ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ ಕೊಡದಿದ್ದರೆ ದಯಾಮರಣ ನೀಡಿ

Last Updated 12 ಸೆಪ್ಟೆಂಬರ್ 2017, 8:41 IST
ಅಕ್ಷರ ಗಾತ್ರ

ಕೋಲಾರ: ‘ತಾಲ್ಲೂಕಿನ ನರಸಾಪುರ ಬಳಿ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಭೂಮಿ ಕೊಡುವ ರೈತರಿಗೆ ಎಕರೆಗೆ ₹ 1 ಕೋಟಿ ಪರಿಹಾರ ಕೊಡಿ. ಇಲ್ಲವೆ ಅವರಿಗೆ ದಯಾಮರಣಕ್ಕೆ ಅವಕಾಶ ನೀಡಿ ಎಂದು ಕಂದಾಯ ಸಚಿವರಿಗೆ ಮನವಿಪತ್ರ ಸಲ್ಲಿಸಿ’ ಎಂದು ಶಾಸಕ ವರ್ತೂರು ಪ್ರಕಾಶ್ ಕಂದಾಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಲ್ಲೂಕಿನ ಅಪ್ಪಸಂದ್ರ ಸುತ್ತಮುತ್ತ ಕೆಐಎಡಿಬಿಯು ಭೂ ಪರಿಹಾರ ನೀಡದೆ ಭೂಸ್ವಾಧೀನಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ರೈತರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಜಮೀನು 50 ವರ್ಷಗಳಿಂದ ರೈತರ ಅನುಭೋಗದಲ್ಲಿದೆ. ಆದರೆ, ಅವರ ಹೆಸರಿನಲ್ಲಿ ಖಾತೆ ಇಲ್ಲ. ಹೀಗಾಗಿ ರೈತರು ಖಾತೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದರು.

ಕೆಐಎಡಿಬಿಯು 2010ರಲ್ಲಿ ಇದೇ ಭಾಗದ ರೈತರಿಗೆ ಎಕರೆಗೆ ₹ 30 ಲಕ್ಷ ಪರಿಹಾರ ಕೊಟ್ಟು ಭೂಸ್ವಾಧೀನ ಮಾಡಿದೆ. ಆದರೆ, 60 ರೈತರಿಗೆ ಭೂಪರಿಹಾರ ಸಿಕ್ಕಿದೆ. ಹೀಗಾಗಿ ಉಳಿದವರು ತಮ್ಮ ಜಮೀನು ಬಿಟ್ಟು ಕೊಡುತ್ತಿಲ್ಲ. ಈ ರೈತರ ಹೆಸರಿನಲ್ಲಿ ದಾಖಲೆಪತ್ರಗಳು ಇಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ವಾದ ಮಾಡುತ್ತಾರೆ. ರೈತರು 50 ವರ್ಷಗಳಿಂದಲೂ ಹಿಡುವಳಿದಾರರಾಗಿದ್ದಾರೆ. ಅವರಿಗೆ ಭೂ ಪರಿಹಾರ ನೀಡದೆ ಭೂಸ್ವಾಧೀನ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅನ್ಯಾಯ ಸರಿಯಲ್ಲ: ರೈತರಿಗೆ ಅನ್ಯಾಯ ಮಾಡುವುದು ಸರಿಯಲ್ಲ. ರೈತರು 1991ರಲ್ಲೇ ಭೂ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕೆಐಎಡಿಬಿ ಅಧಿಕಾರಿಗಳು 2010ರಲ್ಲಿ ಭೂಸ್ವಾಧೀನಕ್ಕೆ ರೈತರಿಗೆ ನೋಟಿಸ್ ನೀಡಿದ್ದಾರೆ. ಈ ಸಂಬಂಧ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರೊಂದಿಗೆ ಮಾತನಾಡಿ ರೈತರಿಗೆ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ರೈತರ ಹೆಸರಿಗೆ ಆರ್‌ಟಿಸಿ ಬಂದರೆ ಅವರೇ ಭೂಮಿಯ ಒಡೆಯರಾಗುತ್ತಾರೆ. ನಂತರ ಕೃಷಿ ಸಚಿವ ಕೃಷ್ಣ ಬೈರೇಗೌಡರೊಂದಿಗೆ ಚರ್ಚಿಸಿ ಅವರ ನೇತೃತ್ವದಲ್ಲೇ ಬೆಂಗಳೂರಿನಲ್ಲಿ ಸಭೆ ಕರೆದು ಪರಿಹಾರ ಒದಗಿಸುವ ಪ್ರಯತ್ನ ಮಾಡುತ್ತೇನೆ. ಆವರೆಗೆ ರೈತರು ಸ್ವಲ್ಪ ತಾಳ್ಮೆಯಿಂದಿರಬೇಕು. ಅದು ಬಿಟ್ಟು ತಮಗೆ ಈಗಲೇ ಕಾಸು ಬೇಕು, ಸರ್ಕಾರ ಕೊಟ್ಟಷ್ಟು ಕೊಡಲಿ ಎನ್ನುವುದಾದರೆ ₹ 10 ಲಕ್ಷ ಅಥವಾ ₹ 15 ಲಕ್ಷ ಕೊಡಿಸಿ ಕೈತೊಳೆದುಕೊಳ್ಳುತ್ತೇನೆ ಎಂದು ಹೇಳಿದರು.

ಮೋಸ ಮಾಡಿದರು: ಇದಕ್ಕೆ ಒಪ್ಪದ ರೈತರು, ‘ನಮಗೆ ₹ 10 ಲಕ್ಷ ಕೊಟ್ಟರೆ ಅನ್ಯಾಯವಾಗುತ್ತದೆ. ಭೂಮಿಯು 1935ರಿಂದಲೂ ನಮ್ಮ ಅನುಭವದಲ್ಲಿದೆ. ಆದರೆ, ನಮ್ಮ ಹೆಸರಿಗೆ ಜಮೀನು ಮಂಜೂರಾಗಿಲ್ಲ. ಇದು ಅರಣ್ಯ ಇಲಾಖೆಗೆ ಸೇರಿದ್ದು ಎಂದು ಅಧಿಕಾರಿಗಳು ಹೇಳಿ ಮೋಸ ಮಾಡಿದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಗ ವರ್ತೂರು ಪ್ರಕಾಶ್‌ ಮಾತನಾಡಿ, ‘ನಿಮಗೆ ಅರಣ್ಯ ಭೂಮಿ ಎಂದು ಹೇಳಿ ಮೋಸ ಮಾಡಿದ್ದು ಬೇರೆ ಯಾರೂ ಅಲ್ಲ. ಈ ಹಿಂದೆ ಇಲ್ಲಿನ ಶಾಸಕರಾಗಿದ್ದ ಸಿ.ಬೈರೇಗೌಡರೇ ಮೋಸ ಮಾಡಿದ್ದು. ಅವರು ರೈತರಿಗೆ ಜಮೀನು ಮಂಜೂರು ಮಾಡಿ ಕೊಡುವುದು ಬಿಟ್ಟು ಅರಣ್ಯ ಭೂಮಿ ಎಂದು ತೋರಿಸಿ ಅನ್ಯಾಯ ಮಾಡಿದ್ದಾರೆ’ ಎಂದರು.

ಸರಿಪಡಿಸೋಣ: ದರಖಾಸ್ತು ಸಮಿತಿ ಅಧ್ಯಕ್ಷ ಸೂರ್ಯಪ್ರಕಾಶ್ ಮಾತನಾಡಿ, ‘ಬೈರೇಗೌಡರು ರೈತರಿಗೆ ಅನ್ಯಾಯ ಮಾಡಲಿಲ್ಲ. ಆಗ ತಾಲ್ಲೂಕು ಭೂ ಮಂಜೂರಾತಿ ಸಮಿತಿ ಅಧ್ಯಕ್ಷರಾಗಿದ್ದ ಕೆ.ಶ್ರೀನಿವಾಸಗೌಡರು ರೈತರನ್ನು ವಂಚಿಸಿದರು.

ರಾಜಕೀಯ ಒತ್ತಡದಿಂದ ರೈತರಿಗೆ ಅನ್ಯಾಯವಾಗಿದ್ದರೂ ಬೈರೇಗೌಡರ ಮಗ ಸಚಿವ ಕೃಷ್ಣ ಬೈರೇಗೌಡರಿಂದ ಅದನ್ನು ಸರಿ ಪಡಿಸೋಣ. ಮಂಗಳವಾರವೇ ಸಚಿವರ ಬಳಿ ಹೋಗಿ ಸಮಸ್ಯೆ ಹೇಳಿಕೊಳ್ಳಿ. ನಾನೂ ಮಾತಾಡುತ್ತೇನೆ. ಸಂಕಷ್ಟ ನಿವಾರಣೆಗೆ ಆದ್ಯತೆ ನೀಡೋಣ’ ಎಂದು ಭರವಸೆ ನೀಡಿದರು. ಉಪ ವಿಭಾಗಾಧಿಕಾರಿ ಶುಭಾ ಕಲ್ಯಾಣಿ, ತಹಶೀಲ್ದಾರ್ ವಿಜಯಣ್ಣ ಹಾಗೂ ಕೆಐಎಡಿಬಿ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT