ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಬೆಳೆಯಿಂದ ಉತ್ತಮ ವರಮಾನ

Last Updated 12 ಸೆಪ್ಟೆಂಬರ್ 2017, 8:36 IST
ಅಕ್ಷರ ಗಾತ್ರ

ತುಮಕೂರು: ’ರೇಷ್ಮೆ ಬೆಳೆ ಬೆಳೆಯುವುದರಿಂದ ರೈತರಿಗೆ ಉತ್ತಮ ವರಮಾನ ಸಿಗಲಿದೆ’ ಎಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ತಿಳಿಸಿದರು.
ಜಿಲ್ಲಾ ರೇಷ್ಮೆ ಸಂಶೋಧನೆ ವಿಸ್ತರಣಾ ಕೇಂದ್ರ, ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಬೆಂಗಳೂರಿನ ಕೇಂದ್ರ ರೇಷ್ಮೆ ಮಂಡಳಿ, ವಸ್ತ್ರ ಮಂತ್ರಾಲಯ ಹಾಗೂ ಜಿಲ್ಲಾ ರೇಷ್ಮೆ ಇಲಾಖೆ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ಹುಳ್ಳೇನಹಳ್ಳಿಯಲ್ಲಿ ರೈತರೊಂದಿಗೆ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರಾಸರಿ ಒಂದು ವರ್ಷದಲ್ಲಿ ಬೆಳೆಯುವ ಇತರೆ ಬೆಳೆಯು, ರೇಷ್ಮೆ ಬೆಳೆಯಷ್ಟು ಅಧಿಕ ಸಂಪಾದನೆ ತಂದು ಕೊಡಲು ಸಾಧ್ಯವಿಲ್ಲ. 1 ಎಕರೆ ರೇಷ್ಮೆ ಬೆಳೆದು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಕನಿಷ್ಠ ₹ 4 ಲಕ್ಷ ಸಂಪಾದಿಸಬಹುದು ಎಂದರು.

ದ್ವಿತಳಿ ಬೆಳೆಯುವುದರಿಂದ ಹೆಚ್ಚು ಲಾಭ ಪಡೆಯಬಹುದು. ರೇಷ್ಮೆ ಬೆಳೆದ ರೈತರನ್ನು ಸಂಪರ್ಕಿಸಬೇಕು. ಅವರು ಬೆಳೆದಿರುವ ರೀತಿ ಹಾಗೂ ಪದ್ಧತಿ ಬಗ್ಗೆ ತಿಳಿಯಬೇಕು. ಪ್ರತ್ಯಕ್ಷವಾಗಿ ನೋಡಿ ಅರಿಯುವುದರಿಂದ ಮಾಹಿತಿ ಲಭಿಸುತ್ತದೆ. ಇದರಿಂದ ಅನುಕೂಲವಾಗುತ್ತದೆ ಎಂದರು.

ರೈತರು ಯಾಂತ್ರಿಕ ವಿಧಾನ ಹಾಗೂ ಆಧುನಿಕ ತಂತ್ರಜ್ಞಾನ ಆಳವಡಿಸಿಕೊಳ್ಳವುದರಿಂದ ವರ್ಷಕ್ಕೆ 5 ಬೆಳೆ ಬೆಳೆಯಬಹುದು. ರೇಷ್ಮೆ ಬೆಳೆಗೆ ಕಡಿಮೆ ಅವಧಿ ಸಾಕು. ಕಡಿಮೆ ಕೆಲಸಗಾರರೊಂದಿಗೆ ವ್ಯವಸ್ಥಿತವಾಗಿ ಬೆಳೆಯವುದರಿಂದ ಉತ್ತಮ ಲಾಭ ಪಡೆಯಬಹುದು ಎಂದರು.

ಯಾವ ಬೆಳೆಗೂ ಕೊಡದ ಸಬ್ಸಿಡಿಯನ್ನು ರೇಷ್ಮೆ ಬೆಳೆಗಾರರಿಗೆ ಕೊಡಲಾಗುತ್ತಿದೆ. ಜತೆಗೆ ರೈತರಿಗೆ ರೇಷ್ಮೆ ಬೆಳೆಯಲು ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ತರಬೇತಿ ಮೂಲಕ ಮಾಹಿತಿ ಪಡೆಯಬಹುದು. ಇದನ್ನು ರೈತರು ಸದುಪಯೋಗ ಪಡಿಸಿಕೊಂಡು ಪ್ರಗತಿ ಸಾಧಿಸಬೇಕು ಎಂದರು.

ಬೇರೆ ಬೆಳೆಯ 5 ಸಾವಿರ ಗಿಡಗಳಿಗೆ 3 ಲಕ್ಷ ಲೀಟರ್‌ ನೀರು ಬೇಕು. ಆದರೆ ರೇಷ್ಮೆ ಬೆಳೆಯ 5 ಸಾವಿರ ಸಸಿ ಬೆಳೆಯಲು 25 ರಿಂದ 30 ಸಾವಿರ ಲೀಟರ್‌ ಸಾಕು. ಮೊದಲ ವರ್ಷದ ಬಳಿಕ ಎರಡನೇ ವರ್ಷದಲ್ಲಿ ಉತ್ತಮ ಬೆಳೆ ಬರುತ್ತದೆ. ಇಂತಹ ಬೆಳೆಯ ಬಗ್ಗೆ ಗಮನ ಹರಿಸಬೇಕು ಎಂದು ಮಾಹಿತಿ ನೀಡಿದರು.

ಹಿರಿಯ ವಿಜ್ಞಾನಿ ಕೆ.ವೇದವ್ಯಾಸ ಮಾತನಾಡಿ, ‘ಉತ್ತಮ ಹವಾಗುಣ, ಭೂಮಿಯು ರೇಷ್ಮೆ ಕೃಷಿಗೆ ಪೂರಕವಾಗಿದೆ. ಸಾವಯವ ಕೃಷಿ ಪದ್ಧತಿಯಲ್ಲಿ ರೇಷ್ಮೆ ಕೃಷಿ ಕೈಗೊಂಡರೆ ಆರ್ಥಿಕ ಲಾಭ ಪಡೆಯಬಹುದು’ ಎಂದು ತಿಳಿಸಿದರು.

ಕೇಂದ್ರ ರೇಷ್ಮೆ ಮಂಡಳಿ ಹಿರಿಯ ವಿಜ್ಞಾನಿ ಡಾ.ಅಶ್ವತ್ಥರೆಡ್ಡಿ ಮಾತನಾಡಿ, ’ರೇಷ್ಮೆ ಕೃಷಿ ಗುಣಮಟ್ಟದಿಂದ ಕೂಡಿರಬೇಕು. ಯಾವುದೇ ಉತ್ಪನ್ನ ಮಾಡಬೇಕಾದರೂ ಸಹ ಕಚ್ಚಾ ವಸ್ತುಗಳ ಗುಣಮಟ್ಟ ಅತೀ ಮುಖ್ಯವಾಗಿದೆ. ಸರಳ ವಿಧಾನ ಅನುಸರಿಸುವುದರಿಂದ ರೇಷ್ಮೆ ಕೃಷಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಬೆಳೆ ಬೆಳೆಯಬಹುದು’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಆಶಾ ನೀಲಕಂಠಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದ ಹನುಮೇಗೌಡ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ.ಶಶಿಕಿರಣ್‌, ರೇಷ್ಮೆ ಉಪನಿರ್ದೇಶಕ ಚಂದ್ರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT