ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ಜರಿ ಮಳೆ: ಕಲ್ಲಹಳ್ಳಿ ಕೆರೆ ಕೋಡಿ, ಚೆಕ್‌ಡ್ಯಾಂಗಳೂ ಭರ್ತಿ

Last Updated 12 ಸೆಪ್ಟೆಂಬರ್ 2017, 9:03 IST
ಅಕ್ಷರ ಗಾತ್ರ

ಚಿತ್ರದುರ್ಗ: ಹೊಲಗಳಲ್ಲಿ ಮೊಳಕಾಲುದ್ದ ನೀರು ನಿಂತಿದೆ. ಸುತ್ತಲಿನ ಗುಡ್ಡಗಳ ಮೇಲೆ ಸುರಿದ ಮಳೆಯ ನೀರು ಕೆರೆಗಳನ್ನು ತಲುಪಿ, ಕೋಡಿ ಹರಿಯುವಂತೆ ಮಾಡಿದೆ. ಸೇತುವೆಗಳ ಕೆಳಗೆ ಮೈದುಂಬಿ ಹರಿಯುತ್ತಿರುವ ನೀರನ್ನು ನೋಡುತ್ತಾ ಸಂಭ್ರಮಿಸುತ್ತಿರುವ ರೈತರು, ’ಇಷ್ಟು ಬಂತಲ್ಲ ಸಾಕು, ಹೆಂಗೋ ಹಿಂಗಾರು ಬೆಳೆ ಬೆಳ್ಕೊತ್ತೀವಿ..’ ಅಂತ ನಿಟ್ಟುಸಿರು ಬಿಡುತ್ತಿದ್ದಾರೆ.

ಚಿತ್ರದುರ್ಗದಿಂದ ಚಳ್ಳಕೆರೆ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಾ, ಕಲ್ಲಹಳ್ಳಿ, ಲಿಂಗಾವರಟ್ಟಿ, ಕಾಸಾವರಟ್ಟಿ ದಾಟಿ ಗೋನೂರು ರಸ್ತೆಯಲ್ಲಿ ಸಾಗಿದಾಗ ಇಂಥ ಸಂಭ್ರಮದ ದೃಶ್ಯಗಳು ಕಂಡವು. ಜತೆಗೆ ರಭಸದ ಮಳೆಗೆ ಜಮೀನುಗಳಲ್ಲಿ ಕೊರಕಲು ಉಂಟಾಗಿ ಜಮೀನ ಕೊಚ್ಚಿ ಹೋಗಿವೆ. ರಸ್ತೆಗಳ ಅಕ್ಕಪಕ್ಕದಲ್ಲಿ ಮಣ್ಣು ಕುಸಿದು, ಅಪಾಯಕ್ಕೆ ಆಹ್ವಾನಿಸಿರುವ ಸಂಕಟಗಳೂ ಕಂಡವು.

305 ಮಿ.ಮೀ ದಾಖಲೆ ಮಳೆ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಶುಕ್ರವಾರ 305 ಮಿ.ಮೀ ದಾಖಲೆ ಮಳೆಯಾಗಿದೆ. ಅದರ ಹಿಂದಿನ ದಿನವೂ ಬಿರುಸಿನ ಮಳೆಯಾಗಿತ್ತು. ಈ ಎರಡು ದಿನಗಳ ಮಳೆಗೆ ಕಲ್ಲಹಳ್ಳಿ ಕೆರೆ ಕೋಡಿ ಬಿದ್ದಿದೆ. ಇದರ ಕೋಡಿ ನೀರು ಚಿಕ್ಕಮದುರೆ ಕರೆಯತ್ತಾ ಸಾಗುತ್ತಾ, ಆ ಕೆರೆಯನ್ನೂ ಕೋಡಿ ಬೀಳಿಸಿದೆ. ‘ಹತ್ತು ವರ್ಷಗಳ ಹಿಂದೆ ಇಂಥ ಮಳೆ ಕಂಡಿದ್ದೆವು. ಆಗ ಕೆರೆ ತುಂಬಿತ್ತು. ಅದಾದ ನಂತರ ಈಗಲೇ ನೀರು ಕಾಣುತ್ತಿದ್ದೇವೆ’ ಎಂದು ಕಲ್ಲಹಳ್ಳಿ ಸಮೀಪದ ಸೇತುವೆ ಕೆಳಗೆ ರಭಸವಾಗಿ ಹರಿಯುತ್ತಿರುವ ಕೋಡಿ ನೀರು ಕಂಡ ರೈತರು ‘ಪ್ರಜಾವಾಣಿ’ಯೊಂದಿಗೆ ಮಳೆ ದಿನಗಳ ನೆನಪನ್ನು ಹಂಚಿಕೊಂಡರು.

ನೀರು ಇಂಗಿಸುತ್ತಿರುವ ಹೊಲಗಳು: ಮದಕರಿಪುರದ ದಾಟುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿರುವ ಹೊಲಗಳೆಲ್ಲ ಕೆರೆಗಳಂತೆ ಕಾಣುತ್ತವೆ. ಹೊಲದಲ್ಲಿ ನಿಂತಿರುವ ನೀರು ಇಂಗುತ್ತಾ, ಜೋಪಾಗಿ , ಹುಣಸೆ ಮರಗಳ ಪಕ್ಕದಲ್ಲಿ ತಿಳಿಯಾಗಿ ಕಾಲುವೆ ರೂಪದಲ್ಲಿ ಹರಿಯುತ್ತಿದೆ. ಇಂಥ ಜೋಪಿನ ನೀರು ಕಾಲುವೆಯಾಗಿ, ಮುಖ್ಯ ಕಾಲುವೆಗೆ ಸೇರಿ, ಗೋಕಟ್ಟೆಗಳನ್ನು ತುಂಬಿಸಿ, ಮುಂದೆ ದಂಡಿನಕುರುಬರಹಟ್ಟಿ ಕೆರೆಯ ಮೂಲಕ ರಾಣಿಕೆರೆ ತಲುಪುತ್ತದೆ ಎಂದು ಗ್ರಾಮಸ್ಥರು ತಿಳಿಸಿದರು.

‘ಎರಡು ದಿನ ಒಳ್ಳೆ ಮಳೆ. ಎಲ್ಲ ಹೊಲಗಗಳಲ್ಲಿ ನೀರು ನಿಂತೈತೆ. ನೀರು ಇಂಗಿ ಹೆಚ್ಚಾದ ಮೇಲೆ ಮುಂದಿನ ಹೊಲಕ್ಕೆ ಹರಿಸುತ್ತೇವೆ. ಈ ನೀರು ಮುಂದೆ ನಮ್ಮೂರ ಕೆರೆಗೆ ಹೋಗುತ್ತದೆ. ನೆಲ ಇಷ್ಟು ಹಸಿಯಾದರೆ ಸಾಕು, ಈ ವರ್ಷ ಬಿಳಿ ಜೋಳ, ಕೊತ್ತಂಬರಿ, ಕಡಲೆ ಹಾಕುತ್ತೇವೆ. ಈ ಬಾರಿ ಹಿಂಗಾರು ಉತ್ತಮವಾಗಿ ಬೆಳೆ ಬರುತ್ತದೆ’ ಎಂದು ದಂಡಿನಕುರುಬರಹಟ್ಟಿ ರೈತ ನಿಂಗಪ್ಪ, ನೀರು ನಿಂತ ಹೊಲದ ಕಡೆ ಕೈ ತೋರುತ್ತಾ ವಿಶ್ವಾಸದಿಂದ ಮಾತನಾಡಿದರು. ‘ಹೊಲಗಳಲ್ಲಿ ಬದು ಹಾಕುವುದರಿಂದ, ನೀರಷ್ಟೇ ಇಂಗಲ್ಲ. ಕೊಚ್ಚಿಹೋಗುವ ಮಣ್ಣು ಉಳಿಯುತ್ತೆ. ಇದು ನಮ್ಮ ತಾತ ಮುತ್ತಾತಂದಿರ ಕಾಲದಿಂದಲೂ ಮಾಡ್ಕೊಂಡು ಬಂದಿದ್ದೇವೆ’ ಎಂದು ಮಾತು ಮುಂದುವರಿಸಿದರು.

ಮಣ್ಣಿನ ಕೊರಕಲು, ರಸ್ತೆ ಬದಿ ಕುಸಿತ: ಬಹಳ ದಿನಗಳ ಮೇಲೆ ದಿಢೀರನೆ ಭೇಟಿ ಕೊಟ್ಟ ರಭಸದ ಪುಬ್ಬೆ ಮಳೆ ಸಂಭ್ರಮದ ಜತೆಗೆ ಸಂಕಷ್ಟವನ್ನು ತಂದೊಡ್ಡಿದೆ. ಕಲ್ಲಳ್ಳಿ – ಕಾಸಾವರಟ್ಟಿ ರಸ್ತೆಯ ಆಚೀಚೆಯಿರುವ ಜಮೀನುಗಳಲ್ಲಿ ತೀವ್ರವಾಗಿ ಮಣ್ಣು ಕೊಚ್ಚಿ ಕೊರಕಲು ಉಂಟಾ­ಗಿದೆ. ಅಲ್ಲಲ್ಲಿ ಕಲ್ಲು ಹೊದಿಸಿದ ಪುಟ್ಟ ಪುಟ್ಟ ಕೋಡಿಗಳು ಬಿಟ್ಟರೆ, ರಭಸದ ನೀರು ತಡೆಯುವ ಜಲಸಂರಕ್ಷಣಾ ರಚನೆಗಳು ಕಾಣಲಿಲ್ಲ.

ಕಾಸಾವರಹಟ್ಟಿ – ಗೋನೂರು ರಸ್ತೆಯಲ್ಲಿ ರಸ್ತೆಗೆ ಸರಿಯಾದ ಸೇತುವೆ ನಿರ್ಮಿಸಿದ ಪರಿಣಾಮ, ರೈತರೊಬ್ಬರ ಎರಡು ಎಕರೆ ಜಮೀನು ಮಣ್ಣು ಕೊಚ್ಚಿ ಹೋಗಿ, ಕಾಲುವೆಯಂತಾಗಿದೆ. ನೀರಿನ ರಭಸ ಅರಿಯದೇ ಹೀಗೆ ಕೊಳವೆ ಜೋಡಿಸಿದ್ದಾರೆ. ‘ಮಳೆ ಬಂತು ಅಂತ ಖುಷಿ ಆಯ್ತು. ಈಗ ನೋಡಿದರೆ ಜಮೀನು ಸರಿಮಾಡೋದು ಹೆಂಗೆ ಎಂದು ಚಿಂತೆಯಾಗಿದೆ’ ಎಂದು ಕೊರಕಲು ನೋಡುತ್ತಾ ಆ ಜಮೀನಿನ ರೈತರು ಬೇಸರ ವ್ಯಕ್ತಪಡಿಸಿದರು.

ಇದೇ ರಸ್ತೆಯಲ್ಲಿ ಮುಂದೆ ದ್ಯಾಮವ್ವನಹಳ್ಳಿಗೆ ಹೋಗುವಾಗ, ರಸ್ತೆ ಪಕ್ಕದ ಮಣ್ಣು ಕುಸಿದಿದೆ. ಮೊನ್ನೆ ಶಾಲಾ ಬಸ್ಸೊಂದು ಈ ಭಾಗದಲ್ಲಿ ಉರುಳಿಕೊಳ್ಳುವಂತಾಗಿತ್ತು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು. ರಸ್ತೆಯ ಉದ್ದಕ್ಕೂ, ಹೀಗೆ ಮಣ್ಣು ಕುಸಿದಿದೆ, ಮುಂದೆ ಇನ್ನೊಂದೆರಡು ದಿನ ಮಳೆ ಬಂದರೆ, ಇನ್ನೂ ಕುಸಿತ ಹೆಚ್ಚಾಗುವ ಸಾಧ್ಯತೆ ಇದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಒಟ್ಟಾರೆ, ಮೂರ್ನಾಲ್ಕು ವರ್ಷಗಳಿಂದ ಬರದ ಬೇಗೆಯಲ್ಲಿ ಬೇಯುತ್ತಿದ್ದ ಚಿತ್ರದುರ್ಗ ತಾಲ್ಲೂಕಿನ ಒಂದು ಭಾಗದ ಹಳ್ಳಿಗಳಲ್ಲಿ ಮಳೆಯ ಸಂಭ್ರಮ ಕಾಣಿಸುತ್ತಿದೆ. ಪುಬ್ಬೆ ಮಳೆ ಜತೆಗೆ, ಉತ್ತರೆ, ಹಸ್ತೆ ಮಳೆಯೂ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT