ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಗೊತ್ತಿಲ್ಲ ಎಂದ ಹೆದ್ದಾರಿ ಅಧಿಕಾರಿ’

Last Updated 12 ಸೆಪ್ಟೆಂಬರ್ 2017, 8:55 IST
ಅಕ್ಷರ ಗಾತ್ರ

ಉಡುಪಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಯೋಜನಾ ನಿರ್ದೇಶಕರಿಗೆ ಕನ್ನಡ ಬರುವುದಿಲ್ಲ ಹಾಗೂ ಎನ್‌ಎಚ್‌ಎಐ ರಾಜ್ಯ ಪ್ರತಿನಿಧಿ ಸಭೆಗೆ ಹಾಜರಾಗಿಲ್ಲ ಎಂಬ ಕಾರಣಕ್ಕೆ ಹೆದ್ದಾರಿ ಸಮಸ್ಯೆ ಬಗ್ಗೆ ಚರ್ಚಿಸಲು ಸೋಮವಾರ ಆಯೋಜಿಸಿದ್ದ ವಿಶೇಷ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.

ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ಸದಸ್ಯ ಜನಾರ್ದನ ತೋನ್ಸೆ, ‘ಅಂಬಲಪಾಡಿ, ಕರಾವಳಿ ಜಂಕ್ಷನ್‌ ಹಾಗೂ ಕಲ್ಯಾಣಪುರ ಸಂತೆ ಕಟ್ಟೆಯ ಮೇಲ್ಸೇತುವೆ, ಅಂಡರ್‌ಪಾಸ್‌ ಬಗ್ಗೆ’ ಪ್ರಶ್ನೆ ಕೇಳಿದರು. ‘ಸಂತೆಕಟ್ಟೆಯಲ್ಲಿ ಜನರು ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗಲು ಅವಕಾಶ ಇಲ್ಲದಂತಹ ಸ್ಥಿತಿ ಇದೆ. ಅಂಡರ್‌ಪಾಸ್‌ನಲ್ಲಿ ದೊಡ್ಡ ಕಾರು ಸಹ ತಿರುವು ತೆಗೆದುಕೊಳ್ಳಲು ಆಗದು. ಇದಕ್ಕೆ ಏನು ಪರಿಹಾರ’ ಎಂದು ಪ್ರಶ್ನಿಸಿದರು.

ಯೋಜನಾ ನಿರ್ದೇಶಕ ವಿಜಯಕುಮಾರ್ ಮಾತನಾಡಿ, ಕನ್ನಡ ಬರುವುದಿಲ್ಲ. ಇಂಗ್ಲಿಷ್‌ನಲ್ಲಿ ಕೇಳಿ ಎಂದರು. ಅಧಿಕಾರಿಗೆ ಕನ್ನಡ ಬರುವುದಿಲ್ಲ ಎಂದರೆ ಸಮಸ್ಯೆಗಳನ್ನು ಅವರಿಗೆ ಮನದಟ್ಟು ಮಾಡಿಸುವುದು ಹೇಗೆ ಎಂದು ಸದಸ್ಯರು ಹಾಗೂ ಅಧ್ಯಕ್ಷ ದಿನಕರ ಬಾಬು ಆಕ್ಷೇಪ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಮಾತನಾಡಿ, ಹೆದ್ದಾರಿ ಪ್ರಾಧಿಕಾರದ ರಾಜ್ಯ ಪ್ರತಿನಿಧಿ ಸಭೆಗೆ ಬರದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಐಆರ್‌ಬಿ ಸಂಸ್ಥೆಯ ಯೋಜನಾ ನಿರ್ದೇಶಕ ಯೋಗೇಂದ್ರಪ್ಪ ಅವರು ಸದಸ್ಯರು ಮಾತನಾಡಿದ್ದನ್ನು ಇಂಗ್ಲಿಷ್‌ಗೆ ಅನುವಾದಿಸಿದರು.

ವಿಜಯಕುಮಾರ್ ಮಾತನಾಡಿ, ‘ರಸ್ತೆ ದಾಟಲು ಬೇಕಾದ ಪಾದಚಾರಿ ಮೇಲು ಸೇತುವೆ ಮೂಲ ಯೋಜನೆಯಲ್ಲಿ ಇಲ್ಲ. ಬೇಡಿಕೆ ಸಲ್ಲಿಸಿದರೆ ಪರಿಗಣಿಸಲಾಗುವುದು. ಪರಿಹಾರ ಧನ ಕಡಿಮೆ ಎಂದೆನಿಸಿದರೆ. ಜಿಲ್ಲಾಧಿಕಾರಿ ಅವರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದು.

ಅವರ ಆದೇಶದ ಬಗ್ಗೆಯೂ ಸಮಾಧಾನ ಇಲ್ಲ ಎಂದರೆ ಹೈಕೋರ್ಟ್‌ ಮೆಟ್ಟಿಲೇರಬಹುದು. ರಾಜ್ಯ ಸರ್ಕರದ ಮನವಿಯ ಮೇರೆಗೆ ಕೆಲವೆಡೆ ಹೆದ್ದಾರಿಯನ್ನು 45 ಮೀಟರ್‌ ಅಗಲಕ್ಕೆ ಇಳಿಸಲಾಗಿದೆ. ಉಳಿದ ಕಡೆ 60 ಮೀಟರ್ ಇದೆ’ ಎಂದರು.

ಈ ಉತ್ತರದಿಂದ ಅಸಮಾಧನಗೊಂಡ ಉಪಾಧ್ಯಕ್ಷೆ ಶೀಲಾ ಶೆಟ್ಟಿ ಅವರು, ಕೆಲವರಿಗೆ ಸೆಂಟ್ಸ್ ಜಾಗಕ್ಕೆ 30 ಸಾವಿರ ಪರಿಹಾರ ನೀಡಲಾಗಿದೆ. ಅದನ್ನು ಪಡೆದುಕೊಳ್ಳಲು ಹೈಕೋರ್ಟ್‌ ವರೆಗೂ ಹೋಗಬೇಾ’ ಎಂದು ಪ್ರಶ್ನಿಸಿದರು. ‘ಭೂ ಸ್ವಾಧೀನ ಮಾಡಿಕೊಂಡಿರುವ ಬಗ್ಗೆ ಸಹ ಜನರಿಗೆ ಸರಿಯಾಗಿ ಮಾಹಿತಿ ನೀಡಿಲ್ಲ’ ಎಂದು ಸಾಮಾಜಿಕ ನ್ಯಾಯ ಸಮಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT