ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ

Last Updated 12 ಸೆಪ್ಟೆಂಬರ್ 2017, 7:05 IST
ಅಕ್ಷರ ಗಾತ್ರ

ಚಾಮರಾಜನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ತಾಲ್ಲೂಕಿನ ಮಂಗಲ ಗ್ರಾಮದ ಕುಡಿಯುವ ನೀರು ಶುದ್ಧೀಕರಣ ಕೇಂದ್ರದ ಮುಂಭಾಗ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಮಂಗಲ, ಯಡಿಯೂರು, ಕರಡಿಮೋಳೆ, ಯಲಕ್ಕೂರು ಮುಂತಾದ ಗ್ರಾಮಗಳ ಜನರು ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಸೇರಿದ ಪಕ್ಷದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಸುಮಾರು 20 ನಿಮಿಷ ಖಾಲಿ ಬಿಂದಿಗೆ ಹಿಡಿದು ರಸ್ತೆ ತಡೆ ನಡೆಸಿ ಘೋಷಣೆ ಕೂಗಿದರು. ವಾಟಾಳ್‌ ನಾಗರಾಜ್‌ ಮಾತನಾಡಿ, ಚಾಮರಾಜನಗರ ಜಿಲ್ಲೆಯಾಗಿ 20 ವರ್ಷವಾದರೂ ಅಭಿವೃದ್ಧಿಯಾಗಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಜಿಲ್ಲೆಯು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ದೂರಿದರು.

ಜಿಲ್ಲೆಯ ಅಭಿವೃದ್ಧಿಗಾಗಿ ಹೆಚ್ಚಿನ ರೈಲು ಸಂಚಾರದ ವ್ಯವಸ್ಥೆಯಾಗಬೇಕು. ಬೆಂಗಳೂರು, ಮದ್ದೂರು, ಮಳವಳ್ಳಿ ಮಾರ್ಗವಾಗಿ ನೂತನ ರೈಲು ಸಂಚಾರ ಪ್ರಾರಂಭವಾಗಬೇಕು. ಜಿಲ್ಲೆಗೆ ₹5,000 ಕೋಟಿಯ ವಿಶೇಷ ಪ್ಯಾಕೇಜ್‌ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕೇಂದ್ರದಲ್ಲಿ ಒಳಚರಂಡಿ ಕಾಮಗಾರಿ ಆಮೆಗತಿಯಲಿ ಸಾಗುತ್ತಿದೆ. ಇದರಿಂದ ನಗರದ ಎಲ್ಲ ವಾರ್ಡ್‌ಗಳ ರಸ್ತೆ ಹದಗೆಟ್ಟಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿದೆ. ರಸ್ತೆಗಳನ್ನು ತಕ್ಷಣ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಯಲಕ್ಕೂರು ಗ್ರಾಮವನ್ನು ಕುದೇರಿ\ನಿಂದ ಬೇರ್ಪಡಿಸಿ ಚಾಮರಾಜನಗರ ವಿಭಾಗಕ್ಕೆ ಸೇರಿಸಬೇಕು. ಕರಡಿಮೋಳೆ ಗ್ರಾಮದ ಮಾರ್ಗವಾಗಿ ಯಲಕ್ಕೂರು, ಕುದೇರು ಗ್ರಾಮಕ್ಕೆ ಹಾಗೂ ಮಂಗಲ ಗ್ರಾಮದಿಂದ ಸಪ್ಪಯ್ಯನಪುರ ಗ್ರಾಮಕ್ಕೆ ಬಸ್‌ ಸೌಲಭ್ಯ ಕಲ್ಪಿಸಬೇಕು ಎಂದರು.

ಕರಡಿಮೋಳೆ ಸೇರಿದಂತೆ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ವಿವಿಧ ಮೋಳೆಗಳ ಅಭಿವೃದ್ಧಿಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜಿಲ್ಲಾಧಿಕಾರಿ, ತಹಶೀಲ್ದಾರ್‌ ಹಾಗೂ ಉಪವಿಭಾಗಾಧಿಕಾರಿಗಳು ಜಿಲ್ಲೆಯ ಅಭಿವೃದ್ಧಿ ಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಕಬಿನಿ 2ನೇ ಹಂತ ಯೋಜನೆಯಿಂದ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲು ಆದ್ಯತೆ ನೀಡಬೇಕು. ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಯಡಿಯೂರು, ಕೊತ್ತಲವಾಡಿ ಹಾಗೂ ಸುವರ್ಣನಗರ ಕೆರೆ ಸೇರಿದಂತೆ ತಾಲ್ಲೂಕಿನ ಎಲ್ಲ ಕೆರೆಗಳಿಗೂ ಒಂದು ತಿಂಗಳೊಳಗೆ ನೀರು ತುಂಬಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಎಲ್ಲ ಕೆರೆಗಳಲ್ಲೂ ಪ್ರತ್ಯೇಕವಾಗಿ ಕೆರೆ ಸತ್ಯಾಗ್ರಹ ಚಳವಳಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಸಂತೇಮರಹಳ್ಳಿ ಗ್ರಾಮಾಂತರ ಠಾಣೆಯ ಪೊಲೀಸರು ವಾಟಾಳ್‌ ನಾಗರಾಜ್‌ ಅವರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಕಾರ್‌ನಾಗೇಶ್‌, ಶಿವಲಿಂಗಮೂರ್ತಿ, ದಳಪತಿ ವೀರತಪ್ಪ, ವರದರಾಜು, ಬದನಗುಪ್ಪೆ ಮಂಜುನಾಥ್‌, ವಿವಿಧ ಗ್ರಾಮಗಳ ಗ್ರಾಮಸ್ಥರು ಇದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT