ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಣೆಯಲ್ಲಿ ಮಕ್ಕಳಿಗೆ ಪೊಲೀಸ್ ಕರ್ತವ್ಯದ ಪಾಠ!

Last Updated 12 ಸೆಪ್ಟೆಂಬರ್ 2017, 7:03 IST
ಅಕ್ಷರ ಗಾತ್ರ

ಯಾದಗಿರಿ: ‘ಯಾರೂ ಹೆದರಬೇಡಿ. ಒಂದು ಗಂಟೆ ಇದೂ ನಿಮ್ಮ ಶಾಲೆ ಅಂದ್ಕೊಳ್ಳಿ... ಇಗೋ ಮಕ್ಕಳೇ ನಾನು ತೊಟ್ಟಿರುವ ಸಮವಸ್ತ್ರ ಪೊಲೀಸ್‌ ಕರ್ತವ್ಯದ ಪ್ರಬಲ ಸಂಕೇತ. ಅಪರಾಧ ತಡೆ ಜತೆ ಜತೆಗೆ ಸಾಮಾಜಿಕ ಕೈಂಕರ್ಯ, ಭದ್ರತೆ, ರಕ್ಷಣೆ, ನೊಂದವರಿಗೆ ನೆರವಾಗುವುದು, ಅಸಹಾಯಕರಿಗೆ ಧೈರ್ಯ ತುಂಬುವುದು, ನಿರ್ಗತಿಕರಿಗೆ ದಾರಿ ತೋರುವುದು ಹೀಗೆ ನಮ್ಮ ದೈನಂದಿನ ಕರ್ತವ್ಯ ಸಾಗುತ್ತದೆ.

ಸಮಾಜದ ಶಾಂತಿ ಸುವ್ಯವಸ್ಥೆಗೆ ಪೊಲೀಸ್ ಇಲಾಖೆ ಆಧಾರ ಸ್ತಂಭ. ನೀವೂ ಪೊಲೀಸ್ ಅಧಿಕಾರಿಯಾಗಿ ಸಮಾಜ ಸೇವೆ ಸಲ್ಲಿಸಿ’ ನಗರದ ಪೊಲೀಸ್‌ ಠಾಣೆಯಲ್ಲಿ ಸೋಮವಾರ ಪಿಎಸ್‌ಐ ಮಹಾಂತೇಶ್ ಸಜ್ಜನ್ ಲಾಠಿಬಿಟ್ಟು ಅರ್ಧತಾಸು ಶಿಕ್ಷಕರಾಗಿ ನಗರದ ಶಾಂತಿ ಸದನ ಶಾಲೆಯ ಮಕ್ಕಳ ಎದುರು ಪೊಲೀಸ್ ಕರ್ತವ್ಯದ ಪಾಠ ಹೇಳಿದ ಪರಿ ಇದು.

ಕೌತುಕದಿಂದ ಠಾಣೆಯ ಮೆಟ್ಟಿಲೇರಿ ಬಂದ ಮಕ್ಕಳಿಗೆ ಮಕ್ಕಳ ಹಕ್ಕುಗಳು, ಕಾನೂನು ಪರಿಪಾಲನೆ ಕುರಿತು ಪಿಎಸ್‌ಐ ಮಹಾಂತೇಶ್ ಸಜ್ಜನ್ ಅರಿವು ಮೂಡಿಸಿದರು. ಪ್ರತಿಯೊಂದನ್ನೂ ಮಕ್ಕಳು ಕಿವಿಗೊಟ್ಟು ಆಲಿಸುತ್ತಿದ್ದರು. ನಂತರ ಮಕ್ಕಳ ಗಮನ ತೂಗುಹಾಕಿದ್ದ ಕೋವಿ ಕಡೆಗೆ ತಿರುಗಿತು.

ತಕ್ಷಣ ಮಕ್ಕಳ ಮನೋಭಿಲಾಷೆ ಗ್ರಹಿಸಿದ ಪಿಎಸ್‌ಐ ಕೋವಿ ತೆಗೆದು ಮಕ್ಕಳ ಮುಂದೆ ಹಿಡಿದು ತೋರಿಸಿದರು. ಅದೇ ಮೊದಲ ಬಾರಿಗೆ ಮಕ್ಕಳು ಕೋವಿ ಮುಟ್ಟಿ ಕೌತುದ ಕಣ್ಣುಗಳನ್ನು ಅರಳಿಸಿದರು. ‘ಇದನ್ನು ಬಳಸುವುದು ಹೇಗೆ ಸರ್? ವಿದ್ಯಾರ್ಥಿಗಳಿಂದ ಪ್ರಶ್ನೆ ತೂರಿಬಂತು.

‘ಮಕ್ಕಳೇ, ಕೋವಿ ಪೊಲೀಸ್ ಇಲಾಖೆಯ ಮುಖ್ಯ ಅಸ್ತ್ರ. ಅದನ್ನು ಬಳಸುವುದು ಹೇಗೆ ಎಂದು ಇಲಾಖೆ ವಿಶೇಷ ತರಬೇತಿಯನ್ನು ಸಿಬ್ಬಂದಿಗೆ ನೀಡುತ್ತದೆ. ಠಾಣೆಯಲ್ಲಿ ಬಳಸುವ ಕೋವಿ ಕುರಿತು ಸಮಗ್ರ ಅರಿವು ಸಿಬ್ಬಂದಿಗೆ ಇರುತ್ತದೆ’ ಎಂದು ಉತ್ತರಿಸಿದರು. ನಂತರ ಮಕ್ಕಳು ಇಡೀ ಠಾಣೆಯಲ್ಲಿ ಹೆಜ್ಜೆಹಾಕಿ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT