ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯ ತಪಾಸಣೆಗೊಂದು ಆ್ಯಪ್‌

Last Updated 12 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಅಮೆರಿಕದ ವಿಜ್ಞಾನಿಗಳು ನಾಡಿ ಬಡಿತದ ಮೂಲಕ ಹೃದಯದ ಆರೋಗ್ಯ ಪರೀಕ್ಷಿಸುವ ವಿಧಾನವನ್ನು ಕಂಡುಹಿಡಿದಿದ್ದಾರೆ. ಇನ್ನು ಮುಂದೆ ಆಲ್ಟ್ರಾಸೌಂಡ್‌ ಅಥವಾ ಎಂಆರ್‌ಐ ತಪಾಸಣೆ ಇಲ್ಲದೆ ಸ್ಮಾರ್ಟ್‌ ಫೋನ್‌ಗಳ ಮೂಲಕವೇ ನಮ್ಮ ಹೃದಯದ ಆರೋಗ್ಯವನ್ನು ನಾವೇ ಪರೀಕ್ಷೆ ಮಾಡಿಕೊಳ್ಳಬಹುದು. ಕ್ಯಾಲಿಫೋರ್ನಿಯಾದ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ವಿಜ್ಞಾನಿಗಳು ನೂತನ ಆ್ಯಪ್‌ ರೂಪಿಸುವ ಮೂಲಕ ಈ  ವಿಧಾನ ಪರಿಚಯಿಸಿದ್ದಾರೆ.

ವಿಜ್ಞಾನಿಗಳು ವಿನ್ಯಾಸ ಮಾಡಿರುವ ಆ್ಯಪ್‌ ಅನ್ನು ಬಳಕೆದಾರರು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ನಂತರ ಆ್ಯಪ್‌ ಓಪನ್‌ ಮಾಡಿ ಸ್ಮಾರ್ಟ್‌ಫೋನ್‌ನನ್ನು ಕೈಯಲ್ಲಿ ಒಂದು ಅಥವಾ ಎರಡು ನಿಮಿಷ ಹಿಡಿದುಕೊಂಡರೆ ಸಾಕು ನಮ್ಮ ಹೃದಯದ ಆರೋಗ್ಯದ ಮಾಹಿತಿ ಸ್ಮಾರ್ಟ್‌ ಫೋನ್‌ ಪರದೆಯ ಮೇಲೆ ಬಿತ್ತರವಾಗುತ್ತದೆ.

ಈ ಆ್ಯಪ್‌ ಗೆ ದೇಹದ ನಾಡಿ ಬಡಿತ ಹಾಗೂ ಹೃದಯದ ಮಿಡಿತವನ್ನು ಗ್ರಹಿಸುವ ಸಾಮರ್ಥ್ಯವಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಒಂದು ನಿಮಿಷದಲ್ಲಿ ಹೃದಯದಿಂದ ಎಷ್ಟು ರಕ್ತವನ್ನು ಪಂಪ್‌ ಮಾಡಲಾಗಿದೆ ಎಂಬುದನ್ನು ಸಹ ಈ ಆ್ಯಪ್‌ ತಿಳಿಸುತ್ತದೆ. ಇದಕ್ಕೆ ಎಲ್‌ವಿಇಎಫ್‌ ಎಂದು ಹೆಸರಿಡಲಾಗಿದೆ.
ಗೂಗಲ್‌ ಪ್ಲೇಸ್ಟೋರ್‌: lvef app

ವಾಟ್ಸ್‌ ಆ್ಯಪ್‌ನಿಂದ ಹೊಸ ವಾಣಿಜ್ಯ ಅಪ್ಲಿಕೇಷನ್‌
ಫೇಸ್‌ಬುಕ್‌ನ ಮತ್ತೊಂದು ಅಂಗ ಸಂಸ್ಥೆಯಾದ ವಾಟ್ಸ್‌ ಆ್ಯಪ್‌ ವಾಣಿಜ್ಯ ಸೇವೆಗಾಗಿ ನೂತನ ಅಪ್ಲಿಕೇಷನ್‌ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಜಾಗತಿಕವಾಗಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್‌ ಆ್ಯಪ್‌ ಸಣ್ಣ ಉದ್ದಿಮೆದಾರರು, ವ್ಯಾಪಾರಸ್ಥರು ಮತ್ತು ಕಿರು ಉದ್ಯಮಿಗಳ ಅನುಕೂಲಕ್ಕಾಗಿ ಈ ಹೊಸ ವಾಣಿಜ್ಯ ಅಪ್ಲಿಕೇಷನ್‌ ಪರಿಚಯಿಸುತ್ತಿದೆ.

ಇದರಿಂದ ಬಳಕೆದಾರರು ವಾಟ್ಸ್‌ ಆ್ಯಪ್‌ ವೇದಿಕೆಯ ಮೂಲಕ ತಮ್ಮ ವಾಣಿಜ್ಯ ವ್ಯವಹಾರಗಳನ್ನು ವಿಸ್ತರಿಸಿಕೊಳ್ಳಬಹುದಾಗಿದೆ. ಇದರಿಂದ ವಾಟ್ಸ್‌ ಆ್ಯಪ್‌ ಕಂಪೆನಿಗೆ ವರಮಾನ ದೊರೆಯಲಿದೆ.

ಉಚಿತ ವಾಟ್ಸ್‌ ಆ್ಯಪ್‌ ವೇದಿಕೆಯ ಮೂಲಕ ಆದಾಯ ಗಳಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಣ್ಣ ಉದ್ಯಮಗಳ ಮೇಲೆ ಕಣ್ಣಿಟ್ಟಿರುವ ವಾಟ್ಸ್‌ ಆ್ಯಪ್‌ ಗ್ರೂಪ್‌ ನೂತನ ಅಪ್ಲಿಕೇಷನ್‌ ಪರಿಚಯಿಸುತ್ತಿದೆ ಎಂದು ಡಿಜಿಟಲ್‌ ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೊಸ ಅಪ್ಲಿಕೇಷನ್‌ನಲ್ಲಿ ವಿಸ್ತೃತವಾದಂತಹ ವಿಡಿಯೊ, ಆಡಿಯೊ, ಚಾಟಿಂಗ್‌ ಸೇವೆ ಲಭ್ಯವಿರಲಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಅಪ್ಲಿಕೇಷನ್‌ ಬಿಡುಗಡೆಯಾಗಲಿದೆ.

ಪಂಜಾಬ್‌ ಸರ್ಕಾರದ ಮೀಲ್‌ ಆ್ಯಪ್‌
ಪಂಜಾಬ್‌ ಸರ್ಕಾರ ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನ ಊಟದ ಮಾಹಿತಿಗಾಗಿ ಮಿಡ್ಡೆ ಮೀಲ್‌ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದೆ. ಈ ಆ್ಯಪ್‌ ಮೂಲಕ ಮಧ್ಯಾಹ್ನ ಊಟ ಕುರಿತಾದ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.

ಎಷ್ಟು ಮಕ್ಕಳು ಮಧ್ಯಾಹ್ನ ಊಟ ಸೇವಿಸುತ್ತಿದ್ದಾರೆ, ಆಹಾರದಲ್ಲಿನ ಪೋಷಕಾಂಶಗಳು, ಗುಣಮಟ್ಟ, ಖರ್ಚು ವೆಚ್ಚದ ಬಗ್ಗೆಯೂ ತಿಳಿಯಬಹುದಾಗಿದೆ. ಈ ಮೊಬೈಲ್‌ ಆ್ಯಪ್‌ ಅನ್ನು ನಾಗರಿಕರ ಮಾಹಿತಿಗಾಗಿ ಮಾತ್ರ ವಿನ್ಯಾಸ ಮಾಡಲಾಗಿದೆ. ಗೂಗಲ್‌ ಪ್ಲೇಸ್ಟೋರ್‌: midday meal app

ಓಲಾದಲ್ಲಿ ಯಪ್‌ ಟಿವಿ
ಓಲಾ ಪ್ರಯಾಣಿಕರಿಗಾಗಿ ಒಂದು ಸಿಹಿ ಸುದ್ದಿ ಬಂದಿದೆ! ಇನ್ನು ಮುಂದೆ ಓಲಾ ಕ್ಯಾಬ್ ಪ್ರಯಾಣಿಕರು ತಮ್ಮ ನೆಚ್ಚಿನ ಲೈವ್ ಟಿ.ವಿ ಕಾರ್ಯಕ್ರಮಗಳನ್ನು ವೀಕ್ಷಿಸುತ್ತ ಪ್ರಯಾಣ ಮಾಡಬಹುದು. ಆನ್‌ಲೈನ್‌ ಹಾಗೂ ಆ್ಯಪ್ ಮೂಲಕ ಟಿ.ವಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಯಪ್‌ ಟಿವಿ (YUPP TV) ಆ್ಯಪ್ ಈ ಸೇವೆ ನೀಡಲಿದೆ. ಹೌದು ಇನ್ನು ಮುಂದೆ ಎಲ್ಲಾ ಓಲಾ ಕ್ಯಾಬ್‌ಗಳಲ್ಲೂ ಲೈವ್ ಟಿವಿ ಪ್ರಸಾರವಾಗಲಿದೆ.

ಬೆಂಗಳೂರು ಸೇರಿದಂತೆ ದೇಶದ 6 ಮಹಾನಗರಗಳಲ್ಲಿ ಓಲಾ ಕ್ಯಾಬ್ ಸೇವೆ ಲಭ್ಯವಿದೆ. ಈ ಆರು ಮಹಾನಗರಗಳ ಪ್ರಯಾಣಿಕರು ಕನ್ನಡ, ತಮಿಳು, ತೆಲುಗು ಸೇರಿದಂತೆ ಹಿಂದಿ ಹಾಗೂ ಇಂಗ್ಲಿಷ್ ಚಾನೆಲ್‌ಗಳನ್ನು ಉಚಿತವಾಗಿ ವೀಕ್ಷಣೆ ಮಾಡಬಹುದು. ಸಿನಿಮಾ, ಸುದ್ದಿ, ಮನರಂಜನೆ, ಧಾರ್ಮಿಕ, ಕ್ರೀಡಾ ಚಾನೆಲ್‌ಗಳನ್ನು ವೀಕ್ಷಣೆ ಮಾಡಬಹುದು. ಯಪ್‌ ಟಿವಿ ಮುಖ್ಯಸ್ಥ ಉದಯ್ ರೆಡ್ಡಿ ಅವರು ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿದ್ದು ಇನ್ನು ಕೆಲವೇ ದಿನಗಳಲ್ಲಿ ಓಲಾದಲ್ಲಿ ಲೈವ್ ಟಿವಿ ಲಭ್ಯವಾಗಲಿದೆ.

ಮಕ್ಕಳಿಗೆ ಬ್ಯಾಂಕಿಂಗ್ ಆ್ಯಪ್…
ಸಿರಿವಂತ ದೇಶಗಳಲ್ಲಿ ಒಂದಾಗಿರುವ ಸ್ವಿಟ್ಟರ್ಲೆಂಡ್ ನಲ್ಲಿ ಮಕ್ಕಳಿಗೆ ಹಣಕಾಸು ಮತ್ತು ಡಿಜಿಟಲ್ ಬ್ಯಾಂಕಿಂಗ್ ಬಗ್ಗೆ ಮಾಹಿತಿ ನೀಡುವ ಪಿಗ್ಗಿ ಆ್ಯಪ್ ವಿನ್ಯಾಸ ಮಾಡಲಾಗಿದೆ. ಅಲ್ಲಿನ ಎರಡನೇ ಅತಿ ದೊಡ್ಡ ಬ್ಯಾಂಕ್ ಆಗಿರುವ ‘ಕ್ರೆಡಿಟ್ ಸೂಸ್ಸೆ’ ಬ್ಯಾಂಕ್ ಈ ಯೋಜನೆಯನ್ನು ರೂಪಿಸಿದೆ. 12 ವರ್ಷದ ಮಕ್ಕಳನ್ನು ಗಮನದಲ್ಲಿರಿಸಿಕೊಂಡು ಪಿಗ್ಗಿ ಆ್ಯಪ್ ವಿನ್ಯಾಸ ಮಾಡಲಾಗಿದೆ.

ಈ ಆ್ಯಪ್ ಮೂಲಕ ಮಕ್ಕಳಿಗೆ ಡಿಜಿಟಲ್ ಮನಿ, ನೋಟು, ಆನ್‌ಲೈನ್‌ ಬ್ಯಾಂಕಿಂಗ್ ಕುರಿತಂತೆ ಸರಳವಾಗಿ ಮಾಹಿತಿ ನೀಡಲಾಗುವುದು. ಬರವಣಿಗೆ, ಆಡಿಯೊ, ವಿಡಿಯೊಗಳ ಮೂಲಕ ಮಕ್ಕಳಲ್ಲಿ ಹಣಕಾಸಿನ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ಮಕ್ಕಳಿಗೆ ಉಚಿತವಾಗಿ ಬ್ಯಾಂಕ್ ಖಾತೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಪೋಷಕರು ನೀಡುವ ಪಾಕೆಟ್ ಮನಿಯನ್ನು ಮಕ್ಕಳು ತಮ್ಮ ಖಾತೆಗಳಿಗೆ ಹಾಕಿಕೊಂಡು ಬಳಕೆ ಮಾಡಬಹುದು. ಮಕ್ಕಳು ಕರೆನ್ಸಿ ಅಥವಾ
ಡಿಜಿಟಲ್ ರೂಪದಲ್ಲಿ ಹಣವನ್ನು ಖರ್ಚು ಮಾಡಬಹುದು. ಈ ರೀತಿ ಮಾಡುವುದರಿಂದ ಮಕ್ಕಳಲ್ಲಿ ವ್ಯವಹಾರದ ಜ್ಞಾನ ಬೆಳೆಯುತ್ತದೆ ಎಂದು ಕ್ರೆಡಿಟ್ ಸೂಸ್ಸೆ ಬ್ಯಾಂಕ್ ತಿಳಿಸಿದೆ.

ಅಥ್ಲೀಟ್‌ಗಳಿಗೆ ‘ನಾಡಾ’ದಿಂದ ಹೊಸ ಆ್ಯಪ್…
ಇತ್ತೀಚಿನ ದಿನಗಳಲ್ಲಿ ಅಥ್ಲೀಟ್‌ಗಳು ಉದ್ದೀಪನಾ ಮದ್ದು ಸೇವಿಸಿ ಸಿಲುಕಿ ಬೀಳುವುದು ಸಾಮಾನ್ಯವಾಗಿದೆ.ಕೆಲವರು ಉದ್ದೇಶಪೂರ್ವಕವಾಗಿ ಉದ್ದೀಪನಾ ಮದ್ದು ಸೇವಿಸಿದ್ದರೆ, ಇನ್ನು ಕೆಲವರು ಉದ್ದೀಪನಾ ಮದ್ದು ಸೇವಿಸದೆ ‘ನಾಡಾ’ ಪರೀಕ್ಷೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಅಥ್ಲೀಟ್‌ಗಳು ತೆಗೆದುಕೊಳ್ಳುವ ವೈದ್ಯಕೀಯ ಔಷಧಿಯಲ್ಲೂ ಉದ್ದೀಪನಾ ಮದ್ದು ಇರುವುದು ತಿಳಿದು ಬಂದಿದೆ. ಅದಕ್ಕಾಗಿ ‘ನಾಡಾ’ ಉದ್ದೀಪನಾ ಅಂಶ ಇರುವ ಕೆಲವು ಔಷಧಿಗಳನ್ನು ಗುರುತಿಸಿದೆ. ಇದನ್ನು ಅಥ್ಲೀಟ್‌ಗಳ ಗಮನಕ್ಕೆ ತರುವ ಸಲುವಾಗಿ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.

ಆಂಡ್ರಾಯ್ಡ್‌ ಮತ್ತು ಐಒಎಸ್ ಮಾದರಿಯಲ್ಲಿ ‘ನಾಡಾ’ದ ಈ ಹೊಸ ಆ್ಯಪ್ ಉಚಿತವಾಗಿ ಲಭ್ಯವಿದೆ. ಅಥ್ಲೀಟ್‌ಗಳು ಈ ಆ್ಯಪ್ ಅನ್ನು ಡೌನ್‌ಲೋಡ್‌ ಮಾಡಿಕೊಂಡು ತಾವು ಬಳಸುವ ವೈದ್ಯಕೀಯ ಔಷಧಿಯಲ್ಲಿ ಉದ್ದೀಪನಾ ಅಂಶ ಇದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಿಕೊಳ್ಳಬಹುದು. ಹಾಗೇ ಉದ್ದೀಪನಾ ಅಂಶ ಇರುವ ಔಷಧಿಗಳ ಪಟ್ಟಿಯನ್ನು ಈ ಆ್ಯಪ್‌ನಲ್ಲಿ ನೀಡಲಾಗಿದೆ. ಇಂತಹ ಔಷಧಿಗಳಿಂದ ಅಥ್ಲೀಟ್‌ಗಳು ದೂರ ಇರಬಹುದು. ಇನ್ನು ಕೆಲವೇ ದಿನಗಳಲ್ಲಿ ಈ ಆ್ಯಪ್ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT