪ್ರತಿಭಟನೆ ನಡೆಸಿರುವ ಘಟನೆ ಶಾಸಕರಿಗೆ ನಾಚಿಗೆ ತರಬೇಕು. ಅಲ್ಲದೆ ಸಿಂಧನೂರಿನ ಎಲ್ಲ ಕಾಮಗಾರಿಗಳ ತನಿಖೆಗೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷದಿಂದ ಉಗ್ರ ಸ್ವರೂಪದ ಹೋರಾಟ ರೂಪಿಸಲಾಗುವುದು’ ಎಂದು ತಿಳಿಸಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಲಿಂಗಪ್ಪ ದಢೇಸುಗೂರು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದ್ರುಭೂಪಾಲ ನಾಡಗೌಡ, ನಗರಸಭೆ ಮಾಜಿ ಉಪಾಧ್ಯಕ್ಷ ಕೆ.ಜಿಲಾನಿಪಾಷಾ, ಮುಖಂಡರಾದ ಧರ್ಮನಗೌಡ ಮಲ್ಕಾಪೂರ, ಜಹೀರುಲ್ಲಾ ಹಸನ್ ವಕೀಲ, ಸಾಯಿರಾಮಕೃಷ್ಣ, ಅಶೋಕ ಉಮಲೂಟಿ, ಬಸನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT