ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 12 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ವಿಷ್ಣುತೀರ್ಥ, ಮೈಸೂರು
ನಾನು ನಿಮ್ಮ  ಅಂಕಣದ ಅಭಿಮಾನಿ. ನಾನು ಸರ್ಕಾರಿ ಶಾಲಾ ಶಿಕ್ಷಕ. ನನ್ನ ಒಟ್ಟು ಮಾಸಿಕ ವೇತನ ₹ 26,393. ಕಡಿತ ಜಿಪಿಎಫ್‌₹ 1000, ಕೆಜಿಐಡಿ ಕಂತು ಮತ್ತು ಸಾಲದ ಕಂತು ₹ 5650 , ಜಿಪಿಎಫ್‌. ಸಾಲದ ಕಂತು ₹ 972, ಎಲ್‌ಐಸಿ, ₹ 493, ಪಿಟಿ–ಇಜಿಐಎಸ್‌ ₹ 320, ಪಿಎಲ್‌ಐ ₹ 1030, ವೈಯಕ್ತಿಕ ಸಾಲದ ಕಂತು ₹ 7,200, ಎಲ್ಲಾ ಕಡಿತ₹ 16,665ರ ನಂತರ ಉಳಿಕೆ ₹ 9728 ಮಾತ್ರ. ನನ್ನ ಸ್ವಂತ ಊರು ತಿಪಟೂರಿನ ಹತ್ತಿರದ ಹಳ್ಳಿ. ಅಲ್ಲಿ ನನ್ನ ತಂದೆ ತಾಯಿ ಇದ್ದಾರೆ. ನಾನು ಅಲ್ಲಿ ಮನೆ ಕಟ್ಟಬೇಕೆಂದಿದ್ದೇನೆ. ನಾನು ಬೆಂಗಳೂರಿನ ಸಮೀಪ ಒಂದು ರೆವೆನ್ಯೂ ನಿವೇಶನ ₹ 7.5 ಲಕ್ಷಕ್ಕೆ ಕೊಂಡುಕೊಂಡಿದ್ದೆ. ಅದನ್ನು ಮಾರಾಟ ಮಾಡಿ ಊರಿನಲ್ಲಿ ಮನೆ ಕಟ್ಟಿಸಬೇಕೆಂದಿದ್ದೇನೆ. ನನಗೆ 7 ವರ್ಷದ ಮಗನಿದ್ದಾನೆ. ನಿಮ್ಮ ಅಮೂಲ್ಯ ಸಲಹೆಗಾಗಿ ಕಾಯುತ್ತಿದ್ದೇನೆ.

ಉತ್ತರ: ಎಲ್ಲಾ ಕಡಿತದ ನಂತರ ಬರುವ ₹ 9728 ನಿಮ್ಮ ಖರ್ಚಿಗೆ ಸಾಕಾಗಬಹುದು ಎಂದು ಭಾವಿಸುತ್ತೇನೆ. ನಿಮ್ಮ ಸಂಬಳದಲ್ಲಿ ಆಗುವ ಕಡಿತದ ಸಿಂಹಪಾಲು ಸಾಲದ ಕಂತಿಗೆ ಮುಡುಪಾಗಿಟ್ಟಿದ್ದೀರಿ. ಬೆಂಗಳೂರು ಸಮೀಪ ನಿವೇಶನ ಕೊಳ್ಳಲು ಮಾಡಿರುವ ಸಾಲದ ಪ್ರಯುಕ್ತ, ಈ ಕಡಿತ ಅನಿವಾರ್ಯ, ಇರಲಿ ನಿಮ್ಮ ತಂದೆ ತಾಯಿಗಳು ಹಳ್ಳಿಯಲ್ಲಿ ಜೀವಿಸುತ್ತಿದ್ದು, ಅಲ್ಲಿ ನೀವು ಮನೆ ಕಟ್ಟಲು ಬೆಂಗಳೂರಿನ ರೆವೆನ್ಯೂ ನಿವೇಶನ ಮಾರಾಟ ಮಾಡಿ, ಸಾಧ್ಯವಾದಷ್ಟು ಸಾಲ ತೀರಿಸಿರಿ. ಉಳಿದ ಹಣ ಹಾಗೂ ಬ್ಯಾಂಕಿನಿಂದ ಸ್ವಲ್ಪ ದೀರ್ಘಾವಧಿ ಗೃಹ ಸಾಲ ಪಡೆದು, ನಿಮ್ಮ ಊರಿನಲ್ಲಿ ಮನೆ ಕಟ್ಟಿಸಿರಿ. ಇದರಿಂದ ನಿಮ್ಮ ತಂದೆ ತಾಯಿಗಳಿಗೆ ಅನುಕೂಲವಾಗುತ್ತದೆ, ಜೊತೆಗೆ ನಿಮ್ಮ ಜೀವನದ ಸಂಜೆಯಲ್ಲಿ ಊರಿನಲ್ಲಿ ಸುಖವಾಗಿ ಕಾಲ ಕಳೆಯಬಹುದು.

ರಾಮರಾಜು, ದೊಡ್ಡಬಳ್ಳಾಪುರ
ನಾನು ನೀರಿನ ವ್ಯಾಪಾರಿ. ತಿಂಗಳಿಗೆ ₹ 20,000 ಸಂಪಾದಿಸುತ್ತಿದ್ದೆ. ಈಗ ಸರ್ಕಾರ ನೀಡುವ ನೀರಿನ ಘಟಕಗಳಿಂದಾಗಿ ನಮಗೆ ಆದಾಯ ಕಡಿಮೆಯಾಗಿದೆ. ನಾನು ಲಕ್ಕಿ ಡ್ರಾ ಬಿಸಿನೆಸ್‌ ಮಾಡಬೇಕೆಂದಿದ್ದೇನೆ.  ₹ 1100 X200 ಜನರ ಹಾಗೆ 12 ತಿಂಗಳು, ಪ್ರತೀ ತಿಂಗಳು, 3,8,10,15,20,25 ಜನರಿಗೆ ಡ್ರಾ ಆಗುತ್ತದೆ. ಈ ಡ್ರಾ ಹಣ ಕಟ್ಟಬೇಕಾಗಿಲ್ಲ. ಈ ಉದ್ಯೋಗ ಮಾಡಲು ಲೈಸನ್ಸ್‌ ಅಥವಾ ಸರ್ಕಾರದ ಪರವಾನಿಗೆ ಬೇಕೆ?

ಉತ್ತರ: ಈ ಹಿಂದೆ ಕರ್ನಾಟಕ ಸರ್ಕಾರ ಲಾಟರಿ ಯೋಜನೆ ನಿರ್ವಹಿಸುತ್ತಿತ್ತು. ಈಗ ಅದನ್ನು ರದ್ದುಪಡಿಸಲಾಗಿದೆ. ನೀವು ಪ್ರಾರಂಭಿಸಲು ಇಚ್ಚಿಸುವ ಯೋಜನೆ ಕೂಡಾ ಸಣ್ಣ ರೀತಿಯಲ್ಲಿ ಅದೇ ಮಾದರಿಯದ್ದಾಗಿದೆ. ಇಂತಹ ಯೋಜನೆಗೆ ಸರ್ಕಾರ ಲೈಸೆನ್ಸ್‌ ಅಥವಾ ಪರವಾನಿಗೆ ನೀಡುವುದಿಲ್ಲ. ಚಿಟ್‌ ಫಂಡ್‌ ವ್ಯವಹಾರ ಮಾಡಲು ಕೂಡಾ ಸಾಮಾನ್ಯರಿಂದ ಸಾಧ್ಯವಿಲ್ಲ. ನೀವು ಈ ವ್ಯವಹಾರಕ್ಕೆ ಕೈ ಹಾಕಬೇಡಿ. ಇದು ಅಪರಾಧವಾಗುತ್ತದೆ.

ಆರ್‌. ಮೈಲಾರಪ್ಪ, ಬೆಂಗಳೂರು
ನಾನು ಹಿರಿಯ ನಾಗರಿಕ. ತಿಂಗಳ ಪಿಂಚಣಿ ₹ 23,000. ನನ್ನ ತಿಂಗಳ ಖರ್ಚು ₹ 5000–6000. ಇದರಿಂದ ನಾನು ವಾರ್ಷಿಕವಾಗಿ₹ 2 ಲಕ್ಷ ಉಳಿಸುತ್ತೇನೆ. ಇದರಿಂದ ಸುಮಾರು ₹ 15,000 ಬಡ್ಡಿ ಬರುತ್ತದೆ. ನಾನು ಬ್ಯಾಂಕಿಗೆ 15ಎಚ್‌ ಕೊಡುತ್ತಿದ್ದೇನೆ. ನನ್ನ ಉಳಿತಾಯ ಹಾಗೂ ತೆರಿಗೆ ವಿಚಾರದಲ್ಲಿ ಮಾರ್ಗದರ್ಶನ ಮಾಡಿರಿ. ನಾನು 20 ವರ್ಷಗಳ ಹಿಂದೆ ಪ್ಯಾನ್‌ಕಾರ್ಡು ಮಾಡಿಸಿದ್ದು, ಈ ಕಾರ್ಡು ನವೀಕರಿಸುವ ಅಗತ್ಯ ವಿದೆಯೇ. ನಾನು ಇರಿಸಿದ ಠೇವಣಿ ಮಗಳಿಗೆ ಕೊಟ್ಟರೆ, ಅವಳು ತೆರಿಗೆ ಕೊಡಬೇಕಾಗುತ್ತಿದೆಯೇ?

ಉತ್ತರ: ನೀವು ಪಡೆಯುವ ಪಿಂಚಣಿಯಲ್ಲಿ ನಿಮ್ಮ ಖರ್ಚು ಕಳೆದು ಉಳಿದ ಹಣ ಉಳಿತಾಯ ಖಾತೆಯಲ್ಲಿ ಬಿಟ್ಟು ಅದು ಒಂದು ದೊಡ್ಡ ಮೊತ್ತವಾದ ನಂತರ ಅವಧಿ ಠೇವಣಿ ಮಾಡುತ್ತಿರುವಂತೆ ಕಾಣುತ್ತದೆ. ಇದರಿಂದ ನಿಮಗೆ ಉಳಿತಾಯದ ಲೆಕ್ಕ ಸರಿಯಾಗಿ ಸಿಗುತ್ತಿಲ್ಲ. ನಿಮ್ಮ ಪಿಂಚಣಿ ವರಮಾನಕ್ಕೆ ಹಾಗೂ ನಿಮ್ಮ ಖರ್ಚಿಗೆ ಬಳಸುವ ಹಣ ಇವೆರಡನ್ನು ಗಮನಿಸಿದಾಗ ನೀವು ತಿಂಗಳಿಗೆ ₹ 15,000 ಆರ್‌.ಡಿ. ಮಾಡುವುದೇ ಲೇಸು. ಇದರಿಂದ ನಿಮ್ಮ ಹಣ ಚಕ್ರಬಡ್ಡಿಯಲ್ಲಿ ವೃದ್ಧಿಯಾಗುತ್ತದೆ. ಆರ್‌.ಡಿ.ಗೂ ಆದಾಯ ತೆರಿಗೆ ವಿನಾಯ್ತಿ ಇಲ್ಲವಾದ್ದರಿಂದ, ನೀವು ಈ ಖಾತೆಗೆ ಬ್ಯಾಂಕಿನವರು ಜಮಾ ಮಾಡುವ ಬಡ್ಡಿಯನ್ನು ಆದಾಯಕ್ಕೆ ಸೇರಿಸಿ ಆದಾಯ ತೆರಿಗೆ ಸಲ್ಲಿಸಬೇಕಾಗುತ್ತದೆ.

ಬ್ಯಾಂಕಿನಲ್ಲಿ ವಾರ್ಷಿಕವಾಗಿ ಬಂದಿರುವ ಬಡ್ಡಿಗೆ ಫಾರಂ ನಂ. 16(ಎ) ಪಡೆಯಿರಿ. ನಿಮ್ಮ ವಾರ್ಷಿಕ ಪಿಂಚಣಿ ಮೊತ್ತ ಹಾಗೂ ಆರ್‌.ಡಿ.ಯಿಂದ ಬರುವ ಬಡ್ಡಿ ಸೇರಿಸಿದಾಗ, ಆ ಮೊತ್ತ ₹ 3 ಲಕ್ಷ ದಾಟಿದಲ್ಲಿ, ಹೆಚ್ಚಿನ ಮೊತ್ತಕ್ಕೆ ಮಾತ್ರ ತೆರಿಗೆ ಸಲ್ಲಿಸಬೇಕು ಹಾಗೂ ರಿಟರ್ನ್‌ ತುಂಬಬೇಕಾಗುತ್ತದೆ. ನಿಮ್ಮೊಡನಿರುವ ಪ್ಯಾನ್‌ ಕಾರ್ಡು 20 ವರ್ಷಗಳ ಹಿಂದೆ ಪಡೆದದ್ದಾದರೂ, ಅದನ್ನು ನವೀಕರಿಸುವ ಅಗತ್ಯವಿಲ್ಲ.ನೀವು ಮಗಳಿಗೆ ನಿಮ್ಮ ಠೇವಣಿ ವರ್ಗಾಯಿಸಿದರೆ, ಅವರು ನೀವು ವರ್ಗಾಯಿಸಿದ ಠೇವಣಿಯಿಂದ ಬರುವ ಬಡ್ಡಿ ಅವರ ಆದಾಯಕ್ಕೆ ಸೇರಿಸಿ ಆದಾಯ ತೆರಿಗೆ ಕೊಡಬೇಕಾಗುತ್ತದೆ. ಇದೇ ವೇಳೆ ನಿಮ್ಮ ಮಗಳಿಗೆ ಬರುವ ಒಟ್ಟು ವಾರ್ಷಿಕ ವರಮಾನ (ಠೇವಣಿ ಮೇಲಿನ ಬಡ್ಡಿ ಹಾಗೂ ಇತರೆ ಆದಾಯ) ₹ 2.50 ಲಕ್ಷದೊಳಗೆ ಇರುವಲ್ಲಿ ಅವರು ತೆರಿಗೆ ಕೊಡುವ ಅವಶ್ಯವಿಲ್ಲ. ನೀವು ಇರಿಸಿದ ಠೇವಣಿ ಮಗಳಿಗೆ ವರ್ಗಾಯಿಸಿದರೆ ಹಾಗೆ ವರ್ಗಾಯಿಸಿದ ಹಣಕ್ಕೆ, ನಿಮ್ಮ ಮಗಳಾಗಲೀ, ನೀವಾಗಲೀ ತೆರಿಗೆ ಸಲ್ಲಿಸುವ ಅವಶ್ಯವಿಲ್ಲ.

ಶಿವಕುಮಾರಸ್ವಾಮಿ, ಕುಮಾರಸ್ವಾಮಿ ಲೇಔಟ್‌
ನನ್ನ ವಯಸ್ಸು  69. ಸ್ವಂತ ಮನೆ ಇದೆ. ನಾನು ನನ್ನ ಮೂರು ಜನ ಮೊಮ್ಮಕ್ಕಳ ಹೆಸರಿನಲ್ಲಿ ತಲಾ ₹ 1 ಲಕ್ಷ ಠೇವಣಿ ಮಾಡಬೇಕೆಂದಿದ್ದೇನೆ. ಅವರ ವಿದ್ಯಾಭ್ಯಾಸ– ಮದುವೆ ಸಂದರ್ಭದಲ್ಲಿ, ಅನುಕೂಲವಾಗಲು ಸರಿಯಾದ ಮಾರ್ಗದರ್ಶನ ಮಾಡಿ.

ಉತ್ತರ: ನೀವು ಹಿರಿಯ ನಾಗರಿಕರಾದ್ದರಿಂದ, ನಿಮ್ಮ ಉದ್ದೇಶ ಸಫಲವಾಗಲು, ₹ 1 ಲಕ್ಷದಂತೆ ಮೂವರು ಮೊಮ್ಮಕ್ಕಳ ಸಲುವಾಗಿ 10 ವರ್ಷಗಳ ಅವಧಿಗೆ, ನಿಮ್ಮ ಮನೆಗೆ ಸಮೀಪದ ಬ್ಯಾಂಕಿನಲ್ಲಿ, ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ, ನಿಮ್ಮ ಹೆಸರಿನಲ್ಲಿಯೇ ಠೇವಣಿ ಮಾಡಿ, ಪ್ರತ್ಯೇಕವಾಗಿ ಪ್ರತಿ ಠೇವಣಿಗೂ, ಬೇರೆ ಬೇರೆ ಮೊಮ್ಮಕ್ಕಳ ಹೆಸರಿನಲ್ಲಿ ನಾಮ ನಿರ್ದೇಶನ ಮಾಡಿರಿ. ನಿಮ್ಮ ಮೊಮ್ಮಕ್ಕಳು ಅಷ್ಟರಲ್ಲಿ ಪ್ರಾಪ್ತ ವಯಸ್ಕರಾದರೆ, ಮುಂದೆ ಅವರ ಹೆಸರಿನಲ್ಲಿ ಠೇವಣಿ ಮಾಡಿ ಮುಂದುವರಿಸಿರಿ.

ಒಮ್ಮೆಲೇ ಬಡ್ಡಿ ಬರುವ ಯೋಜನೆಯಲ್ಲಿ, ನಿಮ್ಮ ಹಣ ಚಕ್ರಬಡ್ಡಿಯಲ್ಲಿ ಬೆಳೆಯುತ್ತದೆ, ಜೊತೆಗೆ ದೊಡ್ಡ ಮೊತ್ತ ಕೈಸೇರುತ್ತದೆ. ಬ್ಯಾಂಕುಗಳಲ್ಲಿ 10 ವರ್ಷಗಳಿಗಿಂತ ಹೆಚ್ಚಿನ ಅವಧಿ ಠೇವಣಿ ಇರಿಸುವಂತಿಲ್ಲ. ಮುಂದೆ ಮಕ್ಕಳ ಪ್ರಯತ್ನಕ್ಕೆ ಅನುಗುಣವಾಗಿ, ನಿಮ್ಮ ಅಥವಾ ಅವರ ಹೆಸರಿನಲ್ಲಿ ಠೇವಣಿ ಮುಂದುವರಿಸಬಹುದು. ಹೀಗೆ ಮಾಡಿದಲ್ಲಿ ನಿಮ್ಮ ಉದ್ದೇಶ ಸಫಲವಾಗುತ್ತದೆ. ಠೇವಣಿ ನಿಮ್ಮ ಹೆಸರಿನಲ್ಲಿ ಇರಿಸುವುದರಿಂದ ಬ್ಯಾಂಕಿನಲ್ಲಿ ಹಿರಿಯ ನಾಗರಿಕರಿಗೆ ಕೊಡುವ ಹೆಚ್ಚಿನ ಬಡ್ಡಿ, ಠೇವಣಿಯ ಮೇಲೆ ಪಡೆಯಬಹುದು.

ಯಜ್ಞನಾರಾಯಣ ಉಳ್ಳೂರು, ಕೋಟೇಶ್ವರ (ಉಡುಪಿ ಜಿಲ್ಲೆ)
ಎಲ್‌.ಐ.ಸಿ.ಯವರ ಭೀಮಾ ಬಚತ್‌ ಯೋಜನೆಯಲ್ಲಿ ಠೇವಣಿಗೆ  ಆದಾಯತೆರಿಗೆ ವಿನಾಯ್ತಿ ದೊರೆಯುವುದೇ. ಈ ಯೋಜನೆಯಲ್ಲಿ ಮೂರು ವರ್ಷಗಳಿಗೊಮ್ಮ ಸರ್ವೈವಲ್‌ ಬೆನಿಫಿಟ್‌ ಮೊತ್ತಕ್ಕೆ ಆದಾಯ ತೆರಿಗೆ ಇದೆಯೇ?

ಉತ್ತರ: ಸೆಕ್ಷನ್‌ 10 (10ಡಿ)– ವಿಮೆಯ ಮೊತ್ತದ ಶೇ 20 ರಷ್ಟು, 1–4–2003ರ ನಂತರ, ಹಾಗೂ ಶೇ 10 ರಷ್ಟು 1–4–2012 ನಂತರ ಕೊಡುವ ಪ್ರೀಮಿಯಂ ಇರುವಲ್ಲಿ, ಈ ಸೆಕ್ಷನ್‌ ಆಧಾರದ ಮೇಲೆ ಏನೂ ವಿನಾಯ್ತಿ ಪಡೆಯುವಂತಿಲ್ಲ. ಎಲ್‌.ಐ.ಸಿ.ಯವರ ಭೀಮಾ ಬಚತ್‌ ಯೋಜನೆಯಲ್ಲಿ ಇರಿಸಿದ ಠೇವಣಿ ಹಾಗೂ ಸರ್ವೈವಲ್‌ ಬೆನಿಫಿಟ್‌ ಇವೆರಡೂ ವಿಚಾರದಲ್ಲಿ ತೆರಿಗೆ ವಿನಾಯ್ತಿ ಇರುವುದಿಲ್ಲ. ಓರ್ವ ವ್ಯಕ್ತಿ ಇಂತಹ ಪಾಲಿಸಿಗಳಿಂದ ಪಡೆಯುವ ಹಣ, ಆಯಾ ಆರ್ಥಿಕ ವರ್ಷದಲ್ಲಿ ಲೆಕ್ಕಕ್ಕೆ ತೆಗೆದುಕೊಂಡಾಗ ಆತನ ಒಟ್ಟು ಆದಾಯ, ಆದಾಯ ತೆರಿಗೆಯವರು ವಿಧಿಸುವ ಮಿತಿಯಲ್ಲಿ ಇರುವಲ್ಲಿ ಮಾತ್ರ ತೆರಿಗೆ ಕೊಡುವ ಅವಶ್ಯವಿಲ್ಲ.

ಕೇಶವ ಪ್ರಭು, ಶಿವಮೊಗ್ಗ 3 ವರ್ಷದ ಮೊಮ್ಮಗನಿದ್ದಾನೆ. ನನ್ನ ಆರ್‌.ಡಿ. ಮಾಡಿದ ಹಣ ಸುಮಾರು ₹ 40,000 ಉಳಿತಾಯ ಖಾತೆಯಲ್ಲಿದೆ. ಮುಂದೆ ಅವನ ಶಿಕ್ಷಣಕ್ಕೆ ದೊರೆಯುವಂತೆ ಗರಿಷ್ಠ ವರಮಾನ ಬರುವ ಹೂಡಿಕೆ ಯಾವುದರಲ್ಲಿ ಮಾಡಬಹುದು. (ಎಲ್‌.ಐ.ಸಿ., ಬ್ಯಾಂಕ್‌, ಪೋಸ್ಟ್‌ ಆಫೀಸ್‌)

ಉತ್ತರ: ಹಿರಿಯ ನಾಗರಿಕರಾದ್ದರಿಂದ, ಠೇವಣಿ ಮೇಲೆ ಉಳಿದವರಿಗಿಂತ ಹೆಚ್ಚಿಗೆ ಬಡ್ಡಿ ಪಡೆಯಬಹುದಾದ್ದರಿಂದ ₹ 40,000 ನಿಮ್ಮ ಹೆಸರಿನಲ್ಲಿ 10 ವರ್ಷಗಳ ಅವಧಿಗೆ, ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಬ್ಯಾಂಕಿನಲ್ಲಿ ಇರಿಸಿ, ಮೊಮ್ಮಗನ ಹೆಸರಿನಲ್ಲಿ ನಾಮ ನಿರ್ದೇಶನ ಮಾಡಿ. ಬ್ಯಾಂಕುಗಳಲ್ಲಿ 10 ವರ್ಷಕ್ಕೂ ಹೆಚ್ಚಿನ ಅವಧಿಗೆ ಠೇವಣಿ ಮಾಡುವಂತಿಲ್ಲವಾದ್ದರಿಂದ, ಬರುವ ಮೊತ್ತ ಮುಂದುವರಿಸಿ ಅಲ್ಲಿಯೇ ಮುಂದೆ ಠೇವಣಿ ಮಾಡಬಹುದು. ಎಲ್‌ಐಸಿ, ಪೋಸ್ಟ್‌ ಆಫೀಸ್‌ಗಳಲ್ಲಿ ಇದಕ್ಕೂ ಸರಳ ಯೋಜನೆಗಳಿರಲಾರವು. ಹೀಗೆ ಠೇವಣಿ10 ವರ್ಷಗಳ ಅವಧಿಗೆ ಮಾಡಿದರೂ, ತುರ್ತು ಸಂದರ್ಭದಲ್ಲಿ ಅವಧಿಗೆ ಮುನ್ನ ಇಟ್ಟು ಠೇವಣಿ ವಾಪಸು ಪಡೆಯುವ ಸೌಲತ್ತು ಬ್ಯಾಂಕಿಗಳಲ್ಲಿ ಇರುತ್ತವೆ.

ಹೆಸರು ಬೇಡ, ವಿಜಯನಗರನನ್ನ ವಯಸ್ಸು 79, ಕೇಂದ್ರ ಸರ್ಕಾರದ ನಿವೃತ್ತ ನೌಕರ, ನನ್ನ ಪಿಂಚಣಿ ಮೊತ್ತ ಹಾಗೂ ಬ್ಯಾಂಕ್‌ ಠೇವಣಿ ಮೇಲಿನ ಬಡ್ಡಿ ಸೇರಿಸಿ ವಾರ್ಷಿಕವಾಗಿ ₹ 348560 ಬರುತ್ತದೆ. ಎರಡು ತಿಂಗಳ ಹಿಂದೆ ₹ 20000 ಅಂಚೆ ಕಚೇರಿ ಎನ್‌ಎಸ್‌ಸಿ ಖರೀದಿಸಿದ್ದೆ. ನಾನು ಆದಾಯ ತೆರಿಗೆ ವ್ಯಾಪ್ತಿಗೆ ಬರುತ್ತೇನೆಯೇ? ತೆರಿಗೆ ಉಳಿಸಲು ಮಾರ್ಗದರ್ಶನ ನೀಡಿರಿ. ಅಂಚೆ ಕಚೇರಿ ಹಿರಿಯ ನಾಗರಿಕರ ಎಫ್‌.ಡಿ. ತೆರೆಯಬಹುದೇ, ತೆರಿಗೆ ರಿಟರ್ನ್‌ ತುಂಬಬೇಕೇ?

ಉತ್ತರ: ನೀವು 1938 ರಲ್ಲಿ ಜನಿಸಿದ್ದರೆ ಮುಂದಿನ ಹಣಕಾಸು ವರ್ಷದಿಂದ, ನಿಮ್ಮ ಪಿಂಚಣಿ ಹಾಗೂ ಠೇವಣಿಯ ಮೇಲಿನ ಬಡ್ಡಿ, ಒಟ್ಟು ವಾರ್ಷಿಕ ಆದಾಯ, ₹ 5 ಲಕ್ಷಗಳ ತನಕ ತೆರಿಗೆ ಕೊಡುವ ಅಥವಾ ರಿಟರ್ನ್‌ ತುಂಬುವ ಅವಶ್ಯವಿಲ್ಲ. ಈ ಅವಧಿಗೆ ಮುನ್ನ ಜನಿಸಿದಲ್ಲಿ, ₹ 3 ಲಕ್ಷಗಳ ತನಕ ನೀವು ಪಡೆಯುವ ವಾರ್ಷಿಕ ಆದಾಯಕ್ಕೆ ತೆರಿಗೆ ಇರುವುದಿಲ್ಲ. ನೀವು ₹ 3,48,560 ವಾರ್ಷಿಕವಾಗಿ ವರಮಾನ ಪಡೆಯುತ್ತಿದ್ದು, ಇದರಲ್ಲಿ ಎನ್‌ಎಸ್‌ಸಿ ₹ 20,000 ಕಳೆದು ₹ 3,28,560ಕ್ಕೆ ತೆರಿಗೆ ಸಲ್ಲಿಸಬೇಕು ಹಾಗೂ ರಿಟರ್ನ್‌ ತುಂಬಬೇಕು. ಇದೇ ವೇಳೆ ಅಂಚೆ ಕಚೇರಿ ಸೀನಿಯರ್‌ ಸಿಟಿಜನ್‌ ಠೇವಣಿ, ಮಿತಿಗಿಂತ ಹೆಚ್ಚಿಗೆ ಪಡೆದ ಆದಾಯಕ್ಕನುಗುಣವಾಗಿ ಮಾಡಿ, ತೆರಿಗೆ ವಿನಾಯ್ತಿ ಪಡೆಯಬಹುದು.

ಶಂಕರ, ಗದಗ
ನಾನು ಪ್ರಾಥಮಿಕ ಶಾಲಾ ಶಿಕ್ಷಕ, ವಯಸ್ಸು 42. ಹೆಂಡತಿ ಗೃಹಿಣಿ. ನಮಗೆ 5 ಹಾಗೂ 2 ವರ್ಷದ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ನನ್ನ ಉಳಿತಾಯ ಎಲ್‌ಐಸಿ ₹ 1318, ಕೆಜಿಐಡಿ ₹ 600 ಜಿಪಿಎಫ್‌ 3500, ಗೃಹ ಸಾಲದ ಕಂತು ₹ 4200 ಸುಕನ್ಯಾ ಸಮೃದ್ಧಿ ಯೋಜನೆ ₹ 5000, ಪಿಎಲ್‌ಐ ₹ 235. ಗೃಹಸಾಲ ಪಡೆದು 23X18 ರಲ್ಲಿ  ಮನೆ ಕಟ್ಟಿದ್ದೇನೆ. ನನ್ನ ಹೆಣ್ಣುಮಕ್ಕಳ ಭವಿಷ್ಯಕ್ಕೆ ಮಾರ್ಗದರ್ಶನ ಮಾಡಿರಿ. ನನ್ನ ಅಣ್ಣನ ಮಗ 5ನೇ ತರಗತಿಯಲ್ಲಿ ಓದುತ್ತಿದ್ದು, ಅವನ ಉನ್ನತ ಶಿಕ್ಷಣದ ಜವಾಬ್ದಾರಿಯೂ ನನ್ನ ಮೇಲಿದೆ. ನಿಮ್ಮ ಸಲಹೆ ಲಕ್ಷಾಂತರ ಜನರಿಗೆ ಸಹಾಯವಾಗುತ್ತಿದೆ, ನಿಮಗೆ ಅನಂತ ಕೋಟಿ ವಂದನೆಗಳು
.

ಉತ್ತರ: ನೀವು ಪ್ರಾಥಮಿಕ ಶಿಕ್ಷಕರಾಗಿದ್ದು, ನೀವು ಮಾಡುತ್ತಿರುವ ಉಳಿತಾಯ ನನಗೆ ಸಂತಸ ತಂದಿದೆ, ಜೊತೆಗೆ ಸಕಾಲದಲ್ಲಿ ಗೃಹ ಸಾಲ ಪಡೆದು ಸ್ವಂತ ಪಡೆದು ಸ್ವಂತ ಮನೆ ಮಾಡಿರುವುದಕ್ಕೆ ಅಭಿನಂದನೆಗಳು. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನಿಗದಿತ ಹಣ ತೊಡಗಿಸುತ್ತಿರುವುದರಿಂದ, ನಿಮ್ಮ ಹೆಣ್ಣುಮಕ್ಕಳ ಭವಿಷ್ಯ ಹಸನಾಗುತ್ತದೆ, ಸಾಧ್ಯವಾದಲ್ಲಿ ತಲಾ 5 ಗ್ರಾಮ್‌ ಬಂಗಾರ ವಾರ್ಷಿಕವಾಗಿ ಕೊಳ್ಳಿರಿ. ಈ ಪ್ರಕ್ರಿಯೆ ಮಕ್ಕಳ ಮದುವೆ ತನಕ ನಿಲ್ಲಿಸದಿರಿ. ನಿಮ್ಮ ಅಣ್ಣನ ಮಗ ಹಾಗೂ ನಿಮ್ಮ ಹೆಣ್ಣುಮಕ್ಕಳು, ವೃತ್ತಿಪರ ಶಿಕ್ಷಣ ಮುಂದೆ ಪಡೆಯುವಾಗ, ಕೇಂದ್ರ ಸರ್ಕಾರದ  ಅನುದಾನಿತ ಬಡ್ಡಿ (ಬಡ್ಡಿ ರಹಿತ) ಶಿಕ್ಷಣ ಸಾಲ ಸಿಗುತ್ತದೆ. ನಿಮ್ಮ ಇಡೀ ಕುಟುಂಬಕ್ಕೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು (ದೂರವಾಣಿ ಸಂಖ್ಯೆ ಸಹಿತ) ಪತ್ರದಲ್ಲಿ ಬರೆದು ಕಳುಹಿಸಿ.ಪರಿಣತರಿಂದ ಸೂಕ್ತ ಉತ್ತರ ಪಡೆಯಬಹುದು. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–56001.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT